ಬಿಜೆಪಿ ದಲಿತ ಸಮುದಾಯದ ಛಲವಾದಿ ನಾರಾಯಣ ಸ್ವಾಮಿಯವರನ್ನು ವಿಪಕ್ಷ ನಾಯಕರನ್ನಾಗಿಸಿದೆ. ಸಿಕ್ಕ ಈ ಅಪೂರ್ವ ಅವಕಾಶವನ್ನು ನಾರಾಯಣ ಸ್ವಾಮಿಯವರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ರಾಜಕೀಯ ಭವಿಷ್ಯ, ವ್ಯಕ್ತಿತ್ವ ರೂಪುಗೊಳ್ಳಲಿದೆ. ತಮ್ಮನ್ನು ಪೊರೆದ ದಲಿತ ಸಮುದಾಯಕ್ಕೆ ಶಕ್ತಿ ತುಂಬುತ್ತಾರೋ ಅಥವಾ ಅವಕಾಶ ಕಲ್ಪಿಸಿದ ಪಕ್ಷಕ್ಕೆ ನಡುಬಗ್ಗಿಸಿ, ನಮಸ್ತೆ ಸದಾ ವತ್ಸಲೆ ಎನ್ನುತ್ತಾರೋ?
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿಯು ಛಲವಾದಿ ನಾರಾಯಣ ಸ್ವಾಮಿ ಅವರನ್ನು ಆಯ್ಕೆ ಮಾಡಿದೆ. ಅವರು ಅಧಿಕಾರ ವಹಿಸಿಕೊಂಡಿದ್ದೂ ಆಗಿದೆ. ಪಕ್ಷ ಯಾವುದೇ ಆಗಿರಲಿ, ದಮನಿತ ಸಮುದಾಯಗಳಿಂದ ಬಂದ ನಾಯಕರನ್ನು ಗುರುತಿಸುವುದು, ಅವಕಾಶ ಕಲ್ಪಿಸುವುದು, ಅಧಿಕಾರದ ಸ್ಥಾನಗಳಲ್ಲಿ ಕೂರಿಸುವುದು ಸಂವಿಧಾನಕ್ಕೆ ಸಲ್ಲಿಸುವ ಗೌರವ. ಹಾಗೆಯೇ ಕೂತವರು, ಕೂತ ಕುರ್ಚಿಯ ಗೌರವವನ್ನು ಕಾಪಾಡುವುದು ಮತ್ತು ಸಂಸದೀಯ ನಡವಳಿಕೆಗಳನ್ನು ಅರಿತು ವರ್ತಿಸುವುದು ಸಂವಿಧಾನ ಸಲ್ಲಿಸುವ ಗೌರವ ಕೂಡ.
ಈ ಹಿಂದೆ ಮೇಲ್ಮನೆಯ ವಿರೋಧ ಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದಾಗಿ, ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ವಿಪಕ್ಷ ನಾಯಕನ ಸ್ಥಾನ ಖಾಲಿಯಾಗಿತ್ತು. ಖಾಲಿ ಇದ್ದ ಸ್ಥಾನಕ್ಕೆ ಬಿಜೆಪಿಯ ಸಿ.ಟಿ. ರವಿ ಮತ್ತು ರವಿಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿದ್ದರು. ಒಬ್ಬರು ಒಕ್ಕಲಿಗರಾಗಿದ್ದರೆ, ಮತ್ತೊಬ್ಬರು ಬೆಸ್ತ ಸಮುದಾಯಕ್ಕೆ ಸೇರಿದವರಾಗಿದ್ದರು.
ಕೆಳಮನೆಯಲ್ಲಿ ವಿಪಕ್ಷ ನಾಯಕರಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರ್. ಅಶೋಕ್ ಇರುವುದರಿಂದ, ಮತ್ತೆ ಅದೇ ಸಮುದಾಯಕ್ಕೆ ಮೇಲ್ಮನೆಯಲ್ಲೂ ಅವಕಾಶ ಕಲ್ಪಿಸುವುದು, ಪಕ್ಷದ ಮೇಲೆ ಪರಿಣಾಮ ಬೀರುತ್ತದೆಂಬ ಚರ್ಚೆ ಬಿಜೆಪಿಯಲ್ಲಿತ್ತು. ಹಾಗಾಗಿ ಸಿ.ಟಿ. ರವಿಯವರಿಗೆ ಆ ಸ್ಥಾನ ಸಿಗುವುದು ಕಷ್ಟ ಎಂಬುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು. ಆದರೆ, ರವಿ ಲೆಕ್ಕಾಚಾರ ಬೇರೆಯೇ ಇತ್ತು. ಈಗ ಪ್ರಯತ್ನಿಸುವುದು, ಸಿಗದಿದ್ದರೆ ಮುಂದಕ್ಕೆ, ಹಕ್ಕೊತ್ತಾಯಕ್ಕೆ ಅನುಕೂಲವಾಗುತ್ತದೆಂಬ ದೂರಾಲೋಚನೆ ಅಲ್ಲಿತ್ತು. ಹಾಗೆಯೇ ಬೆಸ್ತ ಸಮುದಾಯಕ್ಕೆ ಸೇರಿದ, ಸದನದ ಒಳಗೆ ಮತ್ತು ಹೊರಗೆ ಪಕ್ಷವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದ; ಪ್ರತಿಭಟನೆ ಮತ್ತು ಪ್ರಶ್ನೆಗಳಿಂದ ಆಡಳಿತಾರೂಢ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ರವಿಕುಮಾರ್, ಆಗುವುದರಲ್ಲಿ ಅನುಮಾನವಿಲ್ಲ ಎಂಬ ಮಾತಿತ್ತು.
ಆದರೆ, ಇಬ್ಬರನ್ನೂ ಹಿಂದಕ್ಕೆ ತಳ್ಳಿ, ಅಚ್ಚರಿಯ ಆಯ್ಕೆ ಎಂಬಂತೆ ಛಲವಾದಿ ನಾರಾಯಣ ಸ್ವಾಮಿಯವರನ್ನು ಬಿಜೆಪಿ ಆಯ್ಕೆ ಮಾಡಿದೆ. ಇದು ಬಿಜೆಪಿಯ ಜಾಣ ನಿರ್ಧಾರ ಹಾಗೂ ಪುಟ್ಟ ಸಮುದಾಯಗಳನ್ನು ಕಡೆಗಣಿಸಿದ ನಡೆಯಾಗಿಯೇ ಕಾಣುತ್ತಿದೆ. ಬೆಸ್ತರು ಸಂಖ್ಯೆಯಲ್ಲಿ ಬಹುಸಂಖ್ಯಾತರಲ್ಲ. ಬಹಳ ದೊಡ್ಡ ಮತಬ್ಯಾಂಕ್ ಎನಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಓಲೈಸದೇ ಇರುವುದು ಬಿಜೆಪಿಗೆ ಸಾಧ್ಯವಿಲ್ಲ.
ಸಾಮಾನ್ಯವಾಗಿ ದಲಿತ ಸಮುದಾಯ ಬಹಳ ಹಿಂದಿನಿಂದಲೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದೆ. ಕಾಂಗ್ರೆಸ್ ಎಂದರೆ ದಲಿತರು ಎನ್ನುವುದು ಇಂದಿರಾ ಗಾಂಧಿ ಕಾಲದಿಂದಲೂ ಚಾಲ್ತಿಯಲ್ಲಿದೆ. ರಾಜ್ಯ ರಾಜಕಾರಣದ ಮಟ್ಟಿಗೆ, ಇದನ್ನು ಮೊದಲ ಬಾರಿಗೆ ಬ್ರೇಕ್ ಮಾಡಿದ್ದು ಬಿಜೆಪಿ. ಅದಕ್ಕೆ ಬಳಸಿದ್ದು ದಲಿತ ಸಮುದಾಯದೊಳಗೇ ಇದ್ದ ಎಡ-ಬಲ ವರ್ಗೀಕರಣ. ಮೊದಲಿನಿಂದಲೂ ಅಧಿಕಾರದ ಅವಕಾಶಗಳಿಂದ ವಂಚಿತವಾಗಿದ್ದ ಎಡ ಸಮುದಾಯವನ್ನು ಬಿಜೆಪಿ ಸೆಳೆಯಿತು. ಆ ಸಮುದಾಯದ ನಾಯಕರನ್ನು ಗುರುತಿಸಿ ರಾಜಕೀಯ ಅವಕಾಶಗಳನ್ನು ಕಲ್ಪಿಸಿತು. ಇದರಿಂದ ದಲಿತ ಎಡ ಸಮುದಾಯದ ಕೆಲ ನಾಯಕರು ಅಂಬೇಡ್ಕರ್ ವಾದ, ತತ್ವ-ಸಿದ್ಧಾಂತಗಳನ್ನು ಬದಿಗಿಟ್ಟು ಬಿಜೆಪಿಯೊಂದಿಗೆ ಗುರುತಿಸಿಕೊಂಡರು. ಆದರೂ ಎಡ-ಬಲ ಸಮುದಾಯ ಕಾಂಗ್ರೆಸ್‌ನೊಂದಿಗೆ ಇವತ್ತಿಗೂ ಉಳಿದಿದೆ.
ಈಗ ದಲಿತ ಸಮುದಾಯದ ಬಲ ಗುಂಪಿಗೆ ಸೇರಿದ ಛಲವಾದಿ ನಾರಾಯಣ ಸ್ವಾಮಿಯವರನ್ನು ವಿಧಾನ ಪರಿಷತ್ತಿನ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ, ಬಿಜೆಪಿ ಬಲ ಪಂಗಡಕ್ಕೂ ಕೈಹಾಕಿದೆ. ಆದರೆ ನಾರಾಯಣ ಸ್ವಾಮಿ ಬಲ ಪಂಗಡವನ್ನು ಬಿಜೆಪಿಯತ್ತ ಸೆಳೆಯಬಲ್ಲ ವರ್ಚಸ್ವಿ ನಾಯಕರ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಯಾರೀ ಛಲವಾದಿ?
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ನಂದಗುಡಿಯವರು. ಮೊದಲಿಗೆ ಸುಬ್ರಮಣ್ಯಸ್ವಾಮಿಯವರ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡವರು. ಸ್ವಾಮಿ ಕೇಂದ್ರ ಮಂತ್ರಿಯಾಗಿದ್ದಾಗ, ಅವರ ಹಿಂದೆ-ಮುಂದೆ ಓಡಾಡಿಕೊಂಡಿದ್ದ ನಾರಾಯಣ ಸ್ವಾಮಿ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದರು. ಆನಂತರ ಜನತಾ ಪಕ್ಷದ ನಾಯಕ ಎಚ್.ಡಿ. ದೇವೇಗೌಡರೊಂದಿಗೆ ಮಾತಾಡಿ, ಯಲಹಂಕ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಪ್ರಯತ್ನಿಸಿ, ಸುಮ್ಮನಾಗಿದ್ದರು.
ಇದನ್ನು ಓದಿದ್ದೀರಾ?: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆ ಹೇಳುವುದೇನು? ತೊಡಕುಗಳೇಕೆ?
1993-94ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು, ಕಾಂಗ್ರೆಸ್ ತೊರೆದು ಕರ್ನಾಟಕ ಕಾಂಗ್ರೆಸ್ ಪಕ್ಷ(ಕೆಸಿಪಿ) ಸ್ಥಾಪಿಸಿದಾಗ, ಆ ಪಕ್ಷಕ್ಕೆ ಸೇರಿ ಬಂಗಾರಪ್ಪನವರ ಹಿಂಬಾಲಕರಾದರು. ಬಂಗಾರಪ್ಪನವರು ಮತ್ತೆ ಕಾಂಗ್ರೆಸ್ ಪಕ್ಷ ಸೇರಿದಾಗ, ಅವರೊಂದಿಗೆ ನಾರಾಯಣ ಸ್ವಾಮಿ ಕೂಡ ಕಾಂಗ್ರೆಸ್ ಪಕ್ಷ ಸೇರಿದರು. ಅಲ್ಲಿಂದ ಮುಂದಕ್ಕೆ ಅವರು ಕಾಂಗ್ರೆಸ್‌ನಲ್ಲಿ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆಯವರ ಗುಂಪಿನಲ್ಲಿ ಕಾಣಿಸಿಕೊಳ್ಳತೊಡಗಿದರು. ಪಕ್ಷದಲ್ಲಿ ತಳವೂರುತ್ತಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಎದ್ದ ಎಡ-ಬಲ ವರ್ಗೀಕರಣ ಹೋರಾಟದಲ್ಲಿ, ಮಾಜಿ ಸಚಿವ ಎಚ್.ಆಂಜನೇಯರೊಂದಿಗೆ ಜಟಾಪಟಿಗೆ ನಿಂತರು. ಆ ಜಟಾಪಟಿಯ ನಂತರ ಅವರಿಗೆ ಛಲವಾದಿ ಎಂಬ ಹೆಸರು ಚಾಲ್ತಿಗೆ ಬಂತು. ಮುಂದಕ್ಕೆ ಅದು ಹೆಸರಿನೊಂದಿಗೆ ಅಂಟಿಕೊಂಡಿತು.
ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯಕರ್ತನಾಗಿ ದುಡಿದ ಛಲವಾದಿ ನಾರಾಯಣ ಸ್ವಾಮಿ, ಪ್ರತಿ ಚುನಾವಣೆ ಎದುರಾದಾಗಲೂ ಮೀಸಲು ಕ್ಷೇತ್ರಗಳಾದ ದೇವನಹಳ್ಳಿ, ಶಾಂತಿನಗರ, ಸಿ.ವಿ. ರಾಮನ್ ನಗರದಿಂದ ಸ್ಪರ್ಧಿಸಲು ಪ್ರಯತ್ನಿಸುವುದು, ಟಿಕೆಟ್ ಸಿಗದೆ ನಿರಾಶೆಗೊಳ್ಳುವುದು ನಡೆದೇ ಇತ್ತು. ಅಂತಹ ಸಂದರ್ಭಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರು, ಅವರಿಗೆ ಅರಣ್ಯ ನಿಗಮದ ಅಧ್ಯಕ್ಷ ಮತ್ತು ಕೇಂದ್ರ ರೇಲ್ವೇ ಸಲಹಾ ಸಮಿತಿ ಸದಸ್ಯನಂತಹ ಅಧಿಕಾರದ ಸ್ಥಾನಗಳನ್ನು ಕಲ್ಪಿಸುತ್ತಿದ್ದರು. ಆದರೆ ಅಷ್ಟಕ್ಕೇ ತೃಪ್ತರಾಗದ ನಾರಾಯಣ ಸ್ವಾಮಿಯವರು, 2018ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದರು. ಬಿಜೆಪಿ ಸೇರುವಾಗ, ‘ಕಾಂಗ್ರೆಸ್ ಜೈಲಿದ್ದಂತೆ, ನಾನು 40 ವರ್ಷ ಜೈಲಿನಲ್ಲಿ ಇದ್ದಂತಿದ್ದೆ. ದಾರಿ ತಪ್ಪಿ ಹೋಗಿ ಕಾಂಗ್ರೆಸ್ ಸೇರಿದ್ದೆ, ಅದು ಸುಡುವ ಮನೆ ಅಂತ ನಂತರ ಗೊತ್ತಾಯಿತು’ ಎಂದು ಟೀಕಿಸಿದ್ದರು.
ಮೇಲ್ಜಾತಿಗಳ ಪಕ್ಷ ಎಂದು ಬ್ರಾಂಡ್ ಆಗಿದ್ದ ಬಿಜೆಪಿಗೆ ದಲಿತರು- ಅದರಲ್ಲೂ ಬಲ ಪಂಗಡಕ್ಕೆ ಸೇರಿದ ನಾಯಕರ ಅಗತ್ಯವಿತ್ತು. ಪಕ್ಷಕ್ಕೆ ಬರುತ್ತಿದ್ದಂತೆ ನಾರಾಯಣ ಸ್ವಾಮಿಯವರನ್ನು ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರನ್ನಾಗಿಸಲಾಯಿತು. ಆನಂತರ 2022ರಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿತು. ಈಗ, ಎರಡು ವರ್ಷಗಳ ಅಂತರದಲ್ಲಿ, ವಿಧಾನ ಪರಿಷತ್ತಿನ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಇದು ಪಕ್ಷಗಳ ಆಯ್ಕೆಗೆ ಸಂಬಂಧಿಸಿದ ವಿಚಾರ. ಆದರೆ ಆಯ್ಕೆಯಾದ ನಂತರ, ಪಕ್ಷವನ್ನೂ ಮೀರಿ ನಾಡು ಮೆಚ್ಚುವ, ಸ್ಮರಿಸಿಕೊಳ್ಳುವ ಕೆಲಸಗಳ ಮೂಲಕ, ಅವರು ನಿಜನಾಯಕರಾಗಿ ಜನಮಾನಸದಲ್ಲಿ ಉಳಿಯಬೇಕಾಗುತ್ತದೆ. ಏಕೆಂದರೆ, ನಾರಾಯಣ ಸ್ವಾಮಿಯವರು ಇಲ್ಲಿಯವರೆಗೆ ಪಕ್ಷದದ ನಾಯಕರ ಪರವಾಗಿ ಹೋರಾಟ ಮಾಡಿದರು ಮತ್ತು ಅವರ ಅನುಕೂಲಕ್ಕೆ ಬಳಕೆಯಾದರು. ಜಾತಿಯನ್ನು ಟ್ರಂಪ್ ಕಾರ್ಡ್‌ನಂತೆ ಬಳಸಿ, ಬೆಳೆದರೂ, ಆ ಸಮುದಾಯಕ್ಕೆ ಇವರಿಂದ ಏನು ಸಂದಾಯವಾಯಿತು ಎನ್ನುವುದನ್ನು ಕೂತು ಯೋಚಿಸುವ ಅಗತ್ಯವಿದೆ. ಹಾಗಾಗಿ ಅವರು ಈಗ ಕೂರುವ ಕುರ್ಚಿಯ ವಿಶೇಷತೆ, ಘನತೆ ಮತ್ತು ಇತಿಹಾಸಗಳನ್ನು ಅರಿತು ವರ್ತಿಸುವ ಅಗತ್ಯವಿದೆ.
ಪರಿಷತ್ತಿನ ಪರಂಪರೆಯತ್ತ ನೋಡುವುದಾದರೆ, ವಿಶಿಷ್ಟ ಸಂಸದೀಯ ಪಟುಗಳಾದ ರಾಮಕೃಷ್ಣ ಹೆಗಡೆ ಮತ್ತು ಎ.ಕೆ. ಸುಬ್ಬಯ್ಯನವರು 1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು. ದಲಿತ ಸಮುದಾಯದಿಂದ ಬಂದ ಟಿ.ಎನ್.ನರಸಿಂಹಮೂರ್ತಿ, ಎರಡು ಅವಧಿಗೆ(1983 ಮತ್ತು 88) ವಿಪಕ್ಷ ನಾಯಕರಾಗಿ, ಆ ಸ್ಥಾನಕ್ಕೊಂದು ಘನತೆ ತಂದಿದ್ದರು. 70ರ ದಶಕದಲ್ಲಿ ಸಾಮಾಜಿಕ ನ್ಯಾಯದ ದಿಕ್ಕನ್ನೇ ಬದಲಿಸಿದ ಹಿಂದುಳಿದ ವರ್ಗಗಳ ಆಯೋಗದ ವರದಿ ಕೊಟ್ಟ ಎಲ್.ಜಿ. ಹಾವನೂರ್ ಪರಿಷತ್ ಸದಸ್ಯರಾಗಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿದ್ದ ಕವಿ ಸಿದ್ಧಲಿಂಗಯ್ಯ ‘ಅಜಲು ಪದ್ಧತಿ’ಯಂಥ ಶೋಷಣೆಯನ್ನು ಪರಿಷತ್ತಿನಲ್ಲಿ ಚರ್ಚಿಸಿ, ಅದು ನಿಷೇಧವಾಗಲು ಕಾರಣರಾಗಿದ್ದರು. ದಿಟ್ಟ ರಾಜಕಾರಣಿಗಳಾದ ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ ಪರಿಷತ್ತಿನಲ್ಲಿ ಒಂದು ಕಾಲಕ್ಕೆ ಎತ್ತುತ್ತಿದ್ದ ಗಂಭೀರ ಪ್ರಶ್ನೆಗಳು ಸರ್ಕಾರಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದ್ದವು. ಎಂ.ಆರ್. ತಂಗಾ, ಡಿ.ಎಚ್. ಶಂಕರಮೂರ್ತಿ, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಎಚ್.ಕೆ. ಪಾಟೀಲ್, ಎಲ್.ಹನುಮಂತಯ್ಯ, ವೈ.ಎಸ್.ವಿ. ದತ್ತ, ಬಿ.ಕೆ. ಚಂದ್ರಶೇಖರ್, ಬಿ.ಟಿ. ಲಲಿತಾನಾಯಕ್, ಮೋಟಮ್ಮ, ಉಗ್ರಪ್ಪ, ಬಿ.ಕೆ. ಹರಿಪ್ರಸಾದ್ ಕೂಡ ಆ ಪರಂಪರೆಯನ್ನು ಮುಂದುವರೆಸಿದ ಉದಾಹರಣೆಗಳಿವೆ.
ಇದನ್ನು ಓದಿದ್ದೀರಾ?: ಬಜೆಟ್ ವಿಶ್ಲೇಷಣೆ | ನವ ಉದಾರೀಕರಣದ ಮುನ್ನಡೆ, ಜನ ಕಲ್ಯಾಣ ಯೋಜನೆಗಳ ಹಿನ್ನಡೆ
ಪ್ರಜ್ಞಾವಂತರ ಸದನವೆಂಬ ಹಿರಿಮೆಗೆ ಪಾತ್ರವಾದ ಮೇಲ್ಮನೆ ಇರುವುದೇ ಸಮಾಲೋಚಿಸಲು, ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು. ಸಮಸ್ಯೆಗಳ ಆಳ-ಅಗಲವನ್ನು ಅಧ್ಯಯನ ಮಾಡಿ ಚರ್ಚೆಗಳಿಗೆ ಹೊಸ ದಿಕ್ಕು ಕೊಡಲು. ಸಮಾಜದ ಓರೆಕೋರೆಗಳನ್ನು ಎತ್ತಿ ತೋರಲು ಮತ್ತು ಸರ್ಕಾರದ ನೀತಿ–ನಿಲುವುಗಳನ್ನು ನಿಕಷಕ್ಕೆ ಒಡ್ಡಲು. ಮೇಲ್ಮನೆಯ ಶಾಸಕರ ಬೌದ್ಧಿಕ ಸಿದ್ಧತೆ, ನಿಲುವು ಹಾಗೂ ಸ್ಪಷ್ಟತೆ ಹೊಸ ಚರ್ಚೆಗಳಿಗೆ ಕಾರಣವಾಗುತ್ತಿದುದ್ದನ್ನು ಈ ನಾಡು ಈ ಹಿಂದೆ ಕಂಡಿದೆ.
ಸದ್ಯದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸದನದಲ್ಲಿ ತಮ್ಮ ಪಕ್ಷದ ನಡೆಯನ್ನು ಸಮರ್ಥಿಸಿಕೊಳ್ಳಲು ಕೂಗಾಡುವವರು, ಕಿರುಚಾಡುವವರು ಮತ್ತು ತೊಡೆ ತಟ್ಟುವವರನ್ನು ಮೇಲ್ಮನೆಗೆ ಆಯ್ಕೆ ಮಾಡುತ್ತಿವೆ. ಅದರಲ್ಲೂ ಸಾಹಿತಿಗಳು, ಕಲಾವಿದರು ಮತ್ತು ಚಿಂತಕರು ಮರೆಯಾಗಿ, ಅವರ ಜಾಗದಲ್ಲಿ ಹಣವಂತರು ಆಸೀನರಾಗುತ್ತಿದ್ದಾರೆ.
ಇವುಗಳ ನಡುವೆಯೇ, ಬಿಜೆಪಿ ದಲಿತ ಸಮುದಾಯದ ಛಲವಾದಿ ನಾರಾಯಣ ಸ್ವಾಮಿಯವರನ್ನು ವಿಪಕ್ಷ ನಾಯಕರನ್ನಾಗಿಸಿದೆ. ಸಿಕ್ಕ ಈ ಅಪೂರ್ವ ಅವಕಾಶವನ್ನು ನಾರಾಯಣ ಸ್ವಾಮಿಯವರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ರಾಜಕೀಯ ಭವಿಷ್ಯ, ವ್ಯಕ್ತಿತ್ವ ರೂಪುಗೊಳ್ಳಲಿದೆ. ತಮ್ಮನ್ನು ಪೊರೆದ ದಲಿತ ಸಮುದಾಯಕ್ಕೆ ಶಕ್ತಿ ತುಂಬುತ್ತಾರೋ ಅಥವಾ ಅವಕಾಶ ಕಲ್ಪಿಸಿದ ಪಕ್ಷಕ್ಕೆ ನಡುಬಗ್ಗಿಸಿ, ನಮಸ್ತೆ ಸದಾ ವತ್ಸಲೆ ಎನ್ನುತ್ತಾರೋ ಕಾದು ನೋಡಬೇಕು.

ಲೇಖಕ, ಪತ್ರಕರ್ತ
ಪಕ್ಷಕ್ಕೆ ನಡುಬಗ್ಗಿಸಿ ನಮಸ್ತೆ ಸದಾವತ್ಸಲೆ,,,,ಯಾವಾಗಲೋ ಹೇಳಿ ಆಗಿದೆ,, ಇವರಿಗೆ ವಿರೋಧಪಕ್ಷದ ನಾಯಕ ಸ್ಥಾನ ಕೊಟ್ಟಿರುವ ಹಿಂದಿನ ರಹಸ್ಯ,, ಬಹುಶಃ ಕಾಂಗ್ರೆಸ್ ಪಕ್ಷದ ಮತ್ತು ಸರ್ಕಾರದಲ್ಲಿ ಇರುವ ದಲಿತರು ಹಿಂದುಳಿದವರು ಸಚಿವರಿಗೆ ಅದೇ ವರ್ಗದ ವ್ಯಕ್ತಿಯಿಂದ ಪ್ರತಿರೋಧ ಒಡ್ಡುವ ತಂತ್ರಗಾರಿಕೆ ಅಷ್ಟೇ,,, ನಿಮ್ಮದೇ ಕಣ್ಣು ನಿಮ್ಮದೇ ಬೆರಳು ಚುಚ್ಚಿಕೊಳ್ಳಲು ಆದೇಶ ಮಾತ್ರ ಮನುವ್ಯಾದಿಗಳದ್ದು,,,ಬೆಳ್ಳಿ ಸಂಕೋಲೆ ಅಷ್ಟೇ