ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿ ಅಧಿಕಾರಿಗಳ ತಂಡ ಕೆಪಿ ಗೋಸಾವಿ ಅವರನ್ನು ಎನ್‌ಸಿಬಿ ಅಧಿಕಾರಿಯೆಂದು ಬಿಂಬಿಸಿ ನಂತರ ಸ್ವತಂತ್ರ ಸಾಕ್ಷಿಯಾಗಿಸಿತ್ತು. ಇದೇ ಅಧಿಕಾರಿ ಆರ್ಯನ್ ಖಾನ್ ಬಿಡುಗಡೆಗೆ ಶಾರುಖ್ ಖಾನ್ ಅವರಿಂದ ₹18 ಕೋಟಿಗೆ ಬೇಡಿಕೆ ಇಟ್ಟಿದ್ದರು.
ಕೊರ್ಡೆಲಿಯ ಕ್ರೂಸ್ ಮೇಲೆ ದಾಳಿ ನಡೆಸಿ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿ ಅಧಿಕಾರಿಗಳ ಮೇಲೆ ಇದೀಗ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಸಿಬಿಐ ನೀಡಿರುವ ಮಾಹಿತಿ ಪ್ರಕಾರ, ಈ ಅಧಿಕಾರಿಗಳು ದಾಳಿ ಸಂದರ್ಭ ಆರೋಪಿ ಮಾದಕ ದ್ರವ್ಯ ಡೀಲರ್ ಸೇರಿದಂತೆ 17 ಶಂಕಿತರನ್ನು ಬಂಧಿಸದೆ ಬಿಟ್ಟಿದ್ದರು. ಸ್ವತಂತ್ರ ಸಾಕ್ಷಿ ಕೆ ಪಿ ಗೋಸಾವಿ ಅವರನ್ನು ಎನ್‌ಸಿಬಿ ಅಧಿಕಾರಿಯೆಂದು ಈ ಅಧಿಕಾರಿಗಳು ಬಿಂಬಿಸಿದ್ದರು. ನಂತರ ಇದೇ ಅಧಿಕಾರಿ ಆರ್ಯನ್ ಖಾನ್‌ರನ್ನು ಬಿಡುಗಡೆ ಮಾಡಲು ಶಾರುಖ್ ಖಾನ್‌ರಿಂದ ₹18 ಕೋಟಿ ಬೇಡಿಕೆ ಇಟ್ಟಿದ್ದರು.
ಆರೋಪಿಗಳನ್ನು ಕೆ ಪಿ ಗೋಸಾವಿ ಖಾಸಗಿ ವಾಹನದಲ್ಲಿ ಎನ್‌ಸಿಬಿ ಕಚೇರಿಗೆ ತಂದಿದ್ದರು. ಗೋಸಾವಿ ಕೂಡ ಎನ್‌ಸಿಬಿ ಅಧಿಕಾರಿ ಎಂದೇ ಆರಂಭದಲ್ಲಿ ಬಿಂಬಿಸಲಾಗಿತ್ತು. ಗೋಸಾವಿ ಸೆಲ್ಫಿಗಳನ್ನು ತೆಗೆದಿದ್ದಲ್ಲದೆ, ಧ್ವನಿಯನ್ನೂ ರೆಕಾರ್ಡ್ ಮಾಡಿಕೊಂಡಿದ್ದರು. ಈ ದಾಖಲೆಗಳಿಂದಲೇ ಗೋಸಾವಿ ಮತ್ತು ಆತನ ಬೆಂಬಲಿಗ ಸಾಣ್ವಿಲ್ ಡಿಸೋಜಾ ಆರ್ಯನ್ ಖಾನ್ ಕುಟುಂಬದಿಂದ ₹25 ಕೋಟಿ ಲೂಟಿ ಮಾಡುವ ಪಿತೂರಿ ಹೂಡಲು ಸಾಧ್ಯವಾಗಿತ್ತು. ಅಂತಿಮವಾಗಿ ಆರ್ಯನ್ ಅವರನ್ನು ಬಿಡುಗಡೆ ಮಾಡುವ ಮೊತ್ತವನ್ನು ₹18 ಕೋಟಿಗೆ ಇಳಿಸಲಾಗಿತ್ತು. ₹50 ಲಕ್ಷವನ್ನು ಟೋಕನ್ ಮೊತ್ತವಾಗಿ ಕೆ ಪಿ ಗೋಸ್ವಾಮಿ ಪಡೆದಿದ್ದರು” ಎಂದು ಸಿಬಿಐ ಎಫ್‌ಐಆರ್ ಹೇಳಿದೆ.
ಕೆ ಪಿ ಗೋಸಾವಿ ಮತ್ತು ಪ್ರಭಾಕರ್ ಸೈಲ್‌ರನ್ನು ಸ್ವತಂತ್ರ ಸಾಕ್ಷಿಗಳೆಂದು ಹೆಸರಿಸಲು ಸಮೀರ್ ವಾಂಖೆಡೆ ನಿರ್ದೇಶಿಸಿದ್ದರು.
2008 ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಎನ್‌ಸಿಬಿ ಮುಂಬೈ ವಲಯದ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಮುಂಬೈ ಕರಾವಳಿಯಲ್ಲಿ 2021 ಅಕ್ಟೋಬರ್ 2ರಂದು ಕೊರ್ಡೆಲಿಯ ಕ್ರೂಸ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮುನ್ನಡೆಸಿದ್ದರು.
