ತೆಲಂಗಾಣ | ಬೀದಿಗೆ ಬಂದ ಕೆಸಿಆರ್ ಸರ್ಕಾರ – ರಾಜ್ಯಪಾಲರ ನಡುವಿನ ಕದನ

Date:

Advertisements
ಕೆಸಿಆರ್ ಸರ್ಕಾರ ರಾಜ್ಯಪಾಲರ ಹುದ್ದೆಗೆ ಮರ್ಯಾದೆಯನ್ನೇ ಕೊಡುವುದಿಲ್ಲ ಎನ್ನುವುದು ತಮಿಳಿಸೈ ಸೌಂದರರಾಜನ್ ಆರೋಪ. ರಾಜ್ಯಪಾಲರು ಬಿಜೆಪಿ ಮುಖಂಡರಂತೆ ವರ್ತಿಸುತ್ತಿದ್ದಾರೆ ಎನ್ನುವುದು ಕೆಸಿಆರ್ ವಾದ. ದಕ್ಷಿಣ ಭಾರತದ ತಮಿಳುನಾಡು, ಕೇರಳ, ತೆಲಂಗಾಣ ಈ ಮೂರು ರಾಜ್ಯಗಳಲ್ಲೂ ರಾಜ್ಯಪಾಲರು ಮತ್ತು ಆಡಳಿತಾರೂಢ ಸರ್ಕಾರಗಳ ನಡುವಿನ ಸಂಘರ್ಷ ಕಾಕತಾಳೀಯವಾಗಲಿ, ಆಕಸ್ಮಿಕವಾಗಲಿ ಅಲ್ಲ. 

ತಮಿಳುನಾಡಿನಲ್ಲಿ ರಾಜ್ಯಪಾಲ ರವಿ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನಡುವಿನ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ತೆಲಂಗಾಣ ರಾಜ್ಯದಲ್ಲೂಅಂಥದ್ದೇ ಸಂಘರ್ಷ ಭುಗಿಲೇಳುವ ಸಾಧ್ಯತೆಗಳು ಕಾಣುತ್ತಿವೆ. ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್(ಕೆಸಿಆರ್) ವಿರುದ್ಧ ತೋಳೇರಿಸಿ ಕದನಕ್ಕೆ ನಿಂತಂತೆ ಕಾಣುವ ಅಲ್ಲಿನ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್, ಈ ನಿಟ್ಟಿನಲ್ಲಿ ರಾಜಭವನದ ಗಡಿಯನ್ನೂ ದಾಟಿ ಹೊಸದೊಂದು ಪರಂಪರೆ ಹುಟ್ಟುಹಾಕಿದ್ದಾರೆ.

ಹೈದರಾಬಾದ್‌ನ ಶತಮಾನದ ಹಳೆಯ ಉಸ್ಮಾನಿಯಾ ಆಸ್ಪತ್ರೆಗೆ ಭೇಟಿ ನೀಡಿರುವ ತಮಿಳಿಸೈ ಸೌಂದರರಾಜನ್‌, ಅಲ್ಲಿನ ವೈದ್ಯರು, ನರ್ಸ್‌ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಜೊತೆಗೆ ಚರ್ಚೆಯನ್ನೂ ಮಾಡಿದ್ದಾರೆ. ನಂತರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಸ್ಪತ್ರೆಯ ಅವ್ಯವಸ್ಥೆ, ಸೌಲಭ್ಯಗಳ ಕೊರತೆಯ ಬಗ್ಗೆ ಕೆಂಡ ಕಾರಿದ್ದಾರೆ. ಪರೋಕ್ಷವಾಗಿ ಕೆ.ಚಂದ್ರಶೇಖರ ರಾವ್ ಅವರ ಸರ್ಕಾರದ ವಿರುದ್ಧ ಟೀಕಿಸಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಅನ್ನು ಪ್ರಧಾನ ಮಂತ್ರಿ ಕಾರ್ಯಾಲಯ, ಪ್ರಧಾನ ಮಂತ್ರಿ ಮೋದಿ, ಕೇಂದ್ರ ಆರೋಗ್ಯ ಸಚಿವರು ಮುಂತಾದವರಿಗೆ ಟ್ಯಾಗ್ ಮಾಡಿದ್ದಾರೆ.

ತಮಿಳಿಸೈ ಸೌಂದರರಾಜನ್‌ ಅವರ ವೈಖರಿ ನೋಡಿದರೆ, ಅವರು ವಿರೋಧ ಪಕ್ಷದ ನಾಯಕರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅನ್ನಿಸುವುದು ಸಹಜ. ಅವರು ತೆಲಂಗಾಣದ ರಾಜ್ಯಪಾಲರಾಗಿ ಬಂದ ಗಳಿಗೆಯಿಂದಲೂ ಅವರ ಕಾರ್ಯಶೈಲಿ ಹೀಗೆಯೇ ಇದೆ.

