ಮೊಳಕೆಯೊಡೆದಿದ್ದ ರಾಗಿ ಪೈರಿನ ಮೇಲೆಯೇ ಉಳುಮೆ ಮಾಡಿ ಕ್ರೌರ್ಯ ಮೆರೆದಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಎ.ಕೆ ಕಾವಲ್ ವ್ಯಾಪ್ತಿಗೆ ಒಳಪಡುವ ಸರ್ವೆ ನಂ. 599ರಲ್ಲಿ ರಾಮಾಂಜಿನಯ್ಯ ಹಾಗೂ ರಾಧಾಕೃಷ್ಣ ಅವರಿಗೆ ಸೇರಿದ ಜಮೀನಿನಲ್ಲಿ ಬಿತ್ತನೆ ಮಾಡಿರುವ 4.24 ಗುಂಟೆ ಜಮೀನಿನಲ್ಲಿ ಕಾಲು ಎಕರೆಯಷ್ಟು ರಾಗಿ ಪೈರು ಬೆಳೆಯನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ.
ಇತ್ತೀಚೆಗೆ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಫಸಲಿಗೆ ಬಂದಿದ್ದ ಅಡಿಕೆ ಮತ್ತು ತೆಂಗು ಸಸಿಗಳನ್ನು ನಾಶ ಮಾಡಿದ್ದ ಪ್ರಕರಣ ಜೋರು ಸದ್ದು ಮಾಡಿತ್ತು. ಆ ಘಟನೆ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಂಗಳ ತಲುಪಿದೆ.
ಜಮೀನು ವಿವಾದ ದಾಯಾದಿಗಳಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳುವಂತೆ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ತಿ ವಿಚಾರದಲ್ಲಿ ತೊಂದರೆ ನೀಡುತ್ತಿರುವ ಪದ್ಮನಾಭ ಬಿನ್ ರಾಜಗೋಪಾಲ್ ಅವರ ವಿರುದ್ಧ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಾಲಯದಿಂದ ತಡೆಯಾಜ್ಞೆ ದೊರೆತ ಕಾರಣ ರಾಗಿ ಬಿತ್ತನೆಗೆ ಮುಂದಾದಾಗ, ಪದ್ಮನಾಭ ಎನ್ನುವ ವ್ಯಕ್ತಿ ಮತ್ತೆ ಕೃಷಿ ಕಾರ್ಯಗಳಿಗೆ ತೊಡಕುಂಟು ಮಾಡಿದ್ದಾರೆ. ಈ ವಿಚಾರವನ್ನು ಉಲ್ಲೇಖಿಸಿ ಗ್ರಾಮಾಂತರ ಠಾಣೆಗೆ ಮತ್ತೊಮ್ಮೆ ದೂರು ನೀಡಲಾಗಿತ್ತು. ಆಗ ಪಿಎಸ್‌ಐ ಅನುಪಸ್ಥಿತಿಯಲ್ಲಿ ಎಎಸ್‌ಐ ಅವರು ಪದ್ಮನಾಭನ್ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ರಾಗಿ ಮೊಳಕೆ ಹೊಡೆಯುವವರೆಗೂ ಕಾದು, ಈಗ ಟ್ರ‍್ಯಾಕ್ಟರ್ ತಂದು ಬೆಳೆಯ ಮೇಲೆಯೇ ಉಳುಮೆ ಮಾಡಿ ಹೋಗಿದ್ದಾರೆ ಎಂದು ಸಂತ್ರಸ್ತರಾದ ರಾಮಾಂಜಿನಯ್ಯ ಹಾಗೂ ರಾಧಾಕೃಷ್ಣ ಅವರು ಅಳಲು ತೋಡಿಕೊಂಡಿದ್ದಾರೆ.

ಮೊದಲ ಬಾರಿ ದೂರು ನೀಡಲು ಠಾಣೆಗೆ ಹೋದಾಗ ದೂರನ್ನು ಸ್ವೀಕರಿಸಿದ ಪಿಎಸ್‌ಐ ಅವರು, ಹಿಂಬರಹದಲ್ಲಿ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಉಲ್ಲೇಖಿಸಿದ್ದರಾದರೂ, ಸಂತ್ರಸ್ತರನ್ನೇ ಅಂದರೆ ಪಹಣಿಯಲ್ಲಿ ಹೆಸರಿರುವ ಮಾಲೀಕರನ್ನೇ ದಬಾಯಿಸಿ ಉಳುಮೆ ಮಾಡದಂತೆ ಬೆದರಿಸಿದ್ದರು ಎನ್ನಲಾಗಿದೆ.
‘ಪದ್ಮನಾಭ್ ಅವರಿಗೆ ತೊಂದರೆ ಮಾಡಿದರೆ ನಾನು ಎಂಟ್ರಿ ಆಗುತ್ತೇನೆ. ಆ ನಂತರ ಪರಿಸ್ಥಿತಿ ಚೆನ್ನಾಗಿರಲ್ಲ’ ಎಂದು ದೂರುದಾರರಿಗೇ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ನಂತರ ನ್ಯಾಯಾಲಯದಲ್ಲಿ ಪದ್ಮನಾಭ್ ವಿರುದ್ಧದ ತಡೆಯಾಜ್ಞೆಯನ್ನು ತೆಗೆದುಕೊಂಡು ಠಾಣೆಗೆ ಹೋದಾಗಲೂ ಎಎಸ್‌ಐ ಅವರು ಪದ್ಮನಾಭ್ ಪರವೇ ವಕಾಲತ್ತು ಹಾಕಿ, ತಡೆಯಾಜ್ಞೆಯನ್ನು ಯಾರು ಬೇಕಾದರೂ ತರಬಹುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ. ನಂತರ ದೂರುದಾರರು ಎಎಸ್‌ಪಿ ಅವರ ಗಮನಕ್ಕೆ ತೆಗೆದುಕೊಂಡು ಹೋಗುತ್ತೇವೆಂದು ಹೇಳಿದ ನಂತರ ಕಾಟಾಚಾರಕ್ಕೆ ಜಮೀನಿನತ್ತ ಸುಳಿಯದಂತೆ ಪದ್ಮನಾಭ್ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ದೂರಿದ್ದಾರೆ.
ಪೊಲೀಸರು ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಪದ್ಮನಾಭ್ ಎನ್ನುವ ವ್ಯಕ್ತಿ ರಾಗಿ ಪೈರಿನ ಮೇಲೆಯೆ ಉಳುಮೆ ಮಾಡಿ ಕ್ರೌರ್ಯ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಎಚ್ಚರಿಕೆ ನೀಡಿಯೂ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ನಿಜಕ್ಕೂ ಸುಸ್ಥಿತಿಯಲ್ಲಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ಪೊಲೀಸರು ದುಷ್ಕೃ ತ್ಯಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವುದರಿಂದಲೇ ಅಪಾರಾಧಗಳು ಹೆಚ್ಚುತ್ತಿವೆ. ಕೊನೇ ಗಳಿಗೆ ನ್ಯಾಯಾಲಯದ ಆದೇಶಕ್ಕೂ ಗೌರವ ನೀಡದಿದ್ದರೆ ಅಥವಾ ಆರೋಪಿಗಳಿಗೆ ಖಡಕ್ ಎಚ್ಚರಿಕೆ ನೀಡದಿದ್ದರೆ ಕಾನೂನಿನ ಭಯ ಹೇಗೆ ಬಂದೀತು? ಎಲ್ಲ ಮುಗಿದ ಮೇಲೆ ಪೊಲೀಸರು ಬರುತ್ತಾರೆ ಎಂಬುದು ಸತ್ಯವಾಗುತ್ತದೆ. ಕಾನೂನು ಪರಿಪಾಲನೆ, ನ್ಯಾಯಾಲಯದ ಆದೇಶ ಕಾಪಾಡುವುದು ಪೊಲೀಸರ ಕರ್ತವ್ಯ ಅಲ್ಲವೇ? ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ.
“ಸಾವಿರಾರು ರೂ. ನಷ್ಟವಾಗಿದೆ. ಠಾಣೆಯಲ್ಲಿ ನಮಗೆ ನ್ಯಾಯ ದೊರಕುತ್ತಿಲ್ಲ. ಈಗ ಎಸ್‌ಪಿ ಅಶೋಕ್ ಕೆ ವಿಯವರ ಗಮನಕ್ಕೆ ತೆಗೆದುಕೊಂಡು ಹೋಗಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ಭರವಸೆ ಇದೆ” ಎನ್ನುತ್ತಾರೆ ಜಮೀನಿನ ಮಾಲೀಕ ರಾಮಾಂಜಿನಪ್ಪ.
“ಕೋರ್ಟ್ ಆದೇಶ ಯಾರೇ ಉಲ್ಲಂಘಿಸಿದರೂ ನ್ಯಾಯಾಂಗ ನಿಂದನೆಯಾಗುತ್ತದೆ. ಕೋರ್ಟಿನಿಂದ ರಕ್ಷಣೆ ನೀಡಬೇಕೆಂದು ಆದೇಶ ತಂದರೆ ನಮ್ಮ ಇಲಾಖೆಯ ಮೂಲಕ ರಕ್ಷಣೆ ನೀಡುತ್ತೇವೆ” ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ; ತಿಳಿಯದೆ ಮಣ್ಣು ಸುರಿದ ಜೆಸಿಬಿ; ಮಹಿಳೆ ಸಾವು
“ಕೋರ್ಟ್ ಆದೇಶವನ್ನು ಪಾಲಿಸುವುದು ಅಥವಾ ಚ್ಯುತಿ ಬರದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯ. ಈ ಪ್ರಕರಣ ಕರ್ತವ್ಯ ಲೋಪದಡಿ ಬರುತ್ತದೆ. ಇದನ್ನು ಪೊಲೀಸ್ ದೂರು ಪ್ರಾಧಿಕಾರಕ್ಕೆ ನೀಡಬಹುದು. ಪಹಣಿಯಲ್ಲಿ ವ್ಯಕ್ತಿಯ ಹೆಸರಿದ್ದರೆ ಆತನಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಕಾನೂನಿನಲ್ಲಿದೆ” ಎನ್ನುತ್ತಾರೆ ವಕೀಲ ಕಿಶೋರ್.