ವಿಜಯಪುರ ನಗರದಲ್ಲಿ ಆಗಸ್ಟ್ 8ರಂದು ನಡೆದಿದ್ದ ವಕೀಲನ ಸಾವು ಅಪಘಾತದಿಂದ ಆದ್ದದ್ದಲ್ಲ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚಿನಿಂದ ನಡೆಸಿದ ಹತ್ಯೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದಲ್ಲಿ ಐವರನ್ನು ಬಂಧಿಸಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಇತರರ ಪತ್ತೆಗೆ ಜಾಲ ಬೀಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಾಣೆ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಗರದಲ್ಲಿ ಆಗಸ್ಟ್ 8ರಂದು ಸಂಜೆ 5-30ರ ಸುಮಾರಿಗೆ ನಡೆದಿದ್ದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿ ಸಿಲುಕಿ ಸುಮಾರು ಎರಡೂವರೆ ಕಿಮೀ ದೂರಕ್ಕೆ ಎಳೆದೊಯ್ದ ಘಟನೆಯಲ್ಲಿ ನಗರದ ಯುವವಕೀಲ ರವಿ ಮೇಲಿನಕೇರಿ ಮೃತಪಟ್ಟಿದ್ದ” ಎಂದು ತಿಳಿಸಿದರು.
“ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಇದು ಅಪಘಾತದಿಂದ ಆಗಿರುವ ಸಾವಲ್ಲ, ಬೆಚ್ಚಿಬೀಳುವಂತ ಸಂಚು ರೂಪಿಸಿ ಹತ್ಯೆ ನಡೆಸಿದ್ದಾರೆಂಬುದು ತಿಳಿದುಬಂದಿದೆ. ಪ್ರಕರಣಕ್ಕೆ ಕುರಿತಂತೆ ಲಭ್ಯವಾದ ಸುಳಿವುಗಳನ್ನು ಆಧರಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ” ಎಂದರು.
“ಬಂಧಿತರನ್ನು ತುಳಸಿರಾಮ ಹರಿಜನ, ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಎಲ್ಲರೂ ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ. ಎಲ್ಲರ ಮೇಲೂ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹತ್ಯೆ, ಹತ್ಯೆ ಯತ್ನ, ದರೋಡೆ, ಜೀವ ಬೆದರಿಕೆಯಂಥ ಪ್ರಕರಣ ದಾಖಲಾಗಿವೆ.
“ಬಂಧಿತ ಆರೋಪಿಗಳು ಇತರರೊಂದಿಗೆ ಸೇರಿ ವಕೀಲ ರವಿ ಕೋರ್ಟ್ ನಿಂದ ಮನೆಗೆ ಹೊರಟಿದ್ದಾಗ ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ವಾಹನದಲ್ಲಿ ಬಂದು ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಬಳಿಕ ಸುಮಾರು ಎರಡೂವರೆ ಕಿ.ಮೀ. ವರೆಗೆ ರವಿಯನ್ನು ರಸ್ತೆಯಲ್ಲೇ ಎಳೆದೊಯ್ದ ಕಾರಣ ರವಿ ಸ್ಥಳದಲ್ಲೇ ಮೃತಪಟ್ಟಿದ್ದ” ಎಂದು ಮಾಹಿತಿ ನೀಡಿದರು.
“ವಕೀಲ ರವಿ ತನ್ನ ಸಹೋದರರ ಜೊತೆ ಸೇರಿ ಸುಮಾರು 4-5 ತಿಂಗಳ ಹಿಂದೆ ತುಳಸಿರಾಮ ಹರಿಜನ ಎಂಬವನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಲ್ಲದೇ ಸುಮಾರು 20 ದಿನಗಳ ಹಿಂದೆ ಇದೇ ಅಲೆಕ್ಸ್ ಗೊಲ್ಲರ ಎಂಬವನನ್ನು ಅಪಹರಿಸಿ, ಹತ್ಯೆ ಮಾಡುವ ಬೆದರಿಕೆ ಹಾಕಿದ್ದ. ಇದರಿಂದ ದ್ವೇಷ ಸಾಧಿಸುತ್ತಿದ್ದ ಈ ಹತ್ಯೆ ಸಂಚಿನ ಸೂತ್ರದಾರ ತುಳಸಿರಾಮ. ತನ್ನ ಸ್ನೇಹಿತರಾದ ಪ್ರಕರಣದ ಬಂಧಿತ ಆರೋಪಿಗಳೊಂದಿಗೆ ಸೇರಿ ಅಪಘಾತ ಎಂಬಂತೆ ಬಿಂಬಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ” ಎಂದು ಎಸ್‌ಪಿ ವಿವರಿಸಿದರು.
“ಹತ್ಯೆಗೆ ಬಳಸಿರುವ ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರು ಕೂಡ ಜೂಜಾಟದಲ್ಲಿ 1 ಲಕ್ಷ ರೂ.ಗೆ ಸಚಿನ್ ಎಂಬವನಿಂದ ಆರೋಪಿಗಳು ಕಿತ್ತುಕೊಂಡಿದ್ದ ಕಾರು ಎಂಬುದು ಪತ್ತೆಯಾಗಿದೆ. ಇದಲ್ಲದೇ ವಕೀಲ ರವಿ ಕೋರ್ಟ್‍ನಿಂದ ಮನೆಗೆ ಮರಳುವ ಕುರಿತು ನಿಗಾ ಇರಿಸಿ ಮಾಹಿತಿ ನೀಡಲು ಇಬ್ಬರು ಬೈಕ್‍ನಲ್ಲಿ ತಿರುಗುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ.
ಪ್ರಾಥಮಿಕ ಹಂತದ ತನಿಖೆಯಲ್ಲಿ ಇಡೀ ಪ್ರಕರಣದಲ್ಲಿ ಇನ್ನೂ ಕೆಲವರು ಈ ಸಂಚಿನಲ್ಲಿ ಪಾಲ್ಗೊಂಡಿರುವ ಮಾಹಿತಿ ಇದೆ. ಅವರೆಲ್ಲ ತಲೆ ಮರೆಸಿಕೊಂಡಿದ್ದಾರೆ. ಇಡೀ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸತ್ತ ಮೇಲೆ ದೇಹವನ್ನು ಮಣ್ಣು ಮಾಡುವ ಬದಲು ದಾನ ಮಾಡಿ: ಶ್ರೀಧರ್
“ಹೀಗಾಗಿ ಡಿಎಸ್‌ಪಿ ಬಸವರಾಜ ಎಲಿಗಾರ ನೇತೃತ್ವದಲ್ಲಿದ್ದ ಗೋಲಗುಂಬಜ್ ಸಿಪಿಐ ಮಹಾಂತೇಶ ಮಠಪತಿ, ಗಾಂಧಿಚೌಕ ಠಾಣೆ ಸಿಪಿಐ ಪ್ರದೀಪ ತಳಕೇರಿ ಹಾಗೂ ತಂಡದ ಪೊಲೀಸರ ಕಾರ್ಯಕ್ಕೆ ಬಹುಮಾನ ಘೋಷಿಸಲಾಗಿದೆ. ಸ್ವಾತಂತ್ರ್ಯೋತ್ಸವ ದಿನದಂದು ನಡೆಯುವ ಪರೇಡ್ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು” ಎಂದು ಹೇಳಿದರು.
ಎಎಸ್‌ಪಿ ಶಂಕರ ಮಾರಿಹಾಳ, ಡಿಎಸ್‌ಪಿ ಬಸವರಾಜ ಎಲಿಗಾರ, ಸಿಪಿಐ ಪ್ರದೀಪ ತಳಕೇರಿ ಇದ್ದರು.
