ನೂರರ ನೆನಪು | ನಗೆರಾಜ ನರಸಿಂಹರಾಜು ಅಜರಾಮರ

Date:

Advertisements
ಜುಲೈ 24, ಕನ್ನಡದ ಅಸಲಿ ಹಾಸ್ಯನಟ ನರಸಿಂಹರಾಜು ಜನ್ಮದಿನ. ಬದುಕಿದ್ದರೆ, ನೂರು ವರ್ಷ ತುಂಬುತ್ತಿತ್ತು. ಇನ್ನೂರಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳಲ್ಲಿ ನಟಿಸಿದ, ಪ್ರತಿ ಪಾತ್ರಗಳಿಗೂ ಜೀವತುಂಬಿದ ಅಭಿಜಾತ ಕಲಾವಿದ. ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ ನರಸಿಂಹರಾಜು ಎಂದಾಕ್ಷಣ ಕಿರುನಗೆಯೊಂದನ್ನು ಮೂಡಿಸುವ ನಗೆರಾಜ. ಕನ್ನಡಿಗರ ಎದೆಯಲ್ಲಿ ಅಜರಾಮರ…

‘ಯಾರು ಯಾರು ನೀ ಯಾರು,
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಯಾರು ಬರರು
ಬಂದವರು ಬದುಕಲಾರ್ರು’

-ಇದು ನರಸಿಂಹರಾಜು ಮತ್ತು ಎಂ.ಎನ್. ಲಕ್ಷ್ಮಿದೇವಿಯವರ ಜೋಡಿಗಾಗಿ ಕಣಗಾಲ್ ಪ್ರಭಾಕರಶಾಸ್ತ್ರಿಯವರು ರಚಿಸಿದ ಹಾಡು, 1957ರಲ್ಲಿ ಬಿ.ಆರ್. ಪಂತುಲು ನಿರ್ಮಿಸಿ, ನಿರ್ದೇಶಿಸಿದ ‘ರತ್ನಗಿರಿ ರಹಸ್ಯ’ ಚಿತ್ರದ್ದು. ಈ ಹಾಡೊಂದೇ ಅಲ್ಲ, ಇಂತಹ ನೂರಾರು ಹಾಡುಗಳಿಗೆ ಕುಣಿದಿದ್ದಾರೆ, ಪ್ರೇಕ್ಷಕರನ್ನು ಕುಣಿಸಿದ್ದಾರೆ.

ಅರವತ್ತು-ಎಪ್ಪತ್ತರ ದಶಕದ, ಆ ಕಾಲದ ಕಪ್ಪು ಬಿಳುಪಿನ ಚಿತ್ರಗಳಲ್ಲಿ ನರಸಿಂಹರಾಜು ಅವರಿಗಾಗಿಯೇ ಹಾಡುಗಳು ರಚಿಸಲ್ಪಡುತ್ತಿದ್ದವು. ಅವರಿಗಾಗಿಯೇ ಹಾಸ್ಯದ ಟ್ರ್ಯಾಕ್‌ಗಳನ್ನು ವಿಶೇಷವಾಗಿ ರೂಪಿಸಲಾಗುತ್ತಿತ್ತು. ಆ ಕಾಲದ ಚಿತ್ರಗಳಲ್ಲಿ, ಚಿತ್ರಗಳ ಯಶಸ್ಸಿನಲ್ಲಿ ನರಸಿಂಹರಾಜು ಅವರ ಪಾಲು ಮಹತ್ವದ ಪಾತ್ರ ವಹಿಸಿತ್ತು. ಅದು ಗೊತ್ತಿದ್ದ ಪಂತುಲು, ಅವರ ಚಿತ್ರಗಳಲ್ಲಿ ನರಸಿಂಹರಾಜು ಶಾಶ್ವತ ನಗೆನಟರಾಗಿ ಇದ್ದೇ ಇರಬೇಕೆಂಬ ಅಲಿಖಿತ ಒಪ್ಪಂದವನ್ನು ಮಾಡಿಕೊಂಡಿದ್ದರು. ಹಾಗಾಗಿಯೇ ನರಸಿಂಹರಾಜು, ರಾಜಕುಮಾರ್ ಅವರೊಂದಿಗೆ ನಟಿಸಿದ ಚಿತ್ರಗಳು ಯಶಸ್ವಿ ಚಿತ್ರಗಳಾದವು. ಅವರ ಜೋಡಿ ಜನಪ್ರಿಯ ಜೋಡಿಯಾಗಿ ದಾಖಲೆ ಬರೆಯಿತು.

Advertisements

ರಾಜಕುಮಾರ್ ಅಷ್ಟೇ ಅಲ್ಲ, ಉದಯಕುಮಾರ್, ಕಲ್ಯಾಣಕುಮಾರ್, ರಾಜೇಶ್, ಗಂಗಾಧರ್, ಉಮೇಶ್- ಎಲ್ಲರೊಂದಿಗೂ ನಟಿಸಿದ್ದಾರೆ. ಹಾಗೆಯೇ ಮುಂದುವರೆದು ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ನರಸಿಂಹರಾಜು ಅವರ ಚಿತ್ರಬದುಕಿನಲ್ಲಿ 60ರ ದಶಕ ಸುವರ್ಣಯುಗವೆಂದೇ ಹೇಳಬೇಕು. ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಯಶಸ್ವಿ ಚಿತ್ರಗಳನ್ನು ನೀಡಿದ್ದು, ವೃತ್ತಿಬದುಕಿನ ಉತ್ತುಂಗ ತಲುಪಿದ್ದು ಆಗಲೇ.

ಆಗಿನ ಕಾಲದಲ್ಲಿ, ಮದ್ರಾಸು ಚಿತ್ರ ತಯಾರಿಕೆಯ ಕೇಂದ್ರಸ್ಥಳವಾಗಿತ್ತು. ಕನ್ನಡ ಚಿತ್ರರಂಗ ದುಃಸ್ಥಿತಿಯಲ್ಲಿದ್ದಾಗ, ತಮಿಳು-ತೆಲುಗು ಚಿತ್ರಗಳ ಚಿತ್ರೀಕರಣವಾದ ನಂತರ, ಅದೇ ಸೆಟ್‌ಗಳನ್ನು ಬಳಸಿಕೊಂಡು ರಾತ್ರಿ ವೇಳೆ ಚಿತ್ರೀಕರಣ ನಡೆಸಲಾಗುತ್ತಿತ್ತು. ಅಂತಹ ಸಮಯದಲ್ಲಿ ಕನ್ನಡದ ಕಲಾವಿದರಿಗೆ ಸಿಗುತ್ತಿದ್ದ ಸಂಭಾವನೆ ಬಹಳ ಕಡಿಮೆ ಮೊತ್ತವಾಗಿತ್ತು. ಆದರೆ ನರಸಿಂಹರಾಜು ವಿಷಯದಲ್ಲಿ ಅದು ಬೇರೆಯಾಗಿತ್ತು. ನರಸಿಂಹರಾಜು ಅವರಿಗೆ ಒಂದು ಚಿತ್ರಕ್ಕೆ 500 ರೂಪಾಯಿಯಿಂದ 15 ಸಾವಿರದವರೆಗೆ ಸಂಭಾವನೆ ಸಿಗುತ್ತಿತ್ತು. ಕೆಲವೊಂದು ಸಲ ನಾಯಕನಟನಿಗಿಂತ ಮೊದಲು ಹಾಸ್ಯನಟ ನರಸಿಂಹರಾಜು ಅವರನ್ನು ಬುಕ್ ಮಾಡಲಾಗುತ್ತಿತ್ತು. ಇಡೀ ಚಿತ್ರದ ಕತೆ, ಸಂಭಾಷಣೆಗೆ ಕೊಡುವಷ್ಟೇ ಆದ್ಯತೆಯನ್ನು ನರಸಿಂಹರಾಜು ಅವರಿಗೂ ಕೊಡಲಾಗುತ್ತಿತ್ತು. ನಾಯಕ ನಟ-ನಟಿಗೆ ಮೂರು ಹಾಡುಗಳಿದ್ದರೆ, ಹಾಸ್ಯನಟ ನರಸಿಂಹರಾಜುಗೂ ಮೂರು ಹಾಡುಗಳು ಕಡ್ಡಾಯವಾಗಿರುತ್ತಿದ್ದವು.

ಇದನ್ನು ಓದಿದ್ದೀರಾ?: ಯೋಗಿ ಎಂಬ ಬಿಸಿತುಪ್ಪ; ಮೋದಿ- ಶಾ ಉಗುಳಿದರೆ ಕಷ್ಟ, ನುಂಗಿದರೂ ನಷ್ಟ

ನರಸಿಂಹರಾಜು ಅವರಿಗೆ ಪಾಪಮ್ಮ, ಮೈನಾವತಿ, ರಮಾದೇವಿ, ಲಕ್ಷ್ಮಿದೇವಿ, ಕುಳ್ಳಿ ಜಯ ಅವರುಗಳು ಪರ್ಮನೆಂಟ್ ಜೋಡಿಯಾಗಿ ಚಿತ್ರದುದ್ದಕ್ಕೂ ಸಾಥ್ ನೀಡುತ್ತಿದ್ದರು. ಮತ್ತು ಆ ಜೋಡಿಗಳು ಜನಪ್ರಿಯ ಜೋಡಿಗಳಾಗಿ ಜನಮನದಲ್ಲಿ ಮನೆ ಮಾಡಿದ್ದವು. ಇನ್ನು ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೆ, ನರಸಿಂಹರಾಜು ಇಲ್ಲದ ಸಿನಿಮಾವನ್ನು ಆಗ ವಿತರಕರು ಖರೀದಿಸಲು ಮುಂದೆ ಬರುತ್ತಿರಲಿಲ್ಲ. ಅದಕ್ಕಾಗಿ ಚಿತ್ರವೆಲ್ಲ ಮುಗಿದ ಮೇಲೆ ನರಸಿಂಹರಾಜು ಅವರನ್ನು ಹಾಕಿಕೊಂಡು ಪ್ರತ್ಯೇಕವಾಗಿ ಚಿತ್ರೀಕರಣ ಮಾಡಿ ಸೇರ್ಪಡೆಗೊಳಿಸಿದ ಉದಾಹರಣೆಗಳೂ ಉಂಟು.

ಇದು ಸಾಮಾನ್ಯ ಸಂಗತಿಯಲ್ಲ. ಒಬ್ಬ ಸಾಮಾನ್ಯ ಹಾಸ್ಯನಟನ ಅಸಾಮಾನ್ಯ ಸಾಧನೆ.

ನರಸಿಂಹರಾಜು ನಟಿಸಿದ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ಆಯಾಯ ಕಾಲಘಟ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದವು. ಸಂದೇಶ ಸಾರುವ, ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ, ಅಭಿರುಚಿ, ಮನರಂಜನೆಯನ್ನು ಮುಖ್ಯವಾಗಿಟ್ಟುಕೊಂಡು ತಯಾರಿಸಿದ ಚಿತ್ರಗಳಾಗಿದ್ದವು. ಆ ಚಿತ್ರಗಳಲ್ಲಿ ನರಸಿಂಹರಾಜು ಅವರ ಶುದ್ಧ ಹಾಸ್ಯವಿರುತ್ತಿತ್ತು. ಮನೆಮಂದಿಯೆಲ್ಲ ಕೂತು ನೋಡುವಂತಹ ಚಿತ್ರಗಳಾಗಿದ್ದವು. ಅಂತಹ ಚಿತ್ರಗಳೆಂದರೆ ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ, ಲಗ್ನಪತ್ರಿಕೆ, ಸಂಧ್ಯಾರಾಗ, ರತ್ನಗಿರಿರಹಸ್ಯ, ಬೀದಿಬಸವಣ್ಣ, ಚಿನ್ನಾರಿ ಪುಟ್ಟಣ್ಣ, ದೇವರು ಕೊಟ್ಟ ತಂಗಿ, ಗಂಗೆಗೌರಿ, ದುಡ್ಡೇ ದೊಡ್ಡಪ್ಪ, ಗಂಡೊಂದು ಹೆಣ್ಣಾರು, ಭೂಪತಿರಂಗ, ಭಾಗ್ಯದೇವತೆ, ಶ್ರೀಕೃಷ್ಣದೇವರಾಯ, ನ್ಯಾಯವೇ ದೇವರು, ಜೇಡರಬಲೆ, ಹಸಿರುತೋರಣ, ಬೇಡರಕಣ್ಣಪ್ಪ, ಸತ್ಯಹರಿಶ್ಚಂದ್ರ, ಗುಂಡಾಜೋಯಿಸ, ತೆನಾಲಿರಾಮ- ಹೆಸರು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ.

ಹೀಗೆ ಇನ್ನೂರಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳು, ಪಾತ್ರಗಳು ಚಿತ್ರ ರಸಿಕರ ಮನ ಗೆದ್ದಿವೆ. ತಾವು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಆಯಾ ಪಾತ್ರಗಳಿಗೆ ಜೀವತುಂಬಿ ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ ನರಸಿಂಹರಾಜು ಎಂದಾಕ್ಷಣ ಕಿರುನಗೆಯೊಂದನ್ನು ಮೂಡಿಸುವ ನಗೆರಾಜರಾಗಿ ಅಜರಾಮರರಾಗಿದ್ದಾರೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X