ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭಿವೃದ್ಧಿ ಕೆಲಸಗಳನ್ನು ಗಮನಕ್ಕೆ ತೆಗೆದುಕೊಂಡು ಮತ ನೀಡಬೇಕು ಎಂದು ಬೃಹತ್ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ವಿಜಯಪುರ ನಗರದ ಮಠಪತಿ ಗಲ್ಲಿಯಲ್ಲಿ ಭಾನುವಾರ ಸಂಜೆ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿಯ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
“ಸ್ವಾತಂತ್ರ್ಯ ಹೋರಾಟದ ನಂತರ ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಹಸಿರು ಕ್ರಾಂತಿ, ಉದ್ಯೋಗ, ಉದ್ಯಮ ಸ್ಥಾಪಿಸಿದ್ದು, ದೊಡ್ಡ ದೊಡ್ಡ ಸಂಸ್ಥೆಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಮೋದಿಯವರು ಬಂದ ಮೇಲೆ ಎಲ್ಲ ಆಗಿದೆ ಎನ್ನುವವರು ಒಂದು ಡ್ಯಾಂ ಕಟ್ಟಲಿಲ್ಲ. ಎರಡು ಸಾವಿರ ಅಣೆಕಟ್ಟುಗಳ ಪೈಕಿ ಸಾವಿರದ ಒಂಬೈನೂರು ಡ್ಯಾಂ ಕಟ್ಟಿದ್ದು ಕಾಂಗ್ರೆಸ್ ಆಡಳಿತದಲ್ಲಿ” ಎಂದು ಹೇಳಿದರು.
“ಏಳು ವರ್ಷದಲ್ಲಿ ದೇಶ ಬದಲಿಸುತ್ತೇವೆ ಎಂದವರು ಎಲ್ಲದರ ಬೆಲೆ ಏರಿಸಿದರು. ಜಿಎಸ್‌ಟಿ, ನೋಟ್ ಬ್ಯಾನ್‌ನಂತಹ ಕ್ರಮಗಳಿಂದ ಅರ್ಥಿಕ ಸಂಕಷ್ಟ ತಂದರು. ಆದರೂ ಭ್ರಮೆಗಳನ್ನು ಸೃಷ್ಟಿಸಿ, ಭಾವನೆಗಳನ್ನು ಕೆರಳಿಸಿ ಬಿಜೆಪಿಯವರು ಮತ ಕೇಳುತ್ತಾರೆ. ಕಾಂಗ್ರೆಸ್ ನಿಮ್ಮ ಭವಿಷ್ಯ ರೂಪಿಸುವ ಪಕ್ಷ. ನಿಮ್ಮ ಜೀವನ ಸುಧಾರಿಸುವ ಪಕ್ಷ. ಹಾಗಾಗಿ ಈಗ ಲೋಕಸಭೆಯ ನಮ್ಮ ಅಭ್ಯರ್ಥಿಗೆ ಮತ ನೀಡಿದರೆ ಮತ್ತಷ್ಟು ಅಭಿವೃದ್ಧಿ ಸಾಧ್ಯ” ಎಂದರು.
