‘ಹಾಲು ಮತ್ತು ರೇಷ್ಮೆಯ ನಾಡು’ ಕೋಲಾರದಲ್ಲಿ ಪ್ರತಿ ಚುನಾವನೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿದೆ. ಪ್ರಸ್ತುತ, ಜಿಲ್ಲೆಯಲ್ಲಿ ಬಿಜೆಪಿಯ ಒಬ್ಬನೇ ಒಬ್ಬ ಶಾಸಕನೂ ಇಲ್ಲ.
ಚಿನ್ನದ ಗಣಿ ಜಿಲ್ಲೆ ಕೋಲಾರವನ್ನು ‘ಹಾಲು ಮತ್ತು ರೇಷ್ಮೆಯ ನಾಡು’ ಎಂದೂ ಕರೆಯಲಾಗುತ್ತದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ವಾಸಿಸುವ ಜನರ ಮುಖ್ಯ ಕಸುಬುಗಳಲ್ಲಿ ಹೈನುಗಾರಿಕೆಯೂ ಒಂದು. ಕೋಲಾರದಲ್ಲಿ ಹಾಲಿನ ಉದ್ಪಾದನೆ ಹೆಚ್ಚಿನ ಪ್ರಮಾಣದಲ್ಲಿದ್ದು, ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಜಿಲ್ಲೆಯ ಸಮಾರು 3,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಹುತೇಕ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಸುಮಾರು ಮೂರು ಲಕ್ಷ ಸದಸ್ಯರಿದ್ದಾರೆ. ಈ ಕುಟುಂಬಗಳು ಹೈನುಗಾರಿಕೆಯಿಂದ ತಿಂಗಳಿಗೆ ಸರಿಸುಮಾರು 10 ಸಾವಿರದಿಂದ 15 ಸಾವಿರ ರೂಪಾಯಿ ಸಂಪಾದಿಸುತ್ತಿವೆ.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಕೋಚಿಮುಲ್)ವು ಹಾಲು ಸಂಗ್ರಹಿಸುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಡಿಯಲ್ಲಿರುವ 14 ಹಾಲು ಒಕ್ಕೂಟಗಳ ಪೈಕಿ 2ನೇ ಸ್ಥಾನದಲ್ಲಿದೆ. ಬೆಂಗಳೂರು ಹಾಲು ಒಕ್ಕೂಟವು ಮೊದಲ ಸ್ಥಾನದಲ್ಲಿದೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ‘ಕೋಚಿಮುಲ್’ ದಿನಕ್ಕೆ ಸುಮಾರು 10 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ.
ಆದರೂ, ಈ ಹಿಂದಿನ ಯಾವ ಚುನಾವಣೆಗಳಲ್ಲೂ ಹಾಲು ಚುನಾವಣಾ ವಿಷಯವಾಗಿರಲಿಲ್ಲ. ಆದರೆ, ಈ ಬಾರಿ ಚುನಾವಣೆ ಸಮಯದಲ್ಲಿ ಹಾಲು ಸದ್ದು ಮಾಡುತ್ತಿದೆ. ಇತ್ತೀಚೆಗೆ, ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಅವರು ರಾಜ್ಯದ ನಂದಿನಿ (ಕೆಎಂಎಫ್)ಯನ್ನು ಗುಜರಾತಿನ ಅಮುಲ್‌ನೊಂದಿಗೆ ವಿಲೀನ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಹೇಳಿಕೆಯ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಹಾಗೂ ರಾಜ್ಯದ ಹಲವಾರು ಸಂಘಟನೆಗಳು ಗಟ್ಟಿಯಾಗಿ ದನಿ ಎತ್ತಿದ್ದವು. ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆಯಲ್ಲಿ ಕೆಎಂಎಫ್ ಉಳಿಸಿಕೊಳ್ಳುವ ಬಗ್ಗೆ ಉಲ್ಲೇಖಿಸುತ್ತಿವೆ. ಕೆಎಂಎಫ್ ರಾಜ್ಯದ ಅಸ್ಮಿತೆಯಾಗಿದೆ. ಅದನ್ನು ಉತ್ತರದ ಕಂಪನಿಗೆ ಅಡಿಯಾಳಾಗಿ ನೀಡುವುದಿಲ್ಲವೆಂದು ಭರವಸೆ ನೀಡುತ್ತಿವೆ.
ನಂದಿನಿ-ಕೆಎಂಎಫ್ ಅಳಿವು-ಉಳಿವಿನ ಬಗ್ಗೆ ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿದ್ದರೂ, ಕೋಲಾರ ಚುನಾವಣಾ ಕಣದಲ್ಲಿ ಇದು ಪ್ರಭಾವ ಬೀರುತ್ತಿಲ್ಲ. ಇದಕ್ಕೆ ಜಿಲ್ಲೆಯಲ್ಲಿ ಬಿಜೆಪಿ ಅಂತಹ ನೆಲೆಯನ್ನು ಹೊಂದಿಲ್ಲದೇ ಇರುವುದು ಒಂದು ಕಾರಣವಿರಬಹುದು. 2018ರಲ್ಲಿ, ಕೋಲಾರದ ಆರು ಸ್ಥಾನಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿತ್ತು (ನಂತರ ಪಕ್ಷ ಸೇರಿದ ಒಬ್ಬ ಸ್ವತಂತ್ರ ಶಾಸಕ ಸೇರಿ). ಉಳಿದೊಂದು ಸ್ಥಾನವನ್ನು ಜೆಡಿಎಸ್ ಗೆದ್ದುಕೊಂಡಿತ್ತು. ಅದಕ್ಕೂ ಹಿಂದಿನ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು, ಪಕ್ಷೇತರರು ಎರಡು ಹಾಗೂ ಜೆಡಿಎಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನಗಳನ್ನು ಗೆದ್ದುಕೊಂಡಿದ್ದವು. 2008 ರಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದರೆ, ಜೆಡಿಎಸ್ ಮತ್ತು ಪಕ್ಷೇತರರು ಉಳಿದ ಎರಡನ್ನು ಗೆದ್ದಿದ್ದರು.
ಈ ಕಳೆದ ಮೂರು ಚುನಾವಣೆಗಳ ಅಂಕಿಸಂಖ್ಯೆಯನ್ನು ಗಮನಿಸಿದರೆ, ಜಿಲ್ಲೆಯಲ್ಲಿ ಪ್ರತಿ ಚುನಾವನೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿದೆ. ಪ್ರಸ್ತುತ, ಜಿಲ್ಲೆಯಲ್ಲಿ ಬಿಜೆಪಿಯ ಒಬ್ಬನೇ ಒಬ್ಬ ಶಾಸಕನೂ ಇಲ್ಲ. ಆ ಕಾರಣಕ್ಕಾಗಿಯೇ, ಜಿಲ್ಲೆಯಲ್ಲಿ ನಂದಿನಿ ಚುನಾವಣಾ ವಿಷಯವಾಗಿಲ್ಲ ಎನ್ನಲಾಗಿದೆ.
ಜಿಲ್ಲೆಯಲ್ಲಿ ಒಕ್ಕಲಿಗರ ಸಂಖ್ಯೆ ಅಧಿಕವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಅಲ್ಲಿನ ಮತದಾರರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿವೆ. ಅದಾಗಿಯೂ, ಮತದಾರರು ಈ ಎರಡೂ ಪಕ್ಷಗಳು ಬೇಡವೆಂದು ನಿರ್ಧರಿಸಿದರೆ, ಪಕ್ಷೇತರರಿಗೆ ಮಣೆ ಹಾಕುವುದು ಹೆಚ್ಚು. ಹಾಗಾಗಿ, ಬಿಜೆಪಿಗೆ ಹೇಗೂ ನೆಲೆ ಸಿಗದು ಎಂದೂ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಹಿಜಾಬ್ ಹೋರಾಟ: ಚುನಾವಣೆಯಲ್ಲಿ ಎಸ್‌ಡಿಪಿಐಗಿಂತ ಕಾಂಗ್ರೆಸ್‌ಗೆ ಹೆಚ್ಚು ಲಾಭ
ಚುನಾವಣೆ ಘೋಷಣೆಯಾಗುವ ಹದಿನೈದು ದಿನಗಳ ಮೊದಲು ಮಾರ್ಚ್ 16 ರಿಂದ ಕೋಚಿಮುಲ್, ರೈತರಿಗೆ ನೀಡುವ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಿತು; ಈ ಬೆಳೆ ಏರಿಕೆಯ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಬಹುದು. ಏಕೆಂದರೆ, ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರೇ ಕೋಚಿಮುಲ್‌ನ ಅಧ್ಯಕ್ಷರಾಗಿದ್ದಾರೆ. ಅವರು ಕೋಚಿಮುಲ್ ಅಧ್ಯಕ್ಷರಾದ ಈ ಆರು ವರ್ಷಗಳಲ್ಲಿ ಹಾಲಿನ ಬೆಲೆ ಲೀಟರ್‌ಗೆ 6 ರೂಪಾಯಿಗಳಷ್ಟು ಏರಿಕೆಯಾಗಿದೆ. ಈಗ ಅವರು ಮತ್ತೆ ಚುನಾವಣಾ ಕಣದಲ್ಲಿದ್ದಾರೆ.
ನಂಜೇಗೌಡ ಕೂಡ ‘ಅಮುಲ್ ವರ್ಸಸ್ ನಂದಿನಿ’ ಚರ್ಚೆ ಚುನಾವಣೆ ವಿಷಯವಾಗುವುದಿಲ್ಲ ಎಂದಿದ್ದಾರೆ. “ಬೇರೆ ರಾಜ್ಯಗಳ ಸ್ಪರ್ಧೆಯಿಂದ ಹಾಲು ಉತ್ಪಾದಕರಿಗೆ ನಷ್ಟದ ಆತಂಕವಿದೆ ಮತ್ತು ಭಾರೀ ಪ್ರಮಾಣದ ಚರ್ಚೆಯಾಗುತ್ತಿದೆ. ಆದರೆ, ಮಾಲೂರು ಚುನಾವಣೆಯಲ್ಲಿ ಅದು ಪ್ರಭಾವ ಬೀರುವುದಿಲ್ಲ” ಎಂದು ಅವರು ಹೇಳುತ್ತಾರೆ.
ಇನ್ನೊಂದು ಅಂಶವೆಂದರೆ, ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಮತ್ತು ಕಿಸಾನ್ ಸಮ್ಮಾನ್ ಯೋಜನೆಯಂತಹ ಯೋಜನೆಗಳು ಮಾಲೂರು ಹಾಗೂ ಬಂಗಾರಪೇಟೆಯ ಕೆಲವು ಗ್ರಾಮಗಳನ್ನು ತಲುಪಿದ್ದರೂ ಅವುಗಳಿಂದ ಜನರು ಪ್ರಭಾವಿತರಾಗಿಲ್ಲ. ಜಾನುವಾರುಗಳಿಗೆ ಮೇವಿನ ಬೆಲೆ ಏರಿಕೆಯಿಂದಾಗಿ ಹೈನುಗಾರಿಕೆಯಿಂದ ಲಾಭ ಕಡಿಮೆಯಾಗುತ್ತಿದೆ. ಜೊತೆಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತುಷ್ಟು ಕಂಗೆಡಿಸುತ್ತಿದೆ. ಇದು ಆಡಳಿತಾರೂಢ ಬಿಜೆಪಿ ವಿರುದ್ಧದ ಅಸಮಾಧಾನವನ್ನು ಹೆಚ್ಚಿಸಿದೆ. ಹೀಗಾಗಿ, ಬಿಜೆಪಿಗೆ ನೆಲೆಯಿಲ್ಲದ ಜಿಲ್ಲೆಯಲ್ಲಿ ನಂದಿನಿ ವರ್ಸಸ್ ಅಮುಲ್ ಚುನಾವಣಾ ವಿಷಯವಲ್ಲ ಎಂದು ಸ್ಥಳೀಯರೇ ಹೇಳುತ್ತಿದ್ದಾರೆ.
ಪ್ರಸ್ತುತ ಚುನಾವಣೆಯು ಹೆಚ್ಚಾಗಿ ಕಾಂಗ್ರೆಸ್ – ಜೆಡಿಎಸ್ ನಡುವಿನ ಆಟವಾಗಿದೆ. ಕೋಲಾರದಲ್ಲಿ ಈ ಎರಡು ಪಕ್ಷಗಳನ್ನು ಮಣಿಸಿ, ಬಿಜೆಪಿ ಮುಂದೆ ಬರುವುದು ಅಷ್ಟು ಸುಲಭದ ಕೆಲಸವಲ್ಲವೆಂದು ಮತದಾರರೇ ಹೇಳುತ್ತಿದ್ದಾರೆ.