ಅಭಿವೃದ್ದಿ ಎಂದರೆ ಬರೀ ಹೆದ್ದಾರಿ, ಕಟ್ಟಡಗಳಿಗೆ ಸೀಮಿತವೇ? ಅಭಿವೃದ್ದಿ ಎಂದರೆ ಸಮಗ್ರ ಅಭಿವೃದ್ದಿ ಎಂಬುದನ್ನು ಜನರ ದುಡ್ಡಲ್ಲಿ ಊರೂರು ತಿರುಗುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುವವರು ಯಾರು? ಬಡವರ ಕೊರಳ ಸಮೀಪವಿರುವ ಅಸಮಾನತೆಯ ಅಡಕತ್ತರಿಯನ್ನು ಅಲುಗಿಸುವವರು ಯಾರು?
ಈ ವರ್ಷದಲ್ಲೇ ಬಿಡುಗಡೆಯಾದ ವರ್ಲ್ಡ್ ಇನಿಕ್ವಾಲಿಟೀಸ್ ಲ್ಯಾಬ್ (World Inequality Lab) ಅಧ್ಯಯನ ವರದಿಯು ಭಾರತದಲ್ಲಿ ಅಸಮಾನತೆಯು ಅಪಾಯಕಾರಿಯಾಗಿ ಹೆಚ್ಚಾಗುತ್ತಿದೆ, ಯುಎಸ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಕ್ಕಿಂತ ಹೆಚ್ಚು ಆದಾಯ ಅಸಮಾನತೆ ಭಾರತದಲ್ಲಿದೆ ಎಂದು ಬಹಿರಂಗಪಡಿಸಿದೆ. ಭಾರತದಲ್ಲಿ ಆದಾಯ ಅಸಮಾನತೆ ಎಷ್ಟು ಮಟ್ಟಕ್ಕೆ ಜಿಗಿದಿದೆ ಎಂದರೆ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿದ್ದ ಅಸಮಾನತೆಗಿಂತ ಅಧಿಕವಾಗಿದೆ ಎಂದು ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಸೇರಿದಂತೆ ಹಲವು ಹೆಸರಾಂತ ಅರ್ಥಶಾಸ್ತ್ರಜ್ಞರ ಅಧ್ಯಯನ ವರದಿ ಉಲ್ಲೇಖಿಸಿದೆ. ಈ ಅಸಮಾನತೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಒಮ್ಮೆ ‘ದಿ ಪ್ಲಾಟ್‌ಫಾರ್ಮ್’ ಸಿನಿಮಾ ನೋಡಲೇಬೇಕು.
ಸ್ಪ್ಯಾನಿಷ್ ಸಿನಿಮಾ ‘ದಿ ಪ್ಲಾಟ್‌ಫಾರ್ಮ್’ನಲ್ಲಿ ಪಾತ್ರಧಾರಿಯೊಬ್ಬರು “ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಮಾತ್ರ ಸೇವಿಸಿದರೆ, ಆಹಾರವು ಅತ್ಯಂತ ಕೆಳ ಹಂತಕ್ಕೂ ತಲುಪುತ್ತದೆ” ಎಂದು ಹೇಳುತ್ತಾರೆ. ಅಸಮಾನತೆಯನ್ನು ಕಣ್ಣಿಗೆ ರಾಚುವಂತೆ ತೋರಿಸುವ ಈ ಸಿನಿಮಾದಲ್ಲಿ ಮೇಲಿನ ಹಂತದಲ್ಲಿ ಇರುವವರು ತಮಗೆ ಅಗತ್ಯ ಇರುವುದಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾರೆ, ಕೆಳಕ್ಕೆ ಬರುತ್ತಿದ್ದಂತೆ ಆಹಾರವೆಲ್ಲವೂ ಖಾಲಿಯಾಗುತ್ತದೆ. ಕೆಳ ಹಂತದಲ್ಲಿ ಇರುವವರಿಗೆ ಆಹಾರವೇ ಸಿಗುವುದಿಲ್ಲ. ಭಾರತದ ಸ್ಥಿತಿಯೂ ಕೂಡಾ ಹಾಗೆಯೇ ಆಗಿದೆ. ಆಗರ್ಭ ಶ್ರೀಮಂತರು ತಮಗೆ ಅಗತ್ಯ ಇರುವುದಕ್ಕೂ ಹೆಚ್ಚು ಆಸ್ತಿ ಪಾಸ್ತಿ ಹೊಂದಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಿದೆ.
ಇದನ್ನು ಓದಿದ್ದೀರಾ? ಆದಾಯ ಅಸಮಾನತೆ | ಬ್ರಿಟಿಷರನ್ನೂ ಮೀರಿಸಿದ ಮೋದಿ!
