ಅವಿಭಜಿತ ಮೈಸೂರಿನ ಶಕ್ತಿ ರಾಜಕಾರಣದಲ್ಲಿ ಚಾಮರಾಜನಗರಕ್ಕೆ ವಿಶಿಷ್ಟ ಸ್ಥಾನಮಾನಗಳಿವೆ. ಹಿಂದುಳಿದ ಜಿಲ್ಲೆ ಎಂಬ ಟ್ಯಾಗ್ ಅನ್ನು ಕಳೆದುಕೊಳ್ಳಲು ಯತ್ನಿಸುತ್ತಿರುವ ಚಾಮರಾಜನಗರ, ಹಲವು ರಾಜಕೀಯ ಧುರೀಣರನ್ನು ರಾಜ್ಯಕ್ಕೆ ನೀಡಿದ ನೆಲ.
ಬಿ.ರಾಚಯ್ಯ, ಎಚ್.ನಾಗಪ್ಪ, ಎನ್.ರಾಚಯ್ಯ, ರಾಜಶೇಖರಮೂರ್ತಿ, ಎಚ್.ಎಸ್.ಮಹದೇವ ಪ್ರಸಾದ್, ವಿ.ಶ್ರೀನಿವಾಸ ಪ್ರಸಾದ್, ಆರ್.ಧ್ರುವನಾರಾಯಣ ಮೊದಲಾದ ರಾಜಕಾರಣಿಗಳು ಛಾಪು ಮೂಡಿಸಿದ ಜಿಲ್ಲೆ ಚಾಮರಾಜನಗರ.
ಪ್ರಾಕೃತಿಕ ಸಂಪತ್ತು, ಧಾರ್ಮಿಕ ಕೇಂದ್ರಗಳು, ವಿಶಿಷ್ಟ ಭಾಷಾ ಸೊಗಡು, ಜಾನಪದ ಜಗತ್ತು- ಮೊದಲಾದ ಕಾರಣಗಳಿಗೆ ಗಮನ ಸೆಳೆಯುವ ಚಾಮರಾಜನಗರ ರಚನೆಯಾದದ್ದು 1997ರಲ್ಲಿ. ಅಲ್ಲಿಯವರೆಗೂ ಮೈಸೂರು ಜಿಲ್ಲೆಯೊಳಗೆ ಸೇರಿತ್ತು. ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ಇತ್ತು.
2019ರ ಲೋಕಸಭಾ ಚುನಾವಣೆಯವರೆಗೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಚಾಮರಾಜನಗರ ಕ್ಷೇತ್ರವು ಹಳೆಹುಲಿ ವಿ.ಶ್ರೀನಿವಾಸಪ್ರಸಾದ್ ಅವರ ಮುನಿಸಿನಿಂದಾಗಿ ‘ಕೈ’ ತಪ್ಪಿದ್ದು ಸುಳ್ಳಲ್ಲ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಚಾಮರಾಜನಗರ, ಅನೇಕ ಸಂದರ್ಭಗಳಲ್ಲಿ ಹೈವೋಲ್ಟೇಜ್ ರಣಕಣಕ್ಕೆ ಸಾಕ್ಷಿಯಾಗಿದ್ದೂ ಉಂಟು.
ದಿವಂಗತ ಆರ್.ಧ್ರುವನಾರಾಯಣ ಅವರ ನೆನಪುಗಳು ಈ ನೆಲದಲ್ಲಿ ಇನ್ನೂ ಮಾಸಿಲ್ಲ. “ನನ್ನ ಉತ್ತರಾಧಿಕಾರಿ ಧ್ರುವ” ಎಂದು ಪ್ರಸಾದ್ ಅವರೇ ಒಮ್ಮೆ ಹೇಳಿದ್ದುಂಟು. ಆದರೆ ರಾಜಕಾರಣದ ಏರಿಳಿತದಲ್ಲಿ ಧ್ರುವ ವಿರುದ್ಧ ಪ್ರಸಾದ್ ಸ್ಪರ್ಧಿಸುವ ದಿನಗಳೂ ಬಂದಿದ್ದವು.
