ಪದಕಾತಿ ಕರಿಯಮ್ಮ ಓದು, ಬರೆಹ ಅರಿಯದವರು. ಆದರೆ ಇವರ ಎದೆಗೂಡಿನಲ್ಲಿ ಸಾವಿರ ಪದಗಳಿವೆ. ಹತ್ತು ಹಲವು ಜಾನಪದ ಪಠ್ಯಗಳಾಗಿ ಉಳಿದಿವೆ. ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ದತ್ತಿ ಪ್ರಶಸ್ತಿ ಮಾ. 20ರಂದು ತುಮಕೂರಿನಲ್ಲಿ...
ಕರಿಯಮ್ಮನದು ಬಾಲದೇವರಹಟ್ಟಿ. ಕಂಬೇರ ಹಟ್ಟಿ ಖಾನೆ ಮೂಲ. ಕುರಿಹಳ್ಳಿ ಕಾವಲು ಪಶುಪಾಲನೆ. ರಾಯ ಬಳ್ಳೇಕಟ್ಟೆ ರೂವಾರ. ಬಲಗೊಂಡ ಮತ್ತು ಎಡಗೊಂಡನ ಒಕ್ಕಲು. ಚಿತ್ರಲಿಂಗ ಮತ್ತು ಗಂಗಮಾಳಮ್ಮನ ಪಣಕಟ್ಟು. ಕಾಡುಗೊಲ್ಲರ ಬುಡಕಟ್ಟು. ಪತಿ ಲೇಟ್ ಮರಿಯಣ್ಣ. ಬರಕನಾಳು ಗ್ರಾಮ ಪಂಚಾಯತಿ. ಚಿಕ್ಕನಾಯಕನಹಳ್ಳಿ ತಾಲೂಕು. ತುಮಕೂರು ಜಿಲ್ಲೆ.
ಒಣ ಭೂಮಿ ಬೇಸಾಯದ ಜೀವನ. ಹಟ್ಟಿ ಬದುಕು ದೂಡುತ್ತಿರುವ ಬುಡಕಟ್ಟು ಮಹಿಳೆ. ಬೆದ್ಲು ಬೇಸಾಯ ಮನೆತನಕ್ಕೆ ಆಸರೆ. ಸ್ವತಃ ನೇಗಿಲು ಹೂಡಿ ಹೊನ್ನಾರು ಕಟ್ಟಿದವರು ಕರಿಯಮ್ಮ. ಜೀವನವನ್ನೇ ಜನಪದವಾಗಿಸಿಕೊಂಡ ಪದಕಾತಿ. ಜಾನಪದ ಸಾಹಿತ್ಯವನ್ನು ಜೀವನದುದ್ದಕ್ಕೂ ರೂಢಿಸಿಕೊಂಡವರು.
ಹೊಲಬದುಕಿನ ಪಾಡು ಇವರ ಹಾಡುಗಳಾಗಿವೆ. ಬುಡಕಟ್ಟು ಸೋಬಾನೆ ಪದಗಳ ಹಾಡುವ ಅಪರೂಪದ ಮಹಿಳೆ. ಮನೆ ಬದುಕು, ಬೇಸಾಯದ ಬದುಕು, ಹಟ್ಟಿ ಕೇರಿಯ ಕನ್ನಡವನ್ನು ನುಡಿಕಟ್ಟಿ ಜನಪದವಾಗಿ ಒಸೆಯುತ್ತಾರೆ. ಹಾಡುಗಳ ಮೆದೆಮಾಡುತ್ತಾರೆ. ಹೊಸ ಹಾಡುಗಳಿಗೆ ಅದಿಯಾದವರಾಗಿದ್ದಾರೆ. ಹೊಸ ಕಾವ್ಯಗಳ ಹುಟ್ಟಿಗೆ ಕಾರಣವಾಗಿದ್ದಾರೆ. ಹೊನ್ನಾರು ಕಟ್ಟಿದ ಹಾಗೆಯೇ ಜನಪದ ಹಾಡುಗಳನ್ನು ಅಂತರಂಗದಲ್ಲಿ ಸಂಗ್ರಹ ಮಾಡಿಕೊಂಡಿದ್ದಾರೆ. ಸೋಬಾನೆ ಹಾಡುವ ಸಂಗಾತಿಗಳ ಸಮಾಜ ಕಟ್ಟುವ ಮೂಲಕ ಹಟ್ಟಿಗಳಲ್ಲಿ ಮದುವೆಗಳು, ದೇವರ ಕೆಲಸಗಳು, ಹಟ್ಟಿ ಮಾರಿಗಳು, ಗ್ರಾಮದೇವತೆಗಳು, ಗ್ರಾಮದೈವಗಳು, ಹಟ್ಟಿಕಟ್ಟೆಗಳ ನಡೆಗಳ ಕುರಿತು ಪದಕಟ್ಟಿದ ಪದಗಾತಿ ಕರಿಯಮ್ಮನ ಹಾಡುಗಾರಿಕೆ, ಆಕೆಯ ಬದುಕಿನ ಪಾಸಲೆಯಲ್ಲಿ ಹೆಚ್ಚು ಹೆಚ್ಚಾಗಿ ಪ್ರಚಲಿತವಾಗಿವೆ.
