ಅಲೆಮಾರಿಗಳ ಬದುಕು ಹಸನಗೊಳಿಸಲು ಹೋರಾಡಿದ ʼಶಾರದಾʼ ಮೇಡಂ; ಈಗ ಕೆಎಎಸ್‌ ಅಧಿಕಾರಿ

Date:

Advertisements

ಕಿತ್ತು ತಿನ್ನುವ ಬಡತನ. ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿ. ಕೂಲಿಯಿಂದಲೇ 10 ಜನ ಮಕ್ಕಳೊಂದಿಗೆ ಸಂಸಾರದ ಬಂಡಿ ಸಾಗಬೇಕಿತ್ತು. ಮಕ್ಕಳು ತಮ್ಮಂತೆಯೇ ಕೂಲಿ ಮಾಡಬಾರದು, ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬುದು ಪೋಷಕರ ನಿಲುವಾಗಿತ್ತು. ಮಕ್ಕಳನ್ನು ಚನ್ನಾಗಿ ಓದಿಸಿ ಸ್ವಾಲಂಬನೆ ಬದುಕು ಕಟ್ಟಿಕೊಡಬೇಕೆನ್ನುವ ಹೆತ್ತವರ ಕನಸೇನೋ ಇದೀಗ ಈಡೇರಿತು, ಆದರೆ ಅದನ್ನು ಕಣ್ತುಂಬಿಕೊಳ್ಳಲು ಹೆತ್ತವರೇ ಇಲ್ಲ ಎನ್ನುವ ಅವರ ಕಣ್ಣಂಚಿನಲ್ಲಿ ಆನಂದಭಾಷ್ಪ.

ಬದುಕಿನ ಎಲ್ಲ ಸಂಕಟ, ಆಘಾತಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿ ಜೀವನ ರೂಪಿಸಿಕೊಂಡ ಅನೇಕ ಸಾಧಕಿಯರು ನಮ್ಮ ನಡುವೆ ಇದ್ದಾರೆ. ಇಂತಹವರ ಸಾಲಿನಲ್ಲಿ ಬೀದರ್‌ನ ಕೆಎಎಸ್‌ ಅಧಿಕಾರಿ ಶಾರದಾ ಮಾಳಗೆ ನಿಲ್ಲುತ್ತಾರೆ.

ಅಂದಹಾಗೆ ಇಲ್ಲಿ ಹೇಳ ಹೊರಟಿರುವುದು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ವಾಣಿಜ್ಯ, ತೆರಿಗೆ ಇಲಾಖೆಯಲ್ಲಿ ಸಿಟಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಶಾರದಾ ಮಾಳಗೆ ಎಂಬ ಮಹಿಳಾ ಸಾಧಕಿಯೊಬ್ಬರ ಯಶೋಗಾಥೆ.

Advertisements

ಅಂದು ದಿಕ್ಕಿಲ್ಲದೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಅಲೆಮಾರಿಗಳ ಅಸ್ಮಿತೆಗಾಗಿ ಏಕಾಂಗಿ ಹೋರಾಟ ನಡೆಸಿ ಅಲೆಮಾರಿಗಳ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಶಾರದಾ ಮಾಳಗೆ, ಇಂದು ಕೆಎಎಸ್ ಪರೀಕ್ಷೆ ಪಾಸು ಮಾಡಿ ಉನ್ನತ ಹುದ್ದೆಗೆ ಆಯ್ಕೆಯಾಗಿ ಬಡತನದ ಬೆಂಕಿನಲ್ಲಿ ಅರಳಿದ ಹೂವಿನಂತೆ ಸಮಾಜಕ್ಕೆ ಸ್ಪೂರ್ತಿಯಾಗಿದ್ದಾರೆ.