2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು ಧ್ರುವ. 2004ರ ವಿಧಾನಸಭಾ ಚುನಾವಣೆಯಲ್ಲಿ ಎ.ಆರ್. ಕೃಷ್ಣಮೂರ್ತಿಯವರ ಎದುರು ಕೇವಲ 1 ಮತದಿಂದ ಧ್ರುವ ಅವರು ಗೆದ್ದದ್ದು ಇತಿಹಾಸದಲ್ಲಿ ದಾಖಲಾಯಿತು. ಮುಂದೆ ರಾಷ್ಟ್ರ ರಾಜಕಾರಣಕ್ಕೆ ಬಂದು 2009, 2014ರಲ್ಲಿ ಚಾಮರಾಜನಗರ ಲೋಕಸಭೆಯಿಂದ ಸಂಸದರಾಗಿದ್ದ ಅವರು ಮೂರನೇ ಪ್ರಯತ್ನದಲ್ಲಿ ಪ್ರಸಾದ್ ವಿರುದ್ಧ ಸೆಣಸಾಡಿ ಕೇವಲ 1,817 ಮತಗಳ ಅಂತರದಲ್ಲಿ ಸೋಲುಂಡಿದ್ದರು. ಆದರೆ ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ತಂದ ಶ್ರೇಯಸ್ಸು ಧ್ರುವನಾರಾಯಣ ಅವರಿಗೆ ಸಲ್ಲುತ್ತದೆ.
ಐದು ಬಾರಿ ಎಂಪಿಯಾಗಿ, ಕೇಂದ್ರ ಸಚಿವರಾಗಿ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದ ಪ್ರಸಾದ್ ಅವರು 2013ರ ಅಸೆಂಬ್ಲಿ ಚುನಾವಣೆಯಲ್ಲಿ ನಂಜನಗೂಡಿನಿಂದ ಸ್ಪರ್ಧಿಸಿ ಗೆದ್ದರು. ಸಿದ್ದರಾಮಯ್ಯನವರ ಕ್ಯಾಬಿನೆಟ್‌ನಲ್ಲಿ ಕಂದಾಯ ಸಚಿವರೂ ಆಗಿದ್ದರು. ಆದರೆ ಅವರನ್ನು ಸಚಿವ ಸ್ಥಾನದಿಂದ ಇಳಿಸಿದ ಬಳಿಕ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಉಪಚುನಾವಣೆಯನ್ನು ಎದುರಿಸಿದರು. 2017ರಲ್ಲಿ ನಡೆದ ಮಿನಿ ಫೈಟ್‌ನಲ್ಲಿ ಡಾ.ಎಚ್.ಸಿ.ಮಹದೇವಪ್ಪ ಮತ್ತು ಸಿದ್ದರಾಮಯ್ಯನವರ ಜಂಟಿ ಕಾರ್ಯಾಚರಣೆಯಿಂದಾಗಿ ಪ್ರಸಾದ್ ಸೋತರು. 21,334 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಧ್ರುವನಾರಾಯಣ ಅವರ ಸಹೋದರ ಕಳಲೆ ಕೇಶವ ಮೂರ್ತಿ ಗೆದ್ದರು. ಈ ಸೋಲಿನಿಂದ ನೊಂದುಕೊಂಡು, ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು ಭಾವಿಸಿದ ಪ್ರಸಾದ್ ಅವರು, ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರನ್ನು ಮಣಿಸಲು ರಣತಂತ್ರಗಳನ್ನು ರೂಪಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಳಿಯ ಬಿ.