ಚುನಾವಣಾ ಬಾಂಡ್ಗಳನ್ನು ಖರೀದಿಸಿದವರ ವಿವರಗಳನ್ನು ನೀಡಲು ಸಮಯದ ವಿಸ್ತರಣೆ ಕೇಳಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿರುದ್ಧ ಶಿವಸೇನಾ (ಯುಬಿಟಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕಿಡಿಕಾರಿದ್ದಾರೆ. ‘ಕೃಷಿ ಸಾಲದ ಬಗ್ಗೆ ಎಲ್ಲ ವಿವರಗಳನ್ನೂ ಎಸ್ಬಿಐ ಹೊಂದಿದೆ. ಆದರೆ, ಚುನಾವಣಾ ಬಾಂಡ್ ಖರೀದಿಸಿದವರ ವಿವರ ಹೊಂದಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದ ಲಾತೂರ್ನಲ್ಲಿ ಠಾಕ್ರೆ ಮಾತನಾಡಿದರು. “ಸಾಲ ಮರುಪಾವತಿಯಲ್ಲಿ ವಿಳಂಬವಾದಾಗ ಬ್ಯಾಂಕ್ಗಳು ರೈತರ ಬಗ್ಗೆ ಎಲ್ಲ ಮಾಹಿತಿಯನ್ನು ತ್ವರಿತವಾಗಿ ತಿಳಿಸುತ್ತವೆ. ಆದರೆ, ಎಲೆಕ್ಟೋರಲ್ ಬಾಂಡ್ ವಿತರಣೆಗೆ ಸಂಬಂಧಿದಂತೆ ಅವುಗಳನ್ನು ಖರೀದಿಸಿದವರ ವಿವರಗಳನ್ನು ಬಹಿರಂಗಪಡಿಸಲು ಸಮಯ ಕೇಳುತ್ತಿದ್ದಾರೆ” ಎಂದು ಹೇಳಿದರು.
“ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದಾಗ ಬ್ಯಾಂಕ್ಗಳು ರೈತರ ಬಾಗಿಲಿಗೆ ನೋಟಿಸ್ಗಳನ್ನು ಅಂಟಿಸುತ್ತವೆ. ಸಕಾಲದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗದ ರೈತರ ಬಗ್ಗೆ ಅವರ ಬಳಿ ಎಲ್ಲ ಮಾಹಿತಿಗಳಿರುತ್ತವೆ. ಆದರೆ, ಚುನಾವಣಾ ಬಾಂಡ್ಗಳ ವಿವರಗಳನ್ನು ಸಲ್ಲಿಸಲು ಅವರು (ಬ್ಯಾಂಕ್ಗಳು) ಸಮಯ ವಿಸ್ತರಣೆ ಕೇಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಕರೆದಿದೆ. ಮಾರ್ಚ್ 6ರೊಳಗೆ ಈ ಬಾಂಡ್ಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ಎಸ್ಬಿಐಗೆ ಸೂಚಿಸಿದೆ. ಅಲ್ಲದೆ, ಆ ಎಲ್ಲ ಮಾಹಿತಿಗಳನ್ನು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿದೆ. ಆದರೆ, ವಿವರಗಳನ್ನು ಒದಗಿಸಲು ಜೂನ್ 30 ರವರೆಗೆ ಗಡುವನ್ನು ವಿಸ್ತರಿಸುವಂತೆ ಎಸ್ಬಿಐ ಮನವಿ ಮಾಡಿದೆ.
ಕೇಂದ್ರದ ವಿರುದ್ಧ ಠಾಕ್ರೆ ವಾಗ್ದಾಳಿ
ಕಾಂಗ್ರೆಸ್ನಿಂದ 40 ವರ್ಷಗಳಲ್ಲಿ ಮಾಡಲಾಗದ್ದನ್ನು ಎನ್ಡಿಎ ಸರ್ಕಾರ 10 ವರ್ಷಗಳಲ್ಲಿ ಮಾಡಿದೆ ಎಂಬ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆ ಕುರಿತು ವ್ಯಂಗ್ಯವಾಡಿದ ಠಾಕ್ರೆ, “ಬಿಜೆಪಿ 10 ವರ್ಷಗಳಲ್ಲಿ 7,000 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಪಡೆದಿದೆ. ಆದರೆ, ಕಾಂಗ್ರೆಸ್ ಕೇವಲ 600-700 ಕೋಟಿ ರೂಪಾಯಿ ಗಳಿಸಿರಬಹುದು” ಎಂದಿದ್ದಾರೆ.
“2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಸರ್ಕಾರವು ವರ್ತಮಾನದ ಬಗ್ಗೆ ಮಾತನಾಡಬೇಕು. ಒಪ್ಪತ್ತಿನ ಊಟವನ್ನೂ ಪಡೆಯಲು ಸಾಧ್ಯವಾಗದೆ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ” ಎಂದು ಪ್ರಶ್ನಿಸಿದ್ದಾರೆ.
ಏಕನಾಥ್ ಶಿಂಧೆ ಸರ್ಕಾರವು ಜಾಹೀರಾತಿಗಾಗಿ 85 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಹೇಳಿರುವ ಠಾಕ್ರೆ, ತಾವು ಅಧಿಕಾರದಲ್ಲಿದ್ದಿದ್ದರೆ ಈ ಹಣವನ್ನು ರೈತರ ಕಲ್ಯಾಣಕ್ಕಾಗಿ ಮೀಸಲಿತ್ತಿದ್ದೆವು ಎಂದು ಪ್ರತಿಪಾದಿಸಿದ್ದಾರೆ.