ಶಾರದಾ ಮಾಳಗೆ ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದವರು, 2011ರಲ್ಲಿ ಮದುವೆಯಾದ ನಂತರ ಬೀದರ್‌ನಲ್ಲಿ ವಾಸವಾಗಿದ್ದಾರೆ. ಯಶಸ್ಸು ಎಂಬುದು ಕೆಲವರಿಗೆ ಸುಲಭವಾಗಿ ದಕ್ಕುತ್ತದೆ, ಮತ್ತೆ ಕೆಲವರಿಗೆ ನೂರಾರು ಕಷ್ಟಗಳ ನಂತರವೇ ಕೈಗೆಟಕುತ್ತದೆ. ಬದುಕಿನ ಆಘಾತಗಳಿಗೆ ಕಂಗೆಡದೆ ಜಿದ್ದಿಗೆ ಬಿದ್ದು ಮುನ್ನಡೆದರೆ ಯಶಸ್ಸು ಎಂಬ ಮಾಯಾಜಿಂಕೆ ಬೆನ್ನ ಹಿಂದೆ ಓಡೋಡಿ ಬರುತ್ತದೆ ಎನ್ನುವುದಕ್ಕೆ ಮುಳ್ಳಿನ ಹಾದಿಯಲ್ಲೇ ನಡೆದು ಬಂದು ಸಾಧನೆಗೈದ ಶಾರದಾ ಮಾಳಗೆಯವರು ಕಣ್ಮುಂದಿರುವ ತಾಜಾ ಉದಾಹರಣೆ.

ಅಲೆಮಾರಿ ಜನಾಂಗ ಬೀದರ್‌
ನೌಬಾದ್‌ನ ಅಲೆಮಾರಿ ಸಮುದಾಯದೊಂದಿಗೆ ಶಾರದಾ ಮಾಳಗೆ

ಒಂದು ರೀತಿಯಲ್ಲಿ ಥೇಟ್‌ ಸಿನಿಮಾ ಕಥೆಯಂತಿರುವ ಶಾರದಾ ಮಾಳಗೆಯವರ ಹೋರಾಟದ ಬದುಕಿನ ಯಶೋಗಾಥೆಯ ಅವರೇ ವಿವರಿಸಿದ್ದು ಹೀಗೆ;

ನಮ್ಮದು ತೀರ ಬಡ ಕುಟುಂಬ, ತಂದೆ-ತಾಯಿಗೆ ನಾವು ಒಟ್ಟು 10 ಜನ ಮಕ್ಕಳು, ಅದರಲ್ಲಿ ಆರು ಜನ ಹೆಣ್ಣು ಮಕ್ಕಳು, ನಾಲ್ಕು ಜನ ಗಂಡು ಮಕ್ಕಳು, ಹೆಣ್ಣು ಮಕ್ಕಳೆಂದು ಹೆತ್ತವರು ಜರೆಯಲಿಲ್ಲ. ಮಕ್ಕಳು ನಮ್ಮಂತೆಯೇ ಅನಕ್ಷರಸ್ಥರಾಗಬಾರದು, ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಅಲಂಕರಿಸಿದರೆ ಸಾಕು ಎಂಬುದು ಪೋಷಕರ ಬಯಕೆಯಾಗಿತ್ತು. ಆದರೆ ನಾನು ಪಿಯುಸಿ ಓದುವ ವೇಳೆಗೆ ಆರೋಗ್ಯ ಸಮಸ್ಯೆಯಿಂದ ತಂದೆ-ತಾಯಿ ಇಬ್ಬರೂ ತೀರಿಕೊಂಡರು. ಇಂತ ಕೇಡುಗಾಲದಲ್ಲಿ ಮನೆಗೆ ಆಸರೆಯಾಗಿ ನಿಂತ ಅಣ್ಣ, ಅಕ್ಕಂದಿಯರು, ಕಷ್ಟಗಳು ಎಷ್ಟೇ ಇದ್ದರೂ ಓದು ಮಾತ್ರ ನಿಲ್ಲಿಸಬಾರದು, ಶಿಕ್ಷಣ ಎಂಬ ಅಸ್ತ್ರದಿಂದ ಮಾತ್ರ ಬದುಕು ಬದಲಾಗಬಲ್ಲದು ಎನ್ನುವ ಬಾಬಾ ಸಾಹೇಬರ್‌ ಮಾತು ನನ್ನ ಕಿವಿಯಲ್ಲಿ ಗುನುಗುಡುತ್ತಿತ್ತು. ಹೆತ್ತವರ ಹಂಬಲದಂತೆ ಓದಿ ಮುಂದೆ ಯಾವುದಾದರೂ ಒಂದು ಸರ್ಕಾರಿ ನೌಕರಿ ಹಿಡಿಬೇಕೆಂಬ ಕನಸು ನನ್ನೊಳಗೆ ಚಿಗರೊಡೆಯತೊಡಗಿತು.

