ಖರ್ಗೆಯವರು ಪರಿಶಿಷ್ಟ ಜಾತಿಯ 'ಬಲ' ಸಮುದಾಯಕ್ಕೆ ಸೇರಿದವರು. ಅವರ ಸಮುದಾಯ ಬಿಜೆಪಿ ಪಕ್ಷಕ್ಕೆ ಮತ ಹಾಕುವುದಿಲ್ಲವೆಂದು ನಿರ್ಣಯಿಸಿಯೋ ಅಥವಾ ಜಾತಿ ಸಮೀಕರಣದಿಂದಾಗಿಯೋ ಏನೋ ಒಟ್ಟಿನಲ್ಲಿ ಈ ಭಾಗದಿಂದ 'ಬಲ' ಸಮುದಾಯಕ್ಕೆ ಒಂದು ಟಿಕೆಟ್ ನೀಡಿಲ್ಲ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಲ್ಯಾಣ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ. ಸಹಜವಾಗಿ ಈ ಭಾಗದಿಂದ ಹೆಚ್ಚು ಕಾಂಗ್ರೆಸ್ ಹುರಿಯಾಳುಗಳು ಗೆಲ್ಲಿಸಬೇಕೆಂಬ ಉಮೇದಿನಲ್ಲಿ ಅವರು ಇರುತ್ತಾರೆ. ಏಕೆಂದರೆ ಇದು ಅವರ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಏನೇನೋ ಬೇಕು ಅದೆಲ್ಲವೂ ಸಾಧ್ಯವಾದ ಮಟ್ಟಿಗೆ ಮಾಡುತ್ತಾರೆ.
ಬಿಜೆಪಿಯೂ ಈ ಭಾಗದ ಮೇಲೆ ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಇಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಎಐಸಿಸಿ ಅಧ್ಯಕ್ಷರೆ ತಮ್ಮ ಭಾಗದಲ್ಲೇ ತಮ್ಮ ಪಕ್ಷವನ್ನು ಗೆಲ್ಲಿಸಿಲ್ಲ, ಇನ್ನೂ ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಇವರು ಗೆಲ್ಲಿಸಲು ಸಾಧ್ಯವೇ ಎಂದು ಜನರೆದುರು ಸಾರಲು ತುದಿಗಾಲಲ್ಲಿ ನಿಂತಿದೆ. ಅದಕ್ಕಾಗಿಯೇ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದೆ.
ಖರ್ಗೆಯವರು ಪರಿಶಿಷ್ಟ ಜಾತಿಯ ‘ಬಲ’ ಸಮುದಾಯಕ್ಕೆ ಸೇರಿದವರು. ಅವರ ಸಮುದಾಯ ಬಿಜೆಪಿ ಪಕ್ಷಕ್ಕೆ ಮತ ಹಾಕುವುದಿಲ್ಲವೆಂದು ನಿರ್ಣಯಿಸಿಯೋ ಅಥವಾ ಜಾತಿ ಸಮೀಕರಣದಿಂದಾಗಿಯೋ ಏನೋ ಒಟ್ಟಿನಲ್ಲಿ ಈ ಭಾಗದಿಂದ ‘ಬಲ’ ಸಮುದಾಯಕ್ಕೆ ಒಂದು ಟಿಕೆಟ್ ನೀಡಿಲ್ಲ. ಇಲ್ಲಿ ಒಟ್ಟು ನಲ್ವತ್ತೊಂದು ಕ್ಷೇತ್ರಗಳಿವೆ. ಅದರಲ್ಲಿ ಎಂಟು ಎಸ್‌ಸಿ ಮೀಸಲು ಕ್ಷೇತ್ರಗಳಿವೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದಾದರೂ ಒಂದೆರಡು ಕ್ಷೇತ್ರದಲ್ಲಾದರೂ ‘ಬಲ’ ಸಮುದಾಯಕ್ಕೆ ಸೇರಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡಬೇಕಿತ್ತು. ಆದರೇಕೋ ನೀಡಿಲ್ಲ.
