ಕರ್ನಾಟಕದ ಬಿಜೆಪಿಯಲ್ಲಿ ಬಂಡಾಯ ಆರಂಭವಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಶುಕ್ರವಾರ ಘೋಷಿಸಿದ್ದಾರೆ.
“ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಕೆಇ ಕಾಂತೇಶ್‌ಗೆ ಪಕ್ಷದ ಅಭ್ಯರ್ಥಿಯಾಗದಂತೆ ಟಿಕೆಟ್ ತಪ್ಪಿಸಿದ್ದಾರೆ” ಎಂದು ಆರೋಪಿಸಿದ ಈಶ್ವರಪ್ಪ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೂಡಾ ತನಗೆ ಮೋಸ ಮಾಡಿರುವುದಾಗಿ ಆರೋಪಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿರುವ ಬೊಮ್ಮಾಯಿ ಆರೋಪವನ್ನು ಅಲ್ಲಗಳೆದಿದ್ದು, ಯಾವ ನಾಯಕರಿಗೆ ಟಿಕೆಟ್ ನೀಡಬೇಕೆಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ ಎಂದು ಪ್ರತಿಪಾದಿಸಿದರು.
ಶಿವಮೊಗ್ಗದಿಂದ ಪಕ್ಷೇತರ ಸ್ಪರ್ಧೆ
“ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತೇನೆ” ಎಂದು ತಮ್ಮ ಬೆಂಬಲಿಗರು ಕರೆದಿದ್ದ ಸಭೆಯಲ್ಲಿ ಹೇಳಿರುವ ಈಶ್ವರಪ್ಪ ಈ ಮೂಲಕ ಬಿಜೆಪಿ ವಿರುದ್ಧ ಬಂಡಾಯವನ್ನು ಘೋಷಿಸಿದ್ದಾರೆ.
“ಪಕ್ಷವು ನನಗೆ ನೋಟಿಸ್ ನೀಡಬಹುದು ಅಥವಾ ನನ್ನನ್ನು ಹೊರಹಾಕಬಹುದು. ಎರಡು ತಿಂಗಳೊಳಗೆ ನಾನು ಗೆದ್ದರೆ, ನನ್ನ ಬೆಂಬಲಿಗರು ನನ್ನ ತಾಯಿಯಾದ ಬಿಜೆಪಿ ಪಾದ ಸೇರುತ್ತಾರೆ ಎಂದು ನನಗೆ ವಿಶ್ವಾಸವಿದೆ. ಪಕ್ಷದ ಭವಿಷ್ಯ, ಅದರ ಸಿದ್ಧಾಂತವನ್ನು ಉಳಿಸಲು ನಮ್ಮ ಹೋರಾಟ” ಎಂದು ಹೇಳಿದರು.
ಯಡಿಯೂರಪ್ಪ ಅವರ ಪುತ್ರ ಮತ್ತು ಹಾಲಿ ಸಂಸದ ಬಿವೈ ರಾಘವೇಂದ್ರ ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ, ನಟ ಶಿವರಾಜಕುಮಾರ್‌ರ ಪತ್ನಿ ಗೀತಾ ಶಿವರಾಜ್‌ಕುಮಾರ್‌ರನ್ನು ಕಣಕ್ಕಿಳಿಸಿದ್ದಾರೆ.
ನರೇಂದ್ರ ಮೋದಿಗಾಗಿ ಮಿಡಿಯುತ್ತಿರುವ ನನ್ನ ಹೃದಯ
ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವುದಿಲ್ಲ ಎಂದು ಪದೇ ಪದೇ ಒತ್ತಿ ಹೇಳಿದರು. “ನನ್ನ ಪ್ರಾಣ ಹೋದರೂ ನಾನು ನರೇಂದ್ರ ಮೋದಿಯ ವಿರುದ್ಧ ಹೋಗುವುದಿಲ್ಲ. ನನ್ನ ಹೃದಯ ತೆರೆದರೆ ಒಂದು ಕಡೆ ರಾಮ, ಇನ್ನೊಂದು ಕಡೆ ಮೋದಿ ಇರುತ್ತಾರೆ” ಎಂದು ಈಶ್ವರಪ್ಪ ಹೇಳಿಕೊಂಡಿದ್ದಾರೆ.