ಭಾರತದ ವಿದೇಶಾಂಗ ವಿಚಕ್ಷಣಾ ದಳ ರೀಸರ್ಚ್ ಅಂಡ್ ಅನಲಿಸಿಸ್ ವಿಂಗ್‌ನ (RAW) ಹಿರಿಯ ಅಧಿಕಾರಿ ವಿಕಾಸ್ ಯಾದವ್. ಈ ಸಂಸ್ಥೆಯ ಸೀನಿಯರ್ ಫೀಲ್ಡ್ ಆಫೀಸರ್. ಭಾರತದ ಅತಿ ದೊಡ್ಡ ಅರೆಸೇನಾ ಪಡೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನ (ಸಿ.ಆರ್.ಪಿ.ಎಫ್) ಸಹಾಯಕ ಕಮಾಂಡೆಂಟ್ ಎಂದು ಅಮೆರಿಕ ಆಪಾದಿಸಿದೆ. ಪನ್ನೂನ ನ್ಯೂಯಾರ್ಕ್ ನಿವಾಸದ ವಿಳಾಸ, ಫೋನ್ ನಂಬರ್ ಹಾಗೂ ನಿತ್ಯ ಚಲನವಲನದ ವಿವರಗಳನ್ನು ಯಾದವ್ ತನ್ನ ಸಹ ಸಂಚುಕೋರ ನಿಖಿಲ್ ಗುಪ್ತನೊಂದಿಗೆ ಹಂಚಿಕೊಂಡಿದ್ದಾರೆ ಎಂದೂ ಅಮೆರಿಕೆಯ ದಸ್ತಾವೇಜು ಆರೋಪಿಸಿದೆ.
ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಯೊಬ್ಬನ ಹತ್ಯೆ ಮತ್ತು ಮತ್ತು ಅಮೆರಿಕೆಯಲ್ಲಿ ಮತ್ತೊಬ್ಬ ಸಿಖ್ ಪ್ರತ್ಯೇಕತಾವಾದಿಯ ಹತ್ಯೆಯ ವಿಫಲ ಯತ್ನ. ಈ ಎರಡೂ ಪ್ರಕರಣಗಳ ಹಿಂದೆ ಭಾರತ ಸರ್ಕಾರದ ಏಜೆಂಟರಿದ್ದಾರೆ ಎಂಬುದು ಅಮೆರಿಕೆ ಮತ್ತು ಕೆನಡಾದ ಆಪಾದನೆ.
ತನ್ನ ನಾಗರಿಕನೊಬ್ಬನ ಹತ್ಯೆಯ ಸಂಚಿನ ಸೂತ್ರಧಾರನೆಂದು ಭಾರತೀಯ ನಾಗರಿಕ ವಿಕಾಸ್ ಯಾದವ್ ಮೇಲೆ ಆರೋಪ ಹೊರಿಸಿದೆ ಅಮೆರಿಕ. ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ ರಾಷ್ಟ್ರವೆಂಬ ಆಪಾದನೆಯನ್ನು ತಾನೇ ಹೊತ್ತಿದೆ ಅಮೆರಿಕ. ವಿದೇಶೀ ನೆಲದಲ್ಲಿ ಹತ್ಯೆಯ ಸಂಚಿನ ಪಾಠ ಹೇಳುವ ನೈತಿಕತೆಯನ್ನು ಈ ದೇಶ ಉಳಿಸಿಕೊಂಡಿಲ್ಲ.
ಆದರೆ ಪನ್ನೂ ಹತ್ಯೆಯ ಸುಪಾರಿಯಲ್ಲಿ ಭಾರತ ಸರ್ಕಾರದ ಪಾತ್ರವಿತ್ತೇ ಎಂಬ ಪ್ರಶ್ನೆಗಳು ವಿಶ್ವದ ಮುಂದೆ ಎದುರಾಗಿವೆ.