ಓದಿನೊಂದಿಗೆ ಅನಾಥಾಶ್ರಮ ಮಕ್ಕಳಿಗೆ ಪಾಠ:

ಮನೆಯಲ್ಲಿ ಹಾಸುಹೊಕ್ಕಾಗಿದ್ದ ಬಡತನ ಕಂಡು ಹಾಸ್ಟೆಲ್‌ ಸೇರಿ ಓದಲು ಮುಂದಾದೆ. ಆಗ ರಾಯಚೂರು ತಾಲೂಕಿನ ದೇವದುರ್ಗ ತಾಲೂಕಿನ ಹಾಸ್ಟೆಲ್‌ನಲ್ಲಿ ಸೇರಲು ಹೋದೆ, ಆದರೆ ಅಲ್ಲಿ ಉಚಿತವಾಗಿ ಸೇರಿಸಿಕೊಳ್ಳುತ್ತಿರಲಿಲ್ಲ. ನನಗೆ ಓದಲೇಬೇಕೆಂಬ ಛಲದಿಂದ ಹಾಸ್ಟೆಲ್‌ ಮುಖ್ಯಸ್ಥರ ಸೂಚನೆಯಂತೆ ದಿನವಿಡೀ ಕಾಲೇಜು ಮುಗಿಸಿಕೊಂಡು ಸಂಜೆ ಹೊತ್ತು ಅಲ್ಲಿನ ಅನಾಥಾಶ್ರಮದ ಮಕ್ಕಳಿಗೆ ಪಾಠ ಮಾಡುತ್ತ ಪದವಿ ಓದಿದ್ದೇನೆ.

ಮುಂದೆ 2011ರಲ್ಲಿ ಮದುವೆಯಾದ ಬಳಿಕ ಬೀದರ್‌ನಲ್ಲಿ ವಾಸವಾಗಿದ್ದೇವು. ಮದುವೆ ನಂತರ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡ್. ಮುಗಿಸಿದ್ದೆ, ಮೊದಲು ನನಗೆ ಶಿಕ್ಷಕಿಯಾಗಬೇಕೆಂಬ ಬಯಕೆಯಿತ್ತು. ಹೀಗಾಗಿ ಬೀದರಿನ ಖಾಸಗಿ ಶಾಲೆಯಲ್ಲಿ ಕೆಲ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದೇನೆ. ಕುಟುಂಬ ನಿರ್ವಹಣೆಗಾಗಿ ಖಾಸಗಿ ಸಂಸ್ಥೆ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಕೆಲಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗೆ ಓದು ಮುಂದುವರೆದಿತ್ತು.

ಕನಸು ಬದಲಿಸಿತು ಅಲೆಮಾರಿಗಳ ಬದುಕು : 

ಮದುವೆ ನಂತರ ಬೀದರ್‌ ನಗರದ ನೌಬಾದ್‌ನಲ್ಲಿ ವಾಸವಿರುವ ಪಕ್ಕದ ಬೀದಿಯಲ್ಲಿ ನೂರಾರು ಅಲೆಮಾರಿ ಕುಟುಂಬಗಳು ಬೀಡು ಬಿಟ್ಟಿತ್ತು. ಪ್ರತಿನಿತ್ಯ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಅಲೆಮಾರಿ ಜನಾಂಗದ ಗುಡಿಸಲಿನಲ್ಲಿ ವಾಸವಿರುವ ಚಿಂದಿ ಆಯುವ ಪುಟ್ಟ ಮಕ್ಕಳು, ಬಾಣಂತಿಯರು, ಅಲ್ಲಲ್ಲಿ ಹರಿದು ಹೋದ ಬಟ್ಟೆ ತೊಟ್ಟ ಮುಗ್ಧ ಮಕ್ಕಳು, ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಹಿರಿಯರು, ಅನ್ನಕ್ಕಾಗಿ ಭಿಕ್ಷೆ ಬೇಡುವ ಅನಿವಾರ್ಯತೆ, ದೇಶದ ನಾಗರಿಕ ಪ್ರಜೆಗಳೆಂದು ಹೇಳಿಕೊಳ್ಳಲು ಅವರಿಗೆ ಯಾವುದೇ ದಾಖಲೆ ಇಲ್ಲದ ಜನರು, ಈ ದಿಕ್ಕಿಲ್ಲದ ಜನಾಂಗದ ಬದುಕಿನ ಚಿತ್ರಣ ಕಣ್ಣಿಗೆ ರಾಚತೊಡಗಿತು.