Advertisements

ತಮಿಳಿಸೈ ಸೌಂದರರಾಜನ್, ಮೂಲತಃ ತಮಿಳುನಾಡಿವರು. ಅವರ ಅಪ್ಪ ಕೂಡ ರಾಜಕಾರಣಿಯೇ. ದ್ರಾವಿಡ ಅಸ್ಮಿತೆಯ ನೆಲದಲ್ಲಿ ಹುಟ್ಟಿ ಬೆಳೆದ ಆಕೆಯ ಕುಟುಂಬ ಮೊದಲಿನಿಂದಲೂ ಅದಕ್ಕೆ ವಿರುದ್ಧವಾದ ತಾತ್ವಿಕತೆಗೆ ಅಂಟಿಕೊಂಡಂಥದ್ದು. ಅವರ ತಂದೆ ಕುಮಾರಿ ಅನಂತನ್ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದರು. ಕಾಂಗ್ರೆಸ್‌ನಿಂದ ಶಾಸಕರು, ಸಂಸದರಾಗಿದ್ದ ಕುಮಾರಿ ಅನಂತನ್, ತಮಿಳುನಾಡು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿದ್ದರು. ನಂತರ ‘ಗಾಂಧಿ ಕಾಮರಾಜ್ ನ್ಯಾಷನಲ್ ಕಾಂಗ್ರೆಸ್’ ಎನ್ನುವ ತಮ್ಮದೇ ಪಕ್ಷ ಕಟ್ಟಿದರು. ನಂತರ ಅದನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದರು. ಮತ್ತೊಮ್ಮೆ ಕಾಂಗ್ರೆಸ್‌ನಿಂದ ಹೊರಬಂದು ‘ತೋಂಡರ್ ಕಾಂಗ್ರೆಸ್’ ಅನ್ನುವ ಪಕ್ಷ ಕಟ್ಟಿದ್ದರು. ಮತ್ತೆ ಅದನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರು. ಆದರೆ, ಅವರ ಮಗಳಾದ ತಮಿಳಿಸೈ ಸೌಂದರರಾಜನ್, ವೈದ್ಯಕೀಯ ವಿದ್ಯಾಭ್ಯಾಸ ಮಾಡುವಾಗಲೇ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದರು. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದರು.       

2019ರಲ್ಲಿ ತೆಲಂಗಾಣಕ್ಕೆ ರಾಜ್ಯಪಾಲರಾಗಿ ಬಂದ ತಮಿಳಿಸೈ, ಎಂದೂ ರಾಜಭವನದೊಳಗೆ ಸುಮ್ಮನೆ ಕೂತವರೇ ಅಲ್ಲ. ರಾಜ್ಯಪಾಲರಾಗಿ ಬಂದ ಗಳಿಗೆಯಿಂದಲೇ ರಾಜ್ಯದ ಹಲವು ಜಿಲ್ಲೆಗಳನ್ನು ಸುತ್ತತೊಡಗಿದ್ದರು. ತಾವು ಜಿಲ್ಲಾ ಪ್ರವಾಸ ಮಾಡುವಾಗ ರಾಜ್ಯ ಸರ್ಕಾರವು ತಮಗೆ ಶಿಷ್ಟಾಚಾರದಂತೆ ರಕ್ಷಣೆ ಕೊಡುವುದಾಗಲಿ, ಅಧಿಕಾರಿಗಳನ್ನು ಒದಗಿಸಿದ್ದಾಗಲಿ ಇಲ್ಲ ಎಂದು ಆರೋಪಿಸಿದ್ದರು. ಅದಕ್ಕೆ ಕೆಸಿಆರ್, ‘ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷರಾಗಿದ್ದ ಅವರು ರಾಜ್ಯಪಾಲರಾಗಿ ಜಿಲ್ಲಾ ಪ್ರವಾಸ ಮಾಡದೇ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ’ ಎಂದು ಮಾರುತ್ತರ ನೀಡಿದ್ದರು.

