ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ- ಹೊಸಗಾಲದ ಸಾಮಾಜಿಕ ಜಾಲತಾಣಗಳು ಹಾಗೂ ಅತಿರಂಜಿತ ಸುದ್ದಿಗಳನ್ನು ಬಿತ್ತರಿಸುವ ದೃಶ್ಯಮಾಧ್ಯಮಗಳು. ಆದರೆ, ಪೊಲೀಸರು, ಕಾನೂನು ಮತ್ತು ಸರ್ಕಾರ- ರೇಣುಕಸ್ವಾಮಿ ಪ್ರಕರಣವನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿದೆ. ಜನಪ್ರಿಯ ನಟ, ಹಣ ಮತ್ತು ಪ್ರಭಾವಗಳನ್ನು ಪಕ್ಕಕ್ಕಿಟ್ಟು, ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದೆ.
‘ನನ್ನ ಮಗ ದರ್ಶನ್ ಅಭಿಮಾನಿಯಲ್ಲ, ಆತ ಮನೆಯಲ್ಲಿ ಸಿನಿಮಾ, ಧಾರಾವಾಹಿ ನೋಡುತ್ತಿರಲಿಲ್ಲ. ಸಿನಿಮಾಗಳ ಬಗ್ಗೆ ಮಾತನಾಡುತ್ತಿರಲಿಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥ ಶಿವಣ್ಣಗೌಡರ್ ತಿಳಿಸಿದ್ದಾರೆ.
ಕೊಲೆಯಾದ ರೇಣುಕಸ್ವಾಮಿಯವರ ತಂದೆಗೆ, ಮಗನನ್ನು ಕಳೆದುಕೊಂಡಿರುವ ದುಃಖವೇ ದೊಡ್ಡದು. ಅದನ್ನು ಭರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಆ ಸಂಕಟದ ಸಮಯದಲ್ಲಿ ಮಗನ ಮೇಲಿನ ಮಮಕಾರದಿಂದ ಮಾತನಾಡಿರುವುದು ತಪ್ಪಲ್ಲ. ಸಾಮಾನ್ಯವಾಗಿ ಪೋಷಕರಿಗೆ ತಮ್ಮ ಮಕ್ಕಳು ತಮ್ಮೊಂದಿಗಿದ್ದರೂ, ಅವರ ಹವ್ಯಾಸಗಳೇನು ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗೆಯೇ ರೇಣುಕಸ್ವಾಮಿಯವರ ತಂದೆಗೂ ಮಗನ ಸಿನಿಮಾ ಹುಚ್ಚು, ಅಭಿಮಾನ, ಅವಿವೇಕತನದ ಅರಿವಿರಲಾರದು.
ಅಷ್ಟಕ್ಕೂ ಅವರೇನು ಶ್ರೀಮಂತರಲ್ಲ, ಹೊಸಜಗತ್ತಿನ ಬಗ್ಗೆ ತಿಳಿದವರಲ್ಲ. ತಿಂಗಳಿಗೆ ಹತ್ತಿಪ್ಪತ್ತು ಸಾವಿರ ದುಡಿಯುವ ಮಗ, ಕಳೆದವರ್ಷವಷ್ಟೇ ಮದುವೆಯಾಗಿದ್ದ, ಹೆಂಡತಿ ಗರ್ಭಿಣಿ. ಪೋಷಕರೊಂದಿಗಿನ ಪುಟ್ಟ ಸಂಸಾರ. ರೇಣುಕಸ್ವಾಮಿಯವರ ಪೋಷಕರ ಕಣ್ಣಲ್ಲಿ ಮಗ ಮನೆಯ ಹೀರೋ. ಅದೇ ಹೀರೋ ಪವಿತ್ರಾ ಗೌಡ ಎಂಬ ಹೆಣ್ಣುಮಗಳ ವಿಷಯದಲ್ಲಿ ವಿಲನ್. ಸಿನಿಮಾ ಜಗತ್ತಿನಲ್ಲಿ ಹೀರೋ ಆಗಿ ಮೆರೆಯುತ್ತಿರುವ ದರ್ಶನ್ ಈಗ ಸಮಾಜದೆದುರು ವಿಲನ್.