ಭಾರತೀಯ ಮೂಲದ ಅಮೆರಿಕನ್ ನಾಗರಿಕ ಗುರು ಪತ್ವಂತ್ ಸಿಂಗ್ ಎಂಬ ಸಿಖ್ ಪ್ರತ್ಯೇಕತಾವಾದಿಯ ವಿಫಲ ಹತ್ಯಾ ಪ್ರಯತ್ನದ ಹಿಂದೆ ಭಾರತದ ಮಾಜಿ ಬೇಹುಗಾರಿಕೆ ಅಧಿಕಾರಿ ವಿಕಾಸ್ ಯಾದವ್ ಇರುವುದಾಗಿ ಅಮೆರಿಕಾ ಸರ್ಕಾರ ಕಳೆದ ಗುರುವಾರ ಆಪಾದಿಸಿತ್ತು.
ಅಮೆರಿಕಾ ಆಪಾದಿಸಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಭಾರತ ಸರ್ಕಾರ ಹೇಳಿದೆ. ಆದರೆ ಆ ವ್ಯಕ್ತಿಯ ಹೆಸರನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಈ ವ್ಯಕ್ತಿ ವಿಕಾಸ್ ಯಾದವ್ ಇರಬಹುದೇ ಎಂಬುದು ಊಹೆಗೆ ಬಿಟ್ಟ ಸಂಗತಿ.
2024ರ ಏಪ್ರಿಲ್‌ನಲ್ಲಿ ಪ್ರಕಟವಾಗಿದ್ದ ಅಮೆರಿಕೆಯ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ ವಿಕ್ರಮ್ ಯಾದವ್ ಎಂಬ ಭಾರತೀಯ ಪನ್ನೂ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ. ಈ ವರದಿಯನ್ನು ಭಾರತ ಬಲವಾಗಿ ಅಲ್ಲಗಳೆದಿತ್ತು. ಆ ಏಪ್ರಿಲ್‌ನ ವಿಕ್ರಮ್ ಯಾದವ್ ಮತ್ತು ಈ ಅಕ್ಟೋಬರ್‌ನ ವಿಕಾಸ್ ಯಾದವ್ ಒಬ್ಬನೇ ವ್ಯಕ್ತಿಯೇ?
ಯಾದವನನ್ನು ಅಮೆರಿಕೆಯ ಕೇಂದ್ರೀಯ ತನಿಖಾ ಸಂಸ್ಥೆ ಎಫ್ ಬಿ ಐ. ಹುಡುಕುತ್ತಿದೆ. ಅಮೆರಿಕೆಯ ನಾಗರಿಕನ ಹತ್ಯೆ ಮತ್ತು ಅಕ್ರಮ ಹಣ ವರ್ಗಾವಣೆಯ ಕೇಸಿನ ಆಪಾದನೆ ಹೊತ್ತಿರುವ ವಿಕಾಸ್ ಯಾದವ್ ಹರಿಯಾಣದ ಪ್ರಾಣಪುರದವನೆಂದು ಎಫ್.ಬಿ.ಐ. ಅಂತರ್ಜಾಲ ತಾಣ ಹೇಳಿದೆ. ಆತನ ಭಾವಚಿತ್ರಗಳನ್ನೂ ಪ್ರದರ್ಶಿಸಿದೆ.
ಈ ಆಪಾದನೆಗಳ ಜೊತೆಗೆ ಅಮೆರಿಕೆಯ ಕಾನೂನು ಜಾರಿಯ ಉನ್ನತ ಅಧಿಕಾರಿಗಳು ಟೀಕೆ ಟಿಪ್ಪಣಿಗಳ ಸರಣಿಯೇ ಬಿಚ್ಚಿಕೊಂಡಿತ್ತು. ಅಮೆರಿಕನ್ ಪ್ರಜೆಗಳನ್ನು ಗುರಿಯಾಗಿಸುವ ಯಾವುದೇ ವಿದೇಶೀ ಪ್ರಯತ್ನವನ್ನು ವಾಷಿಂಗ್ಟನ್ ಸಹಿಸುವುದಿಲ್ಲ ಎಂದು ಅಮೆರಿಕೆಯ ಅಟಾರ್ನಿ ಜನರಲ್ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ ನಿರ್ದೇಶಕರು ಸಾರಿದ್ದರು.
