ನುಡಿ ನಮನ | ಸೋಲು-ಸಾವುಗಳನ್ನು ಮೀರಿದ ಧೀಮಂತ ಮುತ್ಸದ್ದಿ ವಿ ಶ್ರೀನಿವಾಸ್ ಪ್ರಸಾದ್

Date:

Advertisements
ವಿ.ಶ್ರೀನಿವಾಸ್ ಪ್ರಸಾದ್ ದಶಕಗಳ ಕಾಲ ದಮನಿತ ಸಮುದಾಯಗಳ ಪ್ರಶ್ನಾತೀತ ನಾಯಕರಾಗಿ ಮುಂದುವರೆದರು. ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ಶೋಷಿತ ಸಮುದಾಯಗಳ ಮೂಲಭೂತ ಹಕ್ಕುಗಳಿಗಾಗಿ ನಡೆಸಿರುವ ಹೋರಾಟ ಜನರ ಗಮನ ಸೆಳೆದಿದೆ

 

ಇತಿಹಾಸ ಪುರುಷ ಮಹಿಷ ಬೌದ್ಧರ ಕರ್ಮಭೂಮಿ ಅಶೋಕಪುರಂನ ಮಣೆಗಾರ್ ಕುಟುಂಬದಲ್ಲಿ ಆಗಸ್ಟ್ 06, 1947 ರಲ್ಲಿ ಜನಿಸಿ ಅಂಬೇಡ್ಕರ್‍ವಾದಿ ಮತ್ತು ಮಾನವತಾವಾದಿಯಾಗಿ ಸಾರ್ಥಕ ಬದುಕು ನಿರ್ವಹಿಸಿದ ವಿ.ಶ್ರೀನಿವಾಸ್ ಪ್ರಸಾದ್ ನಾಡು ಕಂಡ ಧೀಮಂತ ನಾಯಕ ಮತ್ತು ಶೋಷಿತ ಸಮುದಾಯಗಳ ವಿಮೋಚಕರಾಗಿ ರಾಜ್ಯದ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನಮಾನ ಹೊಂದಿದ್ದಾರೆ. ಶ್ರೀಸಾಮಾನ್ಯ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಸಹ ಬದುಕಿನಲ್ಲಿ ಅಸಾಮಾನ್ಯ ಸಾಧನೆ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಹ ವ್ಯಕ್ತಿತ್ವವನ್ನು ಇವರು ಹೊಂದಿದ್ದಾರೆ. ಮೈಸೂರಿನ ಪ್ರತಿಷ್ಠಿತ ಶಾರದ ವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಚಿಕ್ಕ ವಯಸ್ಸಿನಲ್ಲೇ ಕ್ರಾಂತಿಕಾರಿ ನಾಯಕ ಬಿ.ಬಸವಲಿಂಗಪ್ಪ ನವರ ಬೂಸಾ ಚಳವಳಿ ಮತ್ತು ದಲಿತ ಚಳವಳಿಗಳಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿ ದಲಿತ ಹೋರಾಟದ ರಾಜಕಾರಣಕ್ಕೆ ಭದ್ರ ಬುನಾದಿ ಹಾಕಿದ ಶ್ರೇಯಸ್ಸನ್ನು ಹೊಂದಿದ್ದಾರೆ. ಇದಕ್ಕೂ ಮೊದಲು ಆರ್.ಎಸ್.ಎಸ್ ಸಂಘಟನೆಯೊಂದಿಗೆ ಅಲ್ಪಕಾಲದ ಒಡನಾಟವನ್ನು ಇವರು ಹೊಂದಿದ್ದರು. ಅಂಬೇಡ್ಕರ್ ವಿಚಾರಧಾರೆ ಮತ್ತು ಬಸವಲಿಂಗಪ್ಪ ನವರ ಮಾರ್ಗದರ್ಶನ ಇವರ ಬದುಕಿನ ದಿಕ್ಕನ್ನೇ ರಚನಾತ್ಮಕವಾಗಿ ಬದಲಿಸಿದವು.

