- ಕರ್ನಾಟಕದಲ್ಲಿ ಎರಡು ಹಂತದ ಮತದಾನ
- ಮೊದಲ 14 ಕ್ಷೇತ್ರಗಳಿಗೆ ಏಪ್ರಿಲ್ 26, ಉಳಿದ 14 ಕ್ಷೇತ್ರಗಳಿಗೆ ಮೇ 7ಕ್ಕೆ ಮತದಾನ
18ನೇ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗವು ಮತದಾನದ ದಿನಾಂಕಗಳನ್ನು ಶನಿವಾರ ಪ್ರಕಟಿಸಿದೆ. “ದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ನಡೆಸಲು ಆಯೋಗವು ಸಂಪೂರ್ಣ ಸಿದ್ಧವಾಗಿದೆ” ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಚುನಾವಣೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. “ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ” ಎಂದು ತಿಳಿಸಿದ್ದಾರೆ.
“ಮತದಾನ ಮಾಡಲು ದೇಶದ 96.88 ಕೋಟಿ ಮತದಾರರು ಅರ್ಹರಾಗಿದ್ದಾರೆ. ಈ ಪೈಕಿ 1.8 ಕೋಟಿ ಯುವ ಮತದಾರರು ಮೊದಲ ಬಾರಿಗೆ 2024ರಲ್ಲಿ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆ ಬಳಿಕ ನೋಂದಾಯಿತ ಮತದಾರರಲ್ಲಿ ಆರು ಶೇಕಡಾ ಹೆಚ್ಚಳವಾಗಿದೆ. ಮತದಾರರ ಸಂಖ್ಯೆಯ ಪೈಕಿ ಇದು ವಿಶ್ವದಲ್ಲೇ ಅತಿದೊಡ್ಡ ಸಂಖ್ಯೆಯಾಗಿದೆ” ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ
ಕರ್ನಾಟಕದಲ್ಲಿ 2024ರ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಮೊದಲ ಹಂತದ ಮತದಾನ ಮತದಾನವು ಏಪ್ರಿಲ್ 26 (ಶುಕ್ರವಾರ) ನಡೆಯಲಿದ್ದು, ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ.
ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಹಾಗೂ ಮೇ 7ರಂದು ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
Schedule :General Election to Lok Sabha 2024#ECI #GeneralElections2024 pic.twitter.com/2fjMIsxIw3
— Election Commission of India (@ECISVEEP) March 16, 2024
ಕರ್ನಾಟಕದಲ್ಲಿ ಮೊದಲ ಹಂತ(ಏಪ್ರಿಲ್ 26-ಶುಕ್ರವಾರ)ರಂದು ಮತದಾನ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ವಿವರ ಹೀಗಿದೆ
ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಹಾಸನ, ತುಮಕೂರು, ಚಾಮರಾಜನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮಂಡ್ಯ.
ಮೇ 7ರಂದು ನಡೆಯಲಿರುವ ಕ್ಷೇತ್ರಗಳ ವಿವರ
ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಧಾರವಾಡ, ಹಾವೇರಿ-ಗದಗ, ವಿಜಯಪುರ, ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ್ದು, ರಾಜ್ಯದಲ್ಲಿ 5.37 ಕೋಟಿ ಮತದಾರರು ಇರುವುದಾಗಿ ತಿಳಿಸಿದೆ.
ಹಂತಗಳ ವಿವರ ಹೀಗಿದೆ
1ನೇ ಹಂತ: ಏಪ್ರಿಲ್ 19
2ನೇ ಹಂತ: ಏಪ್ರಿಲ್ 26
3ನೇ ಹಂತ: ಮೇ 7
4ನೇ ಹಂತ: ಮೇ 13
5ನೇ ಹಂತ: ಮೇ 20
6ನೇ ಹಂತ: ಮೇ 25
7ನೇ ಹಂತ: ಜೂನ್ 1,2024
ಫಲಿತಾಂಶದ ದಿನಾಂಕ: ಜೂನ್ 4,2024
ನಾಲ್ಕು ರಾಜ್ಯಗಳ ವಿಧಾನಸಭೆಯ ಮತದಾನ ದಿನಾಂಕವೂ ಪ್ರಕಟ
ಲೋಕಸಭಾ ಚುನಾವಣೆಯ ಜತೆಗೆ ಒಡಿಶಾ, ಸಿಕ್ಕಿಂ, ಆಂಧ್ರ ಪ್ರದೇಶ ಹಾಗೂ ಅರುಣಾಚಲ ಪ್ರದೇಶ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಆಂಧ್ರ ಪ್ರದೇಶ ವಿಧಾನಸಭೆಯ 175 , ಒಡಿಶಾ ವಿಧಾನಸಭೆಯ 47, ಅರುಣಾಚಲ ಪ್ರದೇಶ ವಿಧಾನಸಭೆಯ 60 ಹಾಗೂ ಸಿಕ್ಕಿಂ ವಿಧಾನಸಭೆಯ 32 ಕ್ಷೇತ್ರಗಳಿಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ.