ಹತ್ಯೆಯಿಂದ ಪಾರಾಗಿರುವ ಪನ್ನೂ ಸದಾಚಾರ ಸಂಪನ್ನ ವ್ಯಕ್ತಿಯೇನೂ ಅಲ್ಲ. ಭಯೋತ್ಪಾದಕನ ದಾಖಲೆ ಹೊಂದಿರುವ ಸಿಖ್ ಪ್ರತ್ಯೇಕತಾವಾದಿ. ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥ.
ಈ ಪ್ರಕರಣವು ಭಾರತ ಮತ್ತು ಅಮೆರಿಕೆಯ ನಡುವಿನ ಸಂಬಂಧವನ್ನು ಕದಡಿದೆ. ಭಾರತವು ಇಂತಹುದೇ ಆಪಾದನೆಗಳನ್ನು ಕೆನಡಾದಿಂದ ಎದುರಿಸಿರುವ ಹೊತ್ತಿನಲ್ಲೇ ಅಮೆರಿಕ ಕೂಡ ಭಾರತದತ್ತ ಬೆರಳು ಮಾಡಿದೆ. ಆದರೆ ಭಾರತ ಕೆನಡಾಗೆ ಕೆಂಗಣ್ಣು ತೋರಿದಂತೆ ಅಮೆರಿಕೆಗೆ ತೋರಲಾಗುತ್ತಿಲ್ಲ.
ಅಮೆರಿಕೆಯ ಬೆವರಿಳಿಸಿಬೇಕಿದ್ದ ಗೋದಿ ಮೀಡಿಯಾ ತುಟಿ ಬಿಚ್ಚಿಲ್ಲ. ದೆಹಲಿಯ ನೆರೆಹೊರೆಯಲ್ಲೇ ಇರುವ ಪ್ರಾಣಪುರಕ್ಕೆ ಟೀವಿ ಚಾನೆಲ್ಲುಗಳ ಓಬಿ ವ್ಯಾನುಗಳು ಮುತ್ತಿಗೆ ಹಾಕಿಲ್ಲ. ವಿಕಾಸ್ ಯಾದವ್ ಯಾರು, ಆತನ ತಂದೆ ತಾಯಿ ಯಾರು, ಅವರು ಏನು ಹೇಳುತ್ತಾರೆ, ಯಾದವ್ ಮಿತ್ರರು ಯಾರು ಎಂಬ ನಿಮಿಷ ನಿಮಿಷದ ಸುದ್ದಿ ರವಾನೆಯ ಸುಳಿವೇ ಇಲ್ಲ!
ಯಾರು ಈ ವಿಕಾಸ್ ಯಾದವ್?
ಭಾರತದ ವಿದೇಶಾಂಗ ವಿಚಕ್ಷಣಾ ದಳ ರೀಸರ್ಚ್ ಅಂಡ್ ಅನಲಿಸಿಸ್ ವಿಂಗ್‌ನ (RAW) ಹಿರಿಯ ಅಧಿಕಾರಿ ವಿಕಾಸ್ ಯಾದವ್. ಈ ಸಂಸ್ಥೆಯ ಸೀನಿಯರ್ ಫೀಲ್ಡ್ ಆಫೀಸರ್. ಭಾರತದ ಅತಿ ದೊಡ್ಡ ಅರೆಸೇನಾ ಪಡೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರರ್ಸ್‌ನ (ಸಿ.ಆರ್.ಪಿ.ಎಫ್) ಸಹಾಯಕ ಕಮಾಂಡೆಂಟ್ ಎಂದು ಅಮೆರಿಕ ಆಪಾದಿಸಿದೆ.
