ಈಗ ಮತ್ತೊಮ್ಮೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢ ಸ್ಥಿತಿಯಲ್ಲಿರುವ; ಬಹುಸಂಖ್ಯಾತರು ಮತ್ತು ಬಲಾಢ್ಯರು ಆದ ಒಕ್ಕಲಿಗರು ಮತ್ತು ಲಿಂಗಾಯತರು ಒಂದಾಗಿದ್ದಾರೆ. ರಾಜಕಾರಣದಲ್ಲಿ ಇವರ ಪ್ರಭಾವ ಮತ್ತು ಪ್ರಾಬಲ್ಯ ಹೆಚ್ಚಾದಂತೆ ಹಿಂದುಳಿದ ವರ್ಗಗಳ ರಾಜಕೀಯ ಅವಕಾಶಗಳನ್ನು ಮೊಟಕುಗೊಳಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದವರು ನಮ್ಮ ಕಣ್ಮುಂದಿದ್ದಾರೆ.
ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಚಿವ ಸಂಪುಟ ರಚಿಸಿ, ರಾಜ್ಯದಿಂದ ಐವರಿಗೆ- ನಿರ್ಮಲಾ ಸೀತಾರಾಮನ್, ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆಯವರಿಗೆ ಸಚಿವ ಸ್ಥಾನ ನೀಡಿದ್ದಾರೆ. ತೂಕದ ಖಾತೆಗಳನ್ನೂ ನೀಡಿ ಪುರಸ್ಕರಿಸಿದ್ದಾರೆ.
ಆದರೆ, ರಾಜ್ಯವನ್ನು ಪ್ರತಿನಿಧಿಸುವ ಈ ಐವರನ್ನು ಆಯ್ಕೆ ಮಾಡುವಾಗ ಜಾತಿ, ಪ್ರಾದೇಶಿಕತೆ, ಅನುಭವ, ಅರ್ಹತೆ, ಹಿರಿತನ- ಇದೆಲ್ಲವನ್ನು ಪರಿಗಣಿಸಲಾಗಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 3ರಷ್ಟಿರುವ ಬ್ರಾಹ್ಮಣರಿಗೆ ಎರಡು ಸ್ಥಾನ, ಶೇ. 9.15ರಷ್ಟಿರುವ ಒಕ್ಕಲಿಗರಿಗೆ ಎರಡು ಸ್ಥಾನ ಮತ್ತು ಶೇ. 12ರಷ್ಟಿರುವ ಲಿಂಗಾಯತರಿಗೆ ಒಂದು ಸ್ಥಾನ ನೀಡಲಾಗಿದೆ. ಜನಸಂಖ್ಯೆಯ ಶೇ. 50ಕ್ಕೂ ಹೆಚ್ಚಿನ ಸಂಖ್ಯಾಬಲ ಹೊಂದಿರುವ ಹಿಂದುಳಿದ ನೂರಾರು ಜಾತಿಗಳಿಗೆ ಪ್ರಾತಿನಿಧ್ಯವಿಲ್ಲ. ಬಿಜೆಪಿ ವರಿಷ್ಠರ ಈ ತೀರ್ಮಾನವನ್ನು, ಅನ್ಯಾಯವನ್ನು ಪ್ರಶ್ನಿಸುವವರು ಇಲ್ಲ.
ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿದ ರಮೇಶ್ ಜಿಗಜಿಣಗಿಯವರಿಗೆ ಸಚಿವ ಸ್ಥಾನವಿಲ್ಲ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದ ಗೋವಿಂದ ಕಾರಜೋಳರಿಗೂ ಇಲ್ಲ. ಇಬ್ಬರೂ ಹಿರಿಯರು, ಅನುಭವಿಗಳು, ದಲಿತ ಎಡಗೈ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕರು.