ಎಂಟು ಮೀಸಲು ಕ್ಷೇತ್ರಗಳಲ್ಲಿ ಲಂಬಾಣಿ ಸಮುದಾಯಕ್ಕೆ ನಾಲ್ಕು ಕ್ಷೇತ್ರಗಳಲ್ಲಿ, ಮಾದಿಗ ಸಮುದಾಯಕ್ಕೆ ಮೂರು ಕ್ಷೇತ್ರಗಳಲ್ಲಿ (ಮೂರರಲ್ಲಿ ಒಂದು ಕಡೆ ಎಡ ಸಮುದಾಯದ ‘ಸಮಗಾರ’ ಉಪಜಾತಿಗೆ ಮಣೆ ಹಾಕಿದೆ) ಮತ್ತು ಭೋವಿ ಸಮುದಾಯಕ್ಕೆ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. ಟಿಕೆಟ್ ಹಂಚಿಕೆ ನೋಡಿದರೆ ಪರಿಶಿಷ್ಟ ಜಾತಿಯ ‘ಬಲ’ ಸಮುದಾಯ ಹೊರಗಿಟ್ಟು, ಎಡ, ಲಂಬಾಣಿ ಹಾಗೂ ಭೋವಿ ಸಮುದಾಯಕ್ಕೆ ಮಣೆ ಹಾಕಿ, ಅವರನ್ನು ಓಲೈಸಿಕೊಳ್ಳಲು ಮುಂದಾಗಿದ್ದು ಸ್ಪಷ್ಟವಾಗಿ ಕಾಣುತ್ತಿದೆ. ಈ ಪ್ರಯೋಗ ಬಿಜೆಪಿ ಪಕ್ಷಕ್ಕೆ ವರವಾಗುತ್ತದೆಯೋ ಅಥವಾ ಉಲ್ಟಾ ಹೊಡೆಯುತ್ತದೆಯೋ ಎಂಬುವುದು ಚುನಾವಣೆಯ ಫಲಿತಾಂಶವೆ ನಿರ್ಧರಿಸುತ್ತದೆ.
ಬಿಜೆಪಿ ಪಕ್ಷದಿಂದ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಟಿಕೆಟ್ ಪಡೆದ ಅಭ್ಯರ್ಥಿಗಳು
ಔರಾದ – ಪ್ರಭು ಬಿ. ಚೌಹಾಣ್ (ಲಂಬಾಣಿ)
ಚಿಂಚೋಳಿ – ಅವಿನಾಶ್ ಜಾದವ್ (ಲಂಬಾಣಿ)
ಕಲಬುರ್ಗಿ ಗ್ರಾಮೀಣ: ಬಸವರಾಜ ಮತ್ತಿಮೂಡ
{ ಸಮಗಾರ (ಮಾದಿಗ ಸಮುದಾಯ ಉಪಜಾತಿ)}
ಚಿತ್ತಾಪುರ – ಮಣಿಕಂಠ ರಾಠೋಡ (ಲಂಬಾಣಿ)
ಲಿಂಗಸುಗೂರು – ಮಾನಪ್ಪ ವಜ್ಜಲ್ (ಭೋವಿ)
ಕನಕಗಿರಿ – ಬಸವರಾಜ ದಡೇಸುಗೂರು (ಮಾದಿಗ)
ಹೂವಿನ ಹಡಗಲಿ – ಕೃಷ್ಣ ನಾಯ್ಕ (ಲಂಬಾಣಿ)
ಹಗರಿಬೊಮ್ಮನಹಳ್ಳಿ – ಬಲ್ಲಾಹುಣ್ಸಿ ರಾಮಣ್ಣ (ಮಾದಿಗ)

ಸಿದ್ದಪ್ಪ ಮೂಲಗೆ
ಪತ್ರಕರ್ತರು