ಎನ್‌ಸಿಬಿ 13 ಗ್ರಾಂ ಕೊಕೇನ್, 5 ಗ್ರಾಂ ಮಿಫೀಡ್ರೋನ್, 21 ಗ್ರಾಂ ಮರಿಜುವಾನ, 22 ಎಂಡಿಎಂಎ ಗುಳಿಗೆಗಳು ಹಾಗೂ ರೂ 1.33 ಲಕ್ಷ ನಗದು ವಶಪಡಿಸಿಕೊಂಡು, ಆರ್ಯನ್ ಖಾನ್ ಸೇರಿದಂತೆ 17 ಮಂದಿಯನ್ನು ಬಂಧಿಸಿತ್ತು.
ಎನ್‌ಸಿಬಿ ನಡೆಸಿದ ವಿಜಿಲೆನ್ಸ್ ತನಿಖೆ ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. “2021ರಲ್ಲಿ ಕೊರ್ಡೆಲಿಯ ಕ್ರೂಸ್‌ಗೆ ದಾಳಿ ಸಂದರ್ಭದಲ್ಲಿ ನಿರ್ದಿಷ್ಟ ಶಂಕಿತರ ಹೆಸರುಗಳನ್ನು ಪ್ರಥಮ ಮಾಹಿತಿ ವಿವರದಿಂದ ಹೊರಗಿಡಲಾಗಿತ್ತು. ತನಿಖೆಯನ್ನು ತಿರುಚಿ ಕೆಲವು ಆರೋಪಿಗಳ ಹೆಸರನ್ನು ಸೇರಿಸಲಾಗಿತ್ತು” ಎಂದು ವಿಶೇಷ ತನಿಖಾ ತಂಡದ ಎಫ್‌ಐಆರ್‌ನಲ್ಲಿ ಬರೆಯಲಾಗಿದೆ.
ಈ ಸುದ್ದಿ ಓದಿದ್ದೀರಾ?: ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧ ಪ್ರಕರಣ; ಪಶ್ಚಿಮ ಬಂಗಾಳ, ತಮಿಳುನಾಡಿಗೆ ಸುಪ್ರೀಂ ನೋಟಿಸ್
ಆರಂಭಿಕ ಪ್ರಥಮ ಮಾಹಿತಿ ವಿವರದಲ್ಲಿ 27 ಹೆಸರುಗಳಿದ್ದವು. ತಿರುಚಿದ ವಿವರದಲ್ಲಿ 10 ಹೆಸರುಗಳಷ್ಟೇ ಇದ್ದವು. ಇತರರ ಬಗ್ಗೆಯೂ ತನಿಖೆ ನಡೆಸಲಾಗಿತ್ತಾದರೂ, ಹೆಸರುಗಳನ್ನು ದಾಖಲೆಗಳಿಂದ ಹೊರಗಿಡಲಾಗಿತ್ತು. ಕೆಲವು ಶಂಕಿತರನ್ನು ದಾಖಲೆಯಲ್ಲಿ ಹೆಸರಿಲ್ಲದೆಯೇ ಬಿಡುಗಡೆ ಮಾಡಲಾಗಿತ್ತು. ಆರ್ಯನ್ ಖಾನ್‌ರ ಸ್ನೇಹಿತ ಅರ್ಬಾಜ್ ಮರ್ಚಂಟ್‌ರಿಗೆ ಚರಸ್ ನೀಡುತ್ತಿದ್ದಾರೆಂದು ಆರೋಪಿಸಲಾದ ಸಿದ್ಧಾರ್ಥ್ ಶಾ ಅವರನ್ನು ಬಂಧಿಸಿರಲಿಲ್ಲ. ಆತ ಸ್ವತಃ ಮಾದಕ ದ್ರವ್ಯ ಸೇವಿಸುತ್ತಿದ್ದ ಮತ್ತು ಅರ್ಬಾಜ್‌ನಿಗೆ ಚರಸ್ ಒದಗಿಸಲು ಹಣ ಪಡೆದಿರುವ ಬಗ್ಗೆ ಫೋನ್ ಸಂದೇಶಗಳು ದೊರೆತಿದ್ದವು ಎಂಬ ವಿವರಗಳು ಎಫ್‌ಐಆರ್‌ನಲ್ಲಿವೆ.
ತನಿಖೆಯ ವಿವರಗಳು ಹೇಳಿರುವಂತೆ, ಸಮೀರ್ ವಾಂಖೆಡೆ ತಮ್ಮ ವಿದೇಶಿ ಭೇಟಿಗಳು ಮತ್ತು ವೆಚ್ಚದ ಬಗ್ಗೆ ಸೂಕ್ತ ಮಾಹಿತಿ ನೀಡದಿರುವುದು ಪತ್ತೆಯಾಗಿದೆ. ದುಬಾರಿ ಕೈಗಡಿಯಾರಗಳನ್ನು ಖಾಸಗಿ ವ್ಯಕ್ತಿಗಳಿಗೆ ಇಲಾಖೆಗೆ ಮಾಹಿತಿ ನೀಡದೆ ಅವರು ಮಾರಿರುವುದೂ ಪತ್ತೆಯಾಗಿದೆ.