ನಟ ದರ್ಶನ್ ಪ್ರೇಯಸಿ ಪವಿತ್ರಾ ಗೌಡರಿಗೆ ಅಶ್ಲೀಲ ಫೋಟೋ ಮತ್ತು ಅಸಭ್ಯ ಸಂದೇಶ ಕಳುಹಿಸಿದ್ದ ರೇಣುಕಸ್ವಾಮಿಯ ಕೃತ್ಯ ಖಂಡನೀಯ. ಸಹಿಸಲೂ, ಸಮರ್ಥಿಸಿಕೊಳ್ಳಲೂ ಸಾಧ್ಯವಾಗದ ಸಂಗತಿ. ಆದರೆ ಆ ಒಂದು ಕೆಟ್ಟ ಫೋಟೋ ಮತ್ತು ಸಂದೇಶಕ್ಕೆ ಅಭಿಮಾನಿಯನ್ನೇ ಸಿನಿಮೀಯ ಶೈಲಿಯಲ್ಲಿ ಹಿಂಸಿಸಿ ಕೊಲ್ಲುವುದು ಕ್ರೌರ್ಯದ ಪರಮಾವಧಿ. ರೇಣುಕಸ್ವಾಮಿಯವರನ್ನು ಕರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದರೆ, ಆತ ತಿದ್ದಿಕೊಳ್ಳಬಹುದಿತ್ತು. ಅಥವಾ ಪೊಲೀಸ್ ದೂರು ನೀಡಿದ್ದರೆ, ಅವರ ಸಂಸಾರ ಉಳಿಯುತ್ತಿತ್ತು.
ಆದರೆ, ದರ್ಶನ್ ಜಾಯಮಾನ ಅದಲ್ಲ. ಎಲ್ಲವನ್ನು ಅತಿರೇಕಕ್ಕೆ ಕೊಂಡೊಯ್ಯುವುದು, ಅದಕ್ಕೆ ತುಪ್ಪ ಸುರಿದಂತೆ ಸುತ್ತಲ ಸ್ನೇಹಿತರ ಕುಮ್ಮಕ್ಕು. ಬಾಯಿಗೆ ಬಂದಂತೆ ಮಾತನಾಡುವುದು, ವಿವಾದವನ್ನಾಗಿಸುವುದು, ಮಾಧ್ಯಮಗಳಿಗೆ ಆಹಾರವಾಗುವುದು, ಕೋರ್ಟು, ಕಚೇರಿ, ಜೈಲು ಸೇರುವುದು- ಅವರ ಬದುಕಿನ ಭಾಗವೇ ಆಗಿಹೋಗಿದೆ. ಜೊತೆಗೆ ಅಲ್ಲೊಂದು ಇಲ್ಲೊಂದು ಚಿತ್ರ ಕ್ಲಿಕ್ ಆಗಿ, ಅಭಿಮಾನಿಗಳನ್ನು, ಜನಪ್ರಿಯತೆಯನ್ನು, ಹಣವನ್ನು ತರುತ್ತಿರುವುದು- ತಮ್ಮ ದಾರಿ, ಯೋಚನೆ, ವರ್ತನೆ ಸರಿ ಎನಿಸಿದೆ.
