ಹುಣಸೆ ಹಣ್ಣಿನಿಂದ ವರ್ಷಕ್ಕೆ ₹500 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ. ಜೊತೆಗೆ ನಾಲ್ಕೈದು ತಿಂಗಳು ರೈತರು, ಮಹಿಳೆಯರು, ಕಾರ್ಮಿಕರು, ಟ್ರ್ಯಾಕ್ಟರ್, ಟೆಂಪೊ ಮಾಲೀಕರು, ಮಧ್ಯವರ್ತಿಗಳು ಸೇರಿದಂತೆ ಸಾವಿರಾರು ಮಂದಿಗೆ ಕೆಲಸ ನೀಡುವ ಮೂಲಕ ಆರ್ಥಿಕ ಚೈತನ್ಯ ನೀಡುತ್ತಿದೆ.
ನೆತ್ತಿಯ ಮೇಲೆ ಸುಡು ಬಿಸಿಲು, ಎಲ್ಲೋ ಒಮ್ಮೊಮ್ಮೆ ಬೀಸುವ ತಂಗಾಳಿ, ದೂರದಲ್ಲೆಲ್ಲೋ ಕೇಳಿಬರುವ ಹುಣಸೆ ಬೋಟು ಕುಟ್ಟುವ ಸದ್ದು, ಮರಗಳ ಕೆಳಗೆ ಇಲ್ಲವೇ ಮನೆಯ ಮುಂಭಾಗದಲ್ಲಿ ಹುಣಸೆಹಣ್ಣನ್ನು ಜಜ್ಜಿ ತೊಳೆಗಳಿಂದ ನಾರು, ಬೀಜ ಬೇರ್ಪಡಿಸುವ ಕೆಲಸದಲ್ಲಿ ಮಗ್ನರಾಗಿರುವ ಹೆಂಗಳೆಯರು…
ತುಮಕೂರಿನ ಗ್ರಾಮೀಣ ಭಾಗದಲ್ಲಿ ಕಂಡು ಬರುವ ದೃಶ್ಯಗಳಿವು. ಸದ್ಯ ‘ಬರದ ನಾಡಿನ ಬಂಗಾರ’ ಎಂದೇ ಕರೆಯಲ್ಪಡುವ ಹುಣಸೆ ಫಸಲು ಈ ಪ್ರದೇಶದಲ್ಲಿ ಸುಗ್ಗಿಯನ್ನೇ ಸೃಷ್ಟಿಸಿದೆ. ಹುಣಸೆ ಸಿಪ್ಪೆ ತೆಗೆಯುವ, ಹಣ್ಣು ಕುಟ್ಟಿ ಬೀಜ ತೆಗೆಯುವ, ಕರಿಪುಳಿ ಒತ್ತುವ, ಹುಣಸೆ ಹಣ್ಣಿನ ಚಕ್ಕ ತುಳಿಯುವ, ದೂರದ ಮಾರುಕಟ್ಟೆಗೆ ಸಾಗಿಸುವಂತಹ ಕೆಲಸಗಳು ಭರದಿಂದ ನಡೆಯುತ್ತಿವೆ.

ತುಮಕೂರು ಜಿಲ್ಲೆ ತೆಂಗು ಬೆಳೆಗೆ ಪ್ರಸಿದ್ಧವಾದರೂ ಇಲ್ಲಿ ಹುಣಸೆ ಬೆಳೆಯುವವರ ಪ್ರಮಾಣವೂ ಗಣನೀಯವಾಗಿದೆ. ಜಿಲ್ಲೆಯ ಸುಮಾರು 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹುಣಸೆ ಬೆಳೆಯಲಾಗುತ್ತಿದೆ. ತುಮಕೂರು ತಾಲ್ಲೂಕಿನ ಹಳ್ಳಿಗಳು, ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕುಗಳಲ್ಲಿ ಹುಣಸೆ ಮರಗಳ ಸಂಖ್ಯೆ ಹೇರಳವಾಗಿದೆ.
