ಜಾರ್ಖಂಡ್‌ನ 1999ರ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅಕ್ರಮ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ತಡೆ ಹಿಡಿದಿದೆ. ಮುಂಬರುವ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.
ತಮ್ಮ ವಿರುದ್ಧ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು ಅಮಾನತಿನಲ್ಲಿ ಇರಿಸುವಂತೆ ಕೋರಿ ರೇ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸಿದೆ.
ದಿಲೀಪ್ ರೇ ವಿರುದ್ಧ ಐಪಿಸಿ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಮತ್ತು 409 (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರೇ ಅವರನ್ನು ದೋಷಿ ಎಂದು 2020ರ ಅಕ್ಟೋಬರ್ 6ರಂದು ನ್ಯಾಯಾಲಯ ಘೋಷಿಸಿತ್ತು. ಅದೇ ವರ್ಷ ಅಕ್ಟೋಬರ್ 27ರಂದು ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರೇ ಅವರು 2020ರ ಅಕ್ಟೋಬರ್ 27ರಂದು ಮೇಲ್ಮನವಿ ಸಲ್ಲಸಿದ್ದರು. ಅರ್ಜಿ ಆಧಾರದ ಮೇಲೆ ಸಿಬಿಐಗೆ ನೋಟಿಸ್ ನೀಡಿದ್ದ ಕೋರ್ಟ್, ಮೇಲ್ಮನವಿ ವಿಚಾರಣೆ ಬಾಕಿ ಇದ್ದ ಕಾರಣ, ಅವರಿಗೆ ವಿಧಿಸಲಾಗಿದ್ದ ಶಿಕ್ಷೆಗೆ ತಡೆ ನೀಡಿತ್ತು.
ಇದೀಗ, ಸೋಮವಾರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠವು, “ಅರ್ಜಿದಾರರ ಮೇಲ್ಮನವಿ ವಿಚಾರಣೆಯಲ್ಲಿರುವ ಕಾರಣ, ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತುಗೊಳಿಸಲಾಗುತ್ತಿದೆ. ಇಲ್ಲದಿದ್ದಲ್ಲಿ, ಒಂದು ವೇಳೆ ಅವರು ದೋಷಮುಕ್ತರಾದರೆ, ಆಗ ಬದಲಿಸಲಾಗದ ಪರಿಣಾಮಕ್ಕೆ ಕಾರಣವಾಗುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ತಡೆ ಆದೇಶ ನೀಡಲಾಗುತ್ತಿದೆ” ಎಂದು ಹೇಳಿದೆ.
“ಈ ಆದೇಶವು ‘ಪ್ರಕರಣದ ಮುಕ್ತಾಯಕ್ಕೆ ಸಮಾನಾಗಿರುವುದಿಲ್ಲ’. ರೇ ಅವರ ರಾಜಕೀಯ ವೃತ್ತಿಜೀವನ ಮತ್ತು ವಯಸ್ಸು ಸೇರಿದಂತೆ ಪ್ರಕರಣದ ವಿಚಿತ್ರ ಸಂದರ್ಭಗಳನ್ನು ಗಮನಿಸಿ ಶಿಕ್ಷೆಗೆ ತಡೆ ಮಾತ್ರ ನೀಡಲಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಅರ್ಜಿದಾರರಿಗೆ (ರೇ) 71 ವರ್ಷ ವಯಸ್ಸಾಗಿದೆ. ಅವರು 2024ರ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಅವರ ಕ್ಷೇತ್ರ ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಬಯಸಿದ್ದಾರೆ. ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಶಿಕ್ಷೆಗೆ ತಡೆ ತರುವ ಉದ್ದೇಶದಿಂದ ಅವರು ಹಾಗೆ ಮಾಡಿದ್ದಾರೆಂಬಂತೆ ಕಂಡುಬಂದಿಲ್ಲ. ಅವರು 35 ವರ್ಷಗಳಿಗೂ ಹೆಚ್ಚು ಕಾಲದ ರಾಜಕೀಯ ವೃತ್ತಿಜೀವನ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಅನೇಕ ಮೇಲ್ಮನವಿಗಳು ಮತ್ತು ಅಡ್ಡ-ಅಪೀಲುಗಳನ್ನು ಸಲ್ಲಿಸಲಾಗಿದೆ. ಇದೆಲ್ಲವೂ, ವಿಚಾರಣೆಗೆ ಸಮಯ ತೆಗೆದುಕೊಳ್ಳುತ್ತದೆ” ಎಂದು ಪೀಠವು ಹೇಳಿದೆ.
“ರೇ ಅವರ ಮೇಲ್ಮನವಿಯನ್ನು ಅನುಮತಿಸದಿದ್ದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಬದಲಾಯಿಸಲಾಗದ ಪರಿಣಾಮ ಮತ್ತು ಅವರ ರಾಜಕೀಯ ವೃತ್ತಿಜೀವನಕ್ಕೆ ಹಾನಿ ಉಂಟಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಈ ಆದೇಶವು ಉತ್ತರ ಪ್ರದೇಶದ ಅಫ್ಜಲ್ ಅನ್ಸಾರಿ ವಿರುದ್ಧದ ಪ್ರಕರಣದಲ್ಲಿ ತನ್ನ ‘ಬಹುಮತದ ಅಭಿಪ್ರಾಯ’ದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡವನ್ನು ಅನುಸರಿಸಿದೆ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ.
ಅಫ್ಜಲ್ ಅನ್ಸಾರಿ ಪ್ರಕರಣದಲ್ಲಿ ಅವರು ಸಂಸತ್ತಿನ ಸದಸ್ಯತ್ವವನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತು ಮಾಡಲು ಮನವಿ ಮಾಡಿದ್ದರು. ಅವರ ಮನವಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್, ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯ ಪರಿಗಣಿಸಿತ್ತು ಮತ್ತು ಶಿಕ್ಷೆಗೆ ತಡೆ ನೀಡಿತ್ತು.