ದರ್ಶನ್ ನಟಿಸಿದ ಹೆಚ್ಚಿನವು ಹೊಡಿ, ಬಡಿ, ಕೊಚ್ಚು, ಕೊಲ್ಲುವ ಚಿತ್ರಗಳೇ. ಅವರ ಅಭಿಮಾನಿಗಳು ಕೂಡ ಅಂತಹ ಮನಸ್ಥಿತಿಯವರೇ ಆಗಿರುವುದು, ಅಂತಹ ಫ್ಯಾನ್ ಪೇಜ್‌ಗಳನ್ನು ಹಣ ಕೊಟ್ಟು ಪ್ರಮೋಟ್ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಈಗ ದರ್ಶನ್ ಬಂಧಿಸಿರುವ ಪೊಲೀಸ್ ಠಾಣೆಯ ಎದುರು, ಅವರ ಅಭಿಮಾನಿಗಳು ಪ್ರತಿಭಟಿಸುತ್ತಿದ್ದಾರೆ. ಮುಂದುವರೆದು, ‘ಯಾರು ಮಾಡದೆ ಇರುವುದನ್ನು ಏನು ನಮ್ಮ ಬಾಸ್ ಮಾಡಿಲ್ಲ, ಎರಡು ಪೆಗ್ ಜಾಸ್ತಿಯಾದ ಜೋಷಲ್ಲಿ ಎರಡು ಏಟು ಕೊಟ್ಟಿದಾರೆ, ದೇಶದ ಕಾನೂನು ಬದಲಾಗಬೇಕು, ನಮ್ಮ ಗುರು ಈಚೆ ಬರಬೇಕು, ಇದು ಸಣ್ಣ ಕೊಲೆ ಅಷ್ಟೇ’ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿ ಬಿಗಿಮುಷ್ಟಿಯಲ್ಲಿ ಬಲಿಷ್ಠ ಖಾತೆಗಳು; ತೆಪ್ಪಗಿರುವವೇ ಮಿತ್ರಪಕ್ಷಗಳು?
ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ- ಹೊಸಗಾಲದ ಸಾಮಾಜಿಕ ಜಾಲತಾಣಗಳು ಹಾಗೂ ಅತಿರಂಜಿತ ಸುದ್ದಿಗಳನ್ನು ಬಿತ್ತರಿಸುವ ದೃಶ್ಯಮಾಧ್ಯಮಗಳು. ಆದರೆ, ಪೊಲೀಸರು, ಕಾನೂನು ಮತ್ತು ಸರ್ಕಾರ- ಈ ಪ್ರಕರಣವನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿದೆ. ಜನಪ್ರಿಯ ನಟ, ಹಣ ಮತ್ತು ಪ್ರಭಾವಗಳನ್ನು ಪಕ್ಕಕ್ಕಿಟ್ಟು, ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದೆ.
ಇಲ್ಲಿ ರಾಜಕುಮಾರ್ ನೆನಪಾಗುತ್ತಿದ್ದಾರೆ. 24 ವರ್ಷಗಳ ಹಿಂದೆ, ಎಸ್.ನಾರಾಯಣ್ ನಿರ್ದೇಶನದ ʼಶಬ್ದವೇಧಿʼ ಚಿತ್ರ ನೂರು ದಿನ ಓಡಿ, ಯಶಸ್ಸು ಕಂಡಿತ್ತು. ಆ ಸಂತೋಷದ ಸಂಗತಿಯನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಚಿತ್ರದ ಯಶಸ್ಸು ಕುರಿತು ಮಾತನಾಡಲು ಚಿತ್ರದ ನಾಯಕನಟ ರಾಜಕುಮಾರ್, ನಿರ್ದೇಶಕ ಎಸ್.ನಾರಾಯಣ್ ಹಾಗೂ ಇತರರು ನೆರೆದಿದ್ದರು. ಆದರೆ ಗೋಷ್ಠಿಯ ಆರಂಭದಿಂದ ಕೊನೆಯವರೆಗೂ ರಾಜಕುಮಾರ್ ಮೌನಕ್ಕೆ ಶರಣಾಗಿದ್ದರು. ಅದು ಪತ್ರಕರ್ತರಿಗೆ ವಿಚಿತ್ರವಾಗಿ ಕಂಡರೂ, ಮಾತಿಗೆಳೆಯುವ ಧೈರ್ಯ ಯಾರಿಗೂ ಇರಲಿಲ್ಲ.