ವಿಶ್ವದ ಅಸಮಾನತೆ ವರದಿ 2023 ಭಾರತದಲ್ಲಿ ಅಸಮಾನತೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ವರದಿಯ ಪ್ರಕಾರ ಶೇಕಡ 10ರಷ್ಟು ಜನರು ಒಟ್ಟು ಆದಾಯದಲ್ಲಿ ಶೇಕಡ 57.1 ಮತ್ತು ಒಟ್ಟು ಸಂಪತ್ತಿನಲ್ಲಿ ಶೇಕಡ 64.6 ಪಾಲನ್ನು ಹೊಂದಿದ್ದಾರೆ. ಆದರೆ ಶೇಕಡ 50ರಷ್ಟು ಜನರಲ್ಲಿ ಬರೀ ಶೇಕಡ 13.1ರಷ್ಟು ಆದಾಯ, ಶೇಕಡ 5.9ರಷ್ಟು ಸಂಪತ್ತಿದೆ. ಹಸಿವಿನ ಸೂಚ್ಯಂಕದಲ್ಲಿ 125 ದೇಶಗಳ ಪೈಕಿ ಭಾರತವು 111ನೇ ಸ್ಥಾನದಲ್ಲಿದೆ.
ಎಲ್ಲವೂ ಖಾಸಗೀಕರಣ; ಮೃತದೇಹಗಳ ಒತ್ತೆಯಾಳು!
ಅಸಮಾನತೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ. ಶಿಕ್ಷಣ ಪಡೆಯುವುದು ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾದರೂ ಕೂಡ ಹಣವಿದ್ದರೆ ಮಾತ್ರ ಶಿಕ್ಷಣ ಎಂಬ ಸ್ಥಿತಿ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವಾಗ ಬಡವರ ಹಗಲು ದರೋಡೆ ಕಟ್ಟಿಟ್ಟ ಬುತ್ತಿ. ಅದರಲ್ಲೂ ಮಂಗಳೂರು ಸೇರಿದಂತೆ ಅದೆಷ್ಟೋ ನಗರಗಳಲ್ಲಿ ಆಸ್ಪತ್ರೆಗಳಲ್ಲಿ ಒಂದೆರಡು ದಿನಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಹಣ ಪಾವತಿಸದಿದ್ದರೆ ಮೃತ ದೇಹವನ್ನೇ ಬಂಧನದಲ್ಲಿಡಲಾಗುತ್ತಿದೆ. ಇದರ ವಿರುದ್ಧ ಕೆಲವು ಸಂಘಟನೆಗಳು ಧ್ವನಿ ಎತ್ತುತ್ತಿದೆ. ಆದರೆ ‘ಮೋದಿ ಅಭಿವೃದ್ದಿ ಮಾಡಿದರು’ ಎಂದು ಕೊಂಡಾಡುವ ಭಕ್ತರಿಗೆ ಈ ಹಗಲು ದರೋಡೆಗಳು ಕಣ್ಣಿಗೆ ಕಂಡರೂ ಕಣ್ಣು ಕುರುಡಾಗುತ್ತದೆ.
ಆರೋಗ್ಯ ವೆಚ್ಚವು ಪ್ರಸ್ತುತ ಕೈಗೆಟುಕದ ಸ್ಥಿತಿಗೆ ತಲುಪಿದೆ. ಸರ್ಕಾರದ ಡೇಟಾ ಪ್ರಕಾರ ಪ್ರತಿ ವರ್ಷ 63 ಮಿಲಿಯನ್ ಜನರು ಆರೋಗ್ಯ ವೆಚ್ಚದಿಂದಾಗಿಯೇ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಶೇಕಡ 74ರಷ್ಟು ಜನರು ಆಸ್ಪತ್ರೆಯ ವೆಚ್ಚಕ್ಕಾಗಿ ತಮ್ಮ ವೈಯಕ್ತಿಕ ಉಳಿತಾಯವನ್ನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ. ಶೇಕಡ 20ರಷ್ಟು ಜನರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದ ಸ್ಥಿತಿ ಇನ್ನೂ ಶೋಚನೀಯವಾಗಿದೆ. ದಿವಂಗತ ಸಂಚಾರಿ ವಿಜಯ್ ನಟನೆಯ, ಮಂಸೋರೆ ನಿರ್ದೇಶನದ 2014ರ ‘ಹರಿವು’ ಸಿನಿಮಾ ಗ್ರಾಮೀಣ ಜನರಿಗೆ ಇಂದಿಗೂ ಪ್ರಸ್ತುತ.
