ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂ ಒಳಗೆ ಮನುಷ್ಯನ ಬೆರಳು ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಈ ಘಟನೆಯನ್ನು ನೋಡಿದ ತಕ್ಷಣ ವೈದ್ಯರು ಮಲಾಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುಮ್ಮೊ ಐಸ್‌ಕ್ರೀಂ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಐಸ್‌ಕ್ರೀಂ ಮಾದರಿಯನ್ನು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
“ಪಶ್ಚಿಮ ಮಲಾಡ್‌ನಲ್ಲಿ ವಾಸವಿರುವ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರುವ 26 ವರ್ಷದ ವೈದ್ಯರು ದೂರುದಾರರಾಗಿದ್ದು ಬಟರ್‌ಸ್ಕಾಚ್ ಕೋನ್ ಐಸ್‌ಕ್ರೀಂಅನ್ನು ಯುಮ್ಮೊ ಕಂಪನಿಯಿಂದ ಆರ್ಡರ್ ಮಾಡಿದ್ದಾರೆ. ಐಸ್‌ಕ್ರೀಂ ತಿನ್ನುವ ಸಂದರ್ಭದಲ್ಲಿ ಉಗುರಿನೊಂದಿಗೆ ಅರ್ಧ ಇಂಚಿನ ಬೆರಳು ಪತ್ತೆಯಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೀಟ್ ಫಲಿತಾಂಶ ವಿವಾದ: 1563 ಅಭ್ಯರ್ಥಿಗಳ ಗ್ರೇಸ್ ಅಂಕ ರದ್ದು, ಸುಪ್ರೀಂಗೆ ತಿಳಿಸಿದ ಕೇಂದ್ರ
ಮಾನವ ಬೆರಳಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆರಳು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