ಗಣರಾಜ್ಯೋತ್ಸವದ ಆಚರಣೆಯ ವಿವಾದವಂತೂ ತೆಲಂಗಾಣದಲ್ಲಿ ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಲೇ ಇದೆ. ತೆಲಂಗಾಣದ ಗಣರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯಮಂತ್ರಿಯಾದ ಕೆಸಿಆರ್ ಎಂದೂ ಪಾಲ್ಗೊಂಡಿಲ್ಲ. ಕೋವಿಡ್ ಕಾರಣದಿಂದ ಎರಡು ವರ್ಷ ಆಚರಣೆಗೆ ತಡೆ ಬಿದ್ದಿತ್ತು. ನಂತರ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಕೆಸಿಆರ್ ತಾವು ಹೋಗದೇ ತಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಕಳಿಸಿದ್ದರು. ಜೊತೆಗೆ ಸರ್ಕಾರ ರಾಜ್ಯಪಾಲರ ಭಾಷಣವನ್ನೂ ನೀಡಿರಲಿಲ್ಲ. ಕಾರ್ಯಕ್ರಮದಲ್ಲಿ ತಮ್ಮದೇ ಭಾಷಣ ಓದಿದ್ದ ತಮಿಳಿಸೈ ಸೌಂದರರಾಜನ್, ಭಾಷಣದಲ್ಲಿ ಕೆಸಿಆರ್‌ ಅವರನ್ನು ಟೀಕಿಸಿ, ಮೋದಿ ಅವರನ್ನು ಹೊಗಳಿದ್ದರು.

ಕೆಸಿಆರ್‌

ಹೈದರಾಬಾದ್‌ನಲ್ಲಿ ಹೊಸ ಸಚಿವಾಲಯವನ್ನು ನಿರ್ಮಿಸಿರುವ ಸರ್ಕಾರ, ಅದರ ಉದ್ಘಾಟನೆಗೆ ಕೂಡ ರಾಜ್ಯಪಾಲರನ್ನು ಕರೆದಿರಲಿಲ್ಲ. ಸಚಿವಾಲಯದ ಮುಂದೆ 125 ಅಡಿಯ ಬೃಹತ್ ಅಂಬೇಡ್ಕರ್ ವಿಗ್ರಹ ಅನಾವರಣ ಮಾಡಿದಾಗಲೂ ರಾಜ್ಯಪಾಲರಿಗೆ ಆಹ್ವಾನ ನೀಡಿರಲಿಲ್ಲ. ಆಗೆಲ್ಲ ತಮಿಳಿಸೈ ಅವರು ರಾಜಭವನದಿಂದಲೇ ಸರ್ಕಾರದ ವಿರುದ್ಧ ಟೀಕಾಸ್ತ್ರ ಮೊಳಗಿಸುತ್ತಿದ್ದರು. ಅಷ್ಟಕ್ಕೇ ಸುಮ್ಮನಾಗದೆ, ಭಾರತದ ರಾಜಕೀಯ ಚರಿತ್ರೆಯಲ್ಲಿಯೇ ಅಪರೂಪ ಎನ್ನುವಂತೆ, ಖಾಸಗಿ ವಾಹಿನಿಗಳಿಗೆ ದೀರ್ಘ ಸಂದರ್ಶನಗಳನ್ನೂ ನೀಡಿ, ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದರು.

ಇದು ಹೀಗೆ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ರಾಜ್ಯಪಾಲರು ರಾಜ್ಯ ಸರ್ಕಾರ ಮಂಡಿಸಿದ್ದ 10 ಮಸೂದೆಗಳಿಗೆ ಅಂಕಿತ ಹಾಕದೇ ಹಾಗೆಯೇ ಇಟ್ಟುಕೊಂಡಿದ್ದರು. ಕೊನೆಗೆ ಕೆಸಿಆರ್ ಈ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಒಯ್ದಿದ್ದರು. ಆಗಲೂ ಕೆಲವು ಮಸೂದೆಗಳಿಗೆ ಮಾತ್ರ ಅಂಕಿತ ಹಾಕಿದ್ದ ರಾಜ್ಯಪಾಲರು ಕೆಲವನ್ನು ವಾಪಸ್ ಕಳಿಸಿ, ಮತ್ತೆ ಕೆಲವನ್ನು ರಾಷ್ಟ್ರಪತಿಗೆ ಕಳಿಸಿದ್ದರು. ಸರ್ಕಾರ ಕೋರ್ಟ್ ಮೊರೆ ಹೋದ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ಟ್ವೀಟ್ ಮಾಡಿ, ‘ದೆಹಲಿಗಿಂತ ನಿಮಗೆ ರಾಜಭವನ ಹತ್ತಿರವಿದೆ’ ಎಂದಿದ್ದರು. ರಾಜಭವನದ ಜೊತೆ ಸೌಹಾರ್ದಯುತ ಸಂಬಂಧ ಕಾಪಾಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರಕ್ಕೆ ಪರೋಕ್ಷವಾಗಿ ಸೂಚಿಸಿದ್ದರು.  