ಪರಿಶಿಷ್ಟ ಜಾತಿಗಳೆನಿಸಿದ ಹೊಲೆಯ ಮತ್ತು ಮಾದಿಗ ಒಳಪಂಗಡಗಳ ನಡುವಿನ ಪರಸ್ಪರ ಮುನಿಸನ್ನು ರಾಜಕೀಯ ಪಕ್ಷಗಳು, ಬೇಕಾದಾಗ ಬೇಕಾದಂತೆ ಬಳಸಿಕೊಂಡಿವೆ. ಅದು ಈ ಬಾರಿಯ ಚುನಾವಣೆಯಲ್ಲೂ ಮುಂದುವರೆದಿದೆ. ಎಡಗೈ ಸಮುದಾಯ ಈ ಬಾರಿ ಬಿಜೆಪಿ ಜೊತೆ ಗುರುತಿಸಿಕೊಂಡಿತ್ತು. ಬಿಜೆಪಿ ಇಬ್ಬರಿಗೆ ಮತ್ತು ಜೆಡಿಎಸ್ ಒಬ್ಬರಿಗೆ ಟಿಕೆಟ್ ನೀಡಿತ್ತು. ಎಡಗೈ ಸಮುದಾಯಕ್ಕೆ ಸೇರಿದ ಮೂವರು, ಮೂರೂ ಕ್ಷೇತ್ರದಲ್ಲಿ ಗೆದ್ದರು. ಬಿಜೆಪಿಯ ಸಂಖ್ಯಾಬಲ ಹೆಚ್ಚಿಸಿದರು, ಪಕ್ಷಕ್ಕೆ ಬಲ ತುಂಬಿದರು. ಆದರೆ ಸ್ಥಾನಮಾನ ನೀಡುವಾಗ ದಲಿತರನ್ನು ದೂರವೇ ಇಟ್ಟರು.
ಬಿಜೆಪಿಯಿಂದ ದಲಿತರಿಗಷ್ಟೇ ಅಲ್ಲ, ಹಿಂದುಳಿದ ವರ್ಗಕ್ಕೂ ಅನ್ಯಾಯವಾಗಿದೆ. ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಗೆದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಗೆದ್ದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೂ ಅನ್ಯಾಯವಾಗಿದೆ. ಕರಾವಳಿ ಭಾಗದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಬಿಲ್ಲವ, ಬಂಟ, ಮೊಗವೀರ ಸಮುದಾಯಗಳನ್ನೂ ನಿರ್ಲಕ್ಷಿಸಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಭ್ರಷ್ಟಾಚಾರ ಮತ್ತು ಸಮಾಜ ವಿಭಜಕ ದುರಾಡಳಿತವನ್ನು ಕೊನೆಗಾಣಿಸಲು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಅಧಿಕಾರಕ್ಕೆ ತಂದರು. ಅಹಿಂದ ಸರ್ಕಾರ ರಚನೆಯಾಯಿತು. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು. ಅವಕಾಶವಂಚಿತ ಸಮುದಾಯಗಳಿಗೆ ಅಧಿಕಾರ ಸ್ಥಾನಗಳನ್ನು ನೀಡಿ ಪುರಸ್ಕರಿಸಿದರು. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬರ-ನೆರೆಯನ್ನು ಸಂಭಾಳಿಸಿದರು.
ಇದು ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಸಕಾರಾತ್ಮಕ ಆಡಳಿತ ನೀತಿಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿರುವ ಬಿಜೆಪಿ ಮತ್ತು ಜೆಡಿಎಸ್ ಎಂಬ ಎರಡು ಫ್ಯೂಡಲ್ ಪಕ್ಷಗಳ ಅಸಹನೆಗೆ ಕಾರಣವಾಯಿತು. ಅದರಲ್ಲೂ ಸಿದ್ದರಾಮಯ್ಯನವರನ್ನು ಸಹಿಸಲಾಗದ ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ, ನುಂಗಲಾರದ ತುತ್ತಾಯಿತು. ಕುಟುಂಬ ರಕ್ಷಣೆಗಾಗಿ ಮತ್ತು ಪಕ್ಷದ ಅಸ್ತಿತ್ವಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರೇರೇಪಿಸಿತು. ದೆಹಲಿಗೆ ತೆರಳಿದ ದೇವೇಗೌಡರು ಮೋದಿಯವರನ್ನು ಬಾಯ್ತುಂಬ ಹೊಗಳಿದರು. ಅದು ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂಬ ಮೋದಿಯವರ ಮಹದಾಸೆಗೆ ಬಲ ತುಂಬಿತು. ಮೈತ್ರಿಗೆ ದಾರಿಯಾಯಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ ಹೊಸ ಮನುಷ್ಯರಾಗುವರೇ?
ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲಿಂಗಾಯತ ಸಮುದಾಯಕ್ಕೆ ಸೇರಿದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಒಕ್ಕಲಿಗ ಮತ್ತು ಲಿಂಗಾಯತ- ಎರಡೂ ರಾಜ್ಯದ ಬಹುಸಂಖ್ಯಾತರು ಮತ್ತು ಬಲಿಷ್ಠರು. ಈ ಎರಡು ಸಮುದಾಯಗಳು ಅಧಿಕಾರದ ಸ್ಥಾನಗಳಲ್ಲಿ ಕೂತಾಗಲೆಲ್ಲ ರಾಷ್ಟ್ರವಾದ ಮುಂದೆ ಬಂದಿದೆ, ಸಾಮಾಜಿಕ ನ್ಯಾಯ ಹಿಂದೆ ಸರಿದಿದೆ. ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾತರಿಗೆ ಯಾವುದೇ ಅವಕಾಶಗಳೂ ಸಿಗದಂತೆ ಎಚ್ಚರ ವಹಿಸಲಾಗಿದೆ.
ಈಗ ಲೋಕಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಸಂಸದರ ಸಾಮಾಜಿಕ ಹಿನ್ನೆಲೆ ಗಮನಿಸಿದರೆ, ಪ್ರಧಾನಿ ನರೇಂದ್ರ ಮೋದಿಯವರು ಸಚಿವ ಸ್ಥಾನ ನೀಡಿ ಪುರಸ್ಕರಿಸಿರುವ ನಾಯಕರತ್ತ ನೋಡಿದರೆ, ಎಪ್ಪತ್ತರ ದಶಕದ ಹಿಂದಿನ ಕರ್ನಾಟಕದ ರಾಜಕೀಯ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಸಾಮಾಜಿಕ ನ್ಯಾಯ ಪರಿಕಲ್ಪನೆ ನೇಪಥ್ಯಕ್ಕೆ ಸರಿದಂತಾಗಿದೆ.
1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆ, ಈ ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತವರು ಹೆಚ್ಚಿನಪಾಲು ಒಕ್ಕಲಿಗರು ಮತ್ತು ಲಿಂಗಾಯತರು. ಇದನ್ನು ಮನಗಂಡ ಅರಸು, ಅಧಿಕಾರಕ್ಕೇರುತ್ತಿದ್ದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಅವಕಾಶ ಕಲ್ಪಿಸಿದ್ದಲ್ಲದೆ, ಉದ್ಯೋಗದಲ್ಲಿ ಮೀಸಲಾತಿಯನ್ನು ಕಾಯ್ದೆ ಮೂಲಕ ಅನುಷ್ಠಾನಕ್ಕೆ ತಂದಿದ್ದರು. ಅದರ ಫಲವಾಗಿ ಹಿಂದುಳಿದ ವರ್ಗ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸದೃಢವಾಗಿತ್ತು. ಬಂಗಾರಪ್ಪ, ಮೊಯ್ಲಿ, ಧರಂಸಿಂಗ್, ಸಿದ್ದರಾಮಯ್ಯರಂತಹ ಹಿಂದುಳಿದ ವರ್ಗಗಳಿಂದ ಬಂದ ನಾಯಕರು ಮುಖ್ಯಮಂತ್ರಿಗಳಾಗುವಂತಹ ಅಪೂರ್ವ ಅವಕಾಶ ಒದಗಿ ಬಂದಿತ್ತು.
ಈಗ ಮತ್ತೊಮ್ಮೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢ ಸ್ಥಿತಿಯಲ್ಲಿರುವ; ಬಹುಸಂಖ್ಯಾತರು ಮತ್ತು ಬಲಾಢ್ಯರು ಆದ ಒಕ್ಕಲಿಗರು ಮತ್ತು ಲಿಂಗಾಯತರು ಒಂದಾಗಿದ್ದಾರೆ. ರಾಜಕಾರಣದಲ್ಲಿ ಇವರ ಪ್ರಭಾವ ಮತ್ತು ಪ್ರಾಬಲ್ಯ ಹೆಚ್ಚಾದಂತೆ ಹಿಂದುಳಿದ ವರ್ಗಗಳ ರಾಜಕೀಯ ಅವಕಾಶಗಳನ್ನು ಮೊಟಕುಗೊಳಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದವರು ನಮ್ಮ ಕಣ್ಮುಂದಿದ್ದಾರೆ. ಎಚ್ಚೆತ್ತುಕೊಳ್ಳಬೇಕಾದವರು ಯಾರು?

ಬಹುಸಂಖ್ಯಾತರು ಎಚ್ಚೆತ್ತುಕೊಂಡು ಸ್ವಾಭಿಮಾನಿಗಳು ಆಗುವುದು ಯಾವಾಗ, ಇನ್ನಾದರೂ ಗುಲಾಮಗಿರಿ ಮನೋಭಾವದಿಂದ ಹೊರಬರಬೇಕು.