ಪತ್ರಿಕಾಗೋಷ್ಠಿ ಮುಗಿಯಿತು. ಎಲ್ಲರೂ ಅವರವರ ಇಷ್ಟಾನಿಷ್ಟಗಳಲ್ಲಿ ಮುಳುಗಿದರು. ರಾಜಕುಮಾರ್ ಒಂದು ಕಡೆ, ಸುಮ್ಮನೆ ಕೂತಿದ್ದರು. ಧೈರ್ಯ ಮಾಡಿದ ಕೆಲವರು, ‘ಅಣ್ಣಾವ್ರೆ’ ಎಂದರು. ಆಗಲೂ ಅವರು ಸೂಕ್ಷ್ಮವಾಗಿ ಸುತ್ತಮುತ್ತ ಗಮನಿಸಿದರು. ತಮ್ಮ ಅಕ್ಕಪಕ್ಕ ಇರುವವರು ನಂಬಿಕೆಗೆ ಅರ್ಹರು ಎನಿಸಿದಾಗ, ಮನದಾಳದ ದುಗುಡವನ್ನು ಹಂಚಿಕೊಳ್ಳಲು ಅಣಿಯಾದರು. ‘ನೋಡಿ, ಈ ಚಿತ್ರ ಇದೆಯಲ್ಲ… ಶಬ್ದವೇಧಿ, ಇದು ನನಗೆ ಅಷ್ಟು ಇಷ್ಟವಿಲ್ಲ. ಇದರ ಕತೆ, ಅದು ಸಮಾಜಕ್ಕೆ ನೀಡುವ ಸಂದೇಶ ನನಗೆ ಹಿಡಿಸಲಿಲ್ಲ. ಹಾಗಾಗಿ ಆ ಸಂಭ್ರಮದಲ್ಲಿ ನಾನಿಲ್ಲ’ ಎಂದು ಸುತ್ತಲಿದ್ದವರ ಮುಖಗಳನ್ನು ನೋಡಿದರು.
ಒಂದು ಚಿತ್ರ ನೂರು ದಿನ ಓಡಿ, ಹಣ ಗಳಿಸಿ, ಯಶಸ್ವಿ ಚಿತ್ರ ಎನಿಸಿಕೊಂಡ ಮೇಲೂ, ಅದರಲ್ಲಿ ನಾಯಕನಟನಾಗಿ ನಟಿಸಿದ ರಾಜಕುಮಾರ್, ನನಗಿಷ್ಟವಾಗಲಿಲ್ಲ ಎಂದಿದ್ದು ಚಿಂತನೆಗಚ್ಚಿತು. ಮನರಂಜನೆಯ ಉದ್ಯಮದಲ್ಲಿ ಹಣ ಗಳಿಸುವುದು ಮುಖ್ಯವಾಗಿರುವಾಗ, ರಾಜಕುಮಾರ್ ಮಾತು ವಿಚಿತ್ರವೆನಿಸಿತು. ಅವರೇ ಮುಂದಾಗಿ, ‘ನೋಡಿ, ಕೊಡುವವರು ಯಾವಾಗಲೂ ಒಳ್ಳೆಯದನ್ನೇ ಕೊಡಬೇಕು. ಏನ್ ಕೊಟ್ರು ಜನ ನೋಡ್ತರೆ ಅಂತ, ಏನೇನೋ ಕೊಡಬಾರದು’ ಎಂದರು.
ಚಿತ್ರರಂಗವೇ ಆಗಲಿ, ಸಮಾಜವೇ ಆಗಲಿ- ಈ ಸೂಕ್ಷ್ಮವನ್ನು ಅರಿತು ಅಳವಡಿಸಿಕೊಂಡರೆ ಒಳ್ಳೆಯದು.
