ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಯಚವಾಗಿದ್ದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ವರದಕ್ಷಿಣೆ ಹೆಸರಿನಲ್ಲಿ 18 ಲಕ್ಷ ರೂ. ಪಡೆದು ಮಹಿಳಾ ಕಾನ್‌ಸ್ಟೆಬಲ್‌ಗೆ ವಂಚಿಸಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ.
ನೆಲಮಂಗಲ ನಿವಾಸಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) ಸೇವೆ ಸಲ್ಲಿಸುತ್ತಿದ್ದ ಯುವತಿ ವಂಚನೆಗೆ ಒಳಗಾಗಿದ್ದಾರೆ. ತೆಲಂಗಾಣ ಮೂಲದ ಅಶೋಕ್ ಮುಸ್ತಿ ಎಂಬಾತ ತಮಗೆ ವಂಚಿಸಿದ್ದಾನೆಂದು ಆರೋಪಿಸಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಯುವತಿ ಮದುವೆಯಾಗಲು ನಿರ್ಧರಿಸಿದ್ದರು. ಜೀವನ ಸಂಗಾತಿಯ ಹುಡುಕಾಟಕ್ಕಾಗಿ ಮ್ಯಾಟ್ರಿಮೋನಿಯಲ್ ವೇದಿಕೆಗಳಲ್ಲಿ ಖಾತೆ ತೆರೆದಿದ್ದರು. ಅವರಿಗೆ ಮ್ಯಾಟ್ರಿಮೋನಿಯಲ್‌ನಲ್ಲಿ ತೆಲಂಗಾಣದ ಆಶೋಕ್ ಮುಸ್ತಿ ಪರಿಚಯವಾಗಿದ್ದಾನೆ. ತಾನು ಸರ್ಕಾರಿ ಉದ್ಯೋಗಿ ಎಂದೂ ನಂಬಿಸಿದ್ದಾನೆ.
ಮದುವೆ ಮಾತುಕತೆಯನ್ನೂ ನಡೆಸಿದ್ದ ಆರೋಪಿ ಆಶೋಕ್, ವರದಕ್ಷಿಣೆಯಾಗಿ 20 ಲಕ್ಷ ರೂ. ನೀಡಬೇಕೆಂದು ಯುವತಿಯ ಬಳಿ ಬೇಡಿಕೆ ಇಟ್ಟಿದ್ದಾನೆ. ಆತನ ಬ್ಯಾಂಕ್ ಖಾತೆಗೆ ಯುವತಿ 18 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.
ಹಣ ಪಡೆದ ಬಳಿಕ, ವಿವಾಹಕ್ಕೆ ಆರೋಪಿ ನಿರಾಕರಿಸಿದ್ದಾನೆ. ಹಣ ವಾಪಸ್ ಕೊಡುವಂತೆ ಕೇಳಿದರೂ, ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾನೆ. ಇದೀಗ, ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ದಾಬಸ್‌ಪೇಟೆ ಪೊಲೀಸರು ಬಿಎನ್‌ಎಸ್ ಸೆಕ್ಷನ್ 318, 321, 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.