ಈ ದಿನ ವಿಶೇಷ | ಬಿಜೆಪಿ ಬೆಳೆಸಿದ ಯಡಿಯೂರಪ್ಪ ಬಿಜೆಪಿಗೇ ಬೇಡವಾದರೆ?

Date:

Advertisements
ಯಡಿಯೂರಪ್ಪನವರು ಸ್ವಂತ ಶಕ್ತಿಯಿಂದ ಪಕ್ಷ ಕಟ್ಟಿದವರು, ಬೆಳೆದವರು. ಅವರು ಮೋದಿಗಿಂತ ಹಿರಿಯರು, ಮಾತು ಕೇಳದವರು. ಕಟ್ಟರ್ ಹಿಂದುತ್ವವಾದಿಗಳಲ್ಲ, ದ್ವೇಷಭಾಷಣ ಮಾಡುವುದಿಲ್ಲ. ಅದಕ್ಕಾಗಿಯೇ ನಡೆದಿದೆ ‘ಆಪರೇಷನ್ ಯಡಿಯೂರಪ್ಪ’. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಅಡ್ವಾಣಿಯನ್ನೇ ಮೂಲೆಗೆ ತಳ್ಳಿದ ಮೋದಿಯವರು, ಯಡಿಯೂರಪ್ಪನವರನ್ನು ಬಿಟ್ಟಾರೆಯೇ?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂಬುದನ್ನು ಬಿಜೆ ಪಕ್ಷದವರೇ ಬಹಿರಂಗವಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ನಾಯಕರಿಗೇ ಬಿಜೆಪಿ ಗೆಲ್ಲುವುದು ಇಷ್ಟವಿಲ್ಲ ಎಂಬ ಸತ್ಯವನ್ನೂ ಸಾರುತ್ತಿದ್ದಾರೆ.

ಇದು ಏನನ್ನು ಸೂಚಿಸುತ್ತದೆ?

ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಅದು ಉಸ್ತುವಾರಿ ಹೊತ್ತವರ ಖಾತೆಗೆ ಜಮಾ ಆಗುತ್ತದೆ. ಅವರ ನಾಯಕತ್ವಕ್ಕೆ ಬೆಲೆ ಬರುತ್ತದೆ. ಅವರ ಸ್ಥಾನ ಭದ್ರವಾಗುತ್ತದೆ. ಅವರೇ ನಾಯಕರಾಗಿ ಮುಂದುವರೆಯುವಂತಾಗುತ್ತದೆ.

Advertisements

ಉಸ್ತುವಾರಿ ಹೊತ್ತವರು ಯಾರು? ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ ಮತ್ತವರ ಮಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ.

ಗೆಲ್ಲದಿದ್ದರೆ ಏನಾಗುತ್ತದೆ? ನಾಯಕತ್ವ ಸರಿ ಇಲ್ಲ, ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಮುನ್ನಡೆಸಲಿಲ್ಲ. ಅಭ್ಯರ್ಥಿಗಳನ್ನು ಸೋಲಿಸಿ, ದಕ್ಷಿಣ ಭಾರತದ ಹೆಬ್ಬಾಗಿಲು ಎನಿಸಿಕೊಂಡ ಕರ್ನಾಟಕದಲ್ಲಿ ಪಕ್ಷವನ್ನು ಸೋಲಿಸಿದರು ಎಂಬ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ತಲೆದಂಡ ಕೇಳಬೇಕಾಗುತ್ತದೆ. ನೈತಿಕ ಹೊಣೆ ಹೊತ್ತು ಸ್ಥಾನ ತ್ಯಾಗ ಮಾಡುವಂತಹ ವಾತಾವರಣ ಸೃಷ್ಟಿಯಾಗುತ್ತದೆ.

ಅಂದರೆ, ಎಲ್ಲವೂ ಸ್ಪಷ್ಟ: ಯಡಿಯೂರಪ್ಪನವರು ಮತ್ತವರ ಮಕ್ಕಳನ್ನು ಬಿಜೆಪಿಯಿಂದ ಹೊರಗಿಡುವುದು.

