2025ರ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಶತಕ ದಾಖಲಿಸಿರುವ ಕೊಹ್ಲಿ, ಪಾಕಿಸ್ತಾನ ವಿರುದ್ಧ ನಾಲ್ಕನೇ ಬಾರಿಗೆ ಮೂರಂಕಿ ದಾಟಿದ್ದಾರೆ. ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೀಂ ಇಂಡಿಯಾದ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ದಾಖಲೆಗಳ ಸರದಾರರಾಗಿದ್ದಾರೆ. ಕೊಹ್ಲಿ ರನ್‌ಗಳನ್ನು ಸ್ಫೋಟಿಸುವಾಗ ಹಲವು ದಾಖಲೆಗಳು ನಿರ್ಮಾಣವಾಗುತ್ತವೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಪಾಕ್ ವಿರುದ್ಧ ಶತಕ ಸಿಡಿಸಿದ ಕೊಹ್ಲಿ ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದು ಮಾತ್ರವಲ್ಲ, ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹತ್ತಾರು ದಾಖಲೆಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡರು.
ವೇಗವಾಗಿ 14 ಸಾವಿರ ಪೂರೈಸಿದ ಕೊಹ್ಲಿ
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 17 ರನ್ ಗಳಿಸಿದಾಗ ಏಕದಿನ ಮಾದರಿಯಲ್ಲಿ ಹದಿನಾಲ್ಕು ಸಾವಿರ ರನ್ ದಾಟಿದರು. ಮಾಸ್ಟರ್ ಬ್ಯ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಆಟಗಾರ ಕುಮಾರ್ ಸಂಗಕ್ಕರ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ಮೂರನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು.
ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಕ್ಕರ ಏಕದಿನ ಕ್ರಿಕೆಟ್‌ನಲ್ಲಿ 14,000 ಕ್ಕಿಂತ ಹೆಚ್ಚಿನ ರನ್ ಗಳಿಸಿದ್ದರೂ, ಅತಿ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಇದೀಗ ಕೊಹ್ಲಿ ಪಾಲಾಗಿದೆ. ಸಚಿನ್ 452 ಇನಿಂಗ್ಸ್‌ಗಳಿಂದ 44.83 ಸರಾಸರಿಯಲ್ಲಿ 18,426 ರನ್ ಗಳಿಸಿದ್ದರೆ; ಕುಮಾರ್ ಸಂಗಕ್ಕರ 380 ಇನಿಂಗ್ಸ್‌ಗಳ ಮೂಲಕ 41.98 ಸರಾಸರಿಯಲ್ಲಿ 14,234 ರನ್ ಪೇರಿಸಿದ್ದರು. ಆದರೆ ವಿರಾಟ್ ಕೊಹ್ಲಿ 287 ಇನಿಂಗ್ಸ್‌ಗಳಲ್ಲಿ 57.78 ಸರಾಸರಿಯಲ್ಲಿ 14,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಶತಕದ ದಾಖಲೆ
ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಇದು ಕೊಹ್ಲಿ ಏಕದಿನದಲ್ಲಿ ಸಿಡಿಸಿದ 51ನೇ ಶತಕವಾಗಿದೆ. ಅದಲ್ಲದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ದ ಶತಕ ಸಿಡಿಸಿದ ಮೊದಲ ಟೀಂ ಇಂಡಿಯಾ ಕ್ರಿಕೆಟಿಗ ಅನ್ನುವ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತೀಯ ಬ್ಯಾಟರ್ ಸಿಡಿಸಿದ ಗರಿಷ್ಠ ಸ್ಕೋರ್ ರೋಹಿತ್ ಶರ್ಮಾ ಅವರ 91 ರನ್ ಆಗಿತ್ತು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ 91 ರನ್ ಸಿಡಿಸಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಅಜೇಯ 100 ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ನಮ್ಮ ಪೂರ್ವಜರು ಜೈಲಿನಲ್ಲಿದ್ದಾಗ, ನಿಮ್ಮವರು ಬ್ರಿಟೀಷರ ಗುಲಾಮರಾಗಿದ್ದರು’: ಸಂಘಿಗೆ ಸಾಹಿತಿ ಜಾವೇದ್ ಅಖ್ತರ್ ತಿರುಗೇಟು
ಇದಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಒಟ್ಟು 82 ಶತಕ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 51, ಟೆಸ್ಟ್‌ನಲ್ಲಿ 30, ಟಿ20ಯಲ್ಲಿ 1 ಶತಕ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಸಾಧನೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 82 ಶತಕದ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ ಇದ್ದು ಅವರು ಒಟ್ಟು 71 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ.
