ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು 4.6 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಂದ 13.5 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ. ವಿಪರ್ಯಾಸವೆಂದರೆ, 21,232 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವರಿಗೆ 11.2 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದ್ದಿದ್ದವರನ್ನು ಪತ್ತೆಹಚ್ಚುವ ಅಭಿಯಾನವು ಫೆಬ್ರವರಿ 2021 ರಿಂದ ಆರಂಭವಾಗಿದೆ. ಆಧಾರ್ ಸಂಖ್ಯೆಗಳನ್ನು ಬಳಸಿಕೊಂಡು ವಿವಿಧ ಇಲಾಖೆಗಳಿಂದ ಅಂತಹ ಅನರ್ಹ ಫಲಾನುಭವಿಗಳ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಇಲಾಖೆಯ ಹೆಚ್ಚುವರಿ ನಿರ್ದೇಶಕ (ವಿಜಿಲೆನ್ಸ್ ಮತ್ತು ಸಾರ್ವಜನಿಕ ವಿತರಣೆ) ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹೇಳಿದ್ದಾರೆ.
“ನಾವು ಸಾರಿಗೆ ಇಲಾಖೆಯ ನೆರವನ್ನೂ ಪಡೆದಿದ್ದೇವೆ. 12,583 ಬಿಪಿಎಲ್ ಫಲಾನುಭವಿಗಳು ಐಷಾರಾಮಿ ನಾಲ್ಕು-ಚಕ್ರದ ವಾಹನಗಳನ್ನು ಹೊಂದಿದ್ದಾರೆ. ಮೂರು ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ 2.9 ಲಕ್ಷ ರೈತರು ಸಹ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದಾರೆ ಎಂಬುದು ಪತ್ತೆಯಾಗಿದೆ” ಎಂದು ಅವರು ವಿವರಿಸಿದ್ದಾರೆ.
“ಆದಾಯ ತೆರಿಗೆ ಇಲಾಖೆಯ ನೆರವಿನಿಂದ ವಾರ್ಷಿಕ 1.2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ 50,000 ಜನರನ್ನು ಪತ್ತೆಹಚ್ಚಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೈಸೂರು | ಕರ್ತವ್ಯಲೋಪ ಆರೋಪ; ಇಬ್ಬರು ಶಿಕ್ಷಕರು ಅಮಾನತು
“ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಹೀಗಾಗಿ, ಅವರಿಗೆ ಭಾರೀ ಮೊತ್ತದ ದಂಡವನ್ನಷ್ಟೇ ವಿಧಿಸಿದ್ದೇವೆ. ಅಂತಹ 21,232 ನೌಕರರ ಪೈಕಿ 17,521 ಮಂದಿ ಈಗಾಗಲೇ ತಮ್ಮ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡ್‌ಗೆ ಪರಿವರ್ತಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
“ದಂಡವನ್ನು ವಿಧಿಸುವಾಗ, ನಾವು ಅವರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿದ್ದೇವೆ. ಆದ್ದರಿಂದ, ಸರ್ಕಾರಿ ಸಿಬ್ಬಂದಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ” ಎಂದು ತಿಳಿಸಿದ್ದಾರೆ.