ಈ ಅಲೆಮಾರಿಗಳಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಅಗತ್ಯವಾದ ಆಧಾರ ಕಾರ್ಡ್, ರೇಷನ್‌ ಕಾರ್ಡ್‌, ಮತದಾರ ಚೀಟಿ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ಸೌಲಭ್ಯಗಳು ಒದಗಿಸಬೇಕು. ಹೇಗಾದರೂ ಮಾಡಿ ಅಲೆಮಾರಿ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಿ ಮಾಡದೇ ಶಾಲೆಯ ಮೆಟ್ಟಿಲು ಹತ್ತಿಸಬೇಕೆಂದು ಪಣ ತೊಟ್ಟು ನಿತ್ಯವೂ ಸಂಜೆ ಅಲೆಮಾರಿಗಳ ಗುಡಿಸಲಿಗೆ ಭೇಟಿ ನೀಡಿ ಹಿರಿಯರ ಮನವೊಲಿಸಲು ಪ್ರಯತ್ನಿಸಿದೆ. ಆದರೂ ಅವರೂ ಒಪ್ಪಲಿಲ್ಲ. ಬದಲಿಗೆ ಅವರದೇ ಭಾಷೆಯಲ್ಲಿ ಬೈಯತೊಡಗಿದರು. ಒಂದು ದಿನ ಅಲೆಮಾರಿ ಮಗುವೊಂದು ಬಾವಿಯಲ್ಲಿ ಬಿದ್ದಾಗ ಆ ಮಗುವನ್ನು ರಕ್ಷಿಸಿ ಪ್ರಾಣ ಉಳಿಸಿದೆ, ಅಂದಿನಿಂದ ಅಲೆಮಾರಿ ಜನಾಂಗದವರು ನನ್ನ ಮೇಲೆ ಒಂದಿಷ್ಟು ವಿಶ್ವಾಸವಿಟ್ಟು ನನ್ನ ಮಾತು ಕೇಳಲು ಆರಂಭಿಸಿ ತಮ್ಮ ಮಕ್ಕಳಿಗೆ ಶಾಲೆಗೆ ಸೇರಿಸಲು ಒಪ್ಪಿದರು.

sharada malage madam
ಅಲೆಮಾರಿ ಗುಡಿಸಲುಗಳಿಗೆ ತೆರಳಿ ದಾಖಲೆ ಮಾಡಿಸಲು ಮಾಹಿತಿ ನೀಡುತ್ತಿರುವ ಶಾರದಾ ಮಾಳಗೆ

