ಗುಜರಾತ್‌ನ ಸರ್ಕಾರಿ ಕಚೇರಿಗಳ ಅಧಿಕೃತ ಭಾವಚಿತ್ರಗಳಲ್ಲಿ 8 ನಾಯಕರ ಭಾವಚಿತ್ರಗಳಿವೆ ಎಂದು ಆರ್‌ಟಿಐನಲ್ಲಿ ಕೇಳಿದ ಪ್ರಶ್ನೆಗೆ ರಾಜ್ಯ ಸರ್ಕಾರ ಉತ್ತರ ನೀಡಿದೆ.
ಮಹಾತ್ಮ ಗಾಂಧಿ, ಜವಾಹರ್‌ಲಾಲ್ ನೆಹರು, ಸರ್ದಾರ್ ವಲ್ಲಬಾಯಿ ಪಟೇಲ್, ಹಾಲಿ ರಾಷ್ಟ್ರಪತಿ, ಹಾಲಿ ಪ್ರಧಾನಿ, ಭಾರತ ಮಾತೆ, ಪಂಡಿತ್ ದೀನ್ ದಾಯಳ್ ಉಪಾಧ್ಯಾಯ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಭಾವಚಿತ್ರಗಳನ್ನು ಮಾತ್ರ ಅಧಿಕೃತವಾಗಿ ಇಡಲು ಅನುಮತಿಸಲಾಗಿದೆ ಎಂದು ಗುಜರಾತ್‌ನ ಸರ್ಕಾರ ಉತ್ತರ ಕೊಟ್ಟಿದೆ.
ಕೆಲವು ಜಿಲ್ಲಾ ಕಚೇರಿಗಳಲ್ಲಿ ಸ್ಥಳೀಯ ಹುತಾತ್ಮರ ಭಾವಚಿತ್ರಗಳನ್ನು ಅನುಮತಿಸಲಾಗಿದೆ ಎಂದು ಸರ್ಕಾರ ತನ್ನ ಉತ್ತರದಲ್ಲಿ ತಿಳಿಸಿದೆ.
ಗುಜರಾತ್‌ನ ಭಾವ್‌ನಗರದ ದಲಿತ ಹಕ್ಕುಗಳ ಕಾರ್ಯಕರ್ತ ದಾಹ್ಯಾಬಾಯಿ ಚೌಹಾಣ್ ಅವರು ಗುಜರಾತ್‌ನ ಸರ್ಕಾರಿ ಕಚೇರಿಗಳಲ್ಲಿ ಅಲಂಕರಿಸಿರುವ ಅಧಿಕೃತ ಭಾವಚಿತ್ರಗಳ ಬಗ್ಗೆ ಸಾಮಾನ್ಯ ಆಡಳಿತ ಇಲಾಖೆ(ಜಿಎಡಿ)ಗೆ ಅರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ
ಚೌಹಾಣ್ ಅವರು ಕೆಲವು ಸರ್ಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಇಟ್ಟಿರುವ ಭಾವಚಿತ್ರಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿರುವ ಅನಧಿಕೃತ ದೇವರ ಭಾವಚಿತ್ರಗಳ ವಿವರಗಳನ್ನು ಕೂಡ ಕೇಳಿದ್ದಾರೆ.
ಚೌಹಾಣ್ ಅವರ ಪ್ರಶ್ನೆಗೆ ಜಿಎಡಿಯ ಕಾರ್ಯದರ್ಶಿಯಾದ ಎಂ ಆರ್ ಮಲಿಕ್ ಉತ್ತರಿಸಿದ್ದು,ಸರ್ಕಾರಿ ಕಚೇರಿಗಳಲ್ಲಿ ಇಂತಹ ಭಾವಚಿತ್ರಗಳನ್ನು ಅನಧಿಕೃತವಾಗಿ ಬಳಸಲು ಯಾರಿಗೂ ಜವಾಬ್ದಾರಿ ನೀಡಿಲ್ಲ. ಸರ್ಕಾರ ಸರ್ಕಾರಿ ಕಚೇರಿಗಳಲ್ಲಿರುವ ದೇವರ ಭಾವಚಿತ್ರಗಳನ್ನು ಪಟ್ಟಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
“ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನವು ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಭಾವಚಿತ್ರಗಳನ್ನು ಬಳಸಲು ನಿಷೇಧಿಸಲಾಗಿದೆ. ಆದರೆ ಹಲವು ಕಚೇರಿಗಳಲ್ಲಿ ಈ ಪದ್ಧತಿಯಿದೆ. ಹಲವು ಕಚೇರಿಗಳಲ್ಲಿ ದೇವರ ಭಾವಚಿತ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸಂಕೇತಗಳಿವೆ. ಜಾತ್ಯತೀತ ರಾಷ್ಟ್ರವಾಗಿ ಅನಧಿಕೃತ ಭಾವಚಿತ್ರಗಳನ್ನು ಬಳಸುವಂತಿಲ್ಲ. ಈ ಕಾರಣಕ್ಕಾಗಿ ನಾನು ಅರ್ಜಿ ಸಲ್ಲಿಸಿದೆ. ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರವನ್ನು ಸರ್ಕಾರಿ ಅಧಿಕೃತ ಭಾವಚಿತ್ರಗಳ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ನಾನು ಹೋರಾಟ ನಡೆಸುತ್ತೇನೆ. ಇದು ಸರ್ಕಾರದ ತಾರತಮ್ಯವನ್ನು ಸೂಚಿಸುತ್ತದೆ” ಎಂದು ಚೌಹಾನ್ ತಿಳಿಸಿದ್ದಾರೆ.
