ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಬಾಯಲ್ಲಿ ಮತ್ತೆ ದೇವರು, ಮತ್ತೆ ಸುದ್ದಿ, ಮತ್ತೆ ಮೌನ!

Date:

Advertisements
ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತರು ಈಗ ಮತ್ತೆ ಮಣಿಪುರದ ಹಿನ್ನೆಲೆಯಲ್ಲಿ 'ದೇವರ' ವಿಚಾರವೆತ್ತಿದ್ದಾರೆ. ಭಾಗವತರ ಮಾತುಗಳು ಬಿಜೆಪಿಗೆ ಬೇಕಾದ ಆತ್ಮಾವಲೋಕನದ ಹಿತವಚನವೇ ಹೊರತು ಜನಪರ ನಿಲುವಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಡುವೆ ಅಭಿಪ್ರಾಯಭೇದ ಇದೆ ಎಂಬುದೆಲ್ಲ ಸುದ್ದಿ ಮಾಧ್ಯಮಗಳು ಸೃಷ್ಟಿಸುವ ಸುಳ್ಳಿನ ಕಂತೆಯೇ ಹೊರತು ನಿಜವಲ್ಲ.

”ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದ್ದಾರೆ.

ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುರುವಾರ ರಾತ್ರಿ ಮಾತನಾಡಿದ ಭಾಗವತ್‌, ”ನಾವು ನಮ್ಮ ಕೆಲಸದ ಮೂಲಕ ಪೂಜ್ಯ ವ್ಯಕ್ತಿಯಾಗಬಹುದು. ಆದರೆ ನಾವು ಆ ಮಟ್ಟವನ್ನು ತಲುಪಿದ್ದೇವೆಯೇ ಎಂಬುದನ್ನು ಇತರರು ನಿರ್ಧರಿಸುತ್ತಾರೆ. ನಮ್ಮಷ್ಟಕ್ಕೆ ನಾವೇ ‘ನಾವು ದೇವರಾಗಿದ್ದೇವೆ’ ಎಂದು ಘೋಷಿಸಿಕೊಳ್ಳಬಾರದು” ಎಂದಿದ್ದಾರೆ.

ಮೋಹನ್ ಭಾಗವತ್ ಹೇಳಿಕೇಳಿ ಆರ್‌ಎಸ್‌ಎಸ್‌ ಮುಖ್ಯಸ್ಥರು. ಹಿಂದುತ್ವ ಪ್ರತಿಪಾದಕರು. ಭಾರತದಲ್ಲಿ ಬ್ರಾಹ್ಮಣ್ಯ ಬದುಕಬೇಕೆಂಬ ಬಯಕೆಯುಳ್ಳವರು. ಅದಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿರುವವರು. ಅವರ ಮಾತುಗಳನ್ನು ದೇಶದ ಸುದ್ದಿ ಮಾಧ್ಯಮಗಳು, ಆಕಾಶದಿಂದ ಉದುರಿದ ಆಣಿಮುತ್ತುಗಳೆಂದು ಭ್ರಮಿಸುತ್ತವೆ. ಆದ್ಯತೆ ನೀಡಿ ಪ್ರಕಟಿಸುತ್ತವೆ. ಮತ್ತು ಆ ಮಾಧ್ಯಮಗಳೇ, ಭಾಗವತರ ಮಾತುಗಳನ್ನು ಪ್ರಧಾನಿ ಮೋದಿಯವರ ವರ್ತನೆ ಕುರಿತು ಪರೋಕ್ಷವಾಗಿ ಮಾಡಿರುವ ಟೀಕೆ, ಎಚ್ಚರಿಕೆ, ಕಡಿವಾಣವೆಂದು ಗ್ರಹಿಸಬೇಕಾಗುತ್ತದೆ ಎಂದು ಅಪ್ಪಣೆ ಕೊಡಿಸುತ್ತವೆ. ಮುಂದುವರೆದು ಮೋದಿ ಮತ್ತು ಆರ್‌ಎಸ್‌ಎಸ್‌ ನಡುವಿನ ಸಂಬಂಧ ಹಿಂದಿನಂತಿಲ್ಲ, ಹಳಸಿಕೊಂಡಿದೆ ಎಂಬ ತೀರ್ಮಾನಕ್ಕೂ ಬರುತ್ತವೆ. ಮತ್ತು ಅದನ್ನೇ ಜನಮಾನಸದಲ್ಲಿ ಬಿತ್ತಲು ಶಕ್ತಿಮೀರಿ ಶ್ರಮಿಸುತ್ತವೆ.