ನಾನಾ ಭಾಗಗಳಿಂದ ವಲಸೆ ಬಂದು ವಾಸವಿದ್ದ ಅಲೆಮಾರಿಗಳಿಗೆ ಯಾವುದೇ ವಿಳಾಸವಿಲ್ಲ, ಅಂದ ಮೇಲೆ  ಹೊಸ ಆಧಾರ್‌ ಕಾರ್ಡ್‌, ಮತದಾರ ಚೀಟಿ ಮಾಡುವುದು ಹೇಗೆ ಎಂಬ ಚಿಂತೆ ಕಾಡತೊಡಗಿತು. ಅದಕ್ಕೆ ತಹಸೀಲ್ದಾರ್‌ ಸೇರಿದಂತೆ ಯಾರೋಬ್ಬರೂ ಅಲೆಮಾರಿಗಳ ದಾಖಲೆ ಮಾಡಿಸಲು ಸಹಿ ಹಾಕಲಿಲ್ಲ. ಕೊನೆಗೆ ಅಲೆಮಾರಿಗಳ ಹೊಸ ದಾಖಲೆ ಮಾಡಿಸಲು ನನ್ನದೇ ಸಹಿ ಹಾಗೂ ಮೊಬೈಲ್‌ ಸಂಖ್ಯೆ ನಮೂದಿಸಿ ಆಧಾರ್‌ ಕಾರ್ಡ್‌, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲ ದಾಖಲೆ ಮಾಡಿಸಿದ್ದೇನೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಸುಮಾರು 2 ಸಾವಿರ ಅಲೆಮಾರಿಗಳ ದಾಖಲೆ ಮಾಡಿಸಿ ಅವರ ಮಕ್ಕಳಿಗೆ ಅಕ್ಷರ ಕಲಿಸುವಂತೆ ಒತ್ತಾಯಿಸಿದ್ದೇನೆ. ಈ ವೇಳೆ ʼನೊಂದವರ ನೋವ ನೋಯದವರೆಂತು ಬಲ್ಲರುʼ ಎನ್ನುವಂತೆ ಅಲೆಮಾರಿಗಳ ಒಡನಾಟದಲ್ಲಿ ನನಗೆ ಅಲೆಮಾರಿಗಳ ನೋವಿನ ಬದುಕು ಮನದಟ್ಟಾಯಿತು ಹಾಗೂ ಸರ್ಕಾರಿ ಅಧಿಕಾರಿಗಳು ನಮ್ಮೊಂದಿಗೆ ನಡೆದುಕೊಂಡ ರೀತಿ, ಅವಮಾನ, ಹಿಂಸೆ.. ಎಲ್ಲವೂ ಮೌನವಾಗಿ ಎದುರಿಸಿ, ಅದನ್ನೇ ಸವಾಲಾಗಿ ತೆಗೆದುಕೊಂಡ ಅಂದೇ ʼನಾನ್ಯಾಕೇ ದೊಡ್ಡ ನೌಕರಿ ಹಿಡಿಯಬಾರದುʼ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು.

ಅಲ್ಲಲ್ಲಿ ಹೊರಗುತ್ತಿಗೆ ಕೆಲಸ ಮಾಡುತ್ತಲೇ ಅಲೆಮಾರಿಗಳ ಬದುಕಿನ ಹಕ್ಕಿಗಾಗಿ ಏಕಾಂಗಿ ಹೋರಾಟ ನಡೆಸುತ್ತ ಬಂದೆ, ಸಂಜೆ ಹೊತ್ತಿಗೆ ಜೋಪಡಿಗಳಿಗೆ ಹೋಗಿ ಮಕ್ಕಳಿಗೆ ಅಕ್ಷರ ಕಲಿಸಲು ಆರಂಭಿಸಿದೆ, ಅವರ ನೋವು-ನಲಿವುಗಳಲ್ಲಿ ಭಾಗಿಯಾಗಿ ಅವರೊಂದಿಗೆ ಬೆರೆತ ನಂತರ ಅಲೆಮಾರಿಗಳು ನನ್ನನ್ನು ಪೂರ್ತಿಯಾಗಿ ಅರ್ಥೈಸಿಕೊಂಡು ನಂಬಿದರು. ಈ ಎಲ್ಲ ಪ್ರಯತ್ನದ  ಫಲವಾಗಿ ಅಲೆಮಾರಿಗಳು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಒಪ್ಪಿದರು. ಜೊತೆಗೆ ಅಲೆಮಾರಿ ಜನಾಂಗಕ್ಕೆ ವಸತಿ ನೀಡಬೇಕೆಂಬ ಏಕಾಂಗಿ ಹೋರಾಟವೂ ಮುಂದುವರೆದಿತ್ತು.

