ತೋಟದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿ ಇಟ್ಟಿದ್ದ ₹7.50 ಲಕ್ಷ ಹಣ ಹಾಗೂ 50 ಕ್ವಿಂಟಲ್ ತೊಗರಿ, ಕೃಷಿ ಪರಿಕರಗಳು ಶುಕ್ರವಾರ ಸುಟ್ಟು ಕರಕಲಾದ ಘಟನೆ ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ.
ಮಲ್ಲಾಬಾದ್ ಗ್ರಾಮದ ರೈತ ಕರೆಪ್ಪ ಶಿವಪ್ಪ ಚಾಂದಕವಟೆ ಅವರ ಮನೆಗೆ ಹಾನಿಯಾಗಿದೆ. ಅವರು ತಮ್ಮ ಜಮೀನಿನಲ್ಲಿ ಮನೆ ಮಾಡಿಕೊಂಡು ಜೀವನ ಮಾಡುತ್ತಿದ್ದು, ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ. ತೋಟದ ಸುತ್ತಮುತ್ತಲಿರುವ ರೈತರು ಬೆಂಕಿ ನಂದಿಸುವ ಕಾರ್ಯದಲ್ಲಿ ಹರಸಾಹಸಪಟ್ಟರು.
ಪರಿಹಾರಕ್ಕೆ ಆಗ್ರಹ :
ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೀರಣ್ಣಾ ಕಲ್ಲೂರ ಭೇಟಿ ನೀಡಿ ಮಾತನಾಡಿ, ʼಕರೆಪ್ಪ ಚಾಂದಕವಟೆ ಅವರು ಈಚೆಗೆ ಜಮೀನು ಮಾರಿದ ₹7.50 ಲಕ್ಷ ಹಣವನ್ನು ಮನೆಯಲ್ಲಿ ಇಟ್ಟಿದ್ದರು. ತೊಗರಿ ಬೆಲೆ ಕಡಿಮೆಯಾಗಿದ್ದರಿಂದ ಜೂನ್ ತಿಂಗಳಲ್ಲಿ ಮಾರಾಟ ಮಾಡಬೇಕು ಎಂದು 50 ಕ್ವಿಂಟಲ್ ತೊಗರಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಉಪಜೀವನಕ್ಕಾಗಿ ಸಂಗ್ರಹಿಸಿರುವ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿವೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಬೇಕು. ತಾಲ್ಲೂಕು ಆಡಳಿತ ತಕ್ಷಣ ಅವರಿಗೆ ವಾಸ ಮಾಡಲು ಮನೆ ಮತ್ತು ಉಪಜೀವನಕ್ಕಾಗಿ ತುರ್ತು ಪರಿಹಾರ ಹಾಗೂ ಪಡಿತರ ವಿತರಣೆ ಮಾಡುವ ಕೆಲಸ ಮಾಡಬೇಕುʼ ಎಂದು ಮನವಿ ಮಾಡಿದರು.
ಕೆಲವು ಗಂಟೆಗಳ ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಮುಖಂಡರಾದ ಲಕ್ಕಪ್ಪ ಕಲ್ಲೂರ, ಶಿವಾನಂದ ಬಡದಾಳ, ಲಚ್ಚಪ್ಪ ನಿರೋಣಿ, ಶರಣಪ್ಪ ಜಮಾದಾರ, ಚಿದಾನಂದ ಬಡದಾಳ, ಬಸಯ್ಯ ಸ್ವಾಮಿ, ರಾಜು ಜಮಾದಾರ, ರವಿ ಅಖಂಡೆ, ಇಟ್ಟಪ್ಪ ಅವರಾದ, ಸಿದ್ದಪ್ಪ ಕಲ್ಲೂರ ಇದ್ದರು.
ವರದಿ : ಮಂಜುನಾಥ ಹಡಪದ