ವಿಧಾನಪರಿಷತ್ ಶಾಸಕ ಸುನಿಲ್ ಗೌಡ ಪಾಟೀಲ ಮಾತನಾಡಿ, “ಮೂರು ಬಾರಿ ಆಯ್ಕೆಯಾದ ಈ ಹಿಂದಿನ ಸಂಸದರು ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ. ಅವರು ನಮ್ಮ ದನಿಯಾಗಿ ಇರಲಿಲ್ಲ. ಒಂದು ದಿನವೂ ಚಕಾರ ಎತ್ತಲಿಲ್ಲ. ಆಲಗೂರರು ಭಾಷಾ ಪ್ರವೀಣ ಹಾಗೂ ವಿದ್ಯಾವಂತರಾಗಿದ್ದಾರೆ. ಲೋಕಸಭೆಯಲ್ಲಿ ಜಿಲ್ಲೆಯ ಪರ ಹೋರಾಟ ಮಾಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಬಡವರ ಬದುಕು ಹಸನುಗೊಳಿಸಿದ್ದು, ಕಾಂಗ್ರೆಸ್ ಪಕ್ಷ. ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ, ಗೃಹಭಾಗ್ಯದ ಮೂಲಕ ಈ ಕಷ್ಟದ ದಿನಗಳಲ್ಲಿ ಸಹಾಯ ಮಾಡಲಾಗಿದೆ. ಇದೆಲ್ಲ ಗಣನೆಗೆ ತೆಗೆದುಕೊಂಡು ಈ ಲೋಕಸಭೆ ಚುನಾವಣೆಯಲ್ಲಿ ಮತ ನೀಡಿ” ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, “ಸಚಿವ ಎಂ ಬಿ ಪಾಟೀಲರು ಮಾಡಿದ ನೀರಾವರಿ ಕಾರ್ಯ, ರಾಜ್ಯ ಸರ್ಕಾರದ ಜನೋಪಕಾರಿ ಯೋಜನೆಗಳಿಂದ ನಮಗೆ ಮತ ಕೇಳುವ ನೈತಿಕತೆ ಇದೆ. ಬಿಜೆಪಿಯವರು ಮಾಡಿದ್ದಕ್ಕಿಂತ ಹೇಳಿದ್ದು ಹೆಚ್ಚು. ಜಿಗಜಿಣಗಿಯವರು ಯಾವ ಅಭಿವೃದ್ಧಿ ಮಾಡಲಿಲ್ಲ. ತಮಗೆ ಅವಕಾಶ ನೀಡಿದರೆ ಜಿಲ್ಲೆಯ ಏಳ್ಗೆಗೆ, ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮನುಷ್ಯರನ್ನು ಮನುಷ್ಯರಾಗಿ ನೋಡುವವರು ಮಾತ್ರ ಸಂವಿಧಾನವನ್ನು ಅಪ್ಪಿಕೊಳ್ಳುವರು: ಎಚ್ ಕೆ ಪಾಟೀಲ್
ಮಹಾನಗರ ಪಾಲಿಕೆ ಸದಸ್ಯ ಅಶೋಕ ನ್ಯಾಮಗೊಂಡ ಪ್ರಸ್ತಾವಿಕ ಮಾತನಾಡಿದರು. ಮುಖಂರುಗಳಾದ ಸಿದ್ದಪ್ಪ ಸಜ್ಜನ, ಅಡಿವೆಪ್ಪ ಸಾಲಗಲ್, ರವೀಂದ್ರ ಬಿಜ್ಜರಗಿ, ಪ್ರಾಧಿಕಾರದ ಸದಸ್ಯ ಸಂತೋಷ ಪವಾರ, ಜಬ್ವಾರ ಮೇಸ್ತ್ರಿ, ಟಪಾಲ ಎಂಜಿನಿಯರ್, ಶಿವಾನಂದ ಜಂಗಮಶೆಟ್ಟಿ, ಗಂಗಾಧರ ಸಂಬಣ್ಣಿ, ರಾಘು ಕಲಾಲ, ಬಂಡುಕಾಳೆ, ನೂರುಲ್ ಹಸನ್, ಶಿವಾನಂದ ಮದಭಾವಿ, ಇಕ್ಲಾಸ್ ಸುನ್ನೇವಾಲೆ, ಬಂಡುಕಾಳೆ, ಆಸೀಮ್ ಜಾನ್ವೇಕರ್, ಮಹಾದೇವ ಪವಾರ, ಆಸಿಮ್ ಜಾವಡೇಕರ, ನಾರಾಯಣ ಶಾಸ್ತ್ರಿ, ಚಿದಾನಂದ ಆಲಗೊಂಡ ಇದ್ದರು.