50 ಪ್ಲಸ್‌ನಲ್ಲಿ ಅಗ್ರಸ್ಥಾನ
ಐಸಿಸಿ ಏಕದಿನ ಟೂರ್ನಿಯಲ್ಲಿ ಅತ್ಯಧಿಕ 50+ ಸ್ಕೋರ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ 23 ಫಿಫ್ಟಿ ಪ್ಲಸ್ ಸ್ಕೋರ್ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರು. ಇದೀಗ ಆ ದಾಖಲೆಯನ್ನು ಸರಿಗಟ್ಟುವ ಮೂಲಕ ಕಿಂಗ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಅತ್ಯಧಿಕ ಪಂದ್ಯಶ್ರೇಷ್ಠ
ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು. ಆ ಮೂಲಕ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ ಈವರೆಗೆ 14 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಅತ್ಯಧಿಕ ಕ್ಯಾಚ್!
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್ಗಳನ್ನು ಸಹ ಹಿಡಿದು ಅತ್ಯಧಿಕ ಕ್ಯಾಚ್ ಹಿಡಿದ ವಿಶ್ವದ ಮೂರನೇ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ಕೊಹ್ಲಿ 299 ಏಕದಿನ ಪಂದ್ಯಗಳಲ್ಲಿ 158 ಕ್ಯಾಚ್ ಪಡೆದಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಅವರು 3ನೇ ಸ್ಥಾನ ಪಡೆದಿದ್ದು, ಮೊದಲ ಸ್ಥಾನದಲ್ಲಿ ಮಹೇಲಾ ಜಯವರ್ಧನೆ (218), ನಂತರ ರಿಕಿ ಪಾಂಟಿಂಗ್ (160) ಸ್ಥಾನ ಪಡೆದಿದ್ದಾರೆ. ಅದಲ್ಲದೆ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಕ್ಷೇತ್ರರಕ್ಷಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮೊಹಮ್ಮದ್ ಅಜರುದ್ದೀನ್ (156) ಹೆಸರಿನಲ್ಲಿತ್ತು. ಇದೀಗ 158 ಕ್ಯಾಚ್ಗಳೊಂದಿಗೆ ಕೊಹ್ಲಿ ಹೆಚ್ಚು ಕ್ಯಾಚ್ ಹಿಡಿದ ಕ್ಷೇತ್ರರಕ್ಷಕರಾಗಿದ್ದಾರೆ.
ಐಸಿಸಿ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ಶತಕ
2025ರ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಶತಕ ದಾಖಲಿಸಿರುವ ಕೊಹ್ಲಿ, ಪಾಕಿಸ್ತಾನ ವಿರುದ್ಧ ನಾಲ್ಕನೇ ಬಾರಿಗೆ ಮೂರಂಕಿ ದಾಟಿದ್ದಾರೆ. ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಐಸಿಸಿ ಟೂರ್ನಮೆಂಟ್‌ಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಆಟಗಾರರ ಪಟ್ಟಿಯಲ್ಲೂ ಕೊಹ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಒಟ್ಟು 6 ಶತಕ ಬಾರಿಸಿರುವ ವಿರಾಟ್, ಅಷ್ಟೇ ಶತಕ ಬಾರಿಸಿರುವ ಡೇವಿಡ್ ವಾರ್ನರ್, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಸರಿಗಟ್ಟಿದ್ದಾರೆ.
ಅತೀ ಹೆಚ್ಚು ರನ್; ಮೂರನೇ ಸ್ಥಾನ
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಕುಮಾರ್ ಸಂಗಕ್ಕರ ನಂತರದ ಸ್ಥಾನ ಕೊಹ್ಲಿಗೆ ಲಭಿಸಿದೆ. ವಿರಾಟ್ 27,503 ರನ್ ಗಳಿಸಿದರೆ, ಸಚಿನ್ 34,357 ರನ್ ಹಾಗೂ ಸಂಗಕ್ಕರ 28,016 ರನ್ ಪೇರಿಸಿ ಮೊದಲೆರಡು ಸ್ಥಾನಗಳಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (27,483 ರನ್) ಇದ್ದಾರೆ.