ಪನ್ನೂನ ನ್ಯೂಯಾರ್ಕ್ ನಿವಾಸದ ವಿಳಾಸ, ಫೋನ್ ನಂಬರ್ ಹಾಗೂ ನಿತ್ಯ ಚಲನವಲನದ ವಿವರಗಳನ್ನು ಯಾದವ್ ತನ್ನ ಸಹ ಸಂಚುಕೋರ ನಿಖಿಲ್ ಗುಪ್ತನೊಂದಿಗೆ ಹಂಚಿಕೊಂಡಿದ್ದಾರೆ ಎಂದೂ ಅಮೆರಿಕೆಯ ದಸ್ತಾವೇಜು ಆರೋಪಿಸಿದೆ. ಇಂತಹ ಯಾದವ್ ಈಗ ತಲೆ ಮರೆಸಿಕೊಂಡಿದ್ದಾರೆ ಎಂದೂ ಅಮೆರಿಕೆಯ ಜಸ್ಟಿಸ್ ಡಿಪಾರ್ಟ್ಮೆಂಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಯಾದವ್ ಭಾರತ ಸರ್ಕಾರದ ಉದ್ಯೋಗಿ. ಅಮೆರಿಕೆಯ ಸೀಮೆಯಲ್ಲಿ ಅಮೆರಿಕಾ ಪ್ರಜೆಯ ಹತ್ಯೆಗೆ ತನ್ನ ಕ್ರಿಮಿನಲ್ ಸಹಚರನೊಂದಿಗೆ ಸಂಚು ನಡೆಸಿದ್ದಾನೆ. ಅಮೆರಿಕೆಯ ನಾಗರಿಕರು ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸಿದ ಕಾರಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಿಂಸಾತ್ಮಕ ಕೃತ್ಯಗಳನ್ನು ಸಹಿಸಲಾಗದು ಎಂದು ಎಫ್.ಬಿ.ಐ. ನಿರ್ದೇಶಕ ಕ್ರಿಸ್ಟೋಫರ್ ರೇ ಹೇಳಿದ್ದಾರೆ.
ಜಸ್ಟಿಸ್ ಡಿಪಾರ್ಟ್ಮೆಂಟ್ ಆಪಾದನೆಗೆ ಗುರಿಪಡಿಸಿರುವ ವ್ಯಕ್ತಿಯು ಈಗ ಭಾರತ ಸರ್ಕಾರದ ಉದ್ಯೋಗಿ ಆಗಿರುವುದಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಯಾದವ್ ಈ ಹಿಂದೆ ಭಾರತ ಸರ್ಕಾರದ ಉದ್ಯೋಗಿ ಆಗಿದ್ದನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ.
ಭಾರತದ ಏಜೆಂಟರು ಪನ್ನೂ ಹತ್ಯೆಯ ಯೋಜನೆಯಲ್ಲಿ ಭಾಗಿಗಳು ಎಂಬ ಆರೋಪ ಕುರಿತು ತನ್ನದೇ ಆಂತರಿಕ ತನಿಖೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಜಾಹೀರುಪಡಿಸಿತ್ತು. ಈ ಸಂಚಿನಲ್ಲಿ ಒಂದು ವೇಳೆ ಭಾರತೀಯ ಪ್ರಜೆಗಳ ಪಾತ್ರ ಇರುವುದೆಂದು ಭಾವಿಸಿದರೂ ಈ ಕೃತ್ಯಕ್ಕೆ ಭಾರತ ಸರ್ಕಾರದ ಅನುಮತಿಯಿಲ್ಲ ಎಂದೂ ಸ್ಪಷ್ಟಪಡಿಸಿತ್ತು.
ಗುರು ಪತ್ವಂತ್ ಸಿಂಗ್ ಹತ್ಯೆಯ ವಿಫಲ ಯತ್ನ
2023ರ ನವೆಂಬರ್‌ನಲ್ಲಿ ಪನ್ನೂ ಹತ್ಯೆಯ ಯತ್ನವನ್ನು ಅಮೆರಿಕೆ ವಿಫಲಗೊಳಿಸಿತ್ತು. ಭಾರತೀಯ ನಿವಾಸಿ ನಿಖಿಲ್ ಗುಪ್ತ (53) ಈ ಹತ್ಯೆಯ ನಂಬರ್ ಒನ್ ಸಹ ಸಂಚುಕೋರ (ಸಿ.ಸಿ-1) ನ ಜೊತೆಗಾರನೆಂದೂ 2023ರ ನವೆಂಬರ್ 29ರಂದು ಅಮೆರಿಕೆ ಆಪಾದಿಸಿತ್ತು.