2019ರ ಲೋಕಸಭೆ ಚುನಾವಣೆ
2019ರ ಲೋಕಸಭಾ ಚುನಾವಣೆಗೆ ಆಯೋಗವು ಮಾರ್ಚ್ 10ರಂದು ವೇಳಾಪಟ್ಟಿ ಪ್ರಕಟಿಸಿತ್ತು. ಏಪ್ರಿಲ್ 11 ಹಾಗೂ ಮೇ 19ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 23ರಂದು ಮತ ಎಣಿಕೆ ನಡೆಸಲಾಗಿತ್ತು. 2019ರಲ್ಲಿ ಶೇಕಡ 67.40ರಷ್ಟು ದೇಶದಲ್ಲಿ ಒಟ್ಟು ಮತದಾನ ನಡೆದಿತ್ತು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯು 303 ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಕಾಂಗ್ರೆಸ್ 52 ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಯಾಗಲಿದೆ. ಅದಕ್ಕೆ ಮುನ್ನ ಹೊಸ ಸರ್ಕಾರ ರಚನೆಯಾಗಬೇಕಿದೆ.
Celebrating Inclusivity!
Growth in voter categories, especially women, youth & PwDs reflects ECI commitment to inclusive rolls. With ~82 lakhs PwDs, 2.2 lakh 100+ & 48k Third gender voters, our rolls reflect a diverse mosaic of electorate.#ECI #ChunavKaParv #DeshKaGarv pic.twitter.com/zlLIUOaAiH— Election Commission of India (@ECISVEEP) March 16, 2024
ದೇಶದ ಮತದಾರರ ಸಂಖ್ಯೆ ಸಂಕ್ಷಿಪ್ತ ವಿವರ ಹೀಗಿದೆ
- ಒಟ್ಟು ಮತದಾರರ ಸಂಖ್ಯೆ: 96,88,21,926
- ಪುರುಷ ಮತದಾರರು: 49,72,31,994
- ಮಹಿಳಾ ಮತದಾರರು: 47,15,41,888
- ಲೈಂಗಿಕ ಅಲ್ಪಸಂಖ್ಯಾತರು: 48,044
- ವಿಶೇಷ ಚೇತನ ಮತದಾರರು: 88,35,449
- 18-19ರ ವಯಸ್ಸಿನವರು: 1,84,81,610
- 20-29ರ ವಯಸ್ಸಿನವರು:19,74,37,160
- 80+ ಇರುವವರು: 1,85,92,918
- 100+ ಇರುವವರು: 2,38,791
- ಜನಸಂಖ್ಯೆ ಅನುಪಾತ: 66.76
- ಲಿಂಗಾನುಪಾತ: 948
ಕರ್ನಾಟಕದಲ್ಲಿರುವ ಒಟ್ಟು ಮತದಾರರ ವಿವರಗಳು ಹೀಗಿದೆ:
- ಒಟ್ಟು ಮತದಾರರ ಸಂಖ್ಯೆ: 5,37,85,815
- ಪುರುಷರ ಸಂಖ್ಯೆ: 2,69,33,750
- ಮಹಿಳೆಯರ ಸಂಖ್ಯೆ: 2,68,47,145
- ಇತರೆ: 4,920
- ಸೇವಾ ಮತದಾರರ ಸಂಖ್ಯೆ: 46,501
- ಯುವ ಮತದಾರರ ಸಂಖ್ಯೆ: 3,88,527
- ವಿದೇಶದಲ್ಲಿರುವ ಮತದಾರರ ಸಂಖ್ಯೆ: 3,164
- 80 ವರ್ಷ ದಾಟಿರುವ ಮತದಾರರ ಸಂಖ್ಯೆ: 12,71,862
- ಶತಾಯುಷಿ ಅಂದರೆ 100ಕ್ಕೂ ಹೆಚ್ಚು ವರ್ಷ ತುಂಬಿರುವವರ ಸಂಖ್ಯೆ: 17,937
- ವಿಕಲ ಚೇತನ ಮತದಾರರ ಸಂಖ್ಯೆ: 5,62,890
- ಮತದಾನ ಕೇಂದ್ರಗಳ ಸಂಖ್ಯೆ: 58,834
2 hanthadalli mathadanavagabekithu, ondu varadolage result barabekithu.
EVM mele vishvasa illa, strong room mele ashtoo vishvasa illa..