ಬಯಲು ಶೌಚಕ್ಕೆ ಹೋದ ಮಹಿಳೆಯ ಮೇಲೆ ಆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕ ಮಣ್ಣು ಸುರಿದಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಗುರುವಾರ ಮುಂಜಾನೆ ದುರ್ಘಟನೆ ಸಂಭವಿಸಿದೆ.
ಮಣ್ಣು ಹಾಕಿದ ಕಾರಣ ಉಸಿರಾಟದ ಸಮಸ್ಯೆಯಿಂದ ಮಹಿಳೆ ಮೃತಪಟ್ಟಿದ್ದು, ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಮಹಿಳೆಯನ್ನು ತಾಯಮ್ಮ(32) ಎಂದು ಗುರುತಿಸಲಾಗಿದೆ.
ನಿವೇಶನ ಸ್ವಚ್ಛಗೊಳಿಸುತ್ತಿದ್ದ ಜೆಸಿಬಿ ಚಾಲಕನಿಂದ ಈ ಅಚಾತುರ್ಯ ನಡೆದಿದೆ. ಬಡಾವಣೆಯಲ್ಲಿದ್ದ ಖಾಲಿ ನಿವೇಶನದಲ್ಲಿ ಗಿಡಗಟಿಗಳು ಬೆಳೆದಿತ್ತು. ಈ ಖಾಲಿ ನಿವೇಶನದಲ್ಲಿ ಕೆಲ ಮಹಿಳೆಯರು ಬಯಲು ಶೌಚಕ್ಕೆ ಹೋಗುತ್ತಿದ್ದರು. ನಿವೇಶನದಲ್ಲಿ ಕಸ ಕಡ್ಡಿ ಬೆಳೆದಿದ್ದನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಈ ದುರ್ಘಟನೆ ನಡೆದಿದೆ.
ಶೌಚಕ್ಕೆಂದು ಮಹಿಳೆ ತೆರಳಿದ್ದ ವೇಳೆಯಲ್ಲಿಯೇ ಜೆಸಿಬಿ ಚಾಲಕ ಮಣ್ಣು ಸುರಿದಿದ್ದಾನೆ. ಹೀಗಾಗಿ, ಮಣ್ಣಿನಡಿ ಸಿಲುಕಿದ ತಾಯಮ್ಮ, ಉಸಿರಾಟದ ಸಮಸ್ಯೆಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಮೃತಪಟ್ಟ ಮಹಿಳೆಗೆ ಮೂರು ಮಕ್ಕಳಿದ್ದು, ಅವರು ತಬ್ಬಲಿಗಳಾಗಿದ್ದಾರೆ.
ಇದನ್ನು ಓದಿದ್ದೀರಾ? ಮುಂದಿನ 5 ವರ್ಷದಲ್ಲೇ ವೈದ್ಯಕೀಯ ಕಾಲೇಜುಗಳಲ್ಲಿ 75,000 ಹೊಸ ಸೀಟುಗಳು: ಪಿಎಂ ನರೇಂದ್ರ ಮೋದಿ
ಘಟನೆಯ ಮಾಹಿತಿ ಪಡೆದ ಕೂಡಲೇ ಜೆಸಿಬಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.