’ನನ್ನ ಜನ ನಿಮ್ಮ ಪೇಪರ್‌ ಓದಿ, ವೋಟ್ ಹಾಕಲ್ಲ ರೀ’ ಎಂದಿದ್ದರು ಪ್ರಸಾದ್!

Date:

“ನಾನು ಪಕ್ಷಾಂತರಿಯೇ ಹೊರತು, ತತ್ವಾಂತರಿಯಲ್ಲ” ಎನ್ನುತ್ತಾ ಬದುಕಿದ ಪ್ರಸಾದ್ ಅವರು, ಎಂದಿಗೂ ಭ್ರಷ್ಟಾಚಾರದ ಕೊಳೆಯನ್ನು ಮೆತ್ತಿಕೊಂಡವರಲ್ಲ!

ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧಿಯವರು ನಡೆದಾಡಿದ ನೆಲ ನಂಜನಗೂಡಿನ ಬದನವಾಳು. ಈಗಲೂ ಗಾಂಧಿಯವರ ಪಳೆಯುಳಿಕೆಯಾಗಿ ಕೈಮಗ್ಗವಿದೆ. ಅಂತಹ ಗ್ರಾಮ 1993ನೇ ಇಸವಿಯಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಸಾಕ್ಷಿಯಾಗಿತ್ತು‌. ದಲಿತರು ದೇವಾಲಯ ಪ್ರವೇಶಿಸುವ ಸಂಬಂಧ ಸವರ್ಣೀಯರ ವಿರೋಧವಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಅಸಹನೆಯು ಕ್ರಿಕೆಟ್ ಆಟದ ವಿಚಾರವಾಗಿ ಎದ್ದು ಮೂವರು ದಲಿತರ ಹತ್ಯೆಗೆ ಕಾರಣವಾಗುತ್ತದೆ. ಆ ಸಂದರ್ಭದಲ್ಲಿ ದಲಿತರ ಹೆಗಲಿಗೆ ನಿಂತು, ಮೇಲ್ಜಾತಿಯ ಮರ್ಜಿಗೆ ಒಳಗಾಗದೆ ಹೋರಾಡಿದ ಧೀಮಂತ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್.

ಬದನವಾಳು ಘಟನೆಯ ಸಂದರ್ಭದಲ್ಲಿ ಪ್ರಸಾದ್ ಅವರು ಗಟ್ಟಿಯಾಗಿ ಸಮುದಾಯದ ಪರ ನಿಂತಾಗ, ಪ್ರತಿಷ್ಠಿತ ದಿನಪತ್ರಿಕೆಯೊಂದರಲ್ಲಿ ಮೇಲ್ಜಾತಿ ಪತ್ರಕರ್ತನೊಬ್ಬ ತೀರಾ ಅವಹೇಳನಕಾರಿಯಾಗಿ, ಪ್ರಚೋದನಾಕಾರಿಯಾಗಿ ಬರೆಯುತ್ತಾನೆ. ವರದಿ ಬರೆದ ವ್ಯಕ್ತಿಯು ಪ್ರಸಾದ್ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಕೆಣಕಲು ಯತ್ನಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಪ್ರಸಾದ್‌, “ರೀ, ನನ್ನ ಜನ ನಿಮ್ಮ ಪತ್ರಿಕೆಯನ್ನು ಓದಿಕೊಂಡು ವೋಟ್‌ ಹಾಕುವಷ್ಟು ಮೆಚುರಿಟಿ ಪಡೆದುಕೊಂಡಿಲ್ಲ ರ್‍ರೀ. ನಿಮ್ಮ ಪತ್ರಿಕೆಯಿಂದ ನನಗೆ ಒಂದು ವೋಟ್‌ ಬರದಿದ್ದರೂ ಪರವಾಗಿಲ್ಲ ಕಂಡ್ರಿ. ನನ್ನ ಜನರ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬಬೇಕು, ನಾನು ಅವರೊಂದಿಗೆ ನಿಂತಿದ್ದೇನೆ, ಮುಂದೆಯೂ ಹೋರಾಟ ಮಾಡುತ್ತೇನೆ, ಪತ್ರಿಕೆಗಳ ಮೂಲಕ ನಾನು ರಾಜಕಾರಣವನ್ನು ಮಾಡಿದವನ್ನಲ್ಲ, ಮಾಡುವುದೂ ಇಲ್ಲ” ಎನ್ನುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೈಸೂರಿನ ಅಶೋಕಪುರಂ- ದಲಿತರೇ ಹೆಚ್ಚಿರುವ ಪ್ರದೇಶ. ಇಲ್ಲಿನ ಮಣೇಗಾರ ವೆಂಕಟಯ್ಯ ಅವರ ಪುತ್ರರಾಗಿ ಆಗಸ್ಟ್‌ 6, 1947ರಲ್ಲಿ ಜನಿಸಿದ ಪ್ರಸಾದ್ ಅವರಿಗೆ ಶಾಲಾ ಹಂತದಲ್ಲಿ ಅಸ್ಪೃಶ್ಯತೆಯ ಕರಾಳ ಅನುಭವಗಳಾಗುತ್ತಾ ಬಂದವು.