ಇದೀಗ ಸಿ.ಸಿ.-1 ವಿಕಾಸ್ ಯಾದವ್ ಎಂದು ಹೆಸರಿಸಿದೆ. ಯಾದವ್ ಭಾರತದಿಂದ ಈ ಹತ್ಯೆಯ ಯೋಜನೆಯನ್ನು ನಿರ್ದೇಶಿಸಿದನೆಂದೂ, ಹತ್ಯೆಯ ಹೊಣೆಯನ್ನು 2023ರ ಮೇ ತಿಂಗಳಿನಲ್ಲಿ ನಿಖಿಲ್ ಗುಪ್ತನಿಗೆ ವಹಿಸಿದನೆಂದೂ ಅಮರಿಕಾ ಆಪಾದಿಸಿದೆ. ಪನ್ನೂನ ಹತ್ಯೆಗಾಗಿ ಗುರಿಕಾರನೊಬ್ಬನನ್ನು ನೇಮಿಸಿಕೊಳ್ಳುವಂತೆ ಗುಪ್ತನಿಗೆ ಸೂಚಿಸಲಾಯಿತು. ಗುಪ್ತ ತನಗೆ ಅಪರಿಚಿತನಾಗಿದ್ದ ಅಮೆರಿಕನ್ ಗುರಿಕಾರನೊಬ್ಬನನ್ನು ಆರಿಸಿಕೊಂಡ.ಆದರೆ ಆ ಗುರಿಕಾರ ಮಾರುವೇಷದಲ್ಲಿದ್ದ ಅಮೆರಿಕೆಯ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಅಧಿಕಾರಿಯಾಗಿದ್ದ. ಈ ನಿಜ ಸಂಗತಿ ಗುಪ್ತನಿಗೆ ಗೊತ್ತಿರಲಿಲ್ಲ.
ಗುರಿಕಾರನಿಗೆ ಒಂದು ಲಕ್ಷ ಡಾಲರ್ ಗಳನ್ನು ನೀಡಲು ಗುಪ್ತ ಒಪ್ಪಿಕೊಂಡಿದ್ದ. 15 ಸಾವಿರ ಡಾಲರುಗಳ ಮುಂಗಡವನ್ನು 2023ರ ಜೂನ್ ಒಂಬತ್ತರಂದು ಮ್ಯಾನ್ ಹಟ್ಟನ್ ನಲ್ಲಿ ನೀಡಿದ್ದ. ಈ ವ್ಯವಹಾರಕ್ಕೆ ಯಾದವ್ ಸಮ್ಮತಿ ಇತ್ತು ಎಂಬುದಾಗಿ ಅಮೆರಿಕೆ ಹೇಳಿದೆ.
2023ರ ಜೂನ್ 18ರಂದು ಕೆನಡಾದ ಗುರುದ್ವಾರವೊಂದರ ಮುಂದೆ ಹರದೀಪ್ ಸಿಂಗ್ ನಿಜ್ಜರ್ ಎಂಬ ಸಿಖ್ ಪ್ರತ್ಯೇಕತಾವಾದಿಯನ್ನು ಮುಸುಕುಧಾರಿ ಬಂದೂಕುಧಾರಿಗಳು ಕೊಂದರು. ಹತ್ಯೆಗೀಡಾದ ನಿಜ್ಜರ್, ಪನ್ನೂನ ಸಹಚರನಾಗಿದ್ದ. ವಿಕಾಸ್ ಯಾದವ್ ನಿಜ್ಜರ್‌ನ ರಕ್ತಸಿಕ್ತ ಶವದ ವಿಡಿಯೋವೊಂದನ್ನು ಯಾದವ್‌ಗೆ ಕಳಿಸಿದ್ದ.