ಮದುವೆಯಾಗಿ ಒಂದು ಮಗುವಿನ ತಾಯಿಯಾಗಿ, ಕೆಲವೇ ತಿಂಗಳ ನಂತರ ಸಂಗಾತಿಯನ್ನು ಕರಿಯಮ್ಮ ಕಳೆದುಕೊಂಡರು. ಹಾಲುಗಳ್ಳಿನ ನವಜಾತ ಶಿಶು. ವಿಕಲಚೇತನೆಯಾದ ಆಕೆಯ ಅತ್ತೆ. ಮನೆತನದ ಜವಾಬ್ದಾರಿ ಕರಿಯಮ್ಮನ ಹೆಗಲಿಗೆ ಬೀಳುತ್ತದೆ. ಕಿರಿಯ ವಯಸ್ಸಿನಲ್ಲೇ ಒಕ್ಕಲುತನಕ್ಕೆ ಕೊರಳು ಕೊಡುವರು. ಹೆಗಲು ಬಾವು, ಎದೆಬಾವುಗಳಂತಹ ಕಷ್ಟಗಳು ಎದುರಾಗುವವು.
ಸ್ವತಂತ್ರವಾದ ಕೃಷಿ ಬದುಕಿಗೆ ಮುಕ್ತವಾಗಿ ತೆರೆದುಕೊಳ್ಳಲು ಸರೀಕರೊಂದಿಗೆ ಮನೆತನದ ಜವಾಬ್ದಾರಿ ಹೊರುವರು. ಬೇಸಾಯದ ಬೆನ್ನತ್ತುವರು. ಕಳೆದು ಹೋದ ಕಷ್ಟಗಳ ಮರೆಯಲು ಹಾಡುಗಾರಿಕೆಯ ಬೆನ್ನಿಗೆ ಬೀಳುವರು. ಪದಗಳ ಹಾಡುವ ಆಳರಸಿಯ ಹಾಗೆ ನೆರೆಹೊರೆಯ ಗಮನ ಸೆಳೆಯುವರು ಕರಿಯಮ್ಮ.
ಹಿಂದಿನ ತಲೆಮಾರಿನ ಕೊನೆಯ ಕೊಂಡಿಗಳ ಹಾಗೆ ಇದ್ದ ಮಹಿಳೆಯರ ಸೊಲ್ಲು, ದನಿ, ಪದ ಹಿಡಿದು ಧ್ವನಿಪೂರ್ಣವಾಗಿ ಹಾಡುವ ಮೂಲಕ ಕರಿಯಮ್ಮ ಹಟ್ಟಿ ಕೇರಿಗಳು ಗಮನಿಸುವ ಹಾಗೆ ಪದಗಾತಿ ಕರಿಯಮ್ಮ ಎಂದು ಕ್ರಮೇಣ ಗುರುತಿಸಿಕೊಳ್ಳುವರು. ಹಂತವಾಗಿ ಹೊಸ ತರದ ಜಾನಪದ ದನಿ, ಪದ, ಸೊಲ್ಲುಗಳನ್ನೂ ಕಟ್ಟಿ ಹಾಡುವ ಸಾಮರ್ಥ್ಯವನ್ನೂ ಬೆಳೆಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಅಥಣಿ | ʼಪರಿಶಿಷ್ಟರಿಗೆ 50 ವರ್ಷಗಳಿಂದ ಮರೀಚಿಕೆಯಾದ ಮೂಲಸೌಕರ್ಯʼ
ಕುರಿಹಟ್ಟಿ ಕಾವಲಿನಲ್ಲೂ ಇತ್ತೀಚೆಗೆ ದೇವರು ತಂದ ಕುರಿತು ಕರಿಯಮ್ಮ ಹೊಸ ಕಾವ್ಯವೊಂದನ್ನು ಕಟ್ಟಿ ಜನಪದ ಲೋಕದ ಗಮನ ಸೆಳೆದವರಾಗಿರುತ್ತಾರೆ. ನಿಸರ್ಗದಿಂದ ಒಂದು ಬ್ಯಾಟೆ ಕೊಂಬೆಯನ್ನು ಹೆಕ್ಕಿ ತಂದು ಕಾಡುಗೊಲ್ಲರ ಬುಡಕಟ್ಟು ದೇವರು ಮಾಡಿಕೊಂಡ ಚಾರಿತ್ರಿಕ ಸಂಗತಿಯನ್ನು ಹಾಡಿ ಇತಿಹಾಸವಾಗಿಸಿದ ಕರಿಯಮ್ಮ ಓದು, ಬರೆಹ ಅರಿಯದವರು. ಆದರೆ ಇವರ ಎದೆಗೂಡಿನಲ್ಲಿ ಸಾವಿರ ಪದಗಳಿವೆ. ಹತ್ತು ಹಲವು ಜಾನಪದ ಪಠ್ಯಗಳಾಗಿ ಉಳಿದಿವೆ.
