ಅಜ್ಞಾನಕ್ಕೆ ಅಂತ್ಯವಿದೆ, ಆದರೆ ಜ್ಞಾನಕ್ಕೆ ಎಂದಿಗೂ ಸಾವು ಎಂಬುದೇ ಇರುವುದಿಲ್ಲ, ಅದು ಅಂತ್ಯವಿಲ್ಲದ್ದು. ಜ್ಞಾನವೆಂಬುದು ಅಮರ. ಅಜ್ಞಾನವು ಅಂತ್ಯವನ್ನು ಕಾಣುತ್ತದೆ. ಆದರೆ ಯಾವುದೇ ಅಂತ್ಯ, ಅಂತರ ಜ್ಞಾನಕ್ಕಿರುವುದಿಲ್ಲ. ಶರಣರು ಜ್ಞಾನದ ಬೆಳಕಿನಲ್ಲಿ ಸಾಗಿದ್ದರಿಂದ ಅವರು ಅಜರಾಮರವಾಗಿ ಉಳಿದಿದ್ದಾರೆ ಎಂದು ಬಸವ ಹರಳಯ್ಯ ಶ್ರೀ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಮಹಾ ಶಿವಶರಣ ಹರಳಯ್ಯಗುರು ಶ್ರೀಪೀಠದಲ್ಲಿ ಆಯೋಜಿಸಿದ್ದ ಜ್ಞಾನದ ಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
“ಜ್ಞಾನದ ಬೆಳಕು ಶರಣರನ್ನು ಸದಾ ಸನ್ಮಾರ್ಗದಲ್ಲಿ ಮುನ್ನಡೆಸಿತು. ಜ್ಞಾನದ ಸನ್ಮಾರ್ಗವೇ ಸದ್ಗತಿಯನ್ನು ತೋರಿಸಿತು. ಜ್ಞಾನದ ಹಾದಿಯಲ್ಲಿ ನಡೆದವರಿಗೆ ಸೋಲೆಂಬುದೇ ಇಲ್ಲ. ಅಜ್ಞಾನದ ಹಾದಿಯಲ್ಲಿ ನಡೆದವರಿಗೆ ಸದಾ ಸೋಲು ಬೆನ್ನೆತ್ತಿರುತ್ತದೆ. ಭಕ್ತಿ, ಜ್ಞಾನ, ವೈರಾಗ್ಯ ಇವುಗಳನ್ನು ಪಡೆಯಲು ಗುರು ಬೇಕು. ಗುರುವಿನಿಂದ ಮಾತ್ರ ಇವುಗಳು ಸಿದ್ದಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಶಾಲೆಗೆ ಹೋಗುವಾಗ ಪುಡಾರಿಗಳ ಕಿರುಕುಳ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜನಪದ ಕಲಾವಿದರು, ಸಂಗೀತ ವಿದ್ವಾಂಸರು ಆಗಿರುವ ಗೊಂದಾಳಪ್ಪನವರು ಮಾತನಾಡಿ, “ಗುರುವಿಲ್ಲದ ವಿದ್ಯೆ ಅಜ್ಞಾನದ ಮುದ್ದೆಯಂತೆ, ಗುರುವಿಲ್ಲದೆ ಯಾವ ವಿದ್ಯೆಯೂ ವಿಧ್ಯಾರ್ಥಿಗೆ ಸಿದ್ದಿಸದು. ಗುರುವಿನ ಮಹಿಮೆ ಬಲ್ಲವರೇ ಬಲ್ಲರು. ಗುರು ಒಂದು ದೊಡ್ಡ ಶಕ್ತಿ. ಸೋಲು ಗೆಲುವಿನ ಮೆಟ್ಟಿಲಾಗಬೇಕು, ಸೋತು ಗೆಲ್ಲಬೇಕು, ಗೆದ್ದು ಸೋಲಬಾರದೆಂದು” ಎಂದು ತಿಳಿಸಿದರು.
ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಹರಳಯ್ಯ, ಮುಕ್ತಾಂಬ, ಶಿಕ್ಷಕಿಯರಾದ ರಕ್ಷಿತಾ, ಛಾಯಾ, ಪವಿತ್ರ ಸೇರಿದಂತೆ ಇಡೀ ಶಿಕ್ಷಕ ವೃಂದ, ವಿಧ್ಯಾರ್ಥಿಗಳು ಇದ್ದರು.