ಹರ್ಷವರ್ಧನ್ ಅವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡರು. ಧ್ರುವ ನಾರಾಯಣ ಒಬ್ಬರಿಗೆ ಮುಖಭಂಗ ಮಾಡಲು ಪ್ರಸಾದ್ ಕಾದಿದ್ದರು. ಹೀಗಾಗಿ 2019ರ ಲೋಕಸಭೆ ಚುನಾವಣೆ ಸಂದರ್ಭ ಕೊನೆ ಕ್ಷಣದಲ್ಲಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪ್ರಸಾದ್ ಅವರು ಧ್ರುವ ವಿರುದ್ಧ ಕಣಕ್ಕಿಳಿದರು. ಈ ಭಾಗದಲ್ಲಿ ಮೊದಲಿನಿಂದಲೂ ಕ್ರಿಯಾಶೀಲವಾಗಿದ್ದ ಬಿಎಸ್‌ಪಿಯಿಂದ ಡಾ.ಶಿವಕುಮಾರ್ ಸ್ಪರ್ಧಿಸಿ 87,631 ಮತಗಳನ್ನು ಪಡೆದದ್ದು ಧ್ರುವ ಅವರಿಗೆ ಮುಳುವಾಯಿತೆಂದೇ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
2018ರ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಆತಂಕ ಮಹದೇವಪ್ಪನವರಿಗೆ ಇತ್ತು. ಜೊತೆಗೆ ತಮ್ಮ ಪುತ್ರನನ್ನು ಚುನಾವಣಾ ಕಣಕ್ಕೆ ತರುವ ಇರಾದೆ ಫಲಿಸಿರಲಿಲ್ಲ. 2023ರ ಅಸೆಂಬ್ಲಿ ಫೈಟ್‌ನಲ್ಲಿ ನಂಜನಗೂಡು ಮೀಸಲು ಕ್ಷೇತ್ರದ ಟಿಕೆಟ್ ಪಡೆಯುವ ಪೈಪೋಟಿಯ ದಿನಗಳು ಮಹದೇವಪ್ಪ ಮತ್ತು ಧ್ರುವನಾರಾಯಣ ನಡುವೆ ನಡೆಯುತ್ತಿದ್ದ ಹೊತ್ತಿನಲ್ಲೇ ಧ್ರುವ ದಿಢೀರ್ ನಿರ್ಗಮಿಸಿದರು. ನಿಂದನೆ, ಕುಹಕಗಳಿಂದ ನೊಂದ ಮಹದೇವಪ್ಪ ಅವರು ತಮ್ಮ ಹಳೆಯ ಕ್ಷೇತ್ರ ಟಿ.ನರಸೀಪುರದಲ್ಲೇ ಸ್ಪರ್ಧಿಸಲು ನಿಶ್ಚಯಿಸಿದರು. ನಿರೀಕ್ಷೆಯಂತೆ ಧ್ರುವ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿತು. ಮಹದೇವಪ್ಪ ಅವರೂ ಗೆದ್ದರು. ಸಮಾಜ ಕಲ್ಯಾಣ ಇಲಾಖೆಯ ಸಚಿವರೂ ಆಗಿದ್ದಾರೆ.
ತಮ್ಮ ಪುತ್ರ ಸುನೀಲ್ ಬೋಸ್ ಅವರನ್ನು ಜನಪ್ರತಿನಿಧಿಯಾಗಿ ಕಾಣುವ ಆಸೆ ಈ ಬಾರಿ ಮಹದೇವಪ್ಪನವರಿಗೆ ಫಲಿಸುವಂತೆ ಕಾಣುತ್ತಿದೆ. ಕಳೆದ ಚುನಾವಣೆಗಳಲ್ಲಿ ಟಿ.ನರಸೀಪುರ ಭಾಗದಲ್ಲಿ ಸುನೀಲ್ ಅವರಿಗೆ ಸ್ಪಂದನೆ ಇರಲಿಲ್ಲ. ಕೆಲವು ವ್ಯಕ್ತಿಗತ ಏಳುಬೀಳುಗಳು ಬೋಸ್‌ಗೆ ಮುಳುವಾಗಿರುವುದರಿಂದಲೇ ಮಗನ ಬದಲು ಅಪ್ಪನೇ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದದ್ದು ಅನಿವಾರ್ಯವಾಗಿತ್ತು. ಆದರೆ ಧ್ರುವ ಅವರ ನಿಧನದ ಬಳಿಕ ಚಾಮರಾಜನಗರದಲ್ಲಿ ಸ್ಪೇಸ್ ಸಿಕ್ಕಿತು. ತಮ್ಮ ಮಗನಿಗೆ ಟಿಕೆಟ್ ದೊರಕಿಸಿಕೊಡುವಲ್ಲಿ ಮಹದೇವಪ್ಪ ಯಶಸ್ವಿಯಾಗಿದ್ದಾರೆ.
