ಫಸಲ್ ಭೀಮಾ ಯೋಜನೆಯಲ್ಲಿ ವಂತಿಗೆ ತುಂಬಿದ ರೈತರಿಗೆ ಬೆಳೆ ಪರಿಹಾರ ನೀಡದೆ ಭಾರೀ ಭ್ರಷ್ಟಾಚಾರ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ರಾಯಚೂರು ಜಿಲ್ಲೆಯ ಜಾಲಹಳ್ಳಿ ನಾಡ ಕಾರ್ಯಲಯದ ಮುಂದೆ ರೈತರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.
ಹೋರಾಟ ಕುರಿತು ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, “ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ನ್ಯಾಯಯುತವಾಗಿ ದೊರೆಯುತ್ತದೆಂದು ನಂಬಿದ್ದ ರೈತರು ಬೆಳೆವಾರು ವಂತಿಗೆ ಹಣವನ್ನು ಇನ್ಷೂರೆನ್ಸ್ ಕಂಪನಿಗೆ ನಗದು ತುಂಬಿದ್ದಾರೆ. ಆದರೆ ಇಲಾಖೆ ಅಧಿಕಾರಿಗಳು ಮಧ್ಯವರ್ತಿಗಳು ಸೇರಿ ಫಲಾನುಭವಿಗಳಿಗೆ ಹಣ ಸಿಗದೇ ಬೇರೆಯವರಿಗೆ ಸಿಕ್ಕಿದೆ ಕೂಡಲೇ ತನಿಖೆ ಮಾಡಿ ನಿಜವಾದ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು” ಎಂದು ಒತ್ತಾಯಿಸಿದರು.
“ರೈತರ ಬೆಳೆ ನಷ್ಟಕ್ಕೆ ಕೃಷಿ ಇಲಾಖೆ ಕಂದಾಯ ಇಲಾಖೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಂಟಿಯಾಗಿ ಸರ್ವೆ ಮಾಡಿ ವರದಿ ಸಲ್ಲಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನೆ ಮಾಡಿ ಬೆಳೆಹಾನಿ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕು” ಎಂದು ಆಗ್ರಹಿಸಿದರು.
“ನಿಯಮಗಳನ್ನು ಮೀರಿ ಫಸಲ್ ಭೀಮಾ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ.ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲ ಇಲಾಖೆಯ ಅಧಿಕಾರಿಗಳ ಮೇಲೆ ಹಾಗೂ ಯೋಜನೆಯ ಹಣ ದುರುಪಯೋಗ ಮಾಡಿಕೊಂಡಿರುವ ಮಧ್ಯವರ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಪ್ರಕರಣ ದಾಖಲಿಸಬೇಕು. ವಿಮಾ ಕಂಪೆನಿಗೆ ವಂತಿಗೆ ತುಂಬಿದ ನಿಜವಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಯಿಂದ ಪ್ರವೀಣ್ ಹಾಗೂ ದೇವದುರ್ಗ ತಾಲೂಕು ದಂಡಾಧಿಕಾರಿ ಚನ್ನಮಲ್ಲಪ್ಪ ಗಂಟಿ, ನಾಡ ತಹಶೀಲ್ದಾರ್ ವಿಕಾಸ ಕೋಳೂರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಮೋಸ ಮಾಡಿದವರ ವಿರುದ್ಧ ನಾಲ್ಕು ದಿನಗಳೊಳಗೆ ಸೂಕ್ತ ಕ್ರಮ ಜರುಗಿಸುವುದಾಗಿ ಪತ್ರದ ಮೂಲಕ ಲಿಖಿತ ಭರವಸೆ ನೀಡಿದರು.
ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿ ಹಿಂಪಡೆದುಕೊಂಡರು. ಜೆಡಿಎಸ್ ಮುಖಂಡ ಸಿದ್ದನಗೌಡ ಮೂಡಲಗುಂಡ ಹೋರಾಟಕ್ಕೆ ಬೆಂಬಲ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನೀರಿನ ಸಮಸ್ಯೆ; ಕಟ್ಟಡ ನಿರ್ಮಾಣಕ್ಕೂ ತಟ್ಟಿದ ಬಿಸಿ
ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಮೌನೇಶ ಜಾಲಹಳ್ಳಿ, ದುರ್ಗಪ್ಪ ವರಟಿ, ರಂಗನಾಥ ಬುಂಕಲದೊಡ್ಡಿ, ಹನುಮಂತ ಮಂಡಲಗುಡ್ಡ, ಮಲ್ಲಪ್ಪ ಮುಂಡರಗಿ, ಮೂರ್ತಿ, ಭೂಜಪ್ಪ, ರೈತರುಗಳಾದ ಬಸವರಾಜ ತೇಕರು, ತಮ್ಮಣ್ಣ ಸೇರಿದಂತೆ ಇತರರು ಇದ್ದರು.
ವರದಿ : ಶಿವರಾಂ ಕಟ್ಟಿಮನಿ
