ಮಂಗಳವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ನಡುವೆ ರೋಚಕ ಐಪಿಎಲ್ ಪಂದ್ಯಾವಳಿ ನಡೆದಿದೆ. ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಶತಕ ಗಳಿಸಿ, ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪೈಕಿ ಎರಡನೇ ಸ್ಥಾನ ಪಡೆದಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ಏಳನೇ ಐಪಿಎಲ್ ಶತಕವನ್ನು ಹೊಡೆದ ಜೋಸ್ ಬಟ್ಲರ್ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಗೆಲ್ಲಲು ಸಹಾಯ ಮಾಡಿದರು. ರಾಜಸ್ಥಾನ ರಾಯಲ್ಸ್ ಎರಡು ವಿಕೆಟ್‌ಗಳಿಂದ ಕೆಕೆಆರ್‌ನನ್ನು ಸೋಲಿಸಿದೆ. ಅಲ್ಲದೇ, ಜೋಸ್ ಬಟ್ಲರ್ ಅವರು 60 ಎಸೆತಗಳಲ್ಲಿ ಅದ್ಬುತ 107ರನ್ ಗಳಿಸುವ ಮೂಲಕ ಹಲವರ ದಾಖಲೆಗಳನ್ನು ಮುರಿದಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಏಕಾಂಗಿ ಹೋರಾಟದ ಫಲವಾಗಿ ಗೆಲುವು ಸಾಧಿಸಿದೆ. 60 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್, 9 ಫೋರ್ ಗಳೊಂದಿಗೆ ಅಜೇಯ 107 ರನ್ ಬಾರಿಸಿ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟಿದ್ದಾರೆ.
ಈ ಭರ್ಜರಿ ಶತಕದೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಬಟ್ಲರ್ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಐಪಿಎಲ್ ಇತಿಹಾಸದ ಅದ್ಭುತ ಇನಿಂಗ್ಸ್ ಆಡಲು ಸ್ಫೂರ್ತಿಯಾಗಿದ್ದಾರೆ ಎಂಬುದನ್ನು ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಹೇಳಿದ್ದಾರೆ.
“ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರು ಪಂದ್ಯದಲ್ಲಿ ಯಾವ ರೀತಿ ಕೊನೆಯವರೆಗೂ ನಿಂತು ಆಡುತ್ತಾರೋ ಅದೇ ರೀತಿ ನಾನು ಕೂಡ ಪಂದ್ಯದ ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿ ನಿಲ್ಲಲು ಪ್ರಯತ್ನಿಸಿದ್ದೆ. ಅಲ್ಲದೆ ಕುಮಾರ ಸಂಗಕ್ಕಾರ ಅವರು ಕೂಡ ಸಾಕಷ್ಟು ಸಲಹೆ ನೀಡಿದ್ದರು, ಇದು ನನಗೆ ನೆರವಾಯಿತು” ಎಂದು ಬಟ್ಲರ್ ತಿಳಿಸಿದ್ದಾರೆ.
ಈ ಅಮೋಘ ಸಾಧನೆ ಮೂಲಕ ಬಟ್ಲರ್, ಐಪಿಎಲ್ ಪ್ರಿಮಿಯರ್ ಬ್ಯಾಟ್ಸ್‌ಮನ್ ಎಂಬ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ಇದು ಟಿ20 ಕ್ರಿಕೆಟ್ ವೇದಿಕೆಯಲ್ಲಿ ಈ ಇಂಗ್ಲೆಂಡ್ ಆಟಗಾರನ ಬ್ಯಾಟಿಂಗ್ ಸ್ಥಿರತೆ ಮತ್ತು ಪಂದ್ಯ ಗೆಲ್ಲುವ ಪ್ರದರ್ಶನವನ್ನು ಬಿಂಬಿಸಿದೆ.
ಅತ್ಯಧಿಕ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎಂಟು ಶತಕಗಳನ್ನು ಸಿಡಿಸಿದ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಗರಿಷ್ಠ ಶತಕ ಸಾಧಿಸಿದವರಲ್ಲಿ ಅಗ್ರಗಣ್ಯರು. 236 ಇನಿಂಗ್ಸ್‌ಗಳಲ್ಲಿ ಒಟ್ಟು 8 ಶತಕಗಳನ್ನು ಸಿಡಿಸಿ, ಅಗ್ರರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಜೋಸ್ ಬಟ್ಲರ್
ಕ್ರಿಸ್ ಗೇಲ್ ಅವರ ಆರು ಶತಕಗಳ ದಾಖಲೆಯನ್ನು ಪುಡಿಗಟ್ಟಿದ ಬಟ್ಲರ್, ರೋಚಕ ಜಯದೊಂದಿಗೆ ಈ ದಾಖಲೆಯನ್ನು ಸ್ಮರಣೀಯವಾಗಿಸಿದರು. ಅತ್ಯಧಿಕ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ದ್ವಿತೀಯ ಸ್ಥಾನದಲ್ಲಿದ್ದರು. 141 ಐಪಿಎಲ್ ಇನಿಂಗ್ಸ್‌ಗಳಲ್ಲಿ ಗೇಲ್ ಒಟ್ಟು 6 ಶತಕ ಸಿಡಿಸಿದ್ದರು. ಸದ್ಯ ಬಟ್ಲರ್ 101 ಇನ್ನಿಂಗ್ಸ್‌ಗಳಲ್ಲಿ 7ನೇ ಶತಕದ ಸಾಧನೆ ಮಾಡಿದ್ದಾರೆ.