ವಿದ್ಯಾರ್ಥಿ ದೆಸೆಯಿಂದಲೂ ಉತ್ತಮ ಫುಟ್ಬಾಲ್ ಕ್ರೀಡಾಪಟು, ಸಾಮಾಜಿಕ ನ್ಯಾಯಪರ ಹೋರಾಟ ಮತ್ತು ಸಮರ್ಥ ನಾಯಕತ್ವಗಳಿಗೆ ವಿ.ಶ್ರೀನಿವಾಸ್ ಪ್ರಸಾದ್ ಹೆಸರಾಗಿದ್ದಾರೆ. ಸರ್ವ ಧರ್ಮಗಳು ಮತ್ತು ಜನಾಂಗಗಳ ಹಿತ ಚಿಂತಕರಾಗಿ ಇವರು ಮೈಸೂರು ನಗರದಲ್ಲಿ ಪ್ರಬುದ್ಧ ರಾಜಕೀಯ ನಾಯಕತ್ವವನ್ನು ರೂಪಿಸಿಕೊಂಡರು. ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ರಾಜಕಾರಣಿ ಶ್ರೀನಿವಾಸರಾವ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಪಡೆದು ತಮ್ಮದೇ ಆದ ರಾಜಕೀಯ ವರ್ಚಸ್ಸನ್ನು ವಿ.ಶ್ರೀನಿವಾಸ್ ಪ್ರಸಾದ್ ಗಳಿಸಿಕೊಂಡರು.

ಜೆ.ಪಿ ಚಳವಳಿಯಿಂದ ಪ್ರಭಾವಿತರಾಗಿ 1977ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಇವರು ಸ್ಪರ್ಧಿಸಿ ತಮ್ಮ ರಾಜಕೀಯ ನಾಯಕತ್ವವನ್ನು ಗಟ್ಟಿಗೊಳಿಸಿಕೊಂಡರು. ತದನಂತರ ಹಿರಿಯ ಮುತ್ಸದ್ಧಿ ಎಂ ರಾಜಶೇಖರಮೂರ್ತಿ ಅವರೊಡಗೂಡಿ ಕಾಂಗ್ರೆಸ್ ಪಕ್ಷದಿಂದ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ 1980ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಇವರ ಜೊತೆಯಲ್ಲಿ ಎಂ ರಾಜಶೇಖರಮೂರ್ತಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಗೊಂಡರು. 1977ರಿಂದಲೂ ನನಗೆ ವಿ.ಶ್ರೀನಿವಾಸ್ ಪ್ರಸಾದ್ ಅವರ ಒಡನಾಡಿ ಹಾಗೂ ಬೆಂಬಲಿಗನಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ.