ಹಾರ್ಡ್ವಿಕ್ ಮತ್ತು ಶಾರದಾ ವಿಲಾಸ ವಿದ್ಯಾ ಸಂಸ್ಥೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣಗಳನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್‌ಸಿ ಮುಗಿಸಿದರು. ಕಾಲೇಜು ದಿನಗಳಲ್ಲಿ ಅತ್ಯುತ್ತಮ ಫುಟ್ಬಾಲ್ ಆಟಗಾರರಾಗಿದ್ದರು. ಹೀಗಿದ್ದ ಪ್ರಸಾದ್ ಅವರು ವಿದ್ಯಾರ್ಥಿ ನಾಯಕರಾಗಿ ಹೊಮ್ಮಿದ್ದು ’ಬೂಸಾ ಚಳವಳಿ’ಯ ಸಂದರ್ಭದಲ್ಲಿ.

1973, ನವೆಂಬರ್ 20ರಂದು ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ‘ಹೊಸ ಅಲೆ’ ಎನ್ನುವ ವಿಷಯ ಕುರಿತು ಮಾತನಾಡಿದ ಅಂದಿನ ಸಚಿವರಾದ ಬಿ.ಬಸವಲಿಂಗಪ್ಪನವರು ‘ಕನ್ನಡ ಸಾಹಿತ್ಯದಲ್ಲಿ ಏನಿದೆ? ಅದರಲ್ಲಿ ಇರುವುದೆಲ್ಲ ಬೂಸಾ ಸಾಹಿತ್ಯ’ ಎಂದು ಪ್ರಾಸಂಗಿಕವಾಗಿ ಹೇಳುತ್ತಾರೆ‌. ಆಮೇಲೆ ನಡೆದ ಘಟನೆಗಳು ದಲಿತ ಯುವಕರ ಮೇಲಿನ ಹಲ್ಲೆಗೆ, ಬಸವಲಿಂಗಪ್ಪನವರ ರಾಜೀನಾಮೆಗೆ ಮತ್ತು ಹೊಸ ಸಾಹಿತ್ಯದ ಹುಟ್ಟಿಗೆ ಕಾರಣವಾಗುತ್ತವೆ.

ವಾಸ್ತವದಲ್ಲಿ ಅಂದು ಏನಾಯಿತು? ಕಾರ್ಯಕ್ರಮದ ವ್ಯವಸ್ಥಾಪಕರಾದ ಎನ್.ಸಿ.ಸಂಜೀವನ್ ಪಾಶ್ಚಿಮಾತ್ಯ ಶೈಲಿಯ ಇಂಗ್ಲಿಷ್‌‌ನಲ್ಲಿ ಸಭೆಯ ಆರಂಭದಲ್ಲಿ ಸ್ವಾಗತ ಕೋರಲು ಮುಂದಾಗುತ್ತಾರೆ. ಸಭೆಯಲ್ಲಿ ಹಾಜರಿದ್ದ ಅಶೋಕಪುರಂ ಹುಡುಗರು, ‘ಕನ್ನಡ ಕನ್ನಡ’ ಎಂದು ಒಂದೇ ಸಮನೇ ಕೂಗುತ್ತಿದ್ದರು. ಇದನ್ನು ಬಸವಲಿಂಗಪ್ಪನವರು ಗಮನಿಸಿ, ತಾವು ಮಾತನಾಡುವಾಗ ಪ್ರಾಸಂಗಿಕವಾಗಿ, ‘ಏನ್ ಕನ್ನಡ ಕನ್ನಡ ಅಂತ ಕೂಗುತ್ತಿದ್ದೀರಲ್ಲ, ಕನ್ನಡ ಸಾಹಿತ್ಯದಲ್ಲಿ ಏನಿದೆ? ಅಲ್ಲಿ ನಿಮ್ಮ ದುಃಖ ದುಮ್ಮಾನ ಇದೆಯಾ? ನಿಮ್ಮ ಬದುಕಿನ ಚಿತ್ರಣವಿದೆಯಾ? ಇರುವುದೆಲ್ಲ ಬೂಸಾ ಸಾಹಿತ್ಯ’ ಎನ್ನುತ್ತಾರೆ (ಆಧಾರ: ಶಿವಾಜಿ ಗಣೇಶನ್, ದಲಿತ ಚಳವಳಿಯ ಹೆಜ್ಜೆಗಳು).

