ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ ಬಳಕೆಯಾಗುತ್ತಿದ್ದ ಕೊಡುಗೆ ಜಮೀನು ಮತ್ತೊಬ್ಬರಿಗೆ ಮಾರಾಟವಾಗುತ್ತಿದೆ. ದೇವಸ್ಥಾನದ ಜಮೀನು ದೇವಾಲಯದ ಆಸ್ತಿಯಾಗಿಯೇ ಉಳಿಯಲಿ ಎಂದು ತುಮಕೂರು ತಹಶೀಲ್ದಾರ್ ಬಿ ಆರತಿ ಅವರಿಗೆ ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಚೌಕೇನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಚೌಕೇನಹಳ್ಳಿ ಗ್ರಾಮದ ಇತಿಹಾಸಯುಳ್ಳ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು ಐದು ಎಕರೆ ಜಮೀನು ಕೊಡುಗೆಯಾಗಿ ಅರ್ಚಕರ ಕುಟುಂಬಕ್ಕೆ ಸೇರಿದೆ. ದೇವಾಲಯದ ಕೈಂಕರ್ಯ ಮಾಡಿಕೊಂಡು ನಿತ್ಯ ಪೂಜೆ, ಜಾತ್ರೆ ಇನ್ನಿತರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಸುವ ಕುಟುಂಬದ ಜೀವನಕ್ಕೆ ಆಧಾರವಾಗಿರುವ ಈ ಜಮೀನಿನ ಪೈಕಿ ಒಂದು ಎಕರೆ ಮಾರಾಟವಾಗಿ ಕಾನೂನು ರೀತ್ಯಾ ದಾಖಲೆ ಸಿದ್ಧವಾಗುವ ವಿಚಾರ ತಿಳಿದುಬಂದಿದೆ. ಇದನ್ನರಿತ ಗ್ರಾಮಸ್ಥರು ದೇವಾಲಯದ ಅಭಿವೃದ್ಧಿಗೆ ಈ ಜಮೀನು ಬಳಕೆಯಾಗಬೇಕು ಅಥವಾ ಅಲ್ಲಿನ ಅರ್ಚಕರ ಜೀವನಕ್ಕೆ ಬಳಕೆಯಾಗಬೇಕು. ಆದರೆ ಮಾರುಕಟ್ಟೆ ಬೆಲೆಗೆ ಲಕ್ಷಾಂತರ ರೂ.ಗಳಿಗೆ ಮಾರಾಟವಾಗುವುದು ಸರಿ ಎನಿಸಲಿಲ್ಲ. ದೇವಾಲಯಕ್ಕೆ ಕೊಡುಗೆ ಜಮೀನು ಉಳಿಸಿ ಎಂದು ತಹಶೀಲ್ದಾರ್ ಬಳಿ ಚರ್ಚಿಸಿದರು.
“ಕಾನೂನು ರೀತ್ಯಾ ಪರಭಾರೆ ಆಗಿದ್ದರೂ ದೇವಾಲಯದ ಅಭಿವೃದ್ಧಿಗೆ ಪೂರಕವಲ್ಲದ ಈ ಘಟನೆ ಇಡೀ ಗ್ರಾಮಕ್ಕೆ ಬೇಸರ ತಂದಿದೆ. ಅರ್ಚಕರ ಜೀವನಕ್ಕೆ ಕೊಡುಗೆ ಜಮೀನು ಉಳಿಸಿಕೊಳ್ಳಬೇಕಿದೆ. ಆದರೆ ಮತ್ತೊಬ್ಬರಿಗೆ ಮಾರಾಟ ಮಾಡುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯ ದೇವಾಲಯ ಅಭಿವೃದ್ಧಿಗೆ ಇರುವ ಕೊಡುಗೆ ಜಮೀನುಗಳನ್ನು ದೇವಾಲಯದ ಆಸ್ತಿ ಎಂದು ಘೋಷಣೆ ಮಾಡಿ ಜಮೀನು ಉಳಿಸಿ ಗ್ರಾಮಗಳ ಪುರಾತನ ದೇವಾಲಯ ಬೆಳೆಸಬೇಕು” ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸ್ಮಶಾನವಿಲ್ಲದೆ ಅರಣ್ಯ, ಕೆರೆ ದಂಡೆ, ಕಾಡಿನ ಬದಿ, ಜಮೀನುಗಳಲ್ಲಿ ಶವ ಸಂಸ್ಕಾರ
“ಜಿಲ್ಲಾಡಳಿತವೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮೂಲಕ ಮುಜರಾಯಿ ದೇವಾಲಯದ ಕೊಡುಗೆ ಜಮೀನು ದೇವಾಲಯಕ್ಕೆ ಉಳಿಸಬೇಕು” ಎಂದು ಚೌಕೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.