ಅದಕ್ಕಾಗಿ ಬಿಜೆಪಿ ಹೆಣೆದಿರುವ ಬಲೆಗೆ ಬಿದ್ದ ಮೊದಲ ಮಿಕ ಕೆ.ಎಸ್. ಈಶ್ವರಪ್ಪನವರು. ಈಗ ಈ ಈಶ್ವರಪ್ಪನವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಉಚ್ಚಾಟನೆಗೊಂಡ ಈಶ್ವರಪ್ಪನವರು, ‘ಅಪ್ಪ-ಮಕ್ಕಳ ಕುತಂತ್ರದಿಂದ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ‌‌.‌ ಆದರೆ ಇದು ತಾತ್ಕಾಲಿಕ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ’ ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಪಥ ಮಾಡಿದ್ದಾರೆ.

ಯಡಿಯೂರಪ್ಪ-ಈಶ್ವರಪ್ಪ ಇಬ್ಬರೂ ಬಿಜೆಪಿಯ ಜೋಡೆತ್ತುಗಳಂತಿದ್ದವರು. ಇಬ್ಬರೂ ಶಿವಮೊಗ್ಗದವರು. ಇಬ್ಬರೂ ಆರೆಸೆಸ್ ಹಿನ್ನೆಲೆಯಿಂದ ಪಕ್ಷರಾಜಕಾರಣಕ್ಕೆ ಬಂದವರು. ಒಬ್ಬರು ಲಿಂಗಾಯತರು, ಇನ್ನೊಬ್ಬರು ಕುರುಬರು. ಅಧಿಕಾರಕ್ಕೇರುವುದರಲ್ಲಿ; ಹಣ ಮತ್ತು ಆಸ್ತಿ ಮಾಡುವುದರಲ್ಲಿ ಪೈಪೋಟಿಗೆ ಬಿದ್ದವರು. ಶಿವಮೊಗ್ಗವನ್ನು ಅರ್ಧರ್ಧ ಹಂಚಿಕೊಂಡವರು.

ಇದನ್ನು ಓದಿದ್ದೀರಾ:? ಈ ದಿನ ಸಂಪಾದಕೀಯ | ಮುಸ್ಲಿಮರು, ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ ಮೋದಿ

ಈಗ ಇಬ್ಬರಿಗೂ ವಯಸ್ಸಾಗಿದೆ. ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದು, ಮಕ್ಕಳನ್ನು ಮುನ್ನೆಲೆಗೆ ತರಬೇಕಾಗಿದೆ. ಒಬ್ಬರು ಸಫಲರಾದರೆ, ಇನ್ನೊಬ್ಬರು ವಿಫಲರಾಗಿದ್ದಾರೆ. ವಿಫಲರಾದ ಈಶ್ವರಪ್ಪ, ಸಫಲರಾದ ಯಡಿಯೂರಪ್ಪನವರ ವಿರುದ್ಧ ಸೆಟೆದು ನಿಂತಿದ್ದಾರೆ.

ರಾಜ್ಯ ಬಿಜೆಪಿಯನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಯಡಿಯೂರಪ್ಪನವರ ಬೆನ್ನಿಗೆ ಬಲಿಷ್ಠ, ಬಹುಸಂಖ್ಯಾತ ಲಿಂಗಾಯತ ಜಾತಿ ಇದೆ. ಬಂಡಾಯವೆದ್ದು ಬೀದಿಗಿಳಿದಿರುವ ಈಶ್ವರಪ್ಪನವರ ಬೆನ್ನಿಗೆ ಬಿಜೆಪಿ ಹೈಕಮಾಂಡ್ ಇದೆ, ಆರೆಸ್ಸೆಸ್ ಇದೆ.

