ಕೇಂದ್ರ ಚುನಾವಣಾ ಆಯೋಗ ಮುಂಬರುವ ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯ ಮತ್ತು ಪಾರದರ್ಶಕತೆಯಿಂದ ನಡೆಸುವ ಸಲುವಾಗಿ ಪಶ್ಚಿಮ ಬಂಗಾಳದ ಡಿಜಿಪಿ ಸೇರಿ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗ ವರ್ಗಾವಣೆಗೊಳಿಸಿದೆ. ಈ ಹಿರಿಯ ಅಧಿಕಾರಿಗಳು ತಮ್ಮ ರಾಜ್ಯದ ಮುಖ್ಯಮಂತ್ರಿ ಕಚೇರಿಯ ಉಸ್ತುವಾರಿಯಾಗಿದ್ದರು.
ಇದಲ್ಲದೆ, ಮಿಜೋರಾಂ ಹಾಗೂ ಹಿಮಾಚಲ ಪ್ರದೇಶದ ಸಾಮಾನ್ಯ ಆಡಳಿತ ಇಲಾಖೆಯ ಕಾರ್ಯದರ್ಶಿಗಳನ್ನು ಸಹ ವರ್ಗಾವಣೆಗೊಳಿಸಲಾಗಿದೆ. ಮುಂಬೈ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಇಕ್ಬಾಲ್ ಸಿಂಗ್ ಚಹಾಲ್ ಅವರನ್ನು ಹುದ್ದೆಯಿಂದ ಬೇರೆಡೆ ನಿಯೋಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
ಏಪ್ರಿಲ್ 19ರಂದು ಲೋಕಸಭೆ ಚುನಾವಣೆ ಆರಂಭಗೊಳ್ಳಲಿದ್ದು, ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ.
ಶುಕ್ರವಾರ ಲೋಕಸಭೆ ಚುನಾವಣೆ ಘೋಷಣೆಯ ದಿನದಂದು ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಎಲ್ಲ ಪಕ್ಷಗಳು ಮತ್ತು ಅಲ್ಲಿನ ನಾಯಕರು ಮಾದರಿ ನೀತಿ ಸಂಹಿತೆಗೆ ಕಟಿಬದ್ಧರಾಗಿರಬೇಕು ಎಂದು ತಿಳಿಸಿದ್ದಾರೆ.
ಚುನಾವಣೆಗಳ ಮೊದಲು ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಭಾಷಣಗಳು, ಚುನಾವಣಾ ದಿನ, ಮತಗಟ್ಟೆಗಳು, ಅಧಿಕಾರ ಕ್ಷೇತ್ರಗಳು, ಚುನಾವಣಾ ಪ್ರಣಾಳಿಕೆಯ ವಿಷಯ, ಮೆರವಣಿಗೆಗಳು ಹಾಗೂ ಸಾಮಾನ್ಯ ನಡವಳಿಕೆಗಳ ಸಂಬಂಧಿತ ನಿಯಮಗಳು ಒಳಗೊಂಡಿವೆ.
