ಕೋಲ್ಕತ್ತಾದಲ್ಲಿ ಹತ್ಯೆಯಾಗಿದ್ದ ಬಾಂಗ್ಲಾದೇಶ ಸಂಸದನ ಪ್ರಕರಣವನ್ನು ಪಶ್ಚಿಮ ಬಂಗಾಳ ಪೊಲೀಸರು ಭೇದಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಸಂಸದ ಅನ್ವರೂಲ್ ಅಜೀಮ್ ಅನರ್ ಅವರನ್ನು ಹತ್ಯೆ ಮಾಡಲು ಸಂಸದರ ಸ್ನೇಹಿತನೊಬ್ಬ 5 ಕೋಟಿ ರೂ. ಸುಪಾರಿ ನೀಡಿದ್ದ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಕೊಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನ್ವರೂಲ್ ಮೇ 13ರಂದು ಕೋಲ್ಕತ್ತಾದಲ್ಲಿ ನಾಪತ್ತೆಯಾಗಿ, ಮೇ.23ರಂದು ಕೊಲೆಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಜ್ಜೀಮಾನ್ ಖಾನ್ ತಿಳಿಸಿದ್ದಾರೆ.
ಪ್ರಕರಣವನ್ನು ತನಿಖೆಗೊಳಪಡಿಸಲು ಪಶ್ಚಿಮ ಬಂಗಾಳ ಪೊಲೀಸ್ ರಾಜ್ಯ ಸಿಐಡಿಗೆ ನೀಡಿತ್ತು.
“ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ. ನೆರೆಯ ದೇಶದ ಸಂಸದರನ್ನು ಹತ್ಯೆ ಮಾಡಲು ದೊಡ್ಡ ಮೊತ್ತವಾದ ಸುಮಾರು 5 ಕೋಟಿ ರೂ.ಗಳನ್ನು ಸಂಸದರ ಸ್ನೇಹಿತನೊಬ್ಬ ಸುಪಾರಿ ನೀಡಿದ್ದ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುಪಿ-ಬಿಹಾರದಲ್ಲಿ ಧೂಳೆಬ್ಬಿಸಿದೆ ʼಖಟಾಖಟ್ ಖಟಾಖಟ್ʼ ಮಹಾಲಕ್ಷ್ಮೀ ಯೋಜನೆ
ಸುಪಾರಿ ನೀಡಿದ ಆರೋಪಿಯು ಅಮೆರಿಕ ಪ್ರಜೆಯಾಗಿದ್ದು, ಕೋಲ್ಕತ್ತಾದಲ್ಲಿ ಸ್ವಂತ ಪ್ಲಾಟ್ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸಿಐಡಿ ಪೊಲೀಸರು ಕೋಲ್ಕತ್ತಾದ ಹೊರವಲಯದಲ್ಲಿರುವ ಆರೋಪಿ ಅಪಾರ್ಟ್‌ಮೆಂಟ್ ಬಳಿ ಕೆಲೆಯಾದ ಸಂಸದರ ರಕ್ತದ ಕಲೆಗಳನ್ನು ಪತ್ತೆ ಹಚ್ಚಿದ್ದಾರೆ. ಭಾರತದಲ್ಲಿ ಚಿಕಿತ್ಸೆ ಪಡೆಯಲು ಬಂಧಿದ್ದ ಬಾಂಗ್ಲಾದೇಶದ ಸಂಸದರಾದ ಅನ್ವರೂಲ್ ಅಜೀಮ್ ಅನರ್ ಮೇ.13 ರಂದು ನಾಮತ್ತೆಯಾಗಿದ್ದರು. ನಮ್ಮ ಫಾರೆನ್ಸಿಕ್ ತಂಡ ಅಪರಾಧ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ” ಎಂದು ಸಿಐಡಿ ವಿಭಾಗದ ಐಜಿ ಅಖಿಲೇಶ್ ಚತುರ್ವೇದಿ ತಿಳಿಸಿದ್ದಾರೆ.
ಅನ್ವರೂಲ್ ಅವರು ವೈದ್ಯಕೀಯ ಚಿಕಿತ್ಸೆಗೆಂದು ಮೇ 13ರಂದು ಕೋಲ್ಕತ್ತಾಗೆ ಆಗಮಿಸಿದ ನಂತರ ನಾಪತ್ತೆಯಾಗಿದ್ದರು. ಪರಿಚಿತರನ್ನು ಭೇಟಿ ಮಾಡಲು ತೆರಳಿದ್ದವರು ವಾಪಸಾಗಿರಲಿಲ್ಲ. ನಂತರ ಅವರು ನಾಪತ್ತೆಯ ಬಗ್ಗೆ ಸಂಸದರ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು.
ಅನ್ವರೂಲ್ ಅವರ ದೇಹ ಛಿದ್ರಗೊಂಡಿದ್ದು,ಸಂಜೀವಾ ಗಾರ್ಡನ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.