ಅಂದರೆ, ಇದು ಬಿಜೆಪಿಯ ಯಡಿಯೂರಪ್ಪನವರ ವಿರುದ್ಧ ಬಿಜೆಪಿಯ ಈಶ್ವರಪ್ಪನವರ ಕಾದಾಟ. ಗೆದ್ದವನು ಸೋತ, ಸೋತವನು ಸತ್ತ ಎಂಬಂತೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರ ಕತೆಯೂ ಮುಗಿಯಬೇಕು. ಇದು ಬಿಜೆಪಿಗೆ ಬೇಕು.

ಹಾಗಾದರೆ, ಮೋದಿ ಮತ್ತು ಬಿಜೆಪಿಯ ಈ ಬಾರಿ ಚುನಾವಣೆಯ ‘ಅಬ್ ಕಿ ಬಾರ್ ಚಾರ್ ಸವ್ ಪಾರ್’ ಘೋಷಣೆಯ ಕತೆ ಏನು ಎಂಬ ಪ್ರಶ್ನೆ ಎದುರಾಗಬಹುದು.

ಬಿಜೆಪಿಯ ನಾಯಕರೊಬ್ಬರು ಹೇಳುವ ಪ್ರಕಾರ, ‘ಬಿಜೆಪಿ ಹೈಕಮಾಂಡ್ ದಕ್ಷಿಣ ಭಾರತದ ಬಗೆಗಿನ ಭರವಸೆಯನ್ನು ಬಿಟ್ಟು ಯಾವುದೋ ಕಾಲವಾಗಿದೆ. ಹಾಗಂತ ಅವರು ಅದನ್ನು ಬಹಿರಂಗವಾಗಿ ಹೇಳುವುದಿಲ್ಲ. ಪಕ್ಷ ಇದೆ, ಕಾರ್ಯಕರ್ತರಿದ್ದಾರೆ, ನಾಯಕರು ಇದ್ದಾರೆ. ಇವತ್ತಲ್ಲ ನಾಳೆ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ಬಂದಷ್ಟು ಬರಲಿ ಅಂತಿದಾರೆ. ಚುನಾವಣೆಗಾಗಿಯೇ ವಸೂಲಿ ಮಾಡಿರುವ ಸಾವಿರಾರು ಕೋಟಿ ರೂಪಾಯಿ ಹಣ ಇದೆಯಲ್ಲವಾ, ಬರ್ತರೆ, ಭಾಷಣ ಮಾಡ್ತರೆ, ಹೋಗ್ತರೆ’ ಎಂದರು.