‘ನಿಜ್ಜರ್ ಕೂಡ ಹತ್ಯೆಗೆ ಗುರಿಯಾಗಿದ್ದ, ಇನ್ನೂ ಹಲವರ ಹತ್ಯೆ ಆಗಬೇಕಿದೆ’ ಎಂದೂ ಗುರಿಕಾರನಂತೆ ವೇಷ ಮರೆಸಿಕೊಂಡಿದ್ದ ಅಮೆರಿಕೆಯ ಡಿಇಎ ಅಧಿಕಾರಿಯ ಬಳಿ ಹೇಳಿದ್ದ ನಿಖಿಲ್ ಗುಪ್ತ ಹೇಳಿದ್ದ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ವಿಶ್ಲೇಷಣೆ | ಮೋದಿತ್ವದ ಅಬ್ಬರಕ್ಕೆ ಲಗಾಮು ಹಾಕಿದ ಅಸಾಧಾರಣ ಜನಾದೇಶ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ 2023ರ ಜೂನ್ 20ರಂದು ಅಮೆರಿಕೆಗೆ ಭೇಟಿ ನೀಡಲಿದ್ದಾರೆ. ಆ ದಿನ ಅಥವಾ ಆ ದಿನದ ಹಿಂದಿನ ದಿನಗಳಲ್ಲಿ ಪನ್ನೂವಿನ ಹತ್ಯೆ ಮಾಡಬಾರದೆಂದು ವಿಕಾಸ್ ಯಾದವ್, ನಿಖಿಲ್ ಗುಪ್ತನಿಗೆ ಸೂಚನೆ ನೀಡಿದ್ದನೆಂದು ಅಮೆರಿಕೆ ತನ್ನ ಆಪಾದನೆಯಲ್ಲಿ ಹೇಳಿದೆ. 2023ರ ಜೂನ್ 30ರಂದು ಝೆಕೋಸ್ಲವಾಕಿಯಾದಲ್ಲಿ ದಸ್ತಗಿರಿಯಾಗಿದ್ದ. 2024ರ ಜೂನ್ ನಲ್ಲಿ ಗುಪ್ತನನ್ನು ಅಮೆರಿಕೆಗೆ ಹಸ್ತಾಂತರಿಸಲಾಯಿತು. ಬಾಡಿಗೆ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲವೆಂದು ನ್ಯೂಯಾರ್ಕ್ ಕೋರ್ಟ್ ಮುಂದೆ ನಿವೇದಿಸಿಕೊಂಡಿದ್ದ.
ಎಕ್ಸ್ ಖಾತೆಯಲ್ಲಿ (ಟ್ವಿಟರ್) ಪನ್ನೂ ಹೇಳಿಕೆಯೊಂದನ್ನು ನೀಡಿದ್ದ. ಅಮೆರಿಕೆಯು ದೇಶದ ಒಳಗೆ ಮತ್ತು ಹೊರಗೆ ತನ್ನ ನಾಗರಿಕರ ಪ್ರಾಣ, ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಕುರಿತು ತನ್ನ ಪ್ರತಿಬದ್ಧತೆಯನ್ನು ಎತ್ತಿ ಸಾರಿದೆ. ವಿಕಾಸ್ ಯಾದವ್ ಮಧ್ಯಮ ಹಂತದ ಯೋಧ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮತ್ತು RAW ಮುಖ್ಯಸ್ಥ ಸಾಮಂತ್ ಗೋಯಲ್ ನನ್ನನ್ನು ಕೊಲ್ಲುವಂತೆ ಯಾದವ್‌ಗೆ ಸೂಚನೆ ನೀಡಿದ್ದರು. ಪಂಜಾಬನ್ನು ಭಾರತದಿಂದ ಪ್ರತ್ಯೇಕಗೊಳಿಸುವ ಖಾಲಿಸ್ತಾನ ಜನಾದೇಶ ಪ್ರಚಾರಾಂದೋಲನವನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವುದು ಮೋದಿ ಸರ್ಕಾರದ ನೀತಿ. ನನ್ನನ್ನು ಕೊಲ್ಲುವುದು ಈ ನೀತಿ ನಿರ್ಧಾರದ ಭಾಗ ಎಂದು ಪನ್ನೂ ಹೇಳಿದ್ದ.