ಬಲಗೊಂಡ, ಯಡಗೊಂಡ, ಮಾಳಮ್ಮ, ಚಿತ್ತಯ್ಯ, ಈರಬೊಮ್ಮಕ್ಕ, ಜಡೆಗೊಂಡ, ಹುಲಿಕಡಿದ ಚನ್ನಯ್ಯ, ಸೋಬಾನೆ ಮಂಗಳಾರತಿ ಪದಗಳು, ಹಸೆ ಪದಗಳು, ಜಾಡಿ ಪದಗಳು, ಉತ್ಸವ ಪದಗಳು ಮೊದಲಾದವುಗಳ ಕುರಿತು ಜಾನಪದವನ್ನು ದ್ವನಿಪೂರ್ಣವಾಗಿ ಹಾಡುವ ಇವರು ಕಾಡುಗೊಲ್ಲರ ಬುಡಕಟ್ಟಿನ ಅನೇಕ ಆಚರಣೆಗಳು ಮತ್ತು ಸಂಪ್ರದಾಯಗಳು ಹಾಗೂ ಸಂಸ್ಕೃತಿಯ ಕುರಿತು ಹಾಡುತ್ತಾರೆ. ಸೋಭಾನೆಪದ, ಕಾವ್ಯ, ತತ್ವಗಳನ್ನು ಗುರುತರವಾಗಿ ಹಾಡಬಲ್ಲ ಬುಡಕಟ್ಟು ಮಹಿಳೆ ಕರಿಯಮ್ಮ.
ಕರಿಯಮ್ಮ ಹಾಡುವ ಪದಗಳು ಬುಡಕಟ್ಟುಗಳ ಕನ್ನಡ ಭಾಷೆಯನ್ನು ಹೊಸ ತಲೆಮಾರಿಗೆ ಪರಿಚಯಿಸುತ್ತವೆ. ಬುಡಕಟ್ಟು ಜಾನಪದ ಭಾಷಿಕ ಅಧ್ಯಯನ ಮತ್ತು ಶೋಧನೆಗೆ ನೆರವಾಗಿ ನಿಲ್ಲುತ್ತವೆ.
ಈ ಹೊತ್ತಿಗೂ ಕರಿಯಮ್ಮನ ಮನೆತನದ ಒಣ ಬೇಸಾಯದ ಬದುಕು ಕಷ್ಟಕರವಾಗಿಯೇ ಮುಂದುವರಿದಿದೆ. ಬುಡಕಟ್ಟು ಸಮುದಾಯದೊಳಗೆ ಪದಗಳನ್ನು ಬಿತ್ತುತ್ತಲೇ ಬದುಕುತಿದ್ದಾರೆ. ಕಷ್ಟಗಳನ್ನು ದಿಟ್ಟತನದಿಂದ ಸವಾಲಾಗಿ ಸ್ವೀಕರಿಸಿರುವ ಇವರ ಮೊಮ್ಮಕ್ಕಳು ಕಿರಿಯ ಪ್ರಾಯದಲ್ಲೇ ತಾಯಿ ಕಳೆದುಕೊಂಡರು. ಮತ್ತೆ ಅವರ ತಬ್ಬಲಿ ಬದುಕಿನ ಜವಾಬ್ದಾರಿ ಹೊತ್ತರು. ಹೋರಾಟದ ಬದುಕು ಮುಂದುವರಿದು ತನ್ನ ಮೊಮ್ಮಗನಿಗೆ ಕಾನೂನು ಪದವಿ ಓದಲು, ಮೊಮ್ಮಗಳು ಪಿಯುಸಿ ವ್ಯಾಸಂಗ ಮಾಡಲು ದಣಿವರಿಯದೆ ಶ್ರಮಿಸುತ್ತಿದ್ದಾರೆ. ಅನಾರೋಗ್ಯದ ಮಗನ ಜವಾಬ್ದಾರಿಯೂ ಇವರ ಜೀವನದ ಜೊತೆಯಲ್ಲಿ ಸೇರಿಕೊಂಡಿದೆ.
ಸರೀಕರ ಜೊತೆಯ ಸಹ ಜೀವನ. ಚಾರಿತ್ರಿಕ ಸರಸ ಸಲ್ಲಾಪ. ಸಂಪ್ರದಾಯ, ಸಂಸ್ಕೃತಿಯ ಕುರುಹುಗಳು. ಬುಡಕಟ್ಟು ಜನರ ಹಾಡು ಹಸೆಗಳನ್ನು ಹಾಡುಗಳಾಗಿಸುತ್ತಾರೆ. ಕನ್ನಡ ಜಾನಪದ ಪದಗಳನ್ನು ಕಡೆದಿಟ್ಟುಕೊಂಡಿದ್ದಾರೆ- ಬುಡಕಟ್ಟು ಮಹಿಳೆ ಬಾಲದೇವರ ಹಟ್ಟಿ ಕಾಡುಗೊಲ್ಲರ ಕರಿಯಮ್ಮ.


ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