ಹೀಗೆ ದಿನೇ ದಿನೆ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಮತ್ತು ಮುಖ್ಯಮಂತ್ರಿ ಕೆಸಿಆರ್ ನಡುವಿನ ಜಗಳ ತಾರಕಕ್ಕೇರುತ್ತಿದೆ. ಇದು ಯಾವ ಹಂತ ಮುಟ್ಟಿದೆಯೆಂದರೆ, 2023ರ ಬಜೆಟ್ ಅನ್ನು ಕೂಡ ರಾಜ್ಯಪಾಲರು ಅನುಮೋದಿಸಿರಲಿಲ್ಲ. ಕೋರ್ಟ್ ಮಧ್ಯಪ್ರವೇಶದ ನಂತರವಷ್ಟೇ ರಾಜ್ಯಪಾಲರು ಬಜೆಟ್‌ಗೆ ಅನುಮೋದನೆ ನೀಡಿದ್ದರು.

ಕೆಸಿಆರ್ ಸರ್ಕಾರ ರಾಜ್ಯಪಾಲರ ಹುದ್ದೆಗೆ ಮರ್ಯಾದೆಯನ್ನೇ ಕೊಡುವುದಿಲ್ಲ ಎನ್ನುವುದು ತಮಿಳಿಸೈ ಸೌಂದರರಾಜನ್ ಆರೋಪ. ರಾಜ್ಯಪಾಲರು ಬಿಜೆಪಿ ಮುಖಂಡರಂತೆ ವರ್ತಿಸುತ್ತಿದ್ದಾರೆ ಎನ್ನುವುದು ಕೆಸಿಆರ್ ಸರ್ಕಾರದ ವಾದ.

ಈ ಸುದ್ದಿ ಓದಿದ್ದೀರಾ: ಏಕರೂಪ ನಾಗರಿಕ ಸಂಹಿತೆ | ಧ್ರುವೀಕರಣದ ಆಟಕ್ಕೆ ಎರಡು ಸಾಧ್ಯತೆಗಳು: ರಾಜಾರಾಂ ತಲ್ಲೂರು ಬರಹ

2023ರ ಡಿಸೆಂಬರ್‌ನಲ್ಲಿ ತೆಲಂಗಾಣದ ವಿಧಾನಸಭಾ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯಪಾಲರು ಮತ್ತು ಕೆಸಿಆರ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಡುವಿನ ಸಂಘರ್ಷ ಯಾವ ರೀತಿ ಇರಲಿದೆ ಎನ್ನುವುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳಾಗುತ್ತಿವೆ.

ತಮ್ಮ ಫೋನ್ ಅನ್ನು ಕದ್ದಾಲಿಸಲಾಗುತ್ತಿದೆ ಎಂದು ಕೂಡ ತಮಿಳಿಸೈ ಅವರು ಕೆಸಿಆರ್ ಸರ್ಕಾರದ ಕಡೆ ಬೊಟ್ಟು ತೋರಿಸಿದ್ದರು. ಅಚ್ಚರಿ ಎಂದರೆ, ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಜಗದೀಪ್ ಧನಕರ್‌ ಅವರು ಕೂಡ ಇದೇ ರೀತಿ ಹೇಳಿಕೆ ನೀಡಿದ್ದರು. ರಾಜಭವನ ಸರ್ಕಾರದ ನಿಗಾವಣೆಯಲ್ಲಿದೆ ಎಂದು ದೂರಿದ್ದರು.

ದಕ್ಷಿಣ ಭಾರತದ ತಮಿಳುನಾಡು, ಕೇರಳ, ತೆಲಂಗಾಣ ಈ ಮೂರು ರಾಜ್ಯಗಳಲ್ಲೂ ರಾಜ್ಯಪಾಲರು ಮತ್ತು ಆಡಳಿತಾರೂಢ ಸರ್ಕಾರಗಳ ನಡುವಿನ ಸಂಘರ್ಷ ಕಾಕತಾಳೀಯವಾಗಲಿ, ಆಕಸ್ಮಿಕವಾಗಲಿ ಅಲ್ಲ. ಅದರ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರ ಇದೆ ಎನ್ನುವುದು ರಾಜಕೀಯ ತಜ್ಞರ ಅಭಿಮತ. ಈ ನಡೆ ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸುತ್ತಿರುವುದಂತೂ ಸತ್ಯ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಸುದ್ದಿಯ ಮೊದಲ ಪ್ಯಾರದ ಆರಂಭದ ವಾಕ್ಯ ಮಹಾರಾಷ್ಟ್ರ ಎಂದಾಗಿದೆ, ಅದು, ತಮಿಳುನಾಡು ಆಗಬೇಕಿತ್ತು ಸರ್…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X