Advertisements

ಮೈಸೂರಿನ ಬದನವಾಳಿನಲ್ಲಿ ಜರುಗಿದ ದಲಿತರ ಹತ್ಯಾಕಾಂಡವನ್ನು ವಿರೋಧಿಸಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ತಮ್ಮ ಸಾಮಾಜಿಕ ನ್ಯಾಯಪರ ನಿಲುವನ್ನು ಪ್ರಕಟಿಸಿ ದೇಶದ ಗಮನವನ್ನು ಸೆಳೆದರು. ಇವರನ್ನು ದೇಶದ ದಮನಿತರ ಸಮುದಾಯ ರೆಬೆಲ್ ಲೀಡರ್ ಎಂಬುದಾಗಿ ಬಹಳ ಹಿಂದೆಯೇ ಗುರುತಿಸಿದೆ. ವಿ.ಶ್ರೀನಿವಾಸ್ ಪ್ರಸಾದ್ ಸುಮಾರು ಆರು ಬಾರಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸಂಸದರಾಗಿ ಕಾಂಗ್ರೆಸ್ ಮತ್ತು ಲೋಕ ಜನಶಕ್ತಿ ಪಕ್ಷಗಳ ಅಭ್ಯರ್ಥಿಯಾಗಿ ಆಯ್ಕೆಯಾದರು. ಸುಮಾರು ಹದಿನಾಲ್ಕು ಚುನಾವಣೆಗಳಲ್ಲಿ(ಲೋಕಸಭೆ ಮತ್ತು ವಿಧಾನಸಭೆ) ಸ್ಪರ್ಧಿಸಿದರೂ ಆರು ಬಾರಿ ಲೋಕಸಭೆ ಮತ್ತು ಎರಡು ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. 1999 ರಿಂದ 2004ರ ತನಕ ಕೇಂದ್ರ ಮಂತ್ರಿಯಾಗಿ ರಾಷ್ಟ್ರ ನಾಯಕ ಎ.ಬಿ ವಾಜಪೇಯಿ ನೇತೃತ್ವದ ಮಂತ್ರಿ ಮಂಡಲದಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಪಡಿತರ ಇಲಾಖೆಯ ರಾಜ್ಯ ಸಚಿವರಾಗಿ ಇವರು ಸೇವೆ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಂವಿಧಾನ ಪರಾಮರ್ಶೆಗಾಗಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಎಂ.ಎನ್.ವೆಂಕಟಚಲಯ್ಯನವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತು. ವಿ.ಶ್ರೀನಿವಾಸ್ ಪ್ರಸಾದ್ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಸಂವಿಧಾನ ಪರಾಮರ್ಶೆಯನ್ನು ಸಮರ್ಥಿಸಿಕೊಂಡು ಸಾಮಾಜಿಕ ನ್ಯಾಯಪರ ಚಿಂತಕರು ಮತ್ತು ಸಂಘಟಕರ ಕೆಂಗಣ್ಣಿಗೆ ಗುರಿಯಾದರು. ಮೈಸೂರಿನ ಕಲಾಮಂದಿರದ ಕಾರ್ಯಕ್ರಮದಲ್ಲಿ ದಿವಂಗತ ಶಾಂತರಾಜು ಮತ್ತು ಗೆಳೆಯರು ಪ್ರಸಾದರ ನಿಲುವನ್ನು ಬಹಿರಂಗವಾಗಿ ಖಂಡಿಸಿದರು.ಆದಾಗ್ಯೂ, ವಿ.ಶ್ರೀನಿವಾಸ್ ಪ್ರಸಾದ್ ಅಂಬೇಡ್ಕರ್ ವಿರಚಿತ ಸಂವಿಧಾನದ ಮೂಲಸ್ವರೂಪ ಮತ್ತು ಆಶಯಗಳನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ, ಸಂಧರ್ಬೋಚಿತ ತಿದ್ದುಪಡಿಗಳನ್ನು ಮಾಡಲು ಸಂವಿಧಾನವೇ ಅವಕಾಶಕೊಟ್ಟಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ವಿ.ಶ್ರೀನಿವಾಸ್ ಪ್ರಸಾದ್ ದಶಕಗಳ ಕಾಲ ದಮನಿತ ಸಮುದಾಯಗಳ ಪ್ರಶ್ನಾತೀತ ನಾಯಕರಾಗಿ ಮುಂದುವರೆದರು. ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ಶೋಷಿತ ಸಮುದಾಯಗಳ ಮೂಲಭೂತ ಹಕ್ಕುಗಳಿಗಾಗಿ ನಡೆಸಿರುವ ಹೋರಾಟ ಜನರ ಗಮನ ಸೆಳೆದಿದೆ. ಅವರು ಶಕ್ತಿ ರಾಜಕಾರಣದ ಒಂದು ಭಾಗವಾಗಿ ಮುಂದುವರೆದರೂ ಸಾಂವಿಧಾನಿಕ ಹಕ್ಕುಗಳು ಮತ್ತು ಹೋರಾಟಗಳ ವಿಷಯದಲ್ಲಿ ಮುಂಚೂಣಿಯಲ್ಲಿದ್ದರು ಎಂಬುದು ಗಮನಿಸಬೇಕಾದ ವಿಷಯವಾಗಿದೆ. ಅವರು ಕರ್ನಾಟಕ ರಾಜಕಾರಣದಲ್ಲಿ ಮುಂದುವರೆಯಬೇಕೆಂಬ ಅಪೇಕ್ಷೆಯಿಂದ ಕರ್ನಾಟಕದ ನಂಜನಗೂಡು ಶಾಸಕಾಂಗ ಸಭೆಗೆ 2013 ರಲ್ಲಿ ಆಯ್ಕೆಯಾದರು. ಅಲ್ಲದೇ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿ ಸೇವೆಸಲ್ಲಿಸಿದರು. ಅನಾರೋಗ್ಯ ಕಾರಣದಿಂದ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ಮಂತ್ರಿ ಹುದ್ದೆಗೆ ಸಂಪೂರ್ಣ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಲಿಲ್ಲ. ಇದರಿಂದ ಸಿದ್ಧರಾಮಯ್ಯ ನವರು ಇವರನ್ನು ಮಂತ್ರಿಗಿರಿಯಿಂದ ತೆಗೆದು ಹಾಕುವ ಅನಿವಾರ್ಯತೆ ಸೃಷ್ಟಿಯಾಯಿತು. ವಾಸ್ತವವಾಗಿ ಪ್ರಸಾದರನ್ನು ಕನಿಷ್ಠ ಕಾರ್ಯಭಾರವಿರುವ ಬೇರೊಂದು ಇಲಾಖೆಗೆ ವರ್ಗಾಯಿಸಿ ಇವರ ರಾಜಕೀಯ ನಾಯಕತ್ವ ಮತ್ತು ಘನತೆಗಳಿಗೆ ಚ್ಯುತಿ ಬರದಂತೆ ಎಚ್ಚರಿಕೆಯಿಂದ ಸಿದ್ಧರಾಮಯ್ಯನವರು ನಡೆದುಕೊಳ್ಳಬೇಕಾಯಿತು. ನಂತರದ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳಿಗೆ ಪ್ರಸಾದ್ ಎಷ್ಟು ಅನಿವಾರ್ಯ ಎಂಬುದನ್ನು ದೃಢಪಡಿಸಿದವು.