ಯಾವುದಾದರೂ ಒಂದು ಸರ್ಕಾರಿ ನೌಕರಿ ಹಿಡಿದು ಬದುಕು ದೂಡಬೇಕೆಂಬ ನನ್ನ ಕನಸು ಬದಲಿಸಿದವರು ಅಲೆಮಾರಿ ಜನಾಂಗ, ಹಾಸ್ಟೆಲ್‌ನಲ್ಲಿ ಒಮ್ಮೊಮ್ಮೆ ಬರೀ ನೀರು ಕುಡಿದು ಬೆಳೆದವಳಾದ ನನಗೆ ಅವರ ಬದುಕಿನ ಸಂಕಟಗಳು ಕಂಡ ಮೇಲೆ, ಅವು ನನ್ನ ಸಂಕಷ್ಟಗಳೂ ಹೌದು ಎಂದುಕೊಂಡೆ ಎಂದು ಬದುಕಿನಲ್ಲಿ ಪಟ್ಟ ಕಠಿಣ ಶ್ರಮದ ಚಿತ್ರಣ ತೆರೆದಿಡುವ ಶಾರದಾ ಮಾಳಗೆ ಅವರ ಕಣ್ತುಂಬ ನೀರಿದ್ದವು…

ಅಲೆಮಾರಿ ಮಕ್ಕಳಿಗೆ ಬಂಧು ʼಶಾರದಾ ಮೇಡಂʼ:

ಬೀದರಿನ ನೌಬಾದ್‌ನಲ್ಲಿ ವಾಸವಿರುವ ಅಲೆಮಾರಿ ಜನಾಂಗ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ವಾಸವಿರುವ ಅಲೆಮಾರಿಗಳ ಬದುಕು ಹಸನಾಗಬೇಕೆಂದು ಕಳೆದ ಹತ್ತು ವರ್ಷಗಳಿಂದ ಏಕಾಂಗಿ ಹೋರಾಟ ನಡೆಸುತ್ತಿರುವ ಶಾರದಾ ಮಾಳಗೆ ಅವರಿಗೆ ಇಂದಿಗೂ ಅಲೆಮಾರಿ ಜನರು ʼನಮ್ಮ ಶಾರದಾ ಮೇಡಂʼ ಎಂದು ಕುಟುಂಬದ ಸದಸ್ಯರಂತೆ ತಿಳಿಯುತ್ತಾರೆ.

“ಈ ದೇಶದ ಪ್ರಜೆಗಳೆಂದು ಹೇಳಿಕೊಳ್ಳಲು ಯಾವ ಗುರುತಿನ ಚೀಟಿಯೂ ಇಲ್ಲದ ನೂರಾರು ಅಲೆಮಾರಿ ಕುಟುಂಬಗಳ ಸದಸ್ಯರಿಗೆ ಎಲ್ಲ ದಾಖಲೆ ಮಾಡಿಸಿ ಬದುಕಿನಲ್ಲಿ ಬೆಳಕು ಮೂಡಿಸಿದ್ದಾರೆ. ಮಕ್ಕಳಿಗೆ ಅಕ್ಷರ ಕಲಿಸಿ ಭವಿಷ್ಯದ ದಾರಿ ತೋರಿದ್ದಾರೆ. ಇನ್ನು ಬೀದಿಯಲ್ಲಿ ಹರಕು ಜೋಪಡಿಗಳಲ್ಲಿ ಬದುಕುತ್ತಿರುವ ಅಲೆಮಾರಿ ಜನಾಂಗದವರಿಗೆ ನಿವೇಶನ ಒದಗಿಸುವಂತೆ ಕಳೆದ 8-10 ವರ್ಷಗಳಿಂದ ಏಕಾಂಗಿ ಹೋರಾಟದ ಮೂಲಕ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಆದರೆ ಅಲೆಮಾರಿಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕೆಂಬ ಶಾರದಾ ಮಾಳಗೆ ಅವರ ಕನಸೊಂದು ಹಾಗೇ ಉಳಿದಿದೆ” ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಶಾರದಾ ಮಾಳಗೆ ಅವರು ಅಂದುಕೊಂಡಂತೆ 2020ರಲ್ಲಿ ಕೆಎಎಸ್ ಪರೀಕ್ಷೆ ಎದುರಿಸಿ ನಿರೀಕ್ಷೆಯಂತೆ ಮೊದಲ ಪ್ರಯತ್ನದಲ್ಲೇ ಪಾಸಾದರು. ಕಳೆದ ವರ್ಷದಿಂದ ಬೀದರ್‌ನ ವಾಣಿಜ್ಯ, ತೆರಿಗೆ ಇಲಾಖೆಯಲ್ಲಿ ಸಿಟಿಒ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಒಂದು ನೆನಪು | ಲಂಕೇಶರಿಗೆ ‘ಪತ್ರಿಕೆ’ ಜೀವನ್ಮರಣದ ಪ್ರಶ್ನೆಯಾಗಿತ್ತೇ?