ಅವರೇ ಮುಂದುವರೆದು, ‘ಒಟ್ಟಿನಲ್ಲಿ ಯಡಿಯೂರಪ್ಪನವರ ಹಿಡಿತದಿಂದ ಬಿಜೆಪಿಯನ್ನು ಮುಕ್ತ ಮಾಡಬೇಕಿದೆ. ನೇರವಾಗಿ ಹೇಳಿ ಹೊರಹಾಕುವುದರ ಬದಲಿಗೆ, ಯಡಿಯೂರಪ್ಪ ಹೇಳಿದವರಿಗೆ ಟಿಕೆಟ್ ಕೊಡದೆ, ಕೊಡಬೇಡಿ ಎಂದವರಿಗೆ ಟಿಕೆಟ್ ಕೊಟ್ಟು, ಅವರು ಸಿಟ್ಟಿಗೇಳುವಂತೆ ಮಾಡಿದ್ದಾರೆ. ಶೆಟ್ಟರ್ ಕರೆತಂದರೂ, ಅವರು ಕೇಳಿದ ಧಾರವಾಡ ಕೊಡದೆ, ಬೆಳಗಾವಿಗೆ ಹೊತ್ತುಹಾಕಿದ್ದಾರೆ. ಆ ಮೂಲಕ ಅಂಗಡಿ ಕುಟುಂಬ ರಾಜಕಾರಣದಿಂದ ದೂರ ಉಳಿಯುವಂತೆ ಮಾಡಿದ್ದಾರೆ. ಜೊತೆಗೆ ಮಗನ ವಿರುದ್ದ ಈಶ್ವರಪ್ಪನವರನ್ನು ಛೂ ಬಿಟ್ಟು ಕಣದಲ್ಲಿದ್ದು ಸೋಲಿಸುವಂತೆ ಆದೇಶಿಸಿದ್ದಾರೆ. ಲಿಂಗಾಯತ ನಾಯಕರಾದ ಬೊಮ್ಮಾಯಿ, ಯತ್ನಾಳ್, ಬೆಲ್ಲದ್, ಮಾಧುಸ್ವಾಮಿ, ರೇಣುಕಾಚಾರ್ಯ, ಪ್ರಭಾಕರ ಕೋರೆ, ಸಿದ್ದೇಶ್, ಬಸವರಾಜು, ನಿರಾಣಿ, ಬಿ.ಸಿ. ಪಾಟೀಲ್ ಯಡಿಯೂರಪ್ಪನವರ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ. ಇನ್ನು ಕತ್ತಿ-ಜಾರಕಿಹೊಳಿ ಚುನಾವಣೆಯಿಂದ ದೂರ ಉಳಿದಿದ್ದಾರೆ. ಟಿಕೆಟ್ ಸಿಗದ ಪ್ರತಾಪ್, ಸಿಟಿ ರವಿ, ನಳಿನ್ ಸಿಟ್ಟಾಗಿದ್ದಾರೆ. ಕರಡಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹಾಸನ-ಕೋಲಾರ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಉರಿದುಬೀಳುತ್ತಿದ್ದಾರೆ. ಅನಂತಕುಮಾರ್ ಹೆಗಡೆ ಅಂಡ್ ಬೆಂಕಿ ಗ್ಯಾಂಗ್ ಅಂತರ ಕಾಯ್ದುಕೊಂಡಿದೆ. ಇದಕ್ಕೆ ಆರೆಸ್ಸೆಸ್‌ನ ಸಂತೋಷ್, ಪ್ರಲ್ಹಾದ್ ಜೋಶಿಯೂ ಕೈಜೋಡಿಸಿದ್ದಾರೆ. ಜೊತೆಗೆ ವಿಜಯೇಂದ್ರರನ್ನು ಕಂಡರಾಗದ ಬಿಜೆಪಿಯ ನಾಯಕರೂ ಇದರಲ್ಲಿ ಇದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ಬೆಂಕಿ ಬಿದ್ದ ಮನೆಯಾಗಿದೆ. ಫಲಿತಾಂಶದ ನಂತರ, ಬೆಂಕಿಯ ಪ್ರಮಾಣ ನೋಡಿಕೊಂಡು, ಆ ಅಪವಾದವನ್ನು ಯಡಿಯೂರಪ್ಪ ಮತ್ತವರ ಮಕ್ಕಳ ಮೇಲೆ ಹೊರಿಸಿ, ಅವರಾಗಿಯೇ ಹೊರಹೋಗುವಂತೆ ಮಾಡುತ್ತಾರೆ’ ಎಂದರು.

ವಿಜಯೇಂದ್ರ-ಯಡಿಯೂರಪ್ಪ-ರಾಘವೇಂದ್ರ
ವಿಜಯೇಂದ್ರ-ಯಡಿಯೂರಪ್ಪ-ರಾಘವೇಂದ್ರ

ಅದು ಅಷ್ಟು ಸುಲಭವಲ್ಲ ಎನಿಸುತ್ತದೆ, ಅವರು ಹೋಗದಿದ್ದರೆ ಎಂದು ಪ್ರಶ್ನೆ ಹಾಕಿದರೆ, ‘ಇದ್ದೇ ಇದೆಯಲ್ಲ, ಯಡಿಯೂರಪ್ಪನವರ ಫೈಲ್‌ಗಳಿವೆ. ವಿಜಯೇಂದ್ರನ ಸಿಡಿಗಳಿವೆ. ಇಡಿ, ಸಿಬಿಐ ಇದೆ, ಸಾಕಲ್ವಾ?’ ಎಂದರು.