ತನ್ನ ಹತ್ಯೆಯ ಸಂದರ್ಭದಲ್ಲಿ ನಿಜ್ಜರ್ ಕೂಡ ಖಾಲಿಸ್ತಾನಕ್ಕಾಗಿ ಇಂತಹುದೇ ಅನಧಿಕೃತ ಜನಾದೇಶದ ಸಂಘಟನೆಯಲ್ಲಿ ತೊಡಗಿದ್ದ. ತನ್ನ ಹತ್ಯೆಯ ಪ್ರಯತ್ನವು ತನ್ನನ್ನು ಖಾಲಿಸ್ತಾನ ರಚನೆಯ ಉದ್ದೇಶದಿಂದ ಹಿಂದೆ ಸರಿಸುವುದು ಅಸಾಧ್ಯ ಎಂದೂ ಪನ್ನೂ ಸಾರಿದ್ದ.
ಭಾರತ ಸರ್ಕಾರ, ಅಜಿತ್ ಡೋವಲ್ ಮತ್ತು ಗೋಯಲ್ ವಿರುದ್ಧ ಸೆಪ್ಟಂಬರ್ 18ರಂದು ದಕ್ಷಿಣ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ. ಭಾರತ ಸರ್ಕಾರ, ಡೋವಲ್ ಹಾಗೂ ಗೋಯಲ್ ತನ್ನ ಮುಂದೆ ಹಾಜರಾಗಬೇಕೆಂದು ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಡೋವಲ್ ಮತ್ತು ಗೋಯಲ್ ವಿರುದ್ಧದ ಆಪಾದನೆಗಳನ್ನು ಭಾರತದ ವಿದೇಶಾಂಗ ಮಂತ್ರಾಲಯ ತಳ್ಳಿ ಹಾಕಿತ್ತು.
ನಿಜ್ಜರ್ ಹತ್ಯೆಯ ವಿಷಯದಲ್ಲಿ ಭಾರತ ಮತ್ತು ಕೆನಡಾ ಮುಖಾಮುಖಿಯಾಗಿರುವ ಹೊತ್ತಿನಲ್ಲಿ ಅಮೆರಿಕೆಯ ಆಪಾದನೆ ಹೊರಬಿದ್ದಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ ನಿಚ್ಚಳ ಪಾತ್ರವಿರುವ ಸಾಕ್ಷ್ಯಾಧಾರಗಳು ಕೆನಡಾದ ಬಳಿ ಇವೆ. ಕೆನಡಾದ ಸಿಖ್ ಭಿನ್ನಮತೀಯರನ್ನು ಕೊಲ್ಲಲು ಭಾರತದ ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಗುರಿಕಾರರನ್ನು ಭಾರತ ಸರ್ಕಾರ ಬಾಡಿಗೆಗೆ ಗೊತ್ತು ಮಾಡಿಕೊಂಡಿದೆ ಎಂದು ಆ ದೇಶದ ಪ್ರಧಾನಿ ಜಸ್ಟಿನ್ ಟ್ರೂಡೋ ಆಪಾದಿಸಿದ್ದಾರೆ.
ನಿಜ್ಜರ್ ಹತ್ಯೆಯ ಕುರಿತು ಕೆನಡಾದ ಆಪಾದನೆ ಮತ್ತು ಪನ್ನೂ ಹತ್ಯೆಯ ವಿಫಲ ಯತ್ನ ಕುರಿತು ಅಮೆರಿಕೆಯ ಆಪಾದನೆಗಳಿಗೆ ಭಾರತ ಸರ್ಕಾರ ಭಿನ್ನವಾಗಿ ಪ್ರತಿಕ್ರಿಯಿಸಿದೆ ಎಂಬುದು ವಿದೇಶಾಂಗ ನೀತಿ ವಿಶ್ಲೇಷಕರ ಅಭಿಪ್ರಾಯ.
ಕೆನಡಾದಲ್ಲಿ ಭಾರತದ ಹೈಕಮೀಷನರ್ ಆಗಿದ್ದ ಸಂಜಯ ಕುಮಾರ್ ವರ್ಮಾ ಮತ್ತು ಇತರೆ ಐವರು ಭಾರತೀಯ ದೂತಾವಾಸದ ಅಧಿಕಾರಿಗಳನ್ನು ಟ್ರೂಡೋ ಸರ್ಕಾರ ಹೊರಹಾಕಿದೆ. ಪ್ರತಿಯಾಗಿ ಭಾರತ ಸರ್ಕಾರ ಆರು ಮಂದಿ ಕೆನಡಾ ರಾಜದೂತರನ್ನು ಹೊರಹಾಕಿದೆ.