ಜಾತಿ, ಅಸ್ಪೃಶ್ಯತೆಯ ಕಟು ಟೀಕಾಕಾರ, ಪ್ರಖರ ವಿಚಾರವಾದಿ ಮತ್ತು ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದ ಸಚಿವರೂ ಆಗಿದ್ದ ಬಸವಲಿಂಗಪ್ಪನವರ ವಿರುದ್ಧ ಜಾತಿವಾದಿ ಪತ್ರಕರ್ತರು ತಿರುಚಿ ವರದಿಗಳನ್ನು ಬರೆಯುತ್ತಾರೆ. ಇಡೀ ರಾಜ್ಯದಲ್ಲಿ ಬಸವಲಿಂಗಪ್ಪನವರ ವಿರುದ್ಧ ಆಕ್ರೋಶ ಭುಗಿಲೇಳುತ್ತದೆ. ಈ ಸಂದರ್ಭದಲ್ಲಿ ಅವರ ಪರವಾಗಿ ವಿದ್ಯಾರ್ಥಿ ಚಳವಳಿಯನ್ನು ಸಂಘಟಿಸಲು ಮೈಸೂರು ಭಾಗದಲ್ಲಿ ಹೆಚ್ಚು ಕೆಲಸ ಮಾಡಿದವರು ವಿ.ಶ್ರೀನಿವಾಸ ಪ್ರಸಾದ್. ನಗರದ ರಾಮಸ್ವಾಮಿ ಸರ್ಕಲ್‌ನಲ್ಲಿ ಜನರನ್ನು ಸೇರಿಸಿದಾಗ ಲಾಠಿ ಚಾರ್ಜ್ ಮಾಡಲಾಗುತ್ತದೆ. ಬಸವಲಿಂಗಪ್ಪನವರ ಗರಡಿಗೆ ಬಂದ ಪ್ರಸಾದ್ ಅವರು, ಬುದ್ಧ, ಬಸವ, ಅಂಬೇಡ್ಕರ್‌ ಚಿಂತನೆಗಳಿಗೆ ಬದ್ಧರಾಗಿ ಜೀವಿತಾವಧಿಯುದ್ಧಕ್ಕೂ ಬದುಕಿದರು. ಆರು ಬಾರಿ ಸಂಸದರಾಗಿ ಜನಸೇವೆಯನ್ನು ಮಾಡಿದರು. ಹಗರಣಗಳನ್ನು ಯಾವತ್ತೂ ಮೈಗೆತ್ತಿಕೊಳ್ಳಲಿಲ್ಲ. ಸೈದ್ಧಾಂತಿಕ ವಿಚಾರಗಳಿಗೆ ಬದ್ಧರಾಗಿರದಿದ್ದರೆ ಯಾವತ್ತೋ ಮುಖ್ಯಮಂತ್ರಿಯಾಗಿಬಿಡುತ್ತಿದ್ದರು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಬೂಸಾ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದ ಪ್ರಸಾದ್, 1974ರಲ್ಲಿ ಕೃಷ್ಣರಾಜ ಕ್ಷೇತ್ರದ ಉಪಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ರಾಜಕಾರಣಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆದರೆ ಸೋಲನ್ನು ಅನುಭವಿಸುತ್ತಾರೆ. 1977ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಲೋಕದಳ ಅಭ್ಯರ್ಥಿಯಾಗಿ ಪರಾಜಿತರಾಗುತ್ತಾರೆ. 1978ರಲ್ಲಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಕ್ಯಾಂಡಿಡೇಟ್ ಆಗಿ ಸೋಲು ಅನುಭವಿಸುತ್ತಾರೆ. ಆದರೆ 1980, 1984, 1989, 1991- ಈ ಅವಧಿಗಳಲ್ಲಿ ಚಾಮರಾಜನಗರ ಕ್ಷೇತ್ರದಿಂದ ಎಂಪಿಯಾಗಿ ಆಯ್ಕೆಯಾಗುತ್ತಾರೆ. 1998ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸೋಲು ಕಾಣುತ್ತಾರೆ. ಜನತಾದಳದಿಂದ ಹೊರಹಾಕಲ್ಪಟ್ಟ ರಾಮಕೃಷ್ಣ ಹೆಗಡೆಯವರು ಲೋಕಶಕ್ತಿಯನ್ನು ಸ್ಥಾಪಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 1999ರಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಾರೆ. ಆ ವೇಳೆ ಲೋಕಶಕ್ತಿಗೆ ಸೇರಿ ಅಭ್ಯರ್ಥಿಯಾಗಿದ್ದ ಪ್ರಸಾದ್ ಅವರು ಗೆದ್ದು, ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕರ ಪೊರೈಕೆ ರಾಜ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಾರೆ.