ಆಗಿರುವ ಗಾಯಗಳನ್ನೇ ಇಟ್ಟುಕೊಂಡು ಹೋದರೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವೆಂದು ಅರಿತಿರುವ ಮಹದೇವಪ್ಪ ಅವರು ತಮ್ಮ ಮಗನನ್ನು ಮತ್ತು ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರನ್ನು ಕರೆದುಕೊಂಡು ಹೋಗಿ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಜೊತೆಗೆ ಸಿದ್ದರಾಮಯ್ಯನವರು ಕೂಡ ಪ್ರಸಾದ್ ಅವರಿಗೆ ಕರೆ ಮಾಡಿ ಮಾತನಾಡಿಸಿದ್ದಾರೆ. ವಯೋಸಹಜ ಅನಾರೋಗ್ಯದ ಕಾರಣ ಸಕ್ರಿಯ ರಾಜಕಾರಣದಿಂದ ಸಂಪೂರ್ಣ ನಿವೃತ್ತಿ ಘೋಷಿಸಿಕೊಂಡಿರುವ ಪ್ರಸಾದ್, ತಟಸ್ಥವಾಗಿದ್ದಷ್ಟೂ ಕಾಂಗ್ರೆಸ್‌ಗೆ ಅನುಕೂಲ.
“ಇದು ಸಾಮಾನ್ಯ ಭೇಟಿಯಾದರೂ ಶಕ್ತಿ ರಾಜಕಾರಣದಲ್ಲಿ ಕಾರ್ಯಕರ್ತರಿಗೆ ನೀಡುವ ಸಂದೇಶವೇ ಬೇರೆ” ಎಂಬುದು ರಾಜಕಾರಣ ಬಲ್ಲವರ ಮಾತು. ಹೀಗಾಗಿಯೇ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಕೊಂಚ ಆತಂಕಿತರಾಗಿ ಮಾತನಾಡಿದ್ದು, “ಪ್ರಸಾದ್ ಅವರ ಮೇಲೆ ಕಾಂಗ್ರೆಸ್ ಒತ್ತಡ ಹೇರಲು ಯತ್ನಿಸುತ್ತಿದೆ. ಅವರು ಬಿಜೆಪಿಯಲ್ಲಿ ಇರುವವರೆಗೂ ಪಕ್ಷಕ್ಕೆ ಮತ ಹಾಕುವುದಾಗಿ ಹೇಳಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಸಾದ್ ಅವರ ಅಳಿಯ ಡಾ.ಮೋಹನ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ವೃತ್ತಿಗೆ ರಾಜೀನಾಮೆ ನೀಡಿ, ರಾಜಕಾರಣಕ್ಕೆ ಬಂದಿದ್ದರು. ದರ್ಶನ್ ಧ್ರುವ ವಿರುದ್ಧ ನಂಜನಗೂಡಿನಲ್ಲಿ ಸ್ಪರ್ಧಿಸಿ ಸೋತಿದ್ದ ಬಿ.ಹರ್ಷವರ್ಧನ್ (ಪ್ರಸಾದ್ ಅವರ ಮತ್ತೊಬ್ಬ ಅಳಿಯ) ಅವರ ಹೆಸರೂ ಟಿಕೆಟ್ ರೇಸ್‌ನಲ್ಲಿ ಇತ್ತು.
ಆದರೆ ಅಚ್ಚರಿ ಎಂಬಂತೆ ಬಾಲರಾಜ್ ಅವರಿಗೆ ಬಿಜೆಪಿ ಹೈಕಮಾಂಡ್ ಅಸ್ತು ಎಂದಿದೆ. ಮೋಹನ್ ಅವರು ಕಾಂಗ್ರೆಸ್‌ಗೆ ಹಾರುತ್ತಾರೆಂಬ ಸುದ್ದಿ ಹಬ್ಬಿದ್ದಾದರೂ ಸದ್ಯಕ್ಕೆ ಅಂತಹ ಬೇಗುದಿ ತಣ್ಣಗಾಗಿದೆ.
ತಾಲೂಕು ಮಟ್ಟದಲ್ಲಿ ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದವರು ಬಾಲರಾಜ್. ನಂತರ ಅವರು ಅವಿಭಜಿತ ಮೈಸೂರಿನ ಜಿಲ್ಲಾ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿದ್ದರು. 1997ರಲ್ಲಿ ಚಾಮರಾಜನಗರ ಜಿಲ್ಲೆಯು ರಚನೆಯಾದ ಬಳಿಕ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಈ ಮಧ್ಯೆ ಬಿಜೆಪಿಗೆ ಹೋಗಿ 1999ರಲ್ಲಿ ಕೊಳ್ಳೇಗಾಲ ವಿಧಾನಸಭೆಯ ಟಿಕೆಟ್ ಪಡೆದು ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದರು. 2008ರಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡರು. 2013ರಲ್ಲಿ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ, ಪಕ್ಷ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಬಳಿಕ ಕಾಂಗ್ರೆಸ್‌ಗೆ ಬಂದಿದ್ದರೂ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ಸಫಲರಾಗಿರಲಿಲ್ಲ. 2023ರ ವಿಧಾನಸಭೆಯಲ್ಲೂ ಟಿಕೆಟ್ ವಂಚಿತರಾಗಿ ಬಿಜೆಪಿ ಕದ ತಟ್ಟಿದರು. ಅವರ ಈ ಅವಿರತ ಪ್ರಯತ್ನಕ್ಕೆ ಮನಸೋತಿರುವ ಬಿಜೆಪಿ, ಲೋಕಸಭೆಯಲ್ಲಿ ಟಿಕೆಟ್ ನೀಡಿ ಕಣಕ್ಕಿಳಿಸಿದೆ.