ಕೆನಡಾದ ಟ್ರೂಡೋ ಆಡಳಿತವು ಸಿಖ್ ಪ್ರತ್ಯೇಕವಾದಿಗಳ ಭಯೋತ್ಪಾದನೆಯನ್ನು ಸಕ್ರಿಯವಾಗಿ ಬೆಂಬಲಿಸಿದೆ ಎಂದು ಭಾರತ ಸರ್ಕಾರ ಉಗ್ರವಾಗಿ ಪ್ರತಿಕ್ರಿಯಿಸಿತ್ತು. ಆದರೆ ಪನ್ನೂ ಹತ್ಯೆಯ ಸಂಚಿನ ಕುರಿತು ಅಮೆರಿಕೆಯ ಆಪಾದನೆಗಳ ಕುರಿತು ಅತ್ಯಂತ ಸಂಯಮ ತೋರಿದೆ. ಈ ಪ್ರಕರಣ ಕುರಿತು ಅಮೆರಿಕೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ಭಾರತೀಯ ಅಧಿಕಾರಿಗಳ ತಂಡವೊಂದು ಕಳೆದ ವಾರ ಅಮರಿಕೆಗೆ ತೆರಳಿತ್ತು.
ಪನ್ನೂ ಹತ್ಯೆಯ ಯತ್ನದಲ್ಲಿ ಮೋದಿ ಸರ್ಕಾರದ ಪಾತ್ರವಿದೆಯೆಂಬ ನೇರ ಆಪಾದನೆಯನ್ನು ಅಮೆರಿಕೆ ಮಾಡಿಲ್ಲ. ಆದರೆ ನಿಜ್ಜರ್ ಹತ್ಯೆಯಲ್ಲಿ ಮೋದಿ ಸರ್ಕಾರದ ನೇರ ಪಾತ್ರವಿದೆ ಎಂದು ಟ್ರೂಡೋ ಆಪಾದಿಸಿದ್ದಾರೆ. ಅಮೆರಿಕೆ ಸಾಕ್ಷ್ಯಾಧಾರಗಳನ್ನು ನೀಡಿದೆ. ಆದರೆ ಕೆನಡಾ ಯಾವುದೇ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಿಲ್ಲ. ಕೆನಡಾದಲ್ಲಿ ಸಿಖ್ ಸಮುದಾಯ ರಾಜಕೀಯವಾಗಿ ಪ್ರಭಾವಿ.
ಪಂಜಾಬಿನ ನಂತರ ಅತಿ ಹೆಚ್ಚು ಸಿಖ್ ಜನಸಂಖ್ಯೆ ಕೆನಡಾದಲ್ಲಿದೆ. ಒಟ್ಟು ಜನಸಂಖ್ಯೆಯ ಶೇ.2ರಷ್ಟು. ಅರ್ಥಾತ್ ಎಂಟು ಲಕ್ಷ ಮಂದಿ. ನಾಲ್ವರು ಸಿಖ್ಖರು ಜಸ್ಟಿನ್ ಟ್ರೂಡೋ ಸಂಪುಟದಲ್ಲಿ ಮಂತ್ರಿಗಳು. ಖಾಲಿಸ್ತಾನಿಗಳಿಗೆ ಕೆನಡಾ ಆಶ್ರಯ ನೀಡಿದೆ. ಚುನಾವಣೆಗಳು ಹತ್ತಿರದಲ್ಲಿವೆ ವರ್ಷದೊಪ್ಪತ್ತಿನಲ್ಲಿ. ಶೇ.28ರಷ್ಟು ಜನ ಜಸ್ಟಿನ್ ಟ್ರೂಡೋ ಅವರ ಪುನರಾಯ್ಕೆ ಬಯಸಿದ್ದಾರೆ. ಉಳಿದವರು ವಿರುದ್ಧವಿದ್ದಾರೆ. ಕೆನಡಾ ಲೋಕಸಭೆಯ 15 ಸೀಟುಗಳನ್ನು ಸಿಖ್ಖರು ಪ್ರತಿನಿಧಿಸುತ್ತಾರೆ.
