ರೈಲ್ವೆ ಖಾಸಗೀಕರಣ ಪ್ರಯಾಣಿಕರನ್ನು ಬೆಂಕಿಗೆ ತಳ್ಳಿದೆ. ಕೋಟ್ಯಂತರ ವಿದ್ಯಾವಂತ ಯುವಜನರು ನಿರುದ್ಯೋಗಿಗಳಾಗಿರುವಾಗ, ಕೇಂದ್ರ ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಮತ್ತು ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಏಕೆ ಹಿಂಜರಿಯುತ್ತಿದೆ ಎಂದು ಎಐಡಿಐಒ ಧಾರವಾಡ ಜಿಲ್ಲಾ ಸಮಿತಿ ಪ್ರಶ್ನಿಸಿದೆ.
ರೈಲ್ವೆ ಖಾಸಗೀಕರಣ ನಿಲ್ಲಿಸುವಂತೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಐಡಿಐಒ ಧಾರವಾಡ ಜಿಲ್ಲಾ ಸಮಿತಿಯಿಂದ ಆಗಸ್ಟ್ 10ರಂದು ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿದರು.
“ಭಾರತೀಯ ರೈಲ್ವೆಯು ಸಂಪೂರ್ಣ ವಿನಾಶದತ್ತ ಸಾಗುತ್ತಿದೆ. ಜನಸಾಮಾನ್ಯರ ಬೃಹತ್ ಪ್ರಮಾಣದ ತೆರಿಗೆ ಹಣದಿಂದ ಕಟ್ಟಲಾದ ಭಾರತೀಯ ರೈಲ್ವೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೈಗೊಂಡ ಕ್ರಮಗಳಿಂದ ಪ್ರತಿ ವರ್ಷವೂ ಇದು ತೀವ್ರಗೊಳ್ಳುತ್ತಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿವೆ” ಎಂದು ಸಂಘಟಕರು ತಿಳಿಸಿದರು.
“ರೈಲ್ವೆಯಲ್ಲಿ 3.5 ಲಕ್ಷ ಮಂದಿ ಸಿಬ್ಬಂದಿ ಕೊರತೆಯಿದೆ. ಜೂನ್ 2023ರ ಅಂಕಿಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 1.57 ಲಕ್ಷ ಹುದ್ದೆಗಳು ಖಾಲಿ ಇವೆ. 2019ರಿಂದ 2023ರವರೆಗೆ ಒಟ್ಟು 162 ರೈಲು ಅಪಘಾತಗಳು, 118 ಹಳಿತಪ್ಪುವಿಕೆಗಳು ಮತ್ತು 16 ಒಂದಕ್ಕೊಂದು ಡಿಕ್ಕಿ ಅಪಘಾತಗಳು ಸಂಭವಿಸಿವೆ” ಎಂದರು.
“ಕೋಟ್ಯಂತರ ವಿದ್ಯಾವಂತ ಯುವಜನರು ನಿರುದ್ಯೋಗಿಗಳಾಗಿರುವಾಗ, ಕೇಂದ್ರ ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಮತ್ತು ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಏಕೆ ಹಿಂಜರಿಯುತ್ತಿದೆ?” ಎಂದರು.
“ಉಲ್ಬಣಗೊಳ್ಳುತ್ತಿರುವ ನಿರುದ್ಯೋಗದಿಂದಾಗಿ, ದೇಶದ ಮೂಲೆ ಮೂಲೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ವಲಸೆ ಕಾರ್ಮಿಕರು, ಅಂಗಡಿಗಳು, ಹೋಟೆಲ್ಗಳು, ಸಣ್ಣ ಕಾರ್ಖಾನೆಗಳು ಮತ್ತು ಕೃಷಿಯಲ್ಲಿಯೂ ಕೂಡಾ ಅವರನ್ನು ಹಗ್ಗದ ಕೂಲಿ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ. ಇಂತಹ ವಲಸೆ ಕಾರ್ಮಿಕರೇ ಇಂದು ದೂರ ಪ್ರಯಾಣದ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸುಗಮ ಸಂಚಾರಕ್ಕೆ ಜೆಸಿಬಿ ಕಾರ್ಯಾಚರಣೆ; ಅಂಗಡಿಗಳ ತೆರವು
“ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ನಿಲ್ಲಿಸಬೇಕು. ಎಲ್ಲ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಮತ್ತು ರೈಲ್ವೆ ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ರೈಲುಗಳಲ್ಲಿ ಕಾಯ್ದಿರಿಸದ ಮತ್ತು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ಗಳನ್ನು ಹೆಚ್ಚಿಸಬೇಕು. ತತ್ಕಾಲ್ ಪ್ರೀಮಿಯಂ ಸುಲಿಗೆಯನ್ನು ಕೊನೆಗೊಳಿಸಬೇಕು. ಟಿಕೆಟ್ಗಳ ಮೇಲಿನ ರದ್ದತಿ ಶುಲ್ಕಗಳನ್ನು ತೆಗೆದುಹಾಕಬೇಕು” ಎಂದು ಆಗ್ರಹಿಸಿದರು.
ಭವಾನಿ ಶಂಕರ್ ಗೌಡ, ರಣಜಿತ್ ಧೂಪದ, ಪ್ರೀತಿ ಸಿಂಗಾಡಿ, ಸಿಮೋನ್ ಸೂರ್ಯವಂಶಿ, ಮಹೇಶ್, ಮಂಜುನಾಥ್ ಇದ್ದರು.