ಸುಮಾರು 30 ಕಿ.ಮೀ. ದೂರದ ಹೋಬಳಿ ಕೇಂದ್ರದಲ್ಲಿ ರೈತ ಸಂಪರ್ಕ ಕೇಂದ್ರ ಇರುವ ಕಾರಣ ರೈತರು ಬಿತ್ತನೆ ಬೀಜ ವಿತರಣೆ ಸೇರಿದಂತೆ ಇತರ ಕೆಲಸಗಳಿಗೆ ರೈತರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಆನ್ವರಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ಆರಂಭಿಸಬೇಕೆಂದು ರೈತರ ಒತ್ತಾಯವಾಗಿದೆ.
ಲಿಂಗಸಗೂರು ತಾಲೂಕಿನ ಹೋಬಳಿ ಕೇಂದ್ರವಾದ ಗುರುಗುಂಟಾದಲ್ಲಿ ರೈತ ಸಂಪರ್ಕ ಕೇಂದ್ರವಿದೆ, ಸುತ್ತಲಿನ 40 ಗ್ರಾಮಗಳು ಇದೇ ವ್ಯಾಪ್ತಿಗೆ ಬರುತ್ತವೆ. 40 ಹಳ್ಳಿಗಳ ರೈತರು ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಇತರ ಕೃಷಿ ಕೆಲಸ ಕಾರ್ಯಗಳಿಗೆ ಆದರೆ 30 ಕಿ.ಮೀ. ದೂರ ಪ್ರಯಾಣಿಸಬೇಕು. ಇನ್ನು ಮಳೆಯಾದರೆ ಮನೆಗೆ ವಾಪಸ್ಸಾಗಬೇಕಾದ ಪರಿಸ್ಥಿತಿ ಇದೆ
ರಾಜ್ಯದ ಬಹುತೇಕ ಕಡೆ ಹೋಬಳಿ ಕೇಂದ್ರಕ್ಕೊಂದು ರೈತ ಸಂಪರ್ಕ ಕೇಂದ್ರಗಳಿವೆ. ಕೆಲವೆಡೆ ಹತ್ತಾರು ಕಿ.ಮೀ. ದೂರದಲ್ಲಿ ರೈತ ಸಂಪರ್ಕ ಕೇಂದ್ರಗಳಿರುವ ಕಾರಣ ದೂರದಿಂದ ಬರುವ ಹಳ್ಳಿಗಳ ರೈತರು ಸರಕಾರದ ಯೋಜನೆಗಳು ಸಕಾಲಕ್ಕೆ ಪಡೆಯಲು ಸಾಧ್ಯವಾಗದೆ ವಂಚಿತರಾಗುತ್ತಿದ್ದಾರೆ.
ಆನ್ವರಿ ಗ್ರಾಮದಿಂದ ಗುರುಗುಂಟ ಹೋಬಳಿ ಕೇಂದ್ರಕ್ಕೆ ತೆರಳಬೇಕಾದರೆ ಹಟ್ಟಿ, ಯರಡೋಣ, ಮಾರ್ಗ ಅಥವಾ ಹಟ್ಟಿ, ಕೋಠಾ ಮಾರ್ಗವಾಗಿ ಗಂಟೆಗಟ್ಟಲೇ ಪ್ರಯಾಣಿಸಬೇಕು. ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವೂ ಇಲ್ಲದ ಕಾರಣ ಬಾಡಿಗೆ ವಾಹನದಲ್ಲಿ ತೆರಳಬೇಕು. ನಲವತ್ತು ಹಳ್ಳಿಗಳಿಗೆ ಒಂದೇ ರೈತ ಸಂಪರ್ಕ ಕೇಂದ್ರ ಆಗಿರುವುದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೂ ನೂರಾರು ಜನ ಸಾಲುಗಟ್ಟಿ ನಿಲ್ಲುತ್ತಾರೆ. ಸಣ್ಣ ಕೆಲಸವಿದ್ದರೂ ಇಡೀ ದಿನ ಕಾಯಬೇಕಾದ ಪರಿಸ್ಥಿತಿ ಇದೆ. ಈ ಭಾಗದ ರೈತರು ಇದನ್ನು ಕಳೆದ ಇಪ್ಪತ್ತು ವರ್ಷಗಳಿಂದ ಅನುಭವಿಸುತ್ತಿದ್ದೇವೆ ಎಂಬುದು ರೈತರ ಅಭಿಪ್ರಾಯ.
ಆನ್ವರಿ ಗ್ರಾಮದ ಹಿರಿಯ ಮುಖಂಡ ಬಸವರಾಜಪ್ಪ ಜೀರಾಳ ಮಾತನಾಡಿ, ʼನಮ್ಮೂರಿಂದ ಗುರುಗುಂಟ ಹೋಬಳಿಗೆ ಹೋಗುವಷ್ಟರಲ್ಲಿ ಮಧ್ಯಾಹ್ನ ಆಗುತ್ತದೆ. ಸಾಲು ನಿಂತು ಸುಸ್ತಾದ ವೇಳೆಗೆ ಕೇಂದ್ರದ ಅವಧಿ ಮುಕ್ತಾಯಗೊಂಡು ಸಂಜೆಯಾಗುತ್ತದೆ, ಹೀಗಾಗಿ ಕೆಲಸಕ್ಕೆ ಬಂದವರು ತಿರುಗಿ ವಾಪಸ್ಸಾಗಬೇಕು. ಇದರಿಂದ ಕೃಷಿ ಸಾಮಾಗ್ರಿಗಳು ದುಬಾರಿ ಬೆಲೆಗೆ ಖಾಸಗಿ ಅಂಗಡಿಗಳಲ್ಲಿ ಖರೀದಿಸಬೇಕಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕ, ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಆಶ್ವಾಸನೆ ಮಾತ್ರ ನೀಡುತ್ತಾರೆʼ ಎಂದರು .
ʼನಮ್ಮೂರಿನ ರೈತರಿಗೆ ರೈತ ಸಂಪರ್ಕ ಅನುಕೂಲ ಇಲ್ಲದ ಕಾರಣ ಸರ್ಕಾರದ ರಿಯಾಯಿತಿ ದರದ ಕೃಷಿ ಸಾಮಾಗ್ರಿ ಸೇರಿ ಯಾವುದೇ ಯೋಜನೆ ನಮತೆ ತಲುಪುತ್ತಿಲ್ಲ. ಎರಡು ಪಟ್ಟು ದುಬಾರಿ ಬೆಲೆಗೆ ಖಾಸಗಿ ಅಂಗಡಿಗಳಲ್ಲಿ ಖರೀದಿಸಿ ಆರ್ಥಿಕ ನಷ್ಟಕ್ಕೆ ಸಿಲುಕುತ್ತಿದ್ದೇವೆ. ರೈತಪರ ಸರ್ಕಾರವೆಂದು ಎಲ್ಲ ಪಕ್ಷದವರು ಹೇಳುತ್ತಾರೆ, ಆದರೆ, ರೈತರ ಸಂಕಷ್ಟಗಳಿಗೆ ಮಾತ್ರ ಯಾರೊಬ್ಬರೂ ಸ್ಪಂದಿಸುವುದಿಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡ ಸಾಹಿತ್ಯ ಸಮ್ಮೇಳನ ಪಾರದರ್ಶಕವಾಗಿರಲಿ: ಎನ್ ಚಲುವರಾಯಸ್ವಾಮಿ
ʼಆನ್ವರಿ ಸೇರಿ ಸುತ್ತಲಿನ 10-12 ಹಳ್ಳಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್ವರಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಲಾಗಿದೆ. ಈಗಲಾದರೂ ನಮ್ಮ ಸಂಕಷ್ಟ ಅರಿತು ಜನಪ್ರತಿನಿಧಿಗಳು ಸ್ಪಂದಿಸಿ ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನ್ವರಿ ಗ್ರಾಮ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದುʼ ರೈತ ಮುಖಂಡ ಜಿಲಾನಿ ಪಾಶಾ ಎಚ್ಚರಿಸಿದರು.
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್