ಅಂದರೆ, ಬಿಜೆಪಿಯ ಹೈಕಮಾಂಡಿಗೆ ಯಡಿಯೂರಪ್ಪ ಬೇಕಾಗಿಲ್ಲ. ಅವರಿಗೆ ಮುಜುಗರ ಉಂಟುಮಾಡಲಿಕ್ಕಾಗಿಯೇ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿಯಿಂದ ಜೆಡಿಎಸ್‌ಗೆ ಲಾಭವಾಗಿದೆ. ಅಳಿಯನಿಗೆ ಟಿಕೆಟ್ ಸಿಕ್ಕಿದೆ, ಸೋಮಣ್ಣ-ಸುಧಾಕರ್‍‌ಗಳಿಂದ ಪೇಮೆಂಟ್ ಸಿಕ್ಕಿದೆ. ಸೋಮಣ್ಣರನ್ನು ಕಂಡರಾಗದ ಯಡಿಯೂರಪ್ಪ ಮತ್ತು ವಿಜಯೇಂದ್ರರು, ಬಲವಂತವಾಗಿ ಅವರ ಪರ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜೊತೆಗೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲ ದೇವೇಗೌಡರನ್ನು ಪಕ್ಕದಲ್ಲಿ ಕೂರಿಸಿಕೊಂಡು, ಅವರಿಗೆ ಸಮಯ ಕೊಟ್ಟು, ಗೌರವ ಕೊಟ್ಟು ಪುರಸ್ಕರಿಸಿದ್ದಾರೆ. ಯಡಿಯೂರಪ್ಪನವರನ್ನು ಹತ್ತಿರ ಕೂಡ ಕರೆಯದೆ ನಿರ್ಲಕ್ಷಿಸಿದ್ದಾರೆ.

ಒಟ್ಟಿನಲ್ಲಿ ಬಿಜೆಪಿಗೆ ಬೇಕಿರುವುದು ಒಂದು ರಾಷ್ಟ್ರ ಒಂದು ಚುನಾವಣೆ. ಹಾಗೆಯೇ ಒಬ್ಬನೇ ನಾಯಕ! ಆ ನಾಯಕ ಹೇಳಿದಂತೆ ಕೇಳುವ ರಾಜ್ಯ ಸರ್ಕಾರ ಬೇಕು, ನಾಯಕರಿರಬೇಕು. ಆದರೆ ಯಡಿಯೂರಪ್ಪನವರು ಸ್ವಂತ ಶಕ್ತಿಯಿಂದ ಪಕ್ಷ ಕಟ್ಟಿದವರು, ಬೆಳೆದವರು. ಅವರು ಮೋದಿಗಿಂತ ಹಿರಿಯರು, ಮಾತು ಕೇಳದವರು. ಕಟ್ಟರ್ ಹಿಂದುತ್ವವಾದಿಗಳಲ್ಲ, ದ್ವೇಷಭಾಷಣ ಮಾಡುವುದಿಲ್ಲ. ಅದಕ್ಕಾಗಿಯೇ ನಡೆದಿದೆ ‘ಆಪರೇಷನ್ ಯಡಿಯೂರಪ್ಪ’. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಅಡ್ವಾಣಿಯನ್ನೇ ಮೂಲೆಗೆ ತಳ್ಳಿದ ಮೋದಿಯವರು, ಯಡಿಯೂರಪ್ಪನವರನ್ನು ಬಿಟ್ಟಾರೆಯೇ? ಇಂತಹ ಮನುಷ್ಯವಿರೋಧಿ ಮೋದಿಯನ್ನು, ಪ್ರಾದೇಶಿಕ ಅಸ್ಮಿತೆಯನ್ನು ಅಳಿಸಿಹಾಕುವ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಅವಕಾಶ ಸಿಕ್ಕಿದೆ. ಮತದಾರರು ಯೋಚಿಸಿ ಮತ ನೀಡಬೇಕಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X