ಇದನ್ನೂ ಓದಿ ’ನನ್ನ ಜನ ನಿಮ್ಮ ಪೇಪರ್‌ ಓದಿ, ವೋಟ್ ಹಾಕಲ್ಲ ರೀ’ ಎಂದಿದ್ದರು ಪ್ರಸಾದ್!

ಹುಟ್ಟು ಛಲವಾದಿ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ರಾಜಕೀಯ ನಾಯಕತ್ವ ಉಳಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ವಿರೋಧಿಗಳಿಗೆ ಸರಿಯಾದ ಪಾಠ ಕಲಿಸಬೇಕೆಂಬ ಉದ್ದೇಶದಿಂದ 2017ರಲ್ಲಿ ಬಿ.ಜೆ.ಪಿ ಪಕ್ಷವನ್ನು ಸೇರಿದರು. ಬಿಜೆಪಿ ಪಕ್ಷ ‘ಹಿಂದುತ್ವ ಪಕ್ಷವಾಗಿರದೇ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಸಮರ್ಥಿಸಿಕೊಂಡರು. ನಂಜನಗೂಡಿನ ಉಪ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಳಲೆ ಕೇಶವಮೂರ್ತಿ ವಿರುದ್ಧ ಸೋತರು. ಅವರು ಬಿ.ಜೆ.ಪಿಯ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಹಳೆಯ ಮೈಸೂರು ಭಾಗದಲ್ಲಿ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳು ಮತ್ತು ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ವಿ.ಶ್ರೀನಿವಾಸ್ ಪ್ರಸಾದ್ 2019-2024ರ ಅವಧಿಯಲ್ಲಿ ನರೇಂದ್ರಮೋದಿಯವರ ನಾಯಕತ್ವವನ್ನು ಅಖಂಡವಾಗಿ ಬೆಂಬಲಿಸಿದರು. ಭಾರತೀಯ ಪ್ರಜಾಸತ್ತೆ, ಸಂವಿಧಾನ, ದಮನಿತ ಸಮುದಾಯಗಳು ಬಹು ವಿಧವಾದ ಕಷ್ಟ-ನಷ್ಟಗಳನ್ನು ಮೋದಿಯವರ ನಾಯಕತ್ವದಲ್ಲಿ ಅನುಭವಿಸಬೇಕಾಯಿತು. ಈ ಹತ್ತು ವರ್ಷಗಳ ಅವಧಿಯಲ್ಲಿ ಅನೇಕ ಮಂದಿ ಸಂವಿಧಾನ ನಿಷ್ಠರು ಮತ್ತು ಪ್ರಜಾಪ್ರಭುತ್ವವಾದಿಗಳು ವಿ.ಶ್ರೀನಿವಾಸ್ ಪ್ರಸಾದ್ ರವರಿಂದ ರಾಜಕೀಯವಾಗಿ ದೂರ ಸರಿದು ಕರುನಾಡ ಭಾಗ್ಯವಿದಾತ ಸಿದ್ಧರಾಮಯ್ಯನವರ ನಾಯಕತ್ವವನ್ನು ಪ್ರಜ್ಞಾಪೂರ್ವಕವಾಗಿ ಬೆಂಬಲಿಸಿದರು.

