ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಮಾರ್ಚ್ 21ರಂದು ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇ.ಡಿ ಕಸ್ಟಡಿ ಅಂತ್ಯವಾಗಲಿದ್ದು,ಇಂದು ದೆಹಲಿ ಕೋರ್ಟ್‌ಗೆ ಹಾಜರಾಗಲಿದ್ದಾರೆ.
ಇಂದು ಬೆಳಿಗ್ಗೆ 11.30ಕ್ಕೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ವಿಚಾರಣೆ ಪ್ರಯುಕ್ತ ಹೆಚ್ಚುವರಿ 7 ದಿನ ಕೋರಿದ್ದರು.
ಆದರೆ ಮ್ಯಾಜಿಸ್ಟ್ರೇಟಲ್ ಕೋರ್ಟ್ ಕೇಜ್ರಿವಾಲ್ ಅವರ ಇ.ಡಿ ಕಸ್ಟಡಿ ಅವಧಿಯನ್ನು ಏಪ್ರಿಲ್ 1ರವರೆಗೆ ಕೇವಲ 4 ದಿನ ಮಾತ್ರ ಅನುಮತಿ ನೀಡಿತ್ತು.
ಎಎಪಿಯನ್ನು ಹತ್ತಿಕ್ಕುವುದು ಇ.ಡಿಯ ಪ್ರಮುಖ ಉದ್ದೇಶವಾಗಿದ್ದು ಈ ಕಾರಣದಿಂದಲೇ ಅಬಕಾರಿ ನೀತಿ ಹಗರಣದಲ್ಲಿ ತಮ್ಮನ್ನು ಸಿಲುಕಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ
“ನಾನು ಇ.ಡಿಯ ರಿಮ್ಯಾಂಡ್ ಅರ್ಜಿಯನ್ನು ವಿರೋಧಿಸುತ್ತಿಲ್ಲ. ಜಾರಿ ನಿರ್ದೇಶನಾಲಯ ತನ್ನನ್ನು ಎಷ್ಟು ದಿನ ಬೇಕೋ ಅಷ್ಟು ದಿನ ತನ್ ಕಸ್ಟಡಿಯಲ್ಲಿ ಇಟ್ಟುಕೊಳ್ಳಲಿ. ಆದರೆ ಇದು ಒಂದು ಹಗರಣವಾಗಿದೆ. ಇ.ಡಿಗೆ ಎರಡು ಉದ್ದೇಶಗಳಿವೆ. ಒಂದು ಎಎಪಿಯನ್ನು ಹತ್ತಿಕ್ಕುವುದು. ಮತ್ತೊಂದು ಅಕ್ರಮ ಹಣ ವರ್ಗಾವಣೆಯಲ್ಲಿ ಹಣ ತೆಗೆದುಕೊಂಡಿದ್ದೇನೆಂದು ಅಪರಾಧಿಯನ್ನಾಗಿ ಬಿಂಬಿಸುವುದು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿಗಳು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿದೆ.
ಕೇಜ್ರಿವಾಲ್ ಕೂಡ ತಮ್ಮನ್ನು ಬಂಧಿಸಿರುವುದರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಆದರೆ ಮಧ್ಯಂತರ ರಕ್ಷಣೆ ನೀಡಲು ಕೋರ್ಟ್ ನಿರಾಕರಿಸಿದ್ದು,ವಿಚಾರಣೆಯಲ್ಲಿ ಇ.ಡಿ ವಾದ ಮುಗಿಯದೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.
ತನಿಖಾ ಸಂಸ್ಥೆಯು ಏ.2ರೊಳಗೆ ಪ್ರತಿಕ್ರಿಯೆ ನೀಡಿ ವಿಚಾರಣೆ ದಿನಾಂಕವನ್ನು ಏ.3ಕ್ಕೆ ಕೋರ್ಟ್ ನಿಗದಿಪಡಿಸಿತ್ತು.
ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ನಿನ್ನೆ(ಮಾ.31) ಇಂಡಿಯಾ ಒಕ್ಕೂಟ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿತ್ತು. ಕಾಂಗ್ರೆಸ್ ಒಳಗೊಂಡು ದೇಶದ ವಿವಿಧ ಭಾಗದ ವಿರೋಧ ಪಕ್ಷದ ನಾಯಕರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