ಬಹುಕಾಲ ಧ್ರುವನಾರಾಯಣ ಅವರ ಒಡನಾಡಿದ್ದ ಬಾಲರಾಜು, ಕಾಂಗ್ರೆಸ್ ವಲಯದಲ್ಲಿ ’ಬಾಲಣ್ಣ’ ಎಂದೇ ಗುರುತಿಸಿಕೊಂಡಿದ್ದರು. ರಾಜಕೀಯ ಶತ್ರುಗಳು ಇರದೆ ಇದ್ದರೂ ಕಾಂಗ್ರೆಸ್ ಭದ್ರಕೋಟೆಯಲ್ಲಿ ಸಫಲರಾಗುತ್ತಾರಾ ಎಂಬುದೇ ಸದ್ಯದ ಪ್ರಶ್ನೆ.
ಬಿಎಸ್‌ಪಿಯಿಂದ ಬಿಜೆಪಿಗೆ ಜಂಪ್ ಆಗಿ, ವಿಶ್ವಾಸ ಕಳೆದುಕೊಂಡಿರುವ ಎನ್.ಮಹೇಶ್ ಅವರು ಕಳೆದ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಹೀನಾಯವಾಗಿ ಸೋತಿದ್ದರು. ಬಾಲರಾಜ್ ಅವರ ಜೊತೆ ತಿರುಗಾಡುತ್ತಾ ಈಗ ಎನ್.ಮಹೇಶ್ ಕ್ಯಾನ್ವಾಸ್ ಮಾಡುತ್ತಿದ್ದಾರೆ. ಈ ಬಾರಿಯೂ ಬಿಎಸ್‌ಪಿ ಇಲ್ಲಿ ಕಣಕ್ಕಿಳಿದಿದೆ. ಬಿಎಸ್‌ಪಿಯ ಎಂ.ಕೃಷ್ಣಮೂರ್ತಿ ಅವರು ಎಷ್ಟು ಮತ ಪಡೆಯಬಹುದು ಎಂಬುದು ಸದ್ಯದ ಕುತೂಹಲ.
ವರುಣ, ಟಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ, ಕೊಳ್ಳೇಗಾಲ, ಹನೂರು, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಬ್ಬಿರುವ ಚಾಮರಾಜನಗರ ಲೋಕಸಭೆಯಲ್ಲಿ ಅಂತಹ ಬಿರುಸಿನ ಪ್ರಚಾರವೇನೂ ಬಿಜೆಪಿಯಿಂದ ಕಂಡು ಬರುತ್ತಿಲ್ಲ. ನಾಮಪತ್ರ ಸಲ್ಲಿಕೆಗೆ ಸುನೀಲ್ ಬೋಸ್ ಸೇರಿಸಿದಷ್ಟು ಜನರನ್ನು ಬಾಲರಾಜ್ ಸೇರಿಸಲು ಸಾಧ್ಯವಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು. ಬಿಜೆಪಿ ಸ್ಟಾರ್ ಕ್ಯಾಂಪೈನರ್‌ಗಳು ಏನಾದರೂ ಕಮಾಲ್ ಮಾಡುತ್ತಾರೋ ಗೊತ್ತಿಲ್ಲ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಲಿಂಗಾಯತ, ಕುರುಬ, ಉಪ್ಪಾರ, ಮುಸ್ಲಿಂ, ಸ್ವಲ್ಪ ಮಟ್ಟಿಗೆ ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರವು ಸಿದ್ದರಾಮಯ್ಯ ಮತ್ತು ಎಚ್.ಸಿ.