ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಜಾಮೀನಿನ ಮೇಲೆ ದೆಹಲಿ ಹೈಕೋರ್ಟ್ ವಿಧಿಸಿದ ಮಧ್ಯಂತರ ತಡೆಯಾಜ್ಞೆಯ ವಿರುದ್ಧ ಸಲ್ಲಿಸಿದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು ಸೋಮವಾರ ಇದು ‘ಅಸಹಜ’ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ, ಈ ವಿಷಯದ ಕುರಿತು ಹೈಕೋರ್ಟ್‌ನ ಆದೇಶಕ್ಕಾಗಿ ಕಾಯಲು ಬಯಸುವುದಾಗಿ ಹೇಳಿದೆ. ಹಾಗೆಯೇ “ಇದು ಅಸಹಜ” ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ಅರ್ಜಿಯ ತೀರ್ಪು ಪ್ರಕಟಿಸುವವರೆಗೆ ಅರವಿಂದ್ ಕೇಜ್ರಿವಾಲ್ ಅವರ ಬಿಡುಗಡೆಗೆ ಹೈಕೋರ್ಟ್ ತಡೆ ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ಭಾನುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಆದರೆ ಈ ಹಂತದಲ್ಲಿ ಯಾವುದೇ ಆದೇಶವನ್ನು ಪ್ರಕಟಿಸುವುದು ಸಮಸ್ಯೆಗೆ ಪೂರ್ವಾಗ್ರಹ ಪಡಿಸಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ತಿಳಿಸಿದೆ.
ಇದನ್ನು ಓದಿದ್ದೀರಾ? ಹೈಕೋರ್ಟ್‌ನಿಂದ ಜಾಮೀನಿಗೆ ತಡೆ: ಸುಪ್ರೀಂ ಮೊರೆ ಹೋದ ಕೇಜ್ರಿವಾಲ್
“ನಾವು ಈ ಹಂತದಲ್ಲಿ ಯಾವುದೇ ಆದೇಶವನ್ನು ನೀಡಿದರೆ, ನಾವು ಸಮಸ್ಯೆಯನ್ನು ಮುಂಚಿತವಾಗಿ ನಿರ್ಣಯಿಸಿದ್ದಂತೆ ಆಗುತ್ತದೆ. ಯಾಕೆಂದರೆ ಇದು ಬೇರೆ ಯಾವುದೋ ನ್ಯಾಯಾಲಯವಲ್ಲ, ಇದು ಹೈಕೋರ್ಟ್” ಎಂದು ಹೇಳಿದರು.
ಜಾಮೀನು ಆದೇಶದ ಮೇಲಿನ ಮಧ್ಯಂತರ ತಡೆಯನ್ನು ತೆರವು ಮಾಡುವಂತೆ ಸಿಂಘ್ವಿ ಕೋರಿದ್ದರು. ದೆಹಲಿ ಹೈಕೋರ್ಟ್ ತನ್ನ ಆದೇಶವನ್ನು ಪ್ರಕಟಿಸುವವರೆಗೆ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಬೇಕು ಎಂದು ವಕೀಲರು ಹೇಳಿದರು.
“ನಾನು ಏನು ಕೇಳುತ್ತಿದ್ದೇನೆಂದು ನನಗೆ ತಿಳಿದಿದೆ. ಜಾರಿ ನಿರ್ದೇಶನಾಲಯವು ಕೇವಲ ಒಂದು ಉಲ್ಲೇಖದ ಮೇರೆಗೆ ಹೈಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಿದಂತೆ ಈ ನ್ಯಾಯಾಲಯವು ಉಚ್ಛ ನ್ಯಾಯಾಲಯದ ಆದೇಶವನ್ನು ನೀಡುವ ಮುನ್ನವೇ ತಡೆಹಿಡಿಯಬೇಕು” ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಅರವಿಂದ್ ಕೇಜ್ರಿವಾಲ್ ಜಾಮೀನಿಗೆ ತಡೆ: ‘ಸರ್ವಾಧಿಕಾರ’ ಹೆಚ್ಚುತ್ತಿದೆ ಎಂದ ಪತ್ನಿ ಸುನಿತಾ
ಬಳಿಕ ಪೀಠವು ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21ರಂದು ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಕಳೆದ ವಾರ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ಜಾರಿ ನಿರ್ದೇಶನಾಲಯ ಮರುದಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ತಡೆ ನೀಡುವಂತೆ ಕೋರಿದೆ. ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.