“ಮನುಷ್ಯನ ದೇಹವನ್ನು ಸತ್ತ ನಂತರ ಬೆಂಕಿಯಲ್ಲಿ ಸುಟ್ಟು ಇಲ್ಲವೇ ತನ್ನ ದೇಹವನ್ನು ಮಣ್ಣಿನಲ್ಲಿ ಹೂತು ನಾಶ ಮಾಡಬೇಡಿ. ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು ಸಲುವಾಗಿ ವೈದ್ಯಕೀಯ ಸಂಸ್ಥೆಗಳಿಗೆ ತಮ್ಮ ದೇಹವನ್ನು ಸತ್ತ ನಂತರದಲ್ಲಿ ದಾನ ಮಾಡಿ” ಎಂದು ಶ್ರೀಧರ್ ಹಳೆಬೀಡು ತಿಳಿಸಿದರು.
ಅವರು ಶ್ರೀರಂಗಪಟ್ಟಣದ ರಾಂಪಾಲ್ ರಸ್ತೆಯಲ್ಲಿರುವ ಶ್ರೀರಂಗ ಡಯಾಗ್ನೋಸ್ಟಿಕ್ ವತಿಯಿಂದ ವಿಶ್ವ ಅಂಗಾಂಗ ದಾನ ದಿನವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಶ್ರೀಧರ್ ಮಾತನಾಡಿ, “ಅನ್ನ ದಾನದಂತೆ ದೇಹ ದಾನ ಮಾಡುವುದು ಕೂಡ ಶ್ರೇಷ್ಠದಾನ” ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ತಮ್ಮ ದೇಹವನ್ನು ದಾನ ಮಾಡಲು ನೋಂದಣಿ ಮಾಡಿರುವ ಯೋಗ ಶಿಕ್ಷಕರಾದ ಕೆ ಶೆಟ್ಟಹಳ್ಳಿ ಅಪ್ಪಾಜಿಗೆ, ವೆಂಕಟೇಗೌಡ ಸೇವಾ ಸಮಿತಿಯ ಅಧ್ಯಕ್ಷರಾದಂತಹ ಡಾ.ಕೆ. ವೈ. ಶ್ರೀನಿವಾಸ್ ಹಾಗೂ ಸಮರ್ಪಣಾ ಟ್ರಸ್ಟ್ ಅಧ್ಯಕ್ಷರಾದ ಶ್ರೀಜೈಶಂಕರ್ ಅವರಿಂದ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಡಾ.ಕೆ. ವೈ. ಶ್ರೀನಿವಾಸ್, “ನಮ್ಮ ಸ್ನೇಹಿತರಾದ ಅಪ್ಪಾಜಿ ತಮ್ಮ ಹಾಗೂ ಶ್ರೀಮತಿಯವರ ದೇಹವನ್ನು ದಾನ ಮಾಡಿದ್ದಾರೆ. ದೇಹದಾನ ಮಾಡುವುದು ಮುಖ್ಯ ಅಲ್ಲ. ನೋಂದಣಿ ಮಾಡಿರುತ್ತಾರೆ, ಆಸ್ಪತ್ರೆಯವರು ಪ್ರಮಾಣಪತ್ರ ಕೊಟ್ಟಿರುತ್ತಾರೆ. ವ್ಯಕ್ತಿ ತೀರಿ ಹೋದ ಮೇಲೆ ಮನೆಯವರು ಒಪ್ಪಿ, ದೇಹವನ್ನು ಆಸ್ಪತ್ರೆಗೆ ಕೊಡುವುದು ಮುಖ್ಯ. ಅವರ ಮಕ್ಕಳು ಇದಕ್ಕೆ ಒಪ್ಪಿರುತ್ತಾರೆ ಎಂದು ಭಾವಿಸುತ್ತೇನೆ” ಎಂದರು.
“ಮೆಡಿಕಲ್ ವಿದ್ಯಾರ್ಥಿಗಳಿಗೆ ಅಂಗಾಂಗಗಳ ಅಧ್ಯಯನ ಮಾಡಲು ದೇಹಗಳ ಅಲಭ್ಯತೆ ಇದೆ. ಚಿತ್ರಪಟಗಳನ್ನು ಮಾತ್ರ ತೋರಿಸಿ ಕಲಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದು ಕಲಿಕೆಗೆ ಹಿನ್ನಡೆ. ಅರೆಬರೆ ಕಲಿಯುವುದರಿಂದ ರೋಗಿಗಳ ಆರೋಗ್ಯದ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ನಾವೆಲ್ಲರೂ ದೇಹ ದಾನ ಮಾಡಬೇಕು. ಇದಕ್ಕಾಗಿ ನಾನು ಕೂಡ ದೇಹ ದಾನ ಮಾಡಬೇಕೆಂದು ತೀರ್ಮಾನಿಸಿದ್ದೇನೆ” ಎಂದು ಚಿಕ್ಕತಮ್ಮೇಗೌಡ ತಿಳಿಸಿದರು.
ಸಾಹಿತಿಗಳಾದ ಶಿವಕುಮಾರ್, ಡಾ. ಕೆ. ವೈ. ಶ್ರೀನಿವಾಸ್, ಜೈ ಶಂಕರ್, ಪೂಜಾ ಶ್ರೀಧರ್ ಇತರರು ಉಪಸ್ಥಿತರಿದ್ದರು.