ಟೊರೊಂಟೊಗೆ ತೆರಳುತ್ತಿದ್ದ ಏರ್ ಕೆನಡಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬೆದರಿಕೆ ಮೇಲ್ ಕಳುಹಿಸಿದ ಆರೋಪದಲ್ಲಿ 13 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಉತ್ತರ ಪ್ರದೇಶದ ಮೀರತ್‌ನ ಬಾಲಕ ಕಳೆದ ಮಂಗಳವಾರ ‘ಕೇವಲ ಮೋಜಿಗಾಗಿ’ ಬೆದರಿಕೆ ಮೇಲ್ ಕಳುಹಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇತ್ತೀಚೆಗೆ ವಿವಿಧ ಶಾಲೆಗಳಲ್ಲಿ ಇದೇ ರೀತಿಯ ಬೆದರಿಕೆ ಕರೆ ಬಂದಿರುವುದನ್ನು ನೋಡಿ ತಾನು ಮೋಜಿಗಾಗಿ ಈ ರೀತಿ ನಕಲಿ ಬೆದರಿಕೆ ಮೇಲ್ ಮಾಡಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ.
ತಾನು ನಕಲಿ ಬೆದರಿಕೆ ಇಮೇಲ್ ಮಾಡಿದ ಬಳಿಕ ಅಧಿಕಾರಿಗಳು ತನ್ನನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆಯೇ ಎಂದು ತಿಳಿಯುವ ನಿಟ್ಟಿನಲ್ಲಿ ಬಾಂಬ್ ಬೆದರಿಕೆ ಇಮೇಲ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇನ್ನು ಈ ಬಾಲಕ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲು ನಕಲಿ ಇಮೇಲ್ ಐಡಿಯನ್ನು ರಚಿಸಿದ್ದರು. “ಅವನು ತನ್ನ ಫೋನ್‌ನಿಂದ ಮೇಲ್ ಕಳುಹಿಸಿದನು, ಅದಕ್ಕಾಗಿ ತನ್ನ ತಾಯಿಯ ವೈಫೈ ಬಳಸಿಕೊಂಡಿದ್ದಾನೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ನಂತರ ಜೈಪುರ ಶಾಲೆಗಳಿಗೆ ಬಾಂಬ್ ಬೆದರಿಕೆ
ಬಾಂಬೆ ಬೆದರಿಕೆಯ ಇಮೇಲ್ ಕಳುಹಿಸಿದ ಕೂಡಲೇ ಬಾಲಕ ತಕ್ಷಣವೇ ಇಮೇಲ್ ಐಡಿಯನ್ನು ಡಿಲೀಟ್ ಮಾಡಿದ್ದಾನೆ ಎಂದು ವರದಿಯಾಗಿದೆ.
“ಮರುದಿನ ದೆಹಲಿ ವಿಮಾನ ನಿಲ್ದಾಣದಲ್ಲಿ ನಕಲಿ ಬಾಂಬ್ ಬೆದರಿಕೆ ಸುದ್ದಿಯನ್ನು ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡಿದ ಬಾಲಕ ಉತ್ಸುಕರಾಗಿದ್ದಾಗ ನಮಗೆ ತಿಳಿಸಿದ್ದಾನೆ. ಆದರೆ ಆತನಿಗೆ ಭಯವೂ ಇತ್ತು ಅದರಿಂದಾಗಿ ಭಯದಿಂದ ತನ್ನ ಪೋಷಕರಿಗೆ ಯಾವುದೇ ಮಾಹಿತಿಯನ್ನು ಬಾಲಕ ನೀಡಿಲ್ಲ” ಎಂದು ಉಪ ಆಯುಕ್ತೆ ಉಷಾ ರಂಗನಾನಿ ಹೇಳಿದರು.
ಇದನ್ನು ಓದಿದ್ದೀರಾ? ಪ್ಯಾರಿಸ್- ಮುಂಬೈ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ
ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಎಲ್) ಕಚೇರಿಗೆ ಕಳೆದ ಮಂಗಳವಾರ (ಜೂನ್ 12) ರಾತ್ರಿ 10.50ಕ್ಕೆ ಇಮೇಲ್ ಬಂದಿದ್ದು, ಇದರಿಂದಾಗಿ ವಿಮಾನವು ಸುಮಾರು 12 ಗಂಟೆಗಳ ಕಾಲ ವಿಳಂಬವಾಗಿತ್ತು. ಸಂಪೂರ್ಣ ತಪಾಸಣೆಯ ನಂತರ, ವಿಮಾನದಲ್ಲಿ ಏನೂ ಪತ್ತೆಯಾಗದ ಬಳಿಕ ಇದು ಸುಳ್ಳು ಬೆದರಿಕೆ ಎಂದು ಘೋಷಿಸಲಾಗಿತ್ತು.
ತನಿಖೆಯ ಸಮಯದಲ್ಲಿ, ಇಮೇಲ್ ಮೀರತ್‌ನಲ್ಲಿ ಪತ್ತೆಯಾಗಿದೆ. ನಂತರ ದೆಹಲಿ ಪೊಲೀಸರ ತಂಡ ಅಲ್ಲಿಗೆ ಹೋಗಿ ಬಾಲಕನ ವಿಚಾರಣೆ ಮಾಡಿದ್ದಾರೆ. ಪೊಲೀಸರು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಬಾಲಕನ ಕೌನ್ಸಿಲಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.