ಸಾರ್ವಜನಿಕ ವಲಯದ ರಕ್ಷಣಾ ಉದ್ಯಮ – ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) – 2023-24ರ ಹಣಕಾಸು ವರ್ಷದಲ್ಲಿ 29,810 ಕೋಟಿ ರೂ. ಆದಾಯ ಗಳಿಸಿದೆ ಎಂದು ವರದಿಯಾಗಿದೆ.
ಎಚ್‌ಎಎಲ್ 2022-23ರಲ್ಲಿ 26,928 ಕೋಟಿ ರೂ. (9%) ಆದಾಯಗಳಿಸಿತ್ತು. ಈ ವರ್ಷ, 11% ಆದಾಯಗಳಿಸಿದೆ. ಆ ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷ 2% ಅಧಿಕ ಆದಾಯ ದಾಖಲಿಸಿದೆ.
“ನಾನಾ ಸಮಸ್ಯೆಗಳ ನಡುವೆಯು ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಕಾರ್ಯಕ್ಷಮತೆಯೊಂದಿಗೆ ಕೆಲಸ ಮಾಡಿರುವ ಎಚ್‌ಎಎಲ್ ನಿರೀಕ್ಷಿತ ಆದಾಯ ಬೆಳವಣಿಗೆ ಸಾಧಿಸಿದೆ. 2024-25ರ ಹೊಸ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಪ್ರಮುಖ ‘ಕಾರ್ಯಾದೇಶ’ಗಳು ಬರುವ ನಿರೀಕ್ಷೆಯೊಂದಿಗೆ 94,000 ಕೋಟಿ ರೂ.ಗಳ ‘ಉತ್ಪಾದನಾ ಆದೇಶ’ವನ್ನು ಹೊಂದಿದೆ” ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಂತಕೃಷ್ಣನ್ ಹೇಳಿದ್ದಾರೆ.
2023-24ರಲ್ಲಿ ಎಚ್‌ಎಎಲ್ 19,000 ಕೋಟಿ ರೂ.ಗಳ ಹೊಸ ಉತ್ಪಾದನಾ ಒಪ್ಪಂದಗಳನ್ನು ಮತ್ತು 16,000 ಕೋಟಿ ರೂ.ಗಳ ರಿಪೇರಿ ಮತ್ತು ಓವರ್‌ಹಾಲ್ (ಆರ್‌ಒಎಚ್) ಒಪ್ಪಂದಗಳನ್ನು ಪಡೆದುಕೊಂಡಿದೆ.
2023-24ರ ಅವಧಿಯಲ್ಲಿ ಎರಡು ಹಿಂದೂಸ್ತಾನ್-228 ವಿಮಾನಗಳ ಪೂರೈಕೆಗಾಗಿ ಗಯಾನಾ ರಕ್ಷಣಾ ಪಡೆಗಳೊಂದಿಗೆ ರಫ್ತು ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲದೆ, ಒಪ್ಪಂದಕ್ಕೆ ಸಹಿ ಹಾಕಿದ ಒಂದೇ ತಿಂಗಳೊಳಗೆ ದಾಖಲೆ ಸಮಯದಲ್ಲಿ ಎರಡೂ ವಿಮಾನಗಳನ್ನು ಸರಬರಾಜು ಮಾಡಲಾಗಿದೆ ಎಂದು ಎಚ್‌ಎಎಲ್ ಪ್ರಕಟಣೆ ಬಿಡುಗಡೆ ಮಾಡಿದೆ.
ಎಲ್‌ಸಿಎ ಎಂಕೆ1ಎ ವಿಮಾನಗಳ ಉತ್ಪಾದನಾ ಸರಣಿಯ ಮೊದಲ ಫೈಟರ್ ಮಾರ್ಚ್ 28 ರಂದು ತನ್ನ ಮೊದಲ ಹಾರಾಟವನ್ನು ಪೂರ್ಣಗೊಳಿಸಿದೆ. ಆ ಮೂಲಕ ಮಹತ್ವದ ಮೈಲಿಗಲ್ಲನ್ನು ಎಚ್‌ಎಎಲ್ ಸಾಧಿಸಿದೆ.
ಭಾರತೀಯ ಮಲ್ಟಿ-ರೋಲ್ ಹೆಲಿಕಾಪ್ಟರ್ (IMRH) ಮತ್ತು ಡೆಕ್ ಬೇಸ್ಡ್ ಮಲ್ಟಿ-ರೋಲ್ ಹೆಲಿಕಾಪ್ಟರ್ (DBMRH)ಗಾಗಿ ಇಂಜಿನ್‌ಗಳ ಸ್ವದೇಶಿ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಫ್ರಾನ್ಸ್‌ನ ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳೊಂದಿಗೆ ಜಂಟಿ ಉದ್ಯಮವನ್ನು ಎಚ್‌ಎಎಲ್ ಆರಂಭಿಸಿದೆ.
ಎಚ್‌ಎಎಲ್ ಮತ್ತು ಏರ್‌ಬಸ್ ನವದೆಹಲಿಯಲ್ಲಿ ಎ-320 ವಿಮಾನದ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ (ಎಂಆರ್‌ಒ) ಸೌಲಭ್ಯಗಳನ್ನು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಸಹಯೋಗವು ‘ಮೇಕ್ ಇನ್ ಇಂಡಿಯಾ’ ಮಿಷನ್‌ಅನ್ನು ಬಲಪಡಿಸುತ್ತದೆ. ರಫ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.