ಮಹದೇವಪ್ಪನವರಿಗೆ ಪ್ರತಿಷ್ಠೆಯ ಕಣ. ತಮ್ಮ ಮಗನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳದಿದ್ದರೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಮನವೊಲಿಸುವುದು ಮಹದೇವಪ್ಪನವರಿಗೂ ಕಷ್ಟ. ಬಾಲರಾಜ್ ಅವರಿಗೆ ಒಳ್ಳೆಯ ಹೆಸರಿದ್ದರೂ ಅಂತಹ ಬಿರುಸಿನ ಓಡಾಟವೂ ಕಾಣುತ್ತಿಲ್ಲ. ಪ್ರಸಾದ್ ಬಣದಲ್ಲಿದ್ದ ಅನೇಕ ಮುಖಂಡರು ಈಗಾಗಲೇ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಳ್ಳಲಾರಂಭಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವ ಸುತ್ತೂರು ಮಠದೊಂದಿಗೆ ಸಿದ್ದರಾಮಯ್ಯನವರ ಒಡನಾಟ ಚೆನ್ನಾಗಿದೆ. ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭೆಗಳ ಪೈಕಿ ಹನೂರಿನಲ್ಲಿ ಮೈತ್ರಿ ಪಕ್ಷಗಳ ಶಾಸಕ (ಜೆಡಿಎಸ್) ಇದ್ದಾರೆ. ಇನ್ನುಳಿದ ಏಳರಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ತಮ್ಮತಮ್ಮ ವ್ಯಾಪ್ತಿಯಲ್ಲಿ ಎಷ್ಟು ಲೀಡ್ ತಂದು ಕೊಡುತ್ತಾರೋ ಅಷ್ಟರ ಮಟ್ಟಿಗೆ ಫಲಿತಾಂಶ ಕುದುರುತ್ತದೆ. ಆದರೆ ನಾಯಕ ಸಮುದಾಯದ ಪ್ರಾಬಲ್ಯವಿರುವ ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಅನಿಲ್ ಚಿಕ್ಕಮಾದು ಸಕ್ರಿಯವಾಗಿಲ್ಲ ಎಂದು ಕ್ಷೇತ್ರದ ನಾಡಿಮಿಡಿತ ಬಲ್ಲವರು ಅನುಮಾನಿಸುತ್ತಾರೆ. ಮುಂದಿನ ದಿನಗಳಲ್ಲಿ ಅವರನ್ನೂ ಸುನೀಲ್ ಬೋಸ್ ವಿಶ್ವಾಸಕ್ಕೆ ತೆಗೆದುಕೊಂಡರೆ ಕೈ ಬಲವಾಗುತ್ತದೆ. ಆದರೆ ಮೈತ್ರಿ ಪಕ್ಷಗಳ ಉತ್ಸಾಹಕ್ಕಿಂತ ಕಾಂಗ್ರೆಸ್ ಚಟುವಟಿಕೆ ತುಸು ಜೋರಾಗಿದೆ ಎಂಬುದು ಜನರ ಮಾತು.
ಮೊದಲ ಸಲ ಅದೃಷ್ಟ ಪರೀಕ್ಷೆಗಿಳಿದಿರುವ ಸುನೀಲ್ ಬೋಸ್ ಅವರು ಆಲಸಿತನ ಬದಿಗಿಟ್ಟು ಹಣಾಹಣಿ ನಡೆಸುವುದು ಖಾತ್ರಿ. ಹೀಗಾಗಿ ಚಾಮರಾಜನಗರ ಮತ್ತೆ ಕೈವಶವಾಗುವ ಸಾಧ್ಯತೆಯೇ ಹೆಚ್ಚಿದೆ. ಹಿರಿಯ ರಾಜಕಾರಣಿಗಳ ಸ್ವಪ್ರತಿಷ್ಠೆಯಿಂದಾಗಿ ಜಿದ್ದಾಜಿದ್ದಿನ ಕಣವಾಗಿದ್ದ ಚಾಮರಾಜನಗರ ಈಗ ಬಾರಿ ಕಾವೇರಿದಂತೆ ಕಾಣುತ್ತಿಲ್ಲ. ಎಸ್.ಬಾಲರಾಜ್ ಅವರ ತಂತ್ರಗಾರಿಕೆಗಳು ಬದಲಾದಲ್ಲಿ ಪೈಪೋಟಿ ಏರ್ಪಡಬಹುದು.
ಯತಿರಾಜ್ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