“ಸಾಧನೆಯ ಹಾದಿಯಲ್ಲಿ ಅನ್ನ, ಅಕ್ಷರ, ಆಶ್ರಯ ಕೊಟ್ಟು ಸಹಕರಿಸಿದ ಮಾರ್ಗದರ್ಶಕ ಅಧಿಕಾರಿಗಳು, ಗುರು-ಹಿರಿಯರಿಗೆ ಹಾಗೂ ಕೈ ಹಿಡಿದ ಪತಿ ಮತ್ತು ಕುಟುಂಬಸ್ಥರನ್ನು ಶಾರದಾ ಮಾಳಗೆ ಅವರು ಸ್ಮರಿಸುತ್ತಾರೆ. ಸಂಕಷ್ಟಗಳು ಬದಿಗೊತ್ತಿ ನಿರಂತರ ಪರಿಶ್ರಮ ಮಾಡಿದ್ದರಿಂದಲೇ ಗುರಿ ತಲುಪಲು ಸಾಧ್ಯವಾಯಿತು. ಛಲವಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು” ಎಂದು ಸಾಧನೆಯ ಗುಟ್ಟು ಬಿಚ್ಚಿಡುತ್ತಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

5 COMMENTS

  1. ಸಾಮಾನ್ಯ ಬಡ ಕುಟುಂಬದ ಈ ಮಹಿಳೆಯನ್ನು ಬಹಳ ಹತ್ತಿರ ದಿಂದ ನೋಡಿದೇನೆ, ಇವರ ತಾಯಿ ನನ್ನೂ ರಿನವರೆ ಅಗಿರುತ್ತಾರೆ. ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಬಹಳ ಸಂತೋಷದ ವಿಷಯವಾಗಿದೆ, ಈ ವರದಿ ಓದಿ ತುಂಬಾ ಖುಷಿಯಾಯಿತ್ತು ಧನ್ಯವಾದಗಳು.

  2. ಇತರರ ನೋವನ್ನು ತನ್ನ ನವೆಂದೂ ಅರ್ಥೈಸಿಕೊಂಡವರು
    ಮಾನವೀಯತೆ ಮೆರೆಯಲು ಸಾಧ್ಯ. ಈ ಸದ್ಗುಣಗಳು ಅಕ್ಕ ಶಾರದಾ
    ಮಾಳಗೇರವರಲ್ಲಿ ಕಾಣಲು ಸಾಧ್ಯ. ಅವರ ಸರಳತೆ, ಉನ್ನತ ವಿಚಾರಗಳಿಗೆ ನನ್ನದೊಂದು ಹೆಮ್ಮೆಯ ಶಲ್ಯೂಟ್. 🌹🙏🌹

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು

ಕಾಲೇಜು ವಿದ್ಯಾರ್ಥಿನಿಯೊಬ್ಬರು ಕೊಲೆಯಾಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿತ್ರದುರ್ಗ ನಗರದ ಹೊರವಲಯದ...

ಬೀದರ್‌ | ಮಳೆ ಅಬ್ಬರ : ಮೂರು ದಿನಗಳಲ್ಲಿ 138 ಮನೆಗಳಿಗೆ ಹಾನಿ, 7,775 ಹೆಕ್ಟೇರ್‌ ಬೆಳೆ ನಾಶ!

ಬೀದರ್‌ ಜಿಲ್ಲಾದ್ಯಂತ ಕಳೆದ ಮೂರು ದಿನಗಳಲ್ಲಿ ಮಳೆ ಅಬ್ಬರದಿಂದ ಜಿಲ್ಲೆಯಾದ್ಯಂತ 138...

Download Eedina App Android / iOS

X