ಇದನ್ನು ಓದಿದ್ದೀರಾ? ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯನ್ನು ನಿವಾರಿಸಲು ಕೇಂದ್ರ ಬಜೆಟ್ ವಿಫಲ: ಡಾ. ಸಿದ್ದಾರ್ಥ ಮದನಕರ
ಭಾರತದ ಅತೀ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಬರೋಬ್ಬರಿ ಐದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ತನ್ನ ಪುತ್ರನ ವಿವಾಹ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ವಿಶ್ವದ ಒಟ್ಟು ಬಡವರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಭಾರತೀಯರಾಗಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಮೂವರಲ್ಲಿ ಓರ್ವ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ. ಅದೆಷ್ಟೋ ಜನರು ವೈದ್ಯರು, ಇಂಜಿನಿಯರ್‌ಗಳು, ಪೈಲೆಟ್‌ಗಳಾಗುವ ತಮ್ಮ ಕನಸನ್ನು ಬದಿಗೊತ್ತಿ ಯಾವುದೋ ಸಂಸ್ಥೆಯಲ್ಲಿ, ಬಟ್ಟೆ ಅಂಗಡಿಯಲ್ಲಿ, ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವುದಕ್ಕೂ ಕಾರಣ ಅಸಮಾನತೆ. ಒಂದೇ ಕ್ಲಿಕ್‌ನಲ್ಲಿ ನಾವು ಬೇಕಾದ ಎಲ್ಲಾ ವಸ್ತುಗಳ ಖರೀದಿ ಮಾಡಬಹುದಾದರೂ ಆರ್ಥಿಕ, ಸಾಮಾಜಿಕ ಸಮಾನತೆ ಎಂಬುದು ಇಂದಿಗೂ ಮರೀಚಿಕೆ.
ಬರೀ ಹೆದ್ದಾರಿಗಳಿಗೆ ಸೀಮಿತವಾದ ಅಭಿವೃದ್ಧಿ
ಪ್ರಸ್ತುತ ಅಭಿವೃದ್ದಿ ಮತ್ತು ಅಸಮಾನತೆ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಸರ್ಕಾರ ಗಮನಹರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಈ ಹಿಂದೆಯೂ ಇತ್ತು, ಇಂದಿಗೂ ಇದೆ. ಅಷ್ಟಕ್ಕೂ ಭಾರತದಲ್ಲಿ ಈ ಅಸಮಾನತೆ ಎಂಬುದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಹಲವಾರು ವರ್ಷಗಳಿಂದ ಲಿಂಗ, ಆದಾಯ, ಸಂಪತ್ತು, ಶಿಕ್ಷಣ, ಆರೋಗ್ಯ ಹೀಗೆ ಹಲವು ಅಸಮಾನತೆಗಳು ಗುಟ್ಟಾಗಿ ಏಣಿ ಏರುತ್ತಿದೆ. ಈ ಅಸಮಾನತೆಗೆ ಹೆಚ್ಚು ಬಲಿಯಾಗುವುದು ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಆ ಅಸಮಾನತೆಗೆ ನಾವು ಬಲಿಯಾಗಿದ್ದರೂ ನಾವು ಅದನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧತೆ ಹೊಂದಿಲ್ಲದಿರುವುದು ದುರದೃಷ್ಟ.
ಇದನ್ನು ಓದಿದ್ದೀರಾ? ಅಸಮಾನತೆ ಹೋಗಲಾಡಿಸದೆ ಶೋಷಿತ ಸಮುದಾಯಗಳ ಏಳಿಗೆ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಭಾರತವು ಈಗ ವಿಶ್ವದಲ್ಲೇ ಐದನೇ ಅತೀ ದೊಡ್ಡ ಆರ್ಥಿಕತೆ ಎನಿಸಿಕೊಳ್ಳುತ್ತಿದೆ. ಆದರೆ ಆದಾಯದ ಸಮಾನತೆ ವಿಚಾರಕ್ಕೆ ಬಂದಾಗ ಭಾರತ ಇಂದಿಗೂ ಅತಿಯಾಗಿ ಹಿಂದುಳಿದಿದೆ. ದೇಶ ಎಷ್ಟು ಪ್ರಗತಿ ಕಾಣುತ್ತಿದ್ದರೂ ಶಿಕ್ಷಣ, ಆರೋಗ್ಯ, ಸಾಮಾಜಿಕ, ಆರ್ಥಿಕ ಅಸಮಾನತೆಗಳು ಅದಕ್ಕಿಂತ ಹತ್ತು ಪಟ್ಟು ವೇಗದಲ್ಲಿ ಹೆಚ್ಚಾಗುತ್ತಿದೆ.
ನಾಲ್ಕು ಕಳಪೆ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿ, ಕಟ್ಟಡಗಳನ್ನು ನಿರ್ಮಿಸಿ ದೇಶ ಅಭಿವೃದ್ಧಿಯಾಗುತ್ತಿದೆ ಎಂದರೆ ಎಷ್ಟು ಸರಿ? ಅಭಿವೃದ್ದಿ ಎಂದರೆ ಬರೀ ಹೆದ್ದಾರಿ, ಕಟ್ಟಡಗಳಿಗೆ ಸೀಮಿತವೇ? ಅಭಿವೃದ್ದಿ ಎಂದರೆ ಸಮಗ್ರ ಅಭಿವೃದ್ದಿ ಎಂಬುದನ್ನು ಜನರ ದುಡ್ಡಲ್ಲಿ ಊರೂರು ತಿರುಗುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುವವರು ಯಾರು? ಬಡವರ ಕೊರಳ ಸಮೀಪವಿರುವ ಅಸಮಾನತೆಯ ಅಡಕತ್ತರಿಯನ್ನು ಅಲುಗಿಸುವವರು ಯಾರು?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.