ಇತ್ತೀಚೆಗೆ ಜರುಗಿದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಪ್ರಸಾದರು ಮೋದಿ ನಾಯಕತ್ವ ಮತ್ತು ಬಿ.ಜೆ.ಪಿ ಪಕ್ಷ ರಾಜಕಾರಣಗಳಿಂದ ದೂರ ಸರಿದು ತಮ್ಮ ವಿವೇಕ, ಬುದ್ಧ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಪ್ರಸಾದರ ಬಹುತೇಕ ಬಂಧುಗಳು ಮತ್ತು ಒಡನಾಡಿಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಪ್ರಸಾದರ ಪ್ರಭಾವ ಹಳೆಯ ಮೈಸೂರು ಭಾಗದಲ್ಲಿ ಸಂವಿಧಾನಪರ ರಾಜಕಾರಣಕ್ಕೆ ವಿಶೇಷ ಆಯಾಮ ನೀಡಿದೆ. ಕಳೆದ ಮೂವತ್ತು ವರ್ಷಗಳಿಂದ ಹಲವಾರು ಆರೋಗ್ಯ ಸಂಕೀರ್ಣತೆಗಳು ಪ್ರಸಾದರನ್ನು ತೀವ್ರವಾಗಿ ಬಾಧಿಸಿದರೂ ಸಹ ಅವರು ಕಿಂಚಿತ್ತೂ ಕುಗ್ಗದೇ-ಬಗ್ಗದೇ ತಮ್ಮ ರಾಜಕೀಯ ನಾಯಕತ್ವವನ್ನು ಅಮರವಾಗಿಸಿಕೊಂಡಿದ್ದಾರೆ. ಪ್ರಸಾದ್ ಎಂದರೇ ವಿಲ್ ಪವರ್ ಮತ್ತು ವಿಲ್ ಪವರ್ ಎಂದರೇ ಪ್ರಸಾದ್ ಎಂಬುವುದು ಅಕ್ಷರಶಃ ಸತ್ಯವಾಗಿದೆ. ದಿನಾಂಕ 28-04-2024 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಪ್ರಸಾದರು ಸಾವಿನ ವಿರುದ್ಧ ಸೆಣೆಸಿ ಕೊನೆಯುಸಿರೆಳೆದಿರುವುದು ಸಮಸ್ತ ದಮನಿತ ಸಮುದಾಯಗಳಿಗೆ ತುಂಬಲಾರದ ನಷ್ಟವಾಗಿದೆ. ಪ್ರಸಾದ್ ಅಮರ ರಹೇ!

ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
+ posts

ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X