ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕೀಲು ಮಡಗಿದಾತ
ನಡೆವರಿಗೊಂದು ಬಟ್ಟೆ,
ಮನೆಯ ಒಡೆಯರಿಗೊಂದು ಬಟ್ಟೆ.
ನಡೆಯದು ನಡೆಯದು,
ಹೋ, ನಡೆಗೆಟ್ಟಿತ್ತು ನಿಂದಿತ್ತಲ್ಲಾ! ಗಮನಾಗಮನದ ನುಡಿಯ ಬೆಡಗಿನ ಕೀಲ, ಮಡಗಿದಾತ ಬಲ್ಲ ಗುಹೇಶ್ವರಾ.
ಪದಾರ್ಥ:
ನಡೆವರು = ಜಂಗಮರು, ಚರಿಸುವವರು
ಬಟ್ಟೆ = ಹಾದಿ, ದಾರಿ
ನಡೆಗೆಟ್ಟಿತ್ತು = ಸಲ್ಲದ ನಡವಳಿಕೆ
ಗಮನಾಗಮನ = (ಗಮನ+ಅಗಮನ) ಜಂಗಮ ಮತ್ತು ಭಕ್ತ
ಬೆಡಗಿನ ಕೀಲು = ರಹಸ್ಯ ತತ್ವ
ವಚನಾರ್ಥ:
ಮುಕ್ತಿ ಮಾರ್ಗದಲ್ಲಿ ನಡೆಯುವ ಹಾದಿಯಲ್ಲಿ ಜಂಗಮರಿಗೆ ಮತ್ತು ಜ್ಞಾನಿಗಳಿಗೆ ಒಂದು ದಾರಿ, ಸಂಸಾರಿಯಾಗಿ ಒಂದೆಡೆ ಮನೆ ಕಟ್ಟಿಕೊಂಡು ನೆಲೆ ನಿಂತವರಿಗೆ ಬೇರೆ ದಾರಿ ಎನ್ನಲಾಗದು.
ಸನ್ಯಾಸಿಯೂ ಸಂಸಾರಿಯೂ ಕೊನೆಯಲ್ಲಿ ಸೇರುವ ಸಂಗಮ ಸ್ಥಳ ಅದೊಂದೇ. ಜಂಗಮನದು ಜ್ಞಾನ ಪ್ರಧಾನ ಮಾರ್ಗವಾದರೆ ಸಂಸಾರಿಯದು ಭಕ್ತಿ ಪ್ರಧಾನ ಮಾರ್ಗ. ಜಂಗಮನು ಜ್ಞಾನದ ಮೂಲಕ ಭಕ್ತನಾದರೆ, ಸಂಸಾರಿಯು ಸತ್ಯನಿಷ್ಠ ಕಾಯಕದ ಮೂಲಕ ಭಕ್ತನಾಗುತ್ತಾನೆ. ಅವರೇ ಬೇರೆ ಇವರೇ ಬೇರೆ ಎಂಬ ಭೇದ ಸಲ್ಲದು. ಜಂಗಮ ಮಾರ್ಗ ಶ್ರೇಷ್ಠವಾದದ್ದು, ಸಂಸಾರ ಮಾರ್ಗ ನಿಕೃಷ್ಟವಾದದ್ದು ಎಂಬ ಭೇದ ಭಾವವನ್ನು ಅಲ್ಲಗಳೆಯುವ ಅಲ್ಲಮ ಹೋ ಎಂದು ಹೂಂಕರಿಸುತ್ತ ಎಚ್ಚರಿಸುವುದೇ ಈ ವಚನದ ಹೈಲೈಟ್!
ಗಮನಾಗಮನ ಅಂದರೆ ಗಮನ ಮತ್ತು ಅಗಮನ. ಗಮನ ಅಂದರೆ ಗಮಿಸುವವ, ಜಂಗಮ. ಅಗಮನ ಅಂದರೆ ಒಂದೆಡೆ ನಿಂತವ, ಸಂಸಾರಿ. ಇವರಿಬ್ಬರ ನಡೆಯನ್ನು ನುಡಿಯನ್ನು ನಿಯಂತ್ರಿಸಿ ಜೀವನ ರಥ ಸರಿದಾರಿಯಲ್ಲಿ ಸಾಗುವಂತೆ ಚಕ್ರಕ್ಕೆ ಕೀಲು ಮಡಗಿದಾತ ಅವನೇ. ಚಕ್ರದ ಕೀಲಿನ ರಹಸ್ಯವನ್ನು ಮಡಗಿದಾತನೇ ಬಲ್ಲ. ನಾವಲ್ಲ!
ಪದ ಪ್ರಯೋಗಾರ್ಥ:
ಕೀಲು ಮಡಗಿದಾತ. ಮಡಗು ಅಂದರೆ ಒಂದೆಡೆ ಇಡು ಎಂಬ ಅರ್ಥದಲ್ಲಿ ಅತ್ಯಂತ ಸಹಜವಾಗಿ ಜನಸಾಮಾನ್ಯರು ಆಡುಭಾಷೆಯಲ್ಲಿ ದಿನನಿತ್ಯ ಬಳಸುವ ಪದ. ಮಡಗು ಎಂಬ ಸಾಮಾನ್ಯ ಪದವನ್ನು ಅಲ್ಲಮ ಇಲ್ಲಿ ವಚನದ ಅಂತ್ಯದಲ್ಲಿ ಮಡಗಿರುವುದು ಅನನ್ಯವಾದ ಪದ ಪ್ರಯೋಗ. ತನ್ನ ವಚನಗಳಲ್ಲಿ ಪ್ರಯೋಗಿಸಿರುವ ಅತ್ಯದ್ಭುತ ಪದಗಳಂತೆಯೇ ತೀರಾ ಸಾಮಾನ್ಯವಾದ ಮಡಗು ಎಂಬ ಪದವನ್ನು ಅಲ್ಲಮ ಈ ವಚನದ ಕೊನೆಯಲ್ಲಿ ಕರಾರುವಾಕ್ಕಾಗಿ ಪ್ರಯೋಗಿಸಿರುವುದು ಅಲ್ಲಮಪ್ರಭುವಿನ ಕನ್ನಡ ಭಾಷಾ ಪ್ರಭುತ್ವಕ್ಕೆ ಉದಾಹರಣೆ. ಕೀಲು ಮಡಗುವುದು ಎಂಬ ಪ್ರಸಂಗ ಎದುರಾದಾಗ ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯನ ಅತ್ಯದ್ಭುತ ವಚನ ಇಲ್ಲಿ ಉಲ್ಲೇಖನೀಯವಾಗುತ್ತದೆ. “ಕಡೆಗೀಲು ಇಲ್ಲದ ಬಂಡಿಯ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ” ಈ ಎರಡೂ ವಚನಗಳಲ್ಲಿ ಬಳಕೆಯಾಗಿರುವ ಕೀಲು ಮಡಗಿದಾತ ಅವನೇ, ಅವನೊಬ್ಬನೇ!
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.