ಇಂದು ಬಳ್ಳಾರಿ ನಗರ ಪಾಲಿಕೆಯ ನೂತನ ಮೇಯರ್ ಉಪಮೇಯರ್ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರುಗಳ ಆಯ್ಕೆಗೆ ಚುನಾವಣೆ ನಡೆದಿದ್ದು, ಮೇಯರ್ ಆಗಿ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ಕಾಂಗ್ರೆಸ್‌ನ ಮುಲ್ಲಂಗಿ ನಂದೀಶ್ ಬಾಬು ಆಯ್ಕೆಯಾಗಿದ್ದರೆ, ಉಪ ಮೇಯರ್ ಆಗಿ ಡಿ. ಸುಕುಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳ್ಳಾರಿ ನಗರ ಪಾಲಿಕೆಯ 39 ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷದ 21 ಹಾಗೂ ಪಕ್ಷೇತರರಾಗಿ ಆರಿಸಿ ಬಂದು ಕಾಂಗ್ರೆಸ್ ಬೆಂಬಲಿಸಿರುವ 5 ಜನ ಸದಸ್ಯರು ಸೇರಿದಂತೆ 26 ಜನರ ಬಲವಿತ್ತು. ಬಿಜೆಪಿಯವರು 13 ಸದಸ್ಯರ ಬಲ ಹೊಂದಿದ್ದರು. ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಹೊಂದಿದ್ದರಿಂದ ಅಧಿಕಾರ ಸೂತ್ರ ಹಿಡಿದಿದೆ.
ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಅವರ ಪೈಕಿ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ಮುಲ್ಲಂಗಿ ನಂದೀಶ್, ಮುಂಡೂರು ಪ್ರಭಂಜನ್ ಕುಮಾರ್, ಹಿರಿಯ ಸದಸ್ಯ ಪಿ.ಗಾದೆಪ್ಪನವರು ತಮಗೆ ಅವಕಾಶ ಕಲ್ಪಿಸುವಂತೆ ಕೋರಿದ್ದರು.
ಕಳೆದ ಎರಡು ಬಾರಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಚುನಾವಣೆ ನಿಗದಿ ಮಾಡಿ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು. ಅಂತೆಯೇ ಇಂದು ಚುನಾವಣೆ ನಡೆದಿದ್ದು, ಮೇಯರ್ ಆಗಿ ಮುಲ್ಲಂಗಿ ನಂದೀಶ್ ಹಾಗೂ ಉಪಮೇಯರ್ ಆಗಿ ಡಿ.ಸುಕುಂ ಅವರು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ, ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ತೀರ್ಮಾನ ಮಾಡಲಾಯಿತು. ಆ ಪ್ರಕಾರ ಮೇಯರ್ ಆಗಿ ಮುಲ್ಲಂಗಿ ನಂದೀಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ಉಪಮೇಯರ್ ಆಗಿ ಡಿ.ಸುಕುಂ ಅವರು ಆಯ್ಕೆಯಾಗಿದ್ದಾರೆ.
ಮೇಯರ್ ಆಗಿ ಆಯ್ಕೆಯಾಗಿರುವ ನಂದೀಶ್ ಪಾಲಿಕೆಯ 18ನೇ ವಾರ್ಡಿನ್ ಕಾಂಗ್ರೆಸ್ ಸದಸ್ಯನಾಗಿದ್ದರೆ, ಉಪಮೇಯರ್ ಸುಕುಂ 26ನೇ ವಾರ್ಡ್ ಸದಸ್ಯೆಯಾಗಿದ್ದಾರೆ.
ಬಿಜೆಪಿಯಿಂದ ಶ್ರೀನಿವಾಸ್ ಮೋತ್ಕರ್ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಉಪಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.
ಇದನ್ನು ಓದಿದ್ದೀರಾ? ‘ಅರಿವು ವಿದ್ಯಾಭ್ಯಾಸ ಸಾಲ ಯೋಜನೆ’ಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದಲೇ ಆರಂಭಗೊಂಡ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಯಾರನ್ನೂ ಪಾಲಿಕೆ ಕಚೇರಿಯೊಳಗೆ ಬಿಟ್ಟಿರಲಿಲ್ಲ.