ಹುಣಸೆ ಮಳೆನೀರು ಆಶ್ರಿತ ಬೆಳೆಯಾಗಿದ್ದು, ಕೀಟ ಮತ್ತು ರೋಗಬಾಧೆ ಕಡಿಮೆ. ನಿರ್ವಹಣೆ ಮಾಡುವುದೂ ಸುಲಭ. ಜಿಲ್ಲೆಯಲ್ಲಿ ಬೆರಳೆಣಿಕೆಯ ರೈತರನ್ನು ಬಿಟ್ಟರೆ ಉಳಿದಂತೆ ಎಲ್ಲೂ ಪ್ಲಾಂಟೇಷನ್ ರೂಪದಲ್ಲಿ ಹುಣಸೆ ಬೆಳೆದಿಲ್ಲ. ಅಲ್ಲಲ್ಲಿ ತೋಟಗಳಲ್ಲಿ, ಕಣದ ಜಾಗದಲ್ಲಿ, ರಸ್ತೆ ಬದಿ ಹಾಗೂ ಖಾಲಿ ನಿವೇಶನ, ಹಿತ್ತಲುಗಳು, ತಗ್ಗು ದಿಣ್ಣೆ ಪ್ರದೇಶದಲ್ಲಿ ಹುಣಸೆಯನ್ನು ಪರ್ಯಾಯ ಬೆಳೆಯಾಗಿ ಬೆಳೆಯುವುದೇ ಹೆಚ್ಚು.

ಹುಣಸೆ ಹಣ್ಣಿಗೆ ದಾಖಲೆ ಬೆಲೆ
ಹೊಸ ವರ್ಷ ಈ ಭಾಗದ ಹುಣಸೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. ಇದಕ್ಕೆ ಕಾರಣ ತುಮಕೂರು ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ಬಂಪರ್ ಬೆಲೆ ಸಿಕ್ಕಿರುವುದು. ಫೆಬ್ರುವರಿ 7ರಂದು ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್‌ಗೆ ಕನಿಷ್ಠ ₹13 ಸಾವಿರದಿಂದ ಗರಿಷ್ಠ ₹36 ಸಾವಿರದವರೆಗೂ ಮಾರಾಟವಾಗಿದೆ.
ಕಳೆದ ವರ್ಷದ ಇದೇ ಹೊತ್ತಿಗೆ ಕ್ವಿಂಟಲ್ ಹುಣಸೆ ಗರಿಷ್ಠ ₹26 ಸಾವಿರದವರೆಗೂ ಮಾರಾಟವಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಬೆಲೆ ಸಿಗುತ್ತಿದೆ. ಇಳುವರಿ ತೀವ್ರವಾಗಿ ಕುಸಿದಿದ್ದು, ಮಾರುಕಟ್ಟೆಗೆ ಹಣ್ಣಿನ ಆವಕ ಕಡಿಮೆ ಆಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
‘ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಏನೋ ಸಿಗುತ್ತಿದೆ. ಆದರೆ ಈ ಬಾರಿ ಕಡಿಮೆ ಮಳೆ ಆಗಿರುವ ಕಾರಣ ಹಣ್ಣಿನ ತಿರುಳು ಸಣ್ಣ ಆಗಿದ್ದು, ಇದರಿಂದ ಇಳುವರಿಯೂ ಕಡಿಮೆಯಾಗಿದೆ. ಇದರಿಂದ ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ’ ಎಂದು ರೈತ ರಂಗನಾಥ್ ತಿಳಿಸಿದರು.
ಹುಣಸೆ ಅಭಿವೃದ್ಧಿ ಮಂಡಳಿಗೆ ಹೆಚ್ಚಿದ ಕೂಗು
ತೆಂಗು ಅಭಿವೃದ್ಧಿ ಮಂಡಳಿ, ತೆಂಗು ನಾರಿನ ಅಭಿವೃದ್ಧಿ ಮಂಡಳಿ, ತಂಬಾಕು ಮಂಡಳಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಕಾಫಿ ಮಂಡಳಿ ಮಾದರಿಯಲ್ಲೇ ತುಮಕೂರಿನಲ್ಲಿ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂಬುದು ಇಲ್ಲಿನ ಹುಣಸೆ ಬೆಳೆಗಾರರ ಒತ್ತಾಯ.
ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಹುಣಸೆ ಹಣ್ಣಿನಿಂದ ವರ್ಷಕ್ಕೆ ₹500 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ. ಜೊತೆಗೆ ನಾಲ್ಕೈದು ತಿಂಗಳು ರೈತರು, ಮಹಿಳೆಯರು, ಕಾರ್ಮಿಕರು, ಟ್ರ್ಯಾಕ್ಟರ್, ಟೆಂಪೊ ಮಾಲೀಕರು, ಮಧ್ಯವರ್ತಿಗಳು ಸೇರಿದಂತೆ ಸಾವಿರಾರು ಮಂದಿಗೆ ಕೆಲಸ ನೀಡುವ ಮೂಲಕ ಆರ್ಥಿಕ ಚೈತನ್ಯ ನೀಡುತ್ತಿದೆ.

ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ ಅಮಲಗೊಂದಿ ಮಾತನಾಡಿ, ತುಮಕೂರು ಎಪಿಎಂಸಿಯು ರಾಜ್ಯದ ಅತಿದೊಡ್ಡ ಹುಣಸೆ ಹಣ್ಣು ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಹುಣಸೆ ಬೆಳೆಗಾರರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಮಿಷನ್ ದಂಧೆಯಿಂದ ರೈತರಿಗೆ ಭಾರಿ ಮೋಸವಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಬೆಲೆ ಸಿಗದ ಕಾರಣ, ಇಲ್ಲಿನ ರೈತರು ಆಂಧ್ರಪ್ರದೇಶದ ಹಿಂದೂಪುರ ಮಾರುಕಟ್ಟೆಯಲ್ಲಿ ಹುಣಸೆ ಮಾರುತ್ತಿದ್ದಾರೆ. ಇದನ್ನೆಲ್ಲಾ ತಡೆಗಟ್ಟಲು ತುಮಕೂರಿನಲ್ಲಿ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು. ಮಂಡಳಿ ಮೂಲಕ ಹುಣಸೆ ಉತ್ಪನ್ನಗಳನ್ನು ಮಾಡುವ ಮೂಲಕ ಗ್ರಾಮೀಣ ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಅವರು ತಿಳಿಸಿದರು.
ತುಮಕೂರಿನಲ್ಲಿ ಕೋಲ್ಡ್ ಸ್ಟೋರೇಜ್ ಇಲ್ಲ. ಇದರಿಂದ ರೈತರು ಅನಿವಾರ್ಯವಾಗಿ ಕಡಿಮೆ ದರವಿದ್ದಾಗಲೇ ಹುಣಸೆ ಮಾರುವ ಸ್ಥಿತಿ ಎದುರಿಸಬೇಕಾಗಿದೆ. ಕೋಲ್ಡ್ ಸ್ಟೋರೇಜ್ ಇದ್ದರೆ ಬೆಲೆ ಕುಸಿತದ ಸಂದರ್ಭದಲ್ಲಿ ಹುಣಸೆ ಹಣ್ಣನ್ನು ದೀರ್ಘಕಾಲದವರೆಗೆ ಕಾಪಿಟ್ಟು ಧಾರಣೆ ಏರಿಕೆಯಾದಾಗ ಮಾರಾಟ ಮಾಡಿದರೆ ಲಾಭ ಸಿಗುತ್ತದೆ. ಹಾಗಾಗಿ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದೂ ಅವರು ಮನವಿ ಮಾಡಿದರು.
‘ನನ್ನ ಎರಡು ಎಕರೆ ಜಮೀನಿನಲ್ಲಿ 30 ಹುಣಸೆ ಮರಗಳಿವೆ. 25-30 ಕ್ವಿಂಟಲ್ ಹುಣಸೆ ಬರುತ್ತದೆ. ಮಳೆ ಅತಿ ಕಡಿಮೆ ಆದರೂ ಸಮಸ್ಯೆ. ಹೆಚ್ಚಾದರೂ ಸಮಸ್ಯೆ. ಕೂಲಿ, ಬಾಡಿಗೆ, ಕಮಿಷನ್ ದುಬಾರಿ ಆಗುತ್ತಿರುವ ಕಾರಣ ಬೆಳೆಗಾರರಿಗೆ ಏನೂ ದಕ್ಕುತ್ತಿಲ್ಲ. ಹುಣಸೆಗೆ ಬೆಳೆ ವಿಮೆ ಕಲ್ಪಿಸಬೇಕು. ಜೊತೆಗೆ ಜಿಲ್ಲೆಯಲ್ಲಿ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರೆ ನಮಗೂ ಒಳ್ಳೆಯದಾಗುತ್ತದೆ’ ಎನ್ನುತ್ತಾರೆ ಹುಣಸೆ ಬೆಳೆಗಾರ ರಂಗನಾಥ್.
ತೆಂಗು ಬಿಟ್ಟರೆ ಹುಣಸೆ ಈ ಭಾಗದ ಜನರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ತುಮಕೂರಿನಲ್ಲಿ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರೆ ರೈತರಿಗೆ, ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಮಂಡಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ರೈತ ಮುಖಂಡರ ಒತ್ತಾಯವಾಗಿದೆ.