1980ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಂದಾಗ ಇಂದಿರಾ ಗಾಂಧಿಯವರ ಮೆಚ್ಚುಗೆಗೆ ಪಾತ್ರರಾಗಿದ್ದ ನಾಯಕ ಪ್ರಸಾದ್. ಯಾಕೆಂದರೆ ಆ ದಿನಗಳಲ್ಲಿ ಅತ್ಯಂತ ಕಿರಿ ವಯಸ್ಸಿನ ಎಂಪಿ ಅವರಾಗಿದ್ದರು. ರಾಷ್ಟ್ರೀಯ ಮಟ್ಟದ ನಾಯಕರೊಂದಿಗೆ ಪ್ರಸಾದ್ ಅವರ ಒಡನಾಟ ದೊಡ್ಡದು. ಜಗಜೀವನ್ ರಾಮ್ ಅವರೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು. ರಾಜೀವ್‌ ಗಾಂಧಿಯವರಂತೂ ಪ್ರಸಾದ್‌ ಅವರು ಹೇಳಿದ್ದೇ ಅಂತಿಮ ಎನ್ನುತ್ತಿದ್ದ ಕಾಲವಿತ್ತು. ಬಂಗಾರಪ್ಪನವರನ್ನು ಕೆಳಗಿಳಿಸಿ, ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿಯೂ ಪ್ರಸಾದ್ ಪ್ರಭಾವ ಬೀರಿದ್ದರು ಎನ್ನಲಾಗುತ್ತದೆ. ರಾಜೀವ್ ಗಾಂಧಿಯವರು ಇನ್ನಷ್ಟು ಕಾಲ ಬದುಕಿದ್ದರೆ ಪ್ರಸಾದ್ ಅವರು ಯಾವತ್ತೋ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಅವರ ನಿಧನದ ಬಳಿಕ ರಾಜಕೀಯದಲ್ಲಿ ತೀರಾ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ.

ಮೈಸೂರು, ಚಾಮರಾಜನಗರ ಭಾಗದ ಮೇಲ್ಜಾತಿ ರಾಜಕಾರಣಿಗಳ ನಡುವೆ ಪ್ರಸಾದ್ ಅವರ ನಿಲುವುಗಳು ಅಂತಿಮವಾಗಿರುತ್ತಿದ್ದವು. ಸಿದ್ದರಾಮಯ್ಯನವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಬಂದಾಗ ಒಕ್ಕಲಿಗರ ಸಿಟ್ಟಿಗೆ ಗುರಿಯಾದರು. 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಒಕ್ಕಲಿಗರನ್ನು ಎದುರು ಹಾಕಿಕೊಂಡು, ಉಳಿದ ಸಮುದಾಯಗಳ ಮತಗಳಲ್ಲಿ ಸಿದ್ದರಾಮಯ್ಯ ಅವರು ಗೆದ್ದು ಬರುವಲ್ಲಿ ಪ್ರಸಾದ್ ಅವರ ತಂತ್ರಗಾರಿಕೆಗಳು ಮಹತ್ವದ ಪಾತ್ರ ವಹಿಸಿದ್ದವು. ಚುನಾವಣಾ ತಂತ್ರಗಾರಿಕೆಗಳನ್ನು ಮಾಡುವಲ್ಲಿ ಅವರು ಎತ್ತಿದ ಕೈ.

ಚಾಮರಾಜನಗರದಿಂದ 6 ಬಾರಿ ಸಂಸದರಾಗಿದ್ದ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ಪ್ರವೇಶ ಮಾಡಿದ್ದರು. ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಸೇರಿದ ನಂಜನಗೂಡು ವಿಧಾನಸಭಾ ಕ್ಷೇತ್ರದ ಮೇಲೆ ಪ್ರಸಾದ್ ಅವರಿಗೆ ಸುಮಾರು 30 ವರ್ಷಗಳ ಹಿಡಿತ ಇತ್ತು.

2008ರಲ್ಲಿ ಬಿಜೆಪಿಯಿಂದ ಎಸ್.ಮಹದೇವಯ್ಯ ಸ್ಪರ್ಧಿಸಿದರು. ಜೆಡಿಎಸ್‌ನಿಂದ ಸ್ಥಳೀಯರೇ ಆದ ಕಳಲೆ ಕೇಶವಮೂರ್ತಿಯವರು ಎದುರಾಳಿಯಾಗಿದ್ದರು. ಕೇಶವಮೂರ್ತಿಯವರು ಕ್ಷೇತ್ರವನ್ನು ಶ್ರೀನಿವಾಸ್ ಪ್ರಸಾದ್ ಅವರಷ್ಟೇ ಅರಿತವರಾಗಿದ್ದರು. ಯಡಿಯೂರಪ್ಪನವರಿಗೆ ಅನ್ಯಾಯವಾಗಿದೆ ಎಂಬ ವಾತಾವರಣ ಈ ಚುನಾವಣೆ ಸಂದರ್ಭದಲ್ಲಿ ಇತ್ತು. ಬಿಜೆಪಿಯ ಅಭ್ಯರ್ಥಿಯತ್ತ ಕ್ಷೇತ್ರದ ಜನತೆ ಮುಖಮಾಡಿದ್ದರು. ಹೀಗಾಗಿ ತ್ರಿಕೋನ ಸ್ಪರ್ಧೆಯಲ್ಲಿ ಪ್ರಸಾದ್, ಕೇವಲ 708 ಮತಗಳ ಅಂತರದಲ್ಲಿ ಗೆದ್ದಿದ್ದರು.

2013ರಲ್ಲಿ ಶ್ರೀನಿವಾಸ ಪ್ರಸಾದ್ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾದರು. ಬಿಜೆಪಿಯಿಂದ ಬಂಡಾಯವೆದ್ದ ಯಡಿಯೂರಪ್ಪನವರು ಕೆಜೆಪಿ ಕಟ್ಟಿದರು. ಬಿಜೆಪಿಯಿಂದ ಶಿವರಾಮ್, ಕೆಜೆಪಿಯಿಂದ ಎಸ್.ಮಹದೇವಯ್ಯ ಅಭ್ಯರ್ಥಿಯಾದರು. ಜೆಡಿಎಸ್‌ನಿಂದ ಕಳಲೆ ಕೇಶವಮೂರ್ತಿಯವರು ಮತ್ತೆ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ 8,941 ಮತಗಳ ಅಂತರದಲ್ಲಿ ಕಳಲೆಯವರನ್ನು ಸೋಲಿಸಿ ಶ್ರೀನಿವಾಸ ಪ್ರಸಾದ್ ಮತ್ತೆ ತಮ್ಮ ಪ್ರಭಾವವನ್ನು ಸಾಬೀತು ಮಾಡಿದ್ದರು.

ಸತತ ಎರಡನೇ ಬಾರಿ ನಂಜನಗೂಡು ಶಾಸಕರಾಗಿ ಆಯ್ಕೆಯಾದ ಪ್ರಸಾದ್ ಅವರು, ಸಿದ್ಧರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಮೈಸೂರು ಜಿಲ್ಲೆಯ ಉಸ್ತುವಾರಿಯೂ ಆದರು. ಆದರೆ ಸಿದ್ದರಾಮಯ್ಯನವರು ಸಂಪುಟ ಪುನರ್‌ ರಚನೆಯ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆಂದು ಸಿಡಿದೆದ್ದ ಪ್ರಸಾದ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದರು.

2017ರ ನಂಜನಗೂಡು ಉಪಚುನಾವಣೆ ಮಹತ್ವದ ರಾಜಕೀಯ ಜಿದ್ದಾಜಿದ್ದಿಗೆ ಮುನ್ನುಡಿ ಬರೆಯಿತು. ಚಾಮರಾಜನಗರ ಸಂಸದರಾಗಿದ್ದ ಧ್ರುವ ನಾರಾಯಣ ಅವರು ಕ್ಷೇತ್ರದಲ್ಲಿ ವಿಪರೀತ ಸುತ್ತಾಟ ನಡೆಸಿದರು. ಅಂದಿನ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಧ್ರುವನಾರಾಯಣ– ಇವರೆಲ್ಲರಿಗೂ ಪ್ರತಿಷ್ಠೆಯ ಕಣವಾಗಿ ನಂಜನಗೂಡು ಮಾರ್ಪಟ್ಟಿತು. ಧ್ರುವ ಅವರ ಸಹೋದರ ಕಳಲೆ ಕೇಶವಮೂರ್ತಿಯವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾದರು. 21,334 ಮತಗಳ ಅಂತರದಲ್ಲಿ ಶ್ರೀನಿವಾಸ್ ಪ್ರಸಾದ್‌ರವರನ್ನು ಮಣಿಸಿದರು. ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಿತು ಎನ್ನಲಾಗುತ್ತದೆ. ಈ ಸೋಲಿನಿಂದ ನೊಂದುಕೊಂಡ, ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಎಂದು ಭಾವಿಸಿದ ಪ್ರಸಾದ್, ಸಿದ್ದರಾಮಯ್ಯನವರ ಸೋಲಿಗೆ ಅಂದಿನಿಂದಲೇ ರಣತಂತ್ರವನ್ನು ರೂಪಿಸಲು ಮುಂದಾದರು. ಸತತ ವಾಗ್ದಾಳಿಗಳನ್ನು ನಡೆಸಿದರು. ನಂಜನಗೂಡು ಉಪಚುನಾವಣೆಯ ಕುರಿತು ಪುಸ್ತಕವನ್ನೂ ಬರೆದು ತಮ್ಮ ಸೋಲಿಗೆ ಹಣದ ಹೊಳೆಯೇ ಕಾರಣವೆಂದು ಆರೋಪಿಸಿದರು. ಜೊತೆಗೆ ನಂಜನಗೂಡು ಕ್ಷೇತ್ರದಿಂದ ತಮ್ಮ ಅಳಿಯನಾದ ಬಿ.ಹರ್ಷವರ್ಧನ್ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು 2018ರಲ್ಲಿ ಸೋಲಲು ಪ್ರಸಾದ್ ಅವರ ಜಿದ್ದು ಕೂಡ ಕಾರಣವಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಕಣಕ್ಕಿಳಿದು ಧ್ರುವ ಅವರನ್ನೂ ಮಣಿಸಲು ಪಣ ತೊಟ್ಟರು.

“ಚಾಮರಾಜನಗರದಲ್ಲಿ ನನ್ನ ಉತ್ತರಾಧಿಕಾರಿ ಧ್ರುವ ನಾರಾಯಣ” ಎಂದಿದ್ದ ಪ್ರಸಾದ್ ಅವರು ರಾಜಕಾರಣದ ಏಳುಬೀಳಿನಲ್ಲಿ ಧ್ರುವ ಅವರನ್ನೇ ಎದುರುಗೊಂಡಿದ್ದು ವಿಪರ್ಯಾಸವಾಗಿತ್ತು. ಉಪಚುನಾವಣೆಯ ಸೋಲು ಅವರನ್ನು ಕಾಡಿತ್ತು. ಕತ್ತುಕತ್ತಿನ ಕಾಳಗದಲ್ಲಿ ಪ್ರಸಾದ್ ಅವರು 1,817 ಮತಗಳ ಅಂತರದಲ್ಲಿ ತ್ರಾಸದಾಯಕ ಗೆಲುವು ಸಾಧಿಸಿದರು. ಅವರ ಆರೋಗ್ಯ ಆಗಲೇ ಹದಗೆಟ್ಟಿತ್ತು. ಆದರೆ ಹಳೇಹುಲಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೊನೆಯ ದಿನಗಳಲ್ಲಿ ಕಾಣಬೇಕೆಂದು ಮತದಾರರು ಬಯಸಿದ್ದರು. ಜನರ ಕನಸು ನಿಜವೂ ಆಯಿತು.

ರಾಜಕಾರಣದ ಏಳಿಬೀಳಿನಲ್ಲಿ ಪಕ್ಷಗಳನ್ನು ಬದಲಿಸಿದರೂ, ತತ್ವಕ್ಕೆ ಅಂಟಿಕುಳಿತ ಅಪರೂಪದ ರಾಜಕಾರಣಿ ಪ್ರಸಾದ್. “ನಾನು ಪಕ್ಷಾಂತರಿಯೇ ಹೊರತು, ತತ್ವಾಂತರಿಯಲ್ಲ” ಎಂದು ಪದೇ ಪದೇ ಹೇಳಿದರು. ಸಮುದಾಯದ ಹಿತಾಸಕ್ತಿ ಬಂದಾಗ ಬಿಜೆಪಿಯ ಸೈದ್ಧಾಂತಿಕ ನಿಲುವುಗಳನ್ನು ವಿರೋಧಿಸಿದರು. ಸಕ್ರಿಯ ರಾಜಕಾರಣದಲ್ಲಿ ಹೈರಾಣಾಗಿದ್ದ ಅವರು ರಾಜಕಾರಣಕ್ಕೆ ಕೆಲವು ತಿಂಗಳ ಹಿಂದೆಯಷ್ಟೇ ಸಂಪೂರ್ಣ ವಿದಾಯ ಹೇಳಿ, ಆರೋಗ್ಯದ ಕಡೆಗೆ ಗಮನ ಹರಿಸಿದರು. ಪ್ರಸಾದ್ ಅವರ ಬೆಂಬಲಿಗರು ನಿಧಾನಕ್ಕೆ ಕಾಂಗ್ರೆಸ್‌ ಕಡೆಗೆ ಸರಿದರು. ರಾಜಕಾರಣ ಎಲ್ಲ ಹೋರಾಟಗಳಲ್ಲಿ ಸೋತು ಗೆದ್ದಿದ್ದ ಪ್ರಸಾದ್ ಅವರಿಗೂ ತಮ್ಮ ಬೆಂಬಲಿಗರು ಸರಿಯಾದ ರಾಜಕೀಯ ನೆಲೆಗಳನ್ನು ಕಂಡುಕೊಳ್ಳಬೇಕು ಎಂಬ ಇಚ್ಛೆ ಇತ್ತೆಂದು ತೋರುತ್ತದೆ. ಹಳೆಯ ವೈಷಮ್ಯಗಳನ್ನೆಲ್ಲ ಬದಿಗೊತ್ತಿ ಇತ್ತೀಚೆಗೆ ಪ್ರಸಾದ್ ಅವರನ್ನು ಸಿದ್ದರಾಮಯ್ಯ, ಮಹದೇವಪ್ಪ ಭೇಟಿ ಮಾಡಿ ಬಂದಿದ್ದರು. ಅವರ ಆರೋಗ್ಯವನ್ನು ವಿಚಾರಿಸಿದ್ದರು. ಇದು ಮೈಸೂರು- ಚಾಮರಾಜನಗರದಲ್ಲಿನ ದಲಿತ ರಾಜಕಾರಣದ ಭವಿಷ್ಯತ್ತಿನ ಮುನ್ಸೂಚನೆಯೂ ಆಗಿತ್ತು.

ರಾಜಕೀಯ ಲಾಭಗಳನ್ನು ಲೆಕ್ಕಿಸದೆ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದ ರಾಜಕಾರಣಿ ಇಂದು ಮೌನವಾಗಿದ್ದಾರೆ. ಐವತ್ತು ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಅವರ ಮೇಲೆ ಇಲ್ಲ. ಕರ್ನಾಟಕ ರಾಜಕಾರಣದಲ್ಲಿ ಶುದ್ಧಹಸ್ತರಾಗಿ ಉಳಿದ ದಲಿತ ರಾಜಕಾರಣಿಗಳ ಪಟ್ಟಿ ದೊಡ್ಡದಿದೆ. ಅವರಲ್ಲಿ ಪ್ರಸಾದ್ ಅವರ ಹೆಸರು ಅಗ್ರಮಾನ್ಯವಾಗಿದೆ. ಬಿ.ಬಸವಲಿಂಗಪ್ಪನವರ ಸಾಲಿನಲ್ಲಿ ನಿಲ್ಲುವ ಧೀಮಂತ ನಾಯಕರಾಗಿ ಬೆಳೆದ ಪ್ರಸಾದ್ ಅವರೀಗ ನೆನಪು ಮಾತ್ರ.

ಒಡನಾಡಿಯಂತಹ ಸಾಮಾಜಿಕ ಸಂಸ್ಥೆಗಳನ್ನು ಬೆಳೆಸಿದ್ದು ಇರಬಹುದು, ಕಾವೇರಿ ಚಳವಳಿ, ಕನ್ನಡ ಚಳವಳಿ, ಸಾಮಾಜಿಕ ಚಳವಳಿಗಳನ್ನು ಪ್ರೋತ್ಸಾಹಿಸಿದ್ದು ಇರಬಹುದು, ಪ್ರಭಾವಿ ಜಾತಿಗಳ ನಡುವೆ ನಿರ್ಣಾಯಕ ನಾಯಕನಾಗಿ ಗುರುತಿಸಿಕೊಂಡಿದ್ದು ಇರಬಹುದು- ಇವೆಲ್ಲವೂ ಪ್ರಸಾದ್ ಅವರ ಹೆಜ್ಜೆಗುರುತು.

ರಾಜ್ಯದ ಯಾವುದೇ ಮೂಲೆಯಲ್ಲಿ ಅಟ್ರಾಸಿಟಿಯಾದರೂ ಧಾವಿಸುತ್ತಿದ್ದ ಪ್ರಸಾದ್ ಈಗ ಕಣ್ಣು ಮುಚ್ಚಿದ್ದಾರೆ. ಸಾತ್ವಿಕ ಸಿಟ್ಟಿನಿಂದ ಘರ್ಜಿಸುತ್ತಿದ್ದ ಸ್ವಾಭಿಮಾನಿ ಸಿಂಹವು ಇಂದು ಮೌನವಾಗಿದೆ.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

1 COMMENT

  1. ಲೇಖನ ಚೆನ್ನಾಗಿ ಮೂಡಿ ಬಂದಿದೆ. ನಾನು ನಂಜನ ಗೂಡಿನಲ್ಲಿ 10ನೇ ತರಗತಿ ವರೆಗೆ ಓದಿದೆ, ನಂತರ ಮೈಸೂರು….
    ಪ್ರಸಾದ್ ರವರು ಚಿರಪರಿಚಿತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣ ಕರ್ನಾಟಕದಲ್ಲಿ ಬೃಹತ್ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಿ : ಸಚಿವ ಈಶ್ವರ ಖಂಡ್ರೆ

ಕಲ್ಯಾಣ ಕರ್ನಾಟಕ ಭಾಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀವ್ರ ಹಿಂದುಳಿದಿದ್ದು, ಈ...

ದೇವದಾರಿ ಉಕ್ಕು ಗಣಿಗಾರಿಕೆ | ಆರು ವರ್ಷಗಳ ಹಿಂದೆ ವಿರೋಧ – ಇಂದು ಒಪ್ಪಿಗೆ; ಇದು ಕೇಂದ್ರ ಸಚಿವ ಎಚ್‌ಡಿಕೆ ವರಸೆ!

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ನೇತೃತ್ವದ ಎನ್‌ಡಿಎ...

ಪೋಕ್ಸೋ ಪ್ರಕರಣ | ಬಿಎಸ್‌ವೈ ಬಂಧಿಸದಂತೆ ಹೈಕೋರ್ಟ್‌ ಮಧ್ಯಂತರ ಆದೇಶ

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು...

ಬಿಎಸ್‌ವೈ ಪೋಕ್ಸೊ | ಕಾನೂನು ರಕ್ಷಕರಿಂದಲೇ ಕಾನೂನು ಉಲ್ಲಂಘನೆ: ವಕೀಲ ಎಸ್‌ ಬಾಲನ್ ಆರೋಪ

"ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಗಂಭೀರವಾಗಿರುವ ಪೋಕ್ಸೊ ಪ್ರಕರಣ...