ದಾಢಸಿ ವ್ಯಕ್ತಿತ್ವದ ಧೈರ್ಯಸ್ಥ, ಪ್ರಾದೇಶಿಕ ಪೈಲ್ವಾನ್, ಕಾವೇರಿಯ ವರಪುತ್ರ, ಮಣ್ಣಿನ ಮಗ ಎಂದೇ ಹೆಸರು ಪಡೆದಿದ್ದ ದೇವೇಗೌಡ ಕರ್ನಾಟಕದ ಅಸ್ಮಿತೆಯಾಗಿದ್ದವರು. ಕುಟುಂಬಪ್ರೀತಿ ಎಂಬ ಮೋಹದ ಬಲೆಗೆ, ʼಕ್ಲೀನ್ ಕುಟುಂಬʼವಾಗುತ್ತದೆಂಬ ಭ್ರಮೆಗೆ ಬಿದ್ದು, ಮೈತ್ರಿಯ ನೆಪದಲ್ಲಿ ತಾವಾಗಿಯೇ ಹೋಗಿ ಮೋದಿ-ಶಾಗಳ ಕೈಗೆ ಕೋಲು ಕೊಟ್ಟರು. ಅಂದಿನ ದೇವೇಗೌಡರನ್ನು ಇಂದಿನ ದೇವೇಗೌಡರೇ ಸೋಲಿಸಿದರು. ಇದಲ್ಲವೇ ದುರಂತ…
ದೇಶದ ರಾಜಕಾರಣವನ್ನು ಬಹಳ ಹತ್ತಿರದಿಂದ ಕಂಡವರು, 1975-77ರ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ಅನುಭವಿಸಿದವರು, ಪಕ್ಷಗಳ ಏರಿಳಿತವನ್ನು ನೋಡಿದವರು, ಇವತ್ತಿನ ಭಾರತೀಯ ಜನತಾ ಪಕ್ಷದ ಉತ್ತುಂಗ ಸ್ಥಿತಿ ಕಂಡು ಕನಲುವುದಿಲ್ಲ. ಮೋದಿಯೇ ಮುಂದಕ್ಕೂ, ಕೊನೆಯವರೆಗೂ ಎಂದು ಹೇಳುವುದಿಲ್ಲ.
ಹೆಚ್ಚಿಗೆ ಏನೂ ಬೇಕಾಗಿಲ್ಲ, ಕೇವಲ 40 ವರ್ಷಗಳ ಹಿಂದಿನ ದೇಶದ ರಾಜಕಾರಣವನ್ನಷ್ಟೇ ಗಮನಿಸಿದರೂ ಸಾಕು, ಬಿಜೆಪಿಯ ಭವಿಷ್ಯವೇನು ಎಂದು ಹೇಳಿಬಿಡಬಹುದು.
1984ರಲ್ಲಿ, 40 ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದ ಸ್ಥಾನಗಳು ಕೇವಲ 2 ಮಾತ್ರ. ಆಗ ಕಾಂಗ್ರೆಸ್ 415 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಆಗ ಎರಡು ಸ್ಥಾನಗಳನ್ನು ಗೆದ್ದ ಬಿಜೆಪಿ ಬಗ್ಗೆ ದೇಶದ ಜನ, ಇದರ ಕತೆ ಮುಗಿಯಿತು ಎಂದಿರಲಿಲ್ಲ. ಬಿಜೆಪಿಯೂ ಬೆದರಿ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಂಡಿರಲಿಲ್ಲ.
1984ರಲ್ಲಿ ಉತ್ತುಂಗದಲ್ಲಿದ್ದ ಕಾಂಗ್ರೆಸ್ 2014ರ ಲೋಕಸಭಾ ಚುನಾವಣೆಯಲ್ಲಿ, ಕೇವಲ 30 ವರ್ಷಗಳ ಅಂತರದಲ್ಲಿ 44 ಸ್ಥಾನಗಳಿಗೆ ಕುಸಿದಿತ್ತು. ಕೇವಲ 2 ಸ್ಥಾನಗಳಲ್ಲಿದ್ದ ಬಿಜೆಪಿ 282 ಸ್ಥಾನಗಳನ್ನು ಗೆದ್ದು ಬೀಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ. ಪ್ರಜೆಗಳ ಆಶೀರ್ವಾದ ಮುಖ್ಯ. ತಿರಸ್ಕಾರಕ್ಕೆ ಒಳಗಾದವರು ಮೂಲೆಗುಂಪಾಗುತ್ತಾರೆನ್ನುವುದು ಸತ್ಯ.
ಇದನ್ನು ಓದಿದ್ದೀರಾ?: ‘400 ಮಹಿಳೆಯರ ಅತ್ಯಾಚಾರಿ’ ಪ್ರಜ್ವಲ್‌ಗೆ ಜರ್ಮನಿಗೆ ಹೋಗಲು ಮೋದಿ ಸಹಾಯ: ರಾಹುಲ್ ವಾಗ್ದಾಳಿ
ಹಾಗೆಯೇ, 1984ರಿಂದ 2014ರ 30 ವರ್ಷಗಳಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿ, ಬಿಜೆಪಿ ಅಧಿಕಾರಕ್ಕೇರಿತ್ತು. ಮುಂದುವರೆದು 2019ರಲ್ಲಿ ಮತ್ತೆ ಗೆದ್ದ ಬಿಜೆಪಿಯಲ್ಲಿ ಭಾರೀ ಬದಲಾವಣೆಗಳಾಗಿತ್ತು. ಅಲ್ಲಿಯವರೆಗೆ ಸಂಘ ಪರಿವಾರ, ಸಾಮೂಹಿಕ ನಾಯಕತ್ವವಿದ್ದ ಬಿಜೆಪಿ, ಆನಂತರ ಇಬ್ಬರು ನಾಯಕರ ಹಿಡಿತಕ್ಕೊಳಗಾಯಿತು. ಅವರು ರಾಜಕಾರಣಿಗಳ ವೇಷದಲ್ಲಿದ್ದ ಗುಜರಾತಿನ ವ್ಯಾಪಾರಿಗಳು. ಗುಜರಾತನ್ನು ಗುಡಿಸಿ ಗುಂಡಾಂತರ ಮಾಡಿದ್ದವರು, ಗೋಧ್ರಾ ಹತ್ಯಾಕಾಂಡವನ್ನೇ ಅರಗಿಸಿಕೊಂಡಿದ್ದವರು. ಗುಜರಾತಿನ ವ್ಯಾಪಾರವನ್ನೇ ʼಗುಜರಾತ್ ಮಾಡೆಲ್ʼ ಎಂದು ದೇಶದಾದ್ಯಂತ ಪ್ರಚಾರ ಮಾಡಿದ್ದವರು.
2014 ಮತ್ತು 2019ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿಯವರು, 2024ರ ಚುನಾವಣೆಯಲ್ಲಿಯೂ ಗೆದ್ದು ಮತ್ತೆ ಪ್ರಧಾನಿಯಾಗಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ದೇಶಕ್ಕೆ ಮೋದಿ ಅನಿವಾರ್ಯ ಎಂಬ ಕತೆ ಕಟ್ಟಿದ್ದಾರೆ. ಅದಕ್ಕಾಗಿ ದೇಶ ಕಂಡು ಕೇಳರಿಯದ ತಂತ್ರ, ಕುತಂತ್ರಗಳಿಗೆ ಕೈಹಾಕಿದ್ದಾರೆ. ಈ ಬಾರಿಯ ಚುನಾವಣೆಯನ್ನು ಯುದ್ಧವೆಂದು ಭಾವಿಸಿದ್ದಾರೆ. ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಅಳಿದುಳಿದ ಪ್ರಾದೇಶಿಕ ಪಕ್ಷಗಳನ್ನು ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಕೊನೆಗೆ ಇದು- ಇಲ್ಲ ಅದು- ಎಂಬ ಎರಡೇ ರಾಷ್ಟ್ರೀಯ ಪಕ್ಷಗಳಿರುವಂತೆ, ಆಯ್ಕೆಯ ಅವಕಾಶವನ್ನೇ ಕೊಂದುಹಾಕುತ್ತಿದ್ದಾರೆ. ಕೊನೆಗೆ ಸರ್ವಾಧಿಕಾರಿಯಾಗಿ ಪ್ರತಿಷ್ಠಾಪಿಸಲ್ಪಡುತ್ತಾರೆ.
ಅದಕ್ಕಾಗಿಯೇ ಈ ಗುಜರಾತಿನ ವ್ಯಾಪಾರಿಗಳು, ಸ್ವಾಯತ್ತ ಸರ್ಕಾರಿ ತನಿಖಾ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐಗಳನ್ನು ಛೂ ಬಿಟ್ಟು ವಿರೋಧ ಪಕ್ಷಗಳನ್ನು ಹಣಿಯುತ್ತಿದ್ದಾರೆ. ವಿರೋಧ ಪಕ್ಷದ ಭ್ರಷ್ಟ ನಾಯಕರನ್ನೆಲ್ಲ ಬಿಜೆಪಿಗೆ ಸೇರಿಸಿಕೊಂಡು ʼಕ್ಲೀನ್ʼ ಮಾಡುತ್ತಿದ್ದಾರೆ. ದೇಶದ ನಂಬಿಕಸ್ಥ ಬ್ಯಾಂಕ್ ಎಂದೇ ಹೆಸರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಬಳಸಿಕೊಂಡು, ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಚುನಾವಣಾ ಆಯೋಗಕ್ಕೆ ʼಜೀ ಹುಜೂರ್ʼಗಳಂತಹ ಅಧಿಕಾರಿಗಳನ್ನು ನೇಮಕ ಮಾಡಿ, ಅದು ಇದ್ದೂ ಇಲ್ಲದಂತೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹತ್ತು ವರ್ಷಗಳ ಈ ಕೃತ್ಯಗಳನ್ನು ಕಂಡ ದೇಶದ ಜನ, ಹತ್ತಿದ್ದು ಇಳಿಯಲೇಬೇಕು, ಇವತ್ತಲ್ಲ ನಾಳೆ ಇಳಿಯುತ್ತದೆ ಎಂಬ ಅನುಭವದ ಮಾತುಗಳನ್ನಾಡುತ್ತಿದ್ದಾರೆ. ಆಶಾಭಾವನೆಯಲ್ಲಿದ್ದಾರೆ.
ಹಾಗೆಯೇ ಹಿರಿಯ ರಾಜಕಾರಣಿಗಳಾದ ಲಾಲೂ ಪ್ರಸಾದ್ ಯಾದವ್, ಶರದ್ ಪವಾರ್, ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ಉದ್ಧವ್ ಠಾಕ್ರೆ, ಸ್ಟಾಲಿನ್, ಅಖಿಲೇಶ್ ಯಾದವ್, ಕೇಜ್ರಿವಾಲ್, ಹೇಮಂತ್ ಸೊರೇನ್‌ರಂತಹವರು ಮೋದಿ ಮತ್ತು ಶಾ ಕೊಡುವ ಕಷ್ಟಗಳಿಗೆ ಕಂಗಾಲಾಗದೆ, ಪಿತೂರಿಗೆ ಬಲಿಯಾಗದೆ, ತಮ್ಮತನವನ್ನು ಉಳಿಸಿಕೊಂಡು ಹೋರಾಡುತ್ತಿದ್ದಾರೆ. ಇನ್ನು ಒರಿಸ್ಸಾದ ನವೀನ್ ಪಟ್ನಾಯಕ್, ಆಂಧ್ರದ ವೈ.ಎಸ್. ಜಗನ್ಮೋಹನ್ ರೆಡ್ಡಿ, ತೆಲಂಗಾಣದ ಚಂದ್ರಶೇಖರ ರಾವ್ ಮೋಶಾಗಳಿಂದ ಅಂತರ ಕಾಯ್ದುಕೊಂಡು ಪ್ರಾದೇಶಿಕ ಪಕ್ಷಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಇವುಗಳ ನಡುವೆಯೇ ಮಹಾರಾಷ್ಟ್ರದ ಶಿವಸೇನೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಛಿದ್ರವಾಗಿದೆ. ಉತ್ತರ ಪ್ರದೇಶದ ಮಾಯಾವತಿ ದಾಳಿಗೆದರಿ ಧೂಳೀಪಟವಾಗಿದ್ದಾರೆ. ಅಧಿಕಾರದ ಆಸೆಗೆ ಬಿದ್ದ ಬಿಹಾರದ ನಿತೀಶ್ ಕುಮಾರ್ ನಗಣ್ಯರಾಗಿದ್ದಾರೆ.
ಇದನ್ನು ಓದಿದ್ದೀರಾ?: ‘ಈ ದಿನ’ ಸಮೀಕ್ಷೆ | ಮೋದಿಗಿಲ್ಲ ಮತ; ಕಾಂಗ್ರೆಸ್‌ನತ್ತ ಉತ್ತರ ಕನ್ನಡಿಗರ ಒಲವು
ಕಳೆದ 60 ವರ್ಷಗಳ ದೇಶದ ರಾಜಕಾರಣವನ್ನು ಬಹಳ ಹತ್ತಿರದಿಂದ ನೋಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ– ಅತ್ಯಂತ ಹಿರಿಯ ವ್ಯಕ್ತಿ, ಅನುಭವಿ, ಮತ್ಸದ್ದಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು. ಮತದಾರರನ್ನು ನಂಬಿಯೇ ನಾಯಕನಾಗಿ ರೂಪುಗೊಂಡವರು. ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬವೆಂದು ನಂಬಿದವರು. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದ ಸ್ಥಿತಪ್ರಜ್ಞರು. ಪ್ರತಿ ಬಾರಿ ಗೆಲ್ಲಲಿಕ್ಕಾಗಿಯೇ ಸ್ಪರ್ಧಿಸಿದವರು. ಅಕಸ್ಮಾತ್ ಸೋತರೆ, ತಮ್ಮನ್ನು ಫೀನಿಕ್ಸ್ ಹಕ್ಕಿಗೆ ಹೋಲಿಸಿಕೊಂಡು ʼಬೂದಿಯಿಂದ ಎದ್ದು ಬರುತ್ತೇನೆʼ ಎನ್ನುತ್ತಿದ್ದರು. ದಾಢಸಿ ವ್ಯಕ್ತಿತ್ವದ ಧೈರ್ಯಸ್ಥ, ಪ್ರಾದೇಶಿಕ ಪೈಲ್ವಾನ್, ಕಾವೇರಿಯ ವರಪುತ್ರ, ಮಣ್ಣಿನ ಮಗ ಎಂದೇ ಹೆಸರು ಪಡೆದಿದ್ದ ದೇವೇಗೌಡ ಕರ್ನಾಟಕದ ಅಸ್ಮಿತೆಯಾಗಿದ್ದವರು.
ಈ ಎಲ್ಲ ಕಾರಣದಿಂದಾಗಿಯೇ ಗುಜರಾತಿನ ವ್ಯಾಪಾರಿಗಳಿಗೆ ದೇವೇಗೌಡರನ್ನು ಕಂಡರೆ ಅಪಾರ ಗೌರವವಿತ್ತು. ಅವ್ಯಕ್ತ ಭಯವಿತ್ತು. ಜೊತೆಗೆ ತಾವು ಗೋಲಿ ಆಡುತ್ತಿದ್ದ ವಯಸ್ಸಿನಲ್ಲಿಯೇ ಗೌಡರು ರಾಜಕಾರಣದಲ್ಲಿ ಗುರುತಿಸುವಂತಹ ನಾಯಕನಾಗಿ ಹೊರಹೊಮ್ಮಿದ್ದರು ಎಂಬುದರ ಅರಿವಿತ್ತು. ತಾವು ರಾಜಕಾರಣದಲ್ಲಿ ಅಂಬೆಗಾಲಿಡುತ್ತಿದ್ದ ಸಂದರ್ಭದಲ್ಲಿ, ಗೌಡರು ದೆಹಲಿ ರಾಜಕಾರಣದ ರಿಂಗ್ ಮಾಸ್ಟರ್ ಎನಿಸಿಕೊಂಡಿದ್ದರ ಬಗ್ಗೆ ಗೊತ್ತಿತ್ತು. ತಮಗಿಂತ ಮುಂಚೆ ಪ್ರಧಾನಿ ಹುದ್ದೆಗೇರಿದ ಪ್ರಭಾವಿ ಎಂಬುದೂ ತಿಳಿದಿತ್ತು. ಇಂತಹ ಧೀಮಂತ ವ್ಯಕ್ತಿತ್ವದೆದುರು ನಮ್ಮ ಆಟ ನಡೆಯುವುದಿಲ್ಲವೆಂದೇ ಅವರು ಭಾವಿಸಿದ್ದರು. ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷದ ತಂಟೆಗೆ ಹೋಗದೆ ಸುಮ್ಮನಾಗಿದ್ದರು.
ಇಂತಹ ಧೈರ್ಯಸ್ಥ ದೇವೇಗೌಡರೇ ಹೋಗಿ ಮೋದಿ-ಶಾಗಳೆಂಬ ನಿನ್ನೆ-ಮೊನ್ನೆಯ ನಾಯಕರಿಗೆ ಶರಣಾಗುತ್ತಾರೆಂದರೆ, ಗೋಧ್ರಾದಂತಹ ಹತ್ಯಾಕಾಂಡ ಮಾಡಿ ಅರಗಿಸಿಕೊಂಡವರಿಗೆ ಸಾರ್ವಜನಿಕ ಸಭೆಯಲ್ಲಿ ಬಾಯ್ತುಂಬ ಹೊಗಳುತ್ತಾರೆಂದರೆ, ಪ್ರಪಂಚದ ಅತಿ ದೊಡ್ಡ ಭ್ರಷ್ಟಾಚಾರವಾದ ಚುನಾವಣಾ ಬಾಂಡ್ ಅಕ್ರಮವೆಸಗಿದವರನ್ನೇ ಅಪ್ಪಿಕೊಂಡರೆ, ಏನು ಹೇಳುವುದು?
ದೇವೇಗೌಡರಿಗೆ ಹಣದ ಅಗತ್ಯವಿತ್ತೇ? ಅರ್ಜೆಂಟಾಗಿ ಅಧಿಕಾರ ಬೇಕಾಗಿತ್ತೇ? ಆಸ್ತಿ-ಪಾಸ್ತಿಗಳ ಮೇಲೆ ಆಗುವ ದಾಳಿಯಿಂದ ಬಚಾವಾಗಬೇಕಾಗಿತ್ತೇ? ಕುಟುಂಬದ ಮಾನ ಕಾಪಾಡುವ ಒತ್ತಡವಿತ್ತೇ?
2006ರ ನಂತರ ಜಾತ್ಯತೀತ ಜನತಾದಳ, ಜಾತ್ಯತೀತ ಸಿದ್ಧಾಂತದಿಂದ ಕಳಚಿಕೊಂಡಿತ್ತು. ಸರ್ವ ಜನಾಂಗದ ಪಕ್ಷ ಎಂಬುದರಿಂದ ಬಿಡಿಸಿಕೊಂಡು ಸಂಪೂರ್ಣವಾಗಿ ಕುಟುಂಬದ ಪಕ್ಷವಾಗಿತ್ತು. ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕಿಂತಲೂ ಮುಖ್ಯವಾಗಿ ಕುಟುಂಬ ಉಳಿಯಬೇಕಾಗಿತ್ತು. ಕುಟುಂಬದೊಳಗಿನ ಹಳವಂಡಗಳು ನೂರಾರಿತ್ತು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ʼಕ್ಲೀನ್ ಕುಟುಂಬʼವಾಗುತ್ತದೆಂಬ ಭ್ರಮೆ ಇತ್ತು. ಮೈತ್ರಿ ಮಾಡಿಕೊಂಡರು, ಮೋಶಾಗಳನ್ನು ಬಾಯ್ತುಂಬ ಹೊಗಳಿದರು.
ಮೋದಿ-ಶಾಗಳಿಗೂ ಅದೇ ಬೇಕಾಗಿತ್ತು. ಲಡ್ಡು ತಾನಾಗಿಯೇ ಬಂದು ಬಾಯಿಗೆ ಬಿದ್ದಿತ್ತು. ಗೌಡರ ಕುಟುಂಬದ ನೂರಾರು ಹಳವಂಡಗಳು, ಅವರ ಕೈಗೆ ಅನಾಯಾಸವಾಗಿ ಸಿಕ್ಕಿದ್ದವು. ಅದನ್ನೇ ಈಗ ಅವರು ಅಸ್ತ್ರವಾಗಿ ಬಳಸಿಕೊಂಡು, ಗೌಡರನ್ನು ಮತ್ತವರ ಕುಟುಂಬವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೋ- ಗೌಡರು ನಂಬಿದ ಆ ದೇವರೇ ಬಲ್ಲ!
ಅಕಸ್ಮಾತ್, ಜೆಡಿಎಸ್ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದೇ ಆಗಿದ್ದರೆ, ಒಂದೋ-ಎರಡೋ ಸ್ಥಾನಗಳನ್ನು ಗೆಲ್ಲಬಹುದಿತ್ತು. ಸೋತರೂ, ಕಳೆದುಕೊಳ್ಳುವಂಥದ್ದೇನಿರಲಿಲ್ಲ. ಏಕೆಂದರೆ, ಕಳೆದ ಚುನಾವಣೆಯಲ್ಲಿಯೂ ಅದು ಗೆದ್ದಿದ್ದು ಒಂದೇ ಒಂದು ಸ್ಥಾನ. ಹಾಗಂತ ಅದು ನಾಶವಾಗಿರಲಿಲ್ಲ. ಹಾಗೆಯೇ, ಈ ಚುನಾವಣೆಯ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕೊಳಕು ಹೊರಬಂದಿದ್ದರೂ, ಅದನ್ನು ವಿರೋಧಿಗಳ ಷಡ್ಯಂತ್ರವೆನ್ನದೇ ಇರುತ್ತಿರಲಿಲ್ಲ.
ಇದನ್ನು ಓದಿದ್ದೀರಾ?: ರಾಜತಾಂತ್ರಿಕ ಪಾಸ್‌ಪೋರ್ಟ್ ಮೂಲಕ ಪ್ರಜ್ವಲ್ ಜರ್ಮನಿಗೆ ಪ್ರಯಾಣ: ವಿದೇಶಾಂಗ ಇಲಾಖೆ
ಆದರೆ, ಈಗ ಇದೇ ಪ್ರಜ್ವಲ್ ಕೊಳಕು ಮೋದಿ-ಶಾಗಳ ಕೈಗೆ ಸಿಕ್ಕು, ಅದು ಏನೇನು ಅನಾಹುತಗಳಿಗೆ ಕಾರಣವಾಗಬಹುದೋ- ಊಹಿಸಲಿಕ್ಕೂ ಸಾಧ್ಯವಿಲ್ಲದಾಗಿದೆ. ಅದು ಗೌಡರ ಕುಟುಂಬವನ್ನು ಒಡೆದು ಚೂರು ಮಾಡಬಹುದು. ಜೆಡಿಎಸ್ ಗೆಲ್ಲದಂತೆ ನೋಡಿಕೊಂಡು, ಪ್ರಾದೇಶಿಕ ಪಕ್ಷದ ಕತೆ ಮುಗಿಸಬಹುದು. ಅಕಸ್ಮಾತ್ ಕುಮಾರಸ್ವಾಮಿ ಅಥವಾ ಡಾ. ಮಂಜುನಾಥ್ ಗೆದ್ದರೂ, ಪ್ರಜ್ವಲ್ ಕೊಳಕನ್ನೇ ಮುಂದಿಟ್ಟು ಮಂತ್ರಿ ಸ್ಥಾನಕ್ಕೆ ಕೊಕ್ಕೆ ಹಾಕಬಹುದು.
ಅಂತೂ, ದೇವೇಗೌಡರು ತಾವಾಗಿಯೇ ಹೋಗಿ ಮೋದಿ-ಶಾಗಳ ಕೈಗೆ ಕೋಲು ಕೊಟ್ಟಿದ್ದಾರೆ. ಅಂದಿನ ದೇವೇಗೌಡರನ್ನು ಇಂದಿನ ದೇವೇಗೌಡರೇ ಸೋಲಿಸಿದ್ದಾರೆ. ಇದಲ್ಲವೇ ದುರಂತ?

ಲೇಖಕ, ಪತ್ರಕರ್ತ
Super and true
ಇಲ್ಲ ಸಾರ್.. ದುರ೦ತ ಮೈತ್ರಿಯ ನಡೆಯಲಿಲ್ಲ.. HDD ಪ್ರಜ್ವಲ್ ಮತ್ತೆ ರೇವಣ್ಣ ನ ಬೆಳಿಯಕೆ ಅವಕಾಶ ಕೊಟ್ಟಿರೊದ್ರಲ್ಲಿದೆ..
This shows that he is not an astute politician. ಬರಿ ತ೦ತ್ರ ಕುತ೦ತ್ರದ ರಾಜಕಾರಣಿ ಅಷ್ಟೆ.. ಇದು ಬಯಲಾಗಿದೆ