- ಯೋಗಿ ಸರ್ಕಾರಕ್ಕೆ ಅತೀಕ್ ಅಹ್ಮದ್ ಪ್ರಕರಣದಲ್ಲಿ ಸುಪ್ರೀಂ ಪ್ರಶ್ನೆ
- ಮೂರು ವಾರದಲ್ಲಿ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಸೂಚನೆ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಗ್ಯಾಂಗ್ಸ್ಟಾರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಶುಕ್ರವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಕೆಲ ಗಂಭೀರ ಪ್ರಶ್ನೆಗಳನ್ನು ಕೇಳಿದೆ.
ಅತೀಕ್ ಮತ್ತು ಆತನ ಸಹೋದರ ಅಶ್ರಫ್ ಅವರಿದ್ದ ವಾಹನ, ನೇರವಾಗಿ ಆಸ್ಪತ್ರೆಯೊಳಗೆ ತೆರಳಿಲ್ಲ ಯಾಕೆ? ಇಬ್ಬರನ್ನೂ ರಸ್ತೆಯಲ್ಲಿ ಕರೆದೊಯ್ದು ಮಾಧ್ಯಮಗಳ ಮುಂದೆ ನಿಲ್ಲಿಸಿದ್ದೇಕೆ? ಇವರಿಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಕರೆತರುವ ವಿಚಾರ ಹಂತಕರಿಗೆ ತಿಳಿದಿದ್ದೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಯೋಗಿ ಆದಿತ್ಯನಾಥ್ ಸರ್ಕಾರದ ಮುಂದಿಟ್ಟಿದೆ.
ಅತೀಕ್ ಮತ್ತು ಅಶ್ರಫ್ ಹತ್ಯೆ ಕುರಿತ ಸ್ವತಂತ್ರ ತನಿಖೆಗೆ ಕೋರಿ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತ ಅವರಿದ್ದ ಪೀಠ, 3 ವಾರದಲ್ಲಿ ಹತ್ಯೆಯ ಕುರಿತು ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಯುಪಿ ಸರ್ಕಾರಕ್ಕೆ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಇದರ ಜೊತೆಗೆ ಏಪ್ರಿಲ್ 13ರಂದು ಝಾನ್ಸಿಯಲ್ಲಿ ಯುಪಿ ಪೊಲೀಸರಿಂದ ʻಎನ್ಕೌಂಟರ್ʼ ಆಗಿದ್ದ ಅತೀಕ್ ಅಹ್ಮದ್ ಪುತ್ರ ಅಸದ್ ಅಹ್ಮದ್ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಏಪ್ರಿಲ್ 15ರಂದು ರಾತ್ರಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ವೈದ್ಯಕೀಯ ತಪಾಸಣೆಗೆಂದು ಕರೆದೊಯ್ಯುತ್ತಿದ್ದ ವೇಳೆ ಪೊಲೀಸರ ಸಮ್ಮುಖದಲ್ಲೇ ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು, ಗ್ಯಾಂಗ್ಸ್ಟಾರ್-ರಾಜಕಾರಣಿ ಅತೀಕ್ ಮತ್ತು ಆತನ ಸಹೋದರ ಅಶ್ರಫ್ ಮೇಲೆ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಿದ್ದರು.