Advertisements

ಆದರೆ, ಪ್ರಧಾನಿ ಮೋದಿಯವರು ಈ ಬಗ್ಗೆ ಬೇಸರ ಮಾಡಿಕೊಳ್ಳುವುದಿಲ್ಲ, ಭಾಗವತರು, ನಾನು ಹೇಳಿದ್ದು ಮೋದಿಗಲ್ಲ ಎಂದು ಸ್ಪಷ್ಟಪಡಿಸುವುದಿಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ, ಮೋದಿ ಮತ್ತು ಭಾಗವತ್- ನಡುವಿನ ಕೆಲ ‘ಆಣಿಮುತ್ತು’ಗಳು ಇಲ್ಲಿವೆ, ಗಮನಿಸಿ.

ಮೇ 23, 2024ರಂದು ಪ್ರಧಾನಿ ಮೋದಿಯವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ನಾನು ಜೈವಿಕವಾಗಿ ಜನಿಸಿಲ್ಲ, ನನ್ನನ್ನು ಪರಮಾತ್ಮನೇ ಕಳುಹಿಸಿದ್ದು, ದೇವರು ತನ್ನ ಕೆಲಸವನ್ನು ನನ್ನ ಮೂಲಕ ಮಾಡಿಸಲು ನನಗೆ ಶಕ್ತಿ, ಸಾಮರ್ಥ್ಯ, ಉದ್ದೇಶವನ್ನು, ಪ್ರೇರಣೆಯನ್ನು ನೀಡಿದ್ದಾನೆ’ ಎಂದಿದ್ದರು.

ಪ್ರಶ್ನೆ ಏನೆಂದರೆ, ಆ ಸಂದರ್ಭದಲ್ಲಿ ದೇಶ ಇನ್ನೂ ಎರಡು ಹಂತಗಳ- ಮೇ 25 ಮತ್ತು ಜೂನ್ 1ರ ಲೋಕಸಭಾ ಚುನಾವಣೆಯ ಮತದಾನ ಬಾಕಿ ಇತ್ತು. ಹಿರಿಯರು, ಬುದ್ಧಿ ಇರುವ ಭಾಗವತರು ಆ ಸಂದರ್ಭದಲ್ಲಿಯೇ ‘ಹಾಗೆಲ್ಲ ಮಾತಾಡಬಾರದು, ಅಪದ್ಧ’ ಎಂಬ ಎಚ್ಚರಿಕೆಯನ್ನು ಕೊಡಲಿಲ್ಲ.

ವಿಪರ್ಯಾಸವೆಂದರೆ, ಜನವರಿ 23, 2024ರಂದು ಇದೇ ಭಾಗವತರು, ಅಯೋಧ್ಯೆಯ ರಾಮ ಪ್ರಾಣ ಪ್ರತಿಷ್ಠಾಪನೆಗೂ ಮುಂಚೆ ಮೋದಿಯವರು ಕೈಗೊಂಡ ಕಠಿಣ ಧಾರ್ಮಿಕ ವ್ರತಾಚರಣೆಗಳನ್ನು ಕುರಿತು ‘ಅವರೊಬ್ಬ ತಪಸ್ವಿ’ ಎಂದು ಹಾಡಿ ಹೊಗಳಿದ್ದರು. ಚುನಾವಣೆಯ ಮುಂಚೆ ತಪಸ್ವಿಯಾಗಿದ್ದವರು, ಚುನಾವಣೆಯ ನಂತರ ತೆಪರೇಸಿಯಾದರೇ?

ಏಪ್ರಿಲ್ 23, 2024ರಂದು ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ಮೋದಿಯವರು, ‘ನಿಮ್ಮ ಮಂಗಳಸೂತ್ರ ಕಿತ್ತು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವವರಿಗೆ ಹಂಚಲಾಗುತ್ತದೆ, ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರು ಮೊದಲ ಹಕ್ಕು ಹೊಂದಿದ್ದಾರೆ’ ಎಂದರು.

ಇದನ್ನು ಓದಿದ್ದೀರಾ?: ಹಬ್ಬದ ವಿಶೇಷ | ಗಣೇಶನ ಆರಾಧಿಸುತ್ತಿದ್ದ ಮುಸ್ಲಿಮ್ ದೊರೆ ಇಬ್ರಾಹಿಂ ಆದಿಲಶಾಹ

ಪ್ರಧಾನಿ ಮೋದಿಯವರ ಈ ಹೇಳಿಕೆ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಗ್ರಹಿಸಿದ ಆರ್‌ಎಸ್‌ಎಸ್‌ನ ಭಾಗವತರು, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ತೆಲಂಗಾಣದಲ್ಲಿ ಮಾತನಾಡುತ್ತಾ, ‘ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂಬುದೆಲ್ಲ ಸುಳ್ಳು. ಆರ್‌ಎಸ್‌ಎಸ್‌ ಯಾವುದೇ ಷರತ್ತುಗಳಿಲ್ಲದೆ ಮೀಸಲಾತಿಯನ್ನು ಬೆಂಬಲಿಸುತ್ತದೆ. ಸಮಾಜದಲ್ಲಿ ಇಂದಿಗೂ ಕೆಲವು ಗುಂಪುಗಳಲ್ಲಿ ತಾರತಮ್ಯಗಳಿವೆ. ಅವರಿಗೆ ಮೀಸಲಾತಿ ಅಗತ್ಯವಾಗಿದೆ’ ಎಂದಿದ್ದರು.

ಅಂದರೆ, ಆರ್‌ಎಸ್‌ಎಸ್‌ ಎಂಬ ಹಿಂದೂಪರ ಸಂಘಟನೆ ಬಿಜೆಪಿಯ ಬೆನ್ನಿಗಿದೆ. ಪ್ರಧಾನಿ ಮೋದಿಯವರು ದ್ವೇಷಾಸೂಯೆ ಬಿತ್ತುವ, ಕೋಮು ಸಂಘರ್ಷಕ್ಕೆ ಈಡುಮಾಡುವ ಮಾತುಗಳನ್ನು ಆಡುತ್ತಾರೆ. ಆ ಮಾತುಗಳು ಉಂಟು ಮಾಡುವ ಪರಿಣಾಮಗಳನ್ನು ನೋಡಿಕೊಂಡು ಸಂಘಪರಿವಾರದ ಮುಖ್ಯಸ್ಥರಾದ ಭಾಗವತರು ತೇಪೆ ಹಾಕುತ್ತಾರೆ. ಸಂದರ್ಭ ನೋಡಿ ಸಮರ್ಥಿಸಿಕೊಳ್ಳುತ್ತಾರೆ. ಹೀಗಿರುವಾಗ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಬಂಧ ಹಳಸಿಕೊಂಡಿರುವುದೆಲ್ಲಿ?

ದೇಶದ ಭಾಗವೇ ಆಗಿರುವ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದರೂ, ಚರ್ಚ್‌ಗಳಿಗೆ ಬೆಂಕಿ ಹಚ್ಚಿದರೂ, ಹಿಂಸಾಚಾರ ಭುಗಿಲೆದ್ದರೂ ‘ಬುದ್ಧಿ’ ಇರುವ ಭಾಗವತರು ಅಕ್ಟೋಬರ್ 24, 2023ರಂದು, ‘ಮಣಿಪುರದಲ್ಲಿ ಹಿಂಸಾಚಾರ ನಡೆದಿಲ್ಲ. ಅದು ಸಂಭವಿಸುವಂತೆ ಮಾಡಲಾಗುತ್ತಿದೆ. ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಮತ್ತು ಜನಾಂಗೀಯ ಪೂರ್ವಗ್ರಹ ಹೊಂದಿರುವವರು ದೇಶದ ಹೆಸರು ಹಾಳು ಮಾಡಲು ಮಾಡುತ್ತಿರುವ ಕೃತ್ಯ’ ಎಂದಿದ್ದರು.

ಅಂದರೆ, ದೇಶ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿತ್ತು. ಬಿಜೆಪಿ ಮತ್ತೊಮ್ಮೆ ಗೆದ್ದು, ಮೋದಿಯವರು ಪ್ರಧಾನಿಯಾಗಬೇಕಿತ್ತು. ಆ ಕಾರಣಕ್ಕಾಗಿ ಆರ್‌ಎಸ್‌ಎಸ್‌ನ ಭಾಗವತರು ಕೇಂದ್ರ ಸರ್ಕಾರ ಮತ್ತು ಮೋದಿಯವರ ಪರ ವಕಾಲತ್ತು ವಹಿಸಿ ಮಣಿಪುರದಲ್ಲಿ ಹಿಂಸಾಚಾರ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಅದೇ ಭಾಗವತರು, ಜೂ.11, 2024ರಂದು, ‘ಕಳೆದ ಒಂದು ವರ್ಷದಿಂದ ಮಣಿಪುರ ಹಿಂಸಾಚಾರದಲ್ಲಿ ಬೆಂದಿದೆ, ಶಾಂತಿಗಾಗಿ ಕಾಯುತ್ತಿದೆ. ಮಣಿಪುರದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರು. ಹೀಗೆ ಹೇಳಿದ ಸಂದರ್ಭದಲ್ಲಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಕುರ್ಚಿಯಲ್ಲಿ ಕೂತಿದ್ದರು. ಭಾಗವತರಲ್ಲಿ ಮಣಿಪುರದ ಬಗ್ಗೆ ಮಾನವೀಯತೆ ಉಕ್ಕಿ ಹರಿಯುತ್ತಿತ್ತು.    

ಇದೆಲ್ಲವೂ ಕಳೆದ ಎಂಟು ತಿಂಗಳಲ್ಲಿ, ಚುನಾವಣೆಗೆ ಮುಂಚೆ ಮತ್ತು ಚುನಾವಣೆಯ ನಂತರ ನಡೆದದ್ದು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಾಡಿದ ಮೊದಲ ಕೆಲಸವೆಂದರೆ, ಕೇಂದ್ರ ಗೃಹ ಸಚಿವಾಲಯ, ಸುಮಾರು 60 ಕಮಾಂಡೋಗಳಿರುವ ಝಡ್ ಪ್ಲಸ್ ಭದ್ರತಾ ತಂಡ ಮೋಹನ್ ಭಾಗವತ್‍‍ರಿಗೆ ಭದ್ರತೆ ಒದಗಿಸಿದ್ದು. 2024ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾದ ನಂತರ, ಆ. 28ರಂದು ಹೆಚ್ಚುವರಿಯಾಗಿ ಸುಧಾರಿತಾ ಭದ್ರತಾ ಸಂಪರ್ಕ(Advanced Security Liaison)ವನ್ನು ಮೋಹನ್ ಭಾಗವತರಿಗೆ ಕೇಂದ್ರ ಸರ್ಕಾರ ಒದಗಿಸಿ, ಅವರ ಕೃಪೆಗೆ ಒಳಗಾಗಿದೆ. ಆದರೆ ಭಾಗವತರು, ನಾನೊಬ್ಬ ಸಾಮಾನ್ಯ, ನನಗೇಕೆ ಈ ಪರಿಯ ಭದ್ರತೆ ಎಂದು ಹೇಳಿದ್ದಾಗಲೀ, ‘ದೇವರು’ ಒದಗಿಸಿದ ಭದ್ರತೆಯನ್ನು ತಿರಸ್ಕರಿಸಿದ್ದಾಗಲೀ ಇಲ್ಲ.

ಆರ್‌ಎಸ್‌ಎಸ್‌ ತಾನು ರಾಜಕೀಯದಿಂದ ಆಚೆಗಿರುವ ಸಂಘಟನೆ ಎಂದು ಹೇಳಿಕೊಳ್ಳುತ್ತದೆಯಾದರೂ ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಅಂಗ ಎಂಬ ಮಾತನ್ನು ಹೊಸದಾಗಿ ಹೇಳಬೇಕಿಲ್ಲ. ಅಲ್ಲದೆ, ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸಿದ್ದು ಮತ್ತು ಒದಗಿಸುತ್ತಿರುವುದು ಆರ್‌ಎಸ್‌ಎಸ್‌ ಎಂಬುದರಲ್ಲಿ ಎರಡು ಮಾತಿಲ್ಲ.

ಭಾಗವತ್ ಅವರ ಮಾತುಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೋರಿದ ‘ಕಳಪೆ ಪ್ರದರ್ಶನ’ದ ವಿಚಾರವಾಗಿ ನಡೆದ ಆತ್ಮಾವಲೋಕನದ ಪ್ರತಿಫಲನವೇ ಹೊರತು ಜನಪರ ನಿಲುವಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಡುವೆ ಅಭಿಪ್ರಾಯಭೇದ ಇದೆ ಎಂಬುದೆಲ್ಲ ಸುದ್ದಿ ಮಾಧ್ಯಮಗಳು ಸೃಷ್ಟಿಸುವ ಸುಳ್ಳಿನ ಕಂತೆಯೇ ಹೊರತು ನಿಜವಲ್ಲ.

bhagwat and modi 1538396167

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತರು ಈಗ ಮತ್ತೆ ಮಣಿಪುರದ ಹಿನ್ನೆಲೆಯಲ್ಲಿ ‘ದೇವರ’ ವಿಚಾರವೆತ್ತಿದ್ದಾರೆ. ಜೊತೆಗೆ ಬಿಜೆಪಿಯ ಮತ್ತೊಬ್ಬ ಹಿರಿಯ ಧುರೀಣ ಅಥವಾ ಬಿಜೆಪಿಯ ಮಾಜಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕೂಡ ಪ್ರಧಾನಿ ಮೋದಿಯವರ ನಡೆ ಮತ್ತು ನುಡಿ ಕುರಿತು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಚೀನಾ, ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವುದನ್ನು ದಾಖಲೆಗಳ ಸಮೇತ ಸುದ್ದಿ ಮಾಧ್ಯಮಗಳ ಮುಂದಿಟ್ಟಿದ್ದಾರೆ. ಧಮ್ ಇಲ್ಲದ ಪ್ರಧಾನಿ ಎಂದು ಕಟುವಾಗಿ ಕುಟುಕಿದ್ದಾರೆ.

ಮೋಹನ್ ಭಾಗವತ್ ಮತ್ತು ಸುಬ್ರಮಣಿಯನ್ ಸ್ವಾಮಿ- ಇಬ್ಬರೂ ಒಂದೇ ಅಲ್ಲ. ಭಾಗವತರ ಹಿಂದೆ ಸಂಘಟನೆ ಇದೆ. ಸ್ವಾಮಿಗೆ ಬುದ್ಧಿ ಮತ್ತು ಬಾಯಿ ಬಲವಿದೆ. ಇಬ್ಬರಿಗೂ ಮೋದಿ ಉತ್ತರ ಕೊಟ್ಟಿದ್ದಿಲ್ಲ. ಪ್ರಧಾನಿ ಮೋದಿ ಸೇರಿ ಮೂವರೂ ಬೇರೆ ಅಲ್ಲ. ಬೇಕಾದಾಗ, ಬೇಕಾದಂತೆ ಮಾತಾಡಬಲ್ಲ ‘ಮಹಾತ್ಮ’ರೇ ಎಲ್ಲ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

Download Eedina App Android / iOS

X