ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಮುನ್ನ ಬಿಹಾರದ ಬಿಜೆಪಿ ಸಂಸದ ಅಜಯ್ ಕುಮಾರ್ ನಿಶಾದ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಬಿಹಾರದ ಮುಜಾಫರಾಪುರ್ ಸಂಸದರಾದ ನಿಶಾದ್ 2014 ಹಾಗೂ 2019ರಲ್ಲಿ ಬಿಜೆಪಿಯಿಂದ ಸಂಸರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿರುವುದಕ್ಕೆ ಕಾಂಗ್ರೆಸ್‌ಗೆ ಸೇರಿಕೊಂಡಿದ್ದಾರೆ.
ನಿಶಾದ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಹಾರದ ಮುಜಾಫರಾಪುರ್, ದರ್‌ಬಂಗಾ, ಚಂಪಾರಣ್ ಹಾಗೂ ಮಧುಬನಿ ಕ್ಷೇತ್ರಗಳ ಹಿಂದುಳಿದ ವರ್ಗದ ಮತಗಳನ್ನು ಕ್ರೋಢೀಕರಿಸಲು ಕಾಂಗ್ರೆಸ್‌ಗೆ ಸಹಾಯಕವಾಗಲಿದೆ.
ಈ ಮೊದಲು ಬಿಹಾರದ ಚಿರು ಕ್ಷೇತ್ರದ ರಾಹುಲ್ ಕೇಶವನ್ ಹಾಗೂ ಹಿಸಾರ್ ಕ್ಷೇತ್ರಗಳ ಸಂಸದರಾದ ಬ್ರಿಜೇಂದ್ರ ಸಿಂಗ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈತ್ರಿ ಕಷ್ಟ; ಅದೇ ಇಷ್ಟ ಎಂದದ್ದೇಕೆ ಕುಮಾರಸ್ವಾಮಿ?
ನಿಶಾದ್ ತಂದೆ ಜೈ ನಾರಾಯಣ್ ಪ್ರಸಾದ್ ನಿಶಾದ್ ಅವರು ಆರ್‌ಜೆಡಿಯಿಂದ 1996-2004 ಹಾಗೂ ಜೆಡಿಯುನಿಂದ 2009-14ರವರೆಗೆ ಮುಜಾಫರಾಪುರ್ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದರು. ನಂತರ ತಂದೆ, ಮಗ ಇಬ್ಬರು ಬಿಜೆಪಿ ಸೇರ್ಪಡೆಗೊಂಡಿದ್ದರು.
ಬಿಹಾರದ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ರಾಜ್ಯದ ಎಐಸಿಸಿ ಉಸ್ತುವಾರಿ ಮೋಹನ್ ಪ್ರಕಾಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪವನ್ ಖೇರಾ ಉಪಸ್ಥಿತಿಯಲ್ಲಿ ನವದೆಹಲಿಯ ಎಐಸಿಸಿ ಮುಖ್ಯಕಚೇರಿಯಲ್ಲಿ ಅಜಯ್ ಕುಮಾರ್ ನಿಶಾದ್ ಕೈ ಪಕ್ಷಕ್ಕೆ ಸೇರ್ಪಡೆಯಾದರು.
“ನಾನು ಕೆಲವರ ಅಹಂಕಾರವನ್ನು ಹತ್ತಿಕ್ಕಬೇಕು. ನಾನು ನನ್ನ ಸ್ವಾಭಿಮಾನವನ್ನು ಮರಳಿ ಪಡೆಯಬೇಕು. ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿಗೂ ಅಂತಿಮ ಅವಕಾಶ ನೀಡಲಾಗುತ್ತದೆ. ಆದರೆ ನನ್ನ ಟಿಕೆಟ್ ತಪ್ಪಿಸಲು ನನ್ನನ್ನು ಒಮ್ಮೆಯು ಮಾತನಾಡಿಸಿಲ್ಲ.ಇದು ಹಣಬಲದ ಚುನಾವಣೆಯಲ್ಲ, ಜನಬಲದ ಚುನಾವಣೆ” ಎಂದು ನಿಶಾದ್ ಕಾಂಗ್ರೆಸ್ ಸೇರ್ಪಡೆ ನಂತರ